ಹೊಸದಿಲ್ಲಿ: ಹಿಂದಿ ಭಾಷಿಕ ರಾಜ್ಯಗಳಾಗಿರುವ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢಗಳಲ್ಲಿ ಬಿಜೆಪಿ ಜಯಗಳಿಸಿರುವ ಬಗ್ಗೆ ಲೋಕಸಭೆಯಲ್ಲಿ ವಿವಾದಾತ್ಮಕ ಹೇಳಿಕೆ ನೀಡಿರುವುದಕ್ಕೆ ಡಿಎಂಕೆ ಸಂಸದ ಡಾ| ಎನ್.ವಿ. ಸೆಂಥಿಲ್ ಕುಮಾರ್ ಕ್ಷಮೆ ಯಾಚಿಸಿದ್ದಾರೆ. ಬುಧವಾರ ಕೂಡ ಲೋಕಸಭೆಯಲ್ಲಿ ಕಲಾಪ ಶುರುವಾಗುತ್ತಿದ್ದಂತೆಯೇ ಆಡಳಿತಾರೂಢ ಬಿಜೆಪಿಯ ಸಂಸದರು ಡಿಎಂಕೆ ಸಂಸದ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು. ಪ್ರಶ್ನೋತ್ತರ ವೇಳೆಯಲ್ಲಿ ಕೆಲವು ಕಾಲ ಗದ್ದಲ ಉಂಟಾದ ಹಿನ್ನೆಲೆಯಲ್ಲಿ ಅದನ್ನು ಮುಂದೂಡಿಕೆ ಮಾಡಬೇಕಾದ ಸ್ಥಿತಿಯೂ ಉಂಟಾಗಿತ್ತು. ಬಿಜೆಪಿ ಗೆದ್ದಿರುವುದು ಗೋಮೂತ್ರ ರಾಜ್ಯಗಳಲ್ಲಿ ಮಾತ್ರ, ದಕ್ಷಿಣ ಭಾರತದಲ್ಲಿ ಅದಕ್ಕೆ ಗೆಲ್ಲಲು ಸಾಧ್ಯವಿಲ್ಲ ಎಂದು ಸೆಂಥಿಲ್ ಮಂಗಳವಾರ ಹೇಳಿದ್ದರು.
ಕಾನೂನು ಸಚಿವರ ಆಕ್ರೋಶ: ಉತ್ತರ ಮತ್ತು ದಕ್ಷಿಣವನ್ನು ವಿಭಜಿಸುವಂತಹ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಕಾನೂನು ಮತ್ತು ನ್ಯಾಯ ಖಾತೆ ಸಚಿವ ಅರ್ಜುನ್ ರಾಮ್ ಮೇಘ್ವಾಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಲೋಕಸಭೆಯಲ್ಲಿ ಮಾತನಾಡಿದ ಅವರು ವಿಪಕ್ಷಗಳ ಒಕ್ಕೂಟ, ಐ.ಎನ್.ಡಿ.ಐ.ಎ. ದೇಶವನ್ನು ವಿಭಜಿಸಲು ಮುಂದಾಗಿದೆಯೇ ಎಂದು ಪ್ರಶ್ನಿಸಿದ್ದಾರೆ. ಕಾಂಗ್ರೆಸ್‌ನ ಹಿರಿಯ ನಾಯಕರೊಬ್ಬರು ನಾನು ದಕ್ಷಿಣ ಭಾರತವನ್ನು ಇಷ್ಟಪಡುತ್ತೇನೆ ಎಂದು ಹೇಳಿದ್ದಾರೆ. ಅಮೇಠಿಯಲ್ಲಿ ಅವರು ಸೋತಿರುವ ಹಿನ್ನೆಲೆಯಲ್ಲಿ ಈ ಹೇಳಿಕೆಯೇ ಎಂದು ಸಚಿವರು ಪ್ರಶ್ನಿಸಿದರು. ಜತೆಗೆ ರಾಹುಲ್ ಗಾಂಧಿ, ಡಿಎಂಕೆ ನಾಯಕ ಟಿ.ಆರ್. ಬಾಲು ಹೇಳಿಕೆಯನ್ನು ಸಮರ್ಥಿಸುವರೇ ಎಂದು ಕೇಳಿದರು.
ಮಾತು ಸರಿಯಲ್ಲ: ಚೆನ್ನೈಯಲ್ಲಿ ಮಿಚಾಂಗ್ ಚಂಡಮಾರುತ ದಿಂದ ಉಂಟಾಗಿರುವ ಹಾನಿಯನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕು ಎಂದು ಆಗ್ರಹಿಸಲು ಎದ್ದು ನಿಂತ ಡಿಎಂಕೆ ನಾಯಕ ಟಿ.ಆರ್. ಬಾಲು ಮಾತನಾಡಿ “ನಮ್ಮ ಪಕ್ಷದ ನಾಯಕ ಹೇಳಿದ ಮಾತು ಸರಿಯಲ್ಲ. ಪಕ್ಷದ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ಅವರಿಗೆ ಎಚ್ಚರಿಕೆ ನೀಡಿ, ಮುಂದಿನ ದಿನಗಳಲ್ಲಿ ಇಂಥ ಮಾತುಗಳನ್ನಾಡಬಾರದು’ ಎಂದು ಸೂಚಿಸಿದ್ದಾರೆ ಎಂದರು.
