ಭೋಪಾಲ್: ಸ್ವಯಂವರ, ಸ್ವಯಂ ವಧು ಅನ್ವೇಷಣೆ ಕೇಳಿದ್ದೀರಿ, ಆದರೆ, ಗೋವುಗಳ ಸ್ವಯಂವರ ಕೇಳಿರಲಿಕ್ಕಿಲ್ಲ. ಮಧ್ಯಪ್ರದೇಶದಲ್ಲಿ ಗೋವುಗಳ ಸ್ವಯಂವರಕ್ಕೆ ಸಿದ್ಧತೆ ನಡೆಸಲಾಗುತ್ತಿದೆ. ಪಶು ಸಂಗೋಪನಾ ಇಲಾಖೆಯು ಇದಕ್ಕೆಂದೇ ವಿಭಿನ್ನ ತಳಿಗಳ 200 ಗೂಳಿಗಳ ಡೇಟಾಬೇಸ್ ಸಿದ್ಧಪಡಿಸಲಾಗಿದೆ. ಗೋವುಗಳ ಸ್ವಯಂವರದಲ್ಲಿ ಗೋವುಗಳ ಮಾಲಕರು ತಮ್ಮ ಗೋವುಗಳಿಗೆ ಸೂಕ್ತ ಸಂಗಾತಿ ಆಯ್ಕೆ ಮಾಡಲು ಮುಕ್ತ ಅವಕಾಶ ನೀಡಲಾಗಿದೆ. ಇದಕ್ಕಾಗಿ ಸಿರಿ (ಗೋವು ಸೂಚಿಕೆ) ಎಂದು ಹೆಸರಿಡಲಾಗಿದೆ.
200 ಗೂಳಿಗಳ ಇತಿಹಾಸ, ಹಾಲು ಉತ್ಪಾದನೆ, ವಯಸ್ಸು, ಕಾರ್ಯಕ್ಷಮತೆ, ಕಾಯಿಲೆಗಳ ವಿವರಗಳನ್ನು ನೀಡಲಾಗುತ್ತದೆ. ಗೋವುಗಳ