Advertisement

ಗೋ ಸಾಗಾಟ; “ಲೈವ್‌ಸ್ಟಾಕ್‌ ಲಾಜಿಸ್ಟಿಕ್‌ ಕಂಟ್ರೋಲ್‌’ಆ್ಯಪ್‌!

09:56 AM Aug 07, 2019 | Team Udayavani |

ಮಂಗಳೂರು: ದ.ಕ. ಜಿಲ್ಲೆಯಲ್ಲಿ ಗೋ ಸಾಗಾಟದ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತದ ವತಿಯಿಂದ “ಲೈವ್‌ ಸ್ಟಾಕ್‌ ಲಾಜಿಸ್ಟಿಕ್‌ ಕಂಟ್ರೋಲ್‌’ ಎಂಬ ಮೊಬೈಲ್‌ ಆ್ಯಪ್‌ ಅನ್ನು ರೂಪಿಸಲಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ಶಶಿಕಾಂತ್‌ ಸೆಂಥಿಲ್‌ ತಿಳಿಸಿದ್ದಾರೆ.

Advertisement

ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿದ ಅವರು, ಮೊಬೈಲ್‌ ಆಧಾರಿತ ಈ ಆ್ಯಪ್‌ ಅನ್ನು ಕಾನೂನುಬದ್ಧ ಗೋ ಸಾಗಾಟಗಾರರು ಡೌನ್‌ಲೋಡ್‌ ಮಾಡಿಕೊಂಡು ಗೋ ಸಾಗಾಟಕ್ಕೆ ಸಂಬಂಧಿಸಿದ ಮಾಹಿತಿಯನ್ನು ಒದಗಿಸಬಹುದು. ಇದು ಸಕ್ರಮವಾಗಿ ಸಾಗಾಟ ಮಾಡುತ್ತಿರುವುದನ್ನು ಇಲಾಖೆಗಳಿಗೆ ಖಾತರಿ ಪಡಿಸಲು ಸಾಗಾಟದಾರರು ನೀಡುವ ಮಾಹಿತಿಯಾಗಿರುತ್ತದೆ ಎಂದರು.

ಸದ್ಯ ಮಾಹಿತಿಯನ್ನು ನೀಡುವುದಾಕ್ಕಾಗಿ ಮಾತ್ರ ಈ ಆ್ಯಪ್‌ ಬಳಕೆಯಾಗಲಿದ್ದು, ಮುಂದೆ ಈ ಆ್ಯಪ್‌ನಲ್ಲಿ ಜಿಪಿಎಸ್‌ ಸಹಾಯದಿಂದ ವಾಹನಗಳ ಸಾಗಾಟದ ಮೇಲೆ ನಿಗಾ ವಹಿಸುವಂತಹ ಇತರ ಸೌಲಭ್ಯಗಳಿಗೂ ಸಹಕಾರಿಯಾಗಲಿದೆ. ಗೋ ಸಾಗಾಟಕ್ಕೆ ಸಂಬಂಧಿಸಿದ ದಾಖಲೆಗಳನ್ನು, ಫೋಟೋಗಳನ್ನು ಕೂಡಾ ಇದರಲ್ಲಿ ಅಪ್‌ಲೋಡ್‌ ಮಾಡುವ ವ್ಯವಸ್ಥೆ ಮಾಡಲಾಗುವುದು. ಮುಂದಿನ ಎರಡು ದಿನಗಳಲ್ಲಿ ಪ್ಲೇ ಸ್ಟೋರ್‌ ಮೂಲಕ ಆ್ಯಪ್‌ ಡೌನ್‌ಲೋಡ್‌ ಮಾಡುವ ಅವಕಾಶ ದೊರೆಯಲಿದೆ ಎಂದರು.