ಟ್ವಿಟರ್‌ನಲ್ಲಿ ಕ್ಷಮೆ: ಹೇಳಿಕೆ ವಿವಾದಕ್ಕೆ ಒಳಾಗುತ್ತಿದ್ದಂತೆಯೇ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದ ಸಂಸದ ಸೆಂಥಿಲ್ ಕುಮಾರ್ “ಐದು ರಾಜ್ಯಗಳ ಫಲಿತಾಂಶಗಳ ಬಗ್ಗೆ ಮಾತನಾಡುವ ಸಂದರ್ಭದಲ್ಲಿ ಅನುಚಿತ ಪದ ಪ್ರಯೋಗ ಮಾಡಿದ್ದೆ. ಅಂಥ ಉದ್ದೇಶವನ್ನು ಹೊಂದಿರಲಿಲ್ಲ. ಅದರಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಯಾಚಿಸುತ್ತೇನೆ’ ಎಂದು ಹೇಳಿದ್ದರು. ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಕೂಡ ಸೆಂಥಿಲ್ ಕುಮಾರ್ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮಾಜಿ ಸಚಿವ ಮಿಲಿಂದ್ ದೇವೂರಾ, ಬಿಜೆಪಿಯ ಹಿರಿಯ ನಾಯಕ ಸಂಜಯ ಜೈಸ್ವಾಲ್ ಸೇರಿದಂತೆ ಪ್ರಮುಖರು ಆಕ್ಷೇಪಿಸಿದ್ದಾರೆ.
ಹೆಚ್ಚುವರಿ ವೆಚ್ಚಕ್ಕೆ ಬೇಡಿಕೆ: ಪ್ರಸಕ್ತ ವಿತ್ತೀಯ ವರ್ಷದಲ್ಲಿ ಮೊದಲ ಹಂತದಲ್ಲಿ 58,378 ಕೋಟಿ ರೂ. ಮೊತ್ತದ ಮೊದಲ ಹಂತದ ಪೂರಕ ವೆಚ್ಚದ ಬೇಡಿಕೆಗಳಿಗೆ ಅನುಮೋದನೆ ಪಡೆದುಕೊಳ್ಳುವ ಅಂಶವನ್ನು ಲೋಕಸಭೆಯಲ್ಲಿ ಮಂಡಿಸಲಾಗಿದೆ. ಕೇಂದ್ರ ಹಣಕಾಸು ಖಾತೆ ಸಹಾಯಕ ಸಚಿವ ಪಂಕಜ್ ಚೌಧರಿ ಅದನ್ನು ಮಂಡಿಸಿದ್ದಾರೆ.
ಸೆಂಥಿಲ್ ಎಡವಟ್ಟು ಹೇಳಿಕೆಗಳು ಇದೇ ಮೊದಲಲ್ಲ
ವೃತ್ತಿಯಿಂದ ರೇಡಿಯಾಲಜಿಸ್ಟ್ ಆಗಿರುವ ಸಂಸದ ಡಾ| ಸೆಂಥಿಲ್ ಕುಮಾರ್ ಅವರು ಹಿಂದೆಯೂ ವಿವಾದಾತ್ಮಕ, ಎಡವಟ್ಟು ಹೇಳಿಕೆಗಳನ್ನು ನೀಡಿದ್ದರು. “ಶಿವ ಮತ್ತು ಪಾರ್ವತಿ ಕುಟುಂಬ ಯೋಜನೆ ಅನುಸರಿಸಿದ್ದರೇ? ಉತ್ತರ ಭಾರತದಲ್ಲಿ ಶಿವ ಮತ್ತು ಪಾರ್ವತಿಯರ ಕುಟುಂಬ ಗಣೇಶನಲ್ಲಿಗೆ ನಿಲ್ಲುತ್ತದೆ. ಆದರೆ ದಕ್ಷಿಣಕ್ಕೆ ಬಂದಾಗ ಅವರಿಗೆ ಮುರುಗನ್ (ಷಣ್ಮುಖ) ಎಂಬ ಪುತ್ರನಿರುವುದೂ ಗೊತ್ತಾಗುತ್ತದೆ. ಅವರು ಕುಟುಂಬ ಯೋಜನೆ ಅನುಸರಿಸಿ ದ್ದರೋ ಏನೋ ನಂಗೆ ಗೊತ್ತಿಲ್ಲ’ ಎಂದು ಖಾಸಗಿ ಸುದ್ದಿ ವಾಹಿನಿಯ ಸಂದರ್ಶನದಲ್ಲಿ ವ್ಯಂಗ್ಯವಾಗಿ ಹೇಳಿದ್ದರು.