ಮಾಹಿತಿ ನೀಡುವುದು ಕಡ್ಡಾಯವಲ್ಲ
ಆ್ಯಪ್‌ ಮೂಲಕ ಗೋ ಸಾಗಾಟಗಾರರು ಮಾಹಿತಿ ಒದಗಿಸುವುದು ಕಡ್ಡಾಯವಲ್ಲದಿದ್ದರೂ, ಸಾಗಾಟಗಾರರಿಂದಲೇ ಬೇಡಿಕೆ ಬಂದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಈ ವ್ಯವಸ್ಥೆ ರೂಪಿಸುತ್ತಿದೆ. ಇದರಿಂದಾಗಿ ಕಾನೂನು ರೀತಿಯಲ್ಲಿ ಗೋವುಗಳ ಸಾಗಾಟ ಮಾಡುವವರು ಎಲ್ಲಿಂದ ಎಲ್ಲಿಗೆ, ಯಾರಿಂದ ಗೋವುಗಳನ್ನು ಸಾಗಾಟ ಮಾಡುತ್ತಾರೆ ಎಂಬ ಮಾಹಿತಿಯು ಈ ಆ್ಯಪ್‌ ಮೂಲಕ ಸಂಬಂಧಪಟ್ಟ ಅಧಿಕಾರಿಗಳಿಗೆ ರವಾನೆಯಾಗುತ್ತದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ್ಮೀಪ್ರಸಾದ್‌, ಮನಪಾ ಆಯುಕ್ತ ಮೊಹಮ್ಮದ್‌ ನಝೀರ್‌ ಉಪಸ್ಥಿತರಿದ್ದರು.

Advertisement

ಬಕ್ರೀದ್‌ ಹಿನ್ನೆಲೆ; ಸೌಹಾರ್ದ ಕದಡಿದರೆ ಕಠಿಣ ಕ್ರಮ
ಜಿಲ್ಲಾಧಿಕಾರಿ ಶಶಿಕಾಂತ್‌ ಸೆಂಥಿಲ್‌ ಮಾತನಾಡಿ, ಬಕ್ರೀದ್‌ ಹಬ್ಬವನ್ನು ಸೌಹಾರ್ದತೆಯಿಂದ ನಡೆಸುವ ನಿಟ್ಟಿನಲ್ಲಿ ಅಕ್ರಮ ಗೋಸಾಗಾಟ ಹಾಗೂ ಅಕ್ರಮವಾಗಿ ಗೋ ಸಾಗಾಟ ಮಾಡುತ್ತಾರೆಂಬ ಗುಮಾನಿ ಮೇಲೆ ಕಾನೂನು ಕೈಗೆತ್ತಿಕೊಳ್ಳುವಂತಹವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಎಲ್ಲಾ ಧರ್ಮದ ಭಾವನೆಗಳನ್ನು ಪರಸ್ಪರರು ಅರ್ಥಮಾಡಿಕೊಂಡು ಹಬ್ಬಗಳನ್ನು ಆಚರಿಸುವ ಜಿಲ್ಲೆ ದಕ್ಷಿಣ ಕನ್ನಡ. ಹಾಗಾಗಿ ಬಕ್ರೀದ್‌ ಹಬ್ಬ ಕೂಡಾ ಉತ್ತಮವಾಗಿ ನಡೆಯಬೇಕೆಂಬುದು ನಮ್ಮ ಆಶಯ. ಯಾರೂ ಕಾನೂನು ಕೈಗೆತ್ತಿಕೊಳ್ಳಬಾರದು. ಒಂದು ವೇಳೆ ಅಕ್ರಮ ಗೋ ಸಾಗಾಟದ ಬಗ್ಗೆ ಸಂಶಯವಿದ್ದಾಗ 1077 ಅಥವಾ 100 ಸಹಾಯವಾಣಿಗೆ ಕರೆ ಮಾಡಿ ದೂರು ನೀಡಬಹುದು ಎಂದರು.
ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ್ಮೀ ಪ್ರಸಾದ್‌ ಮಾತನಾಡಿ, ದ.ಕ. ಜಿಲ್ಲಾ ಪೊಲೀಸ್‌ ವ್ಯಾಪ್ತಿಯಲ್ಲಿ ಬಕ್ರೀದ್‌ ಹಬ್ಬದ ಹಿನ್ನೆಲೆಯಲ್ಲಿ 24 ಗಂಟೆಯೂ ಗಸ್ತು ವಾಹನಗಳನ್ನು ನಿಯೋಜಿಸಲಾಗಿದೆ. ಏನೇ ದೂರುಗಳಿದ್ದರೂ ತತ್‌ಕ್ಷಣ ಸ್ಪಂದಿಸಲಾಗುವುದು. ಬಕ್ರೀದ್‌ ಹಬ್ಬದ ಹಿನ್ನೆಲೆಯಲ್ಲಿ ಅಪರಾಧ ಹಿನ್ನೆಲೆಯ 89 ಮಂದಿಯನ್ನು ಕರೆಯಿಸಿ ಎಚ್ಚರಿಕೆ ನೀಡಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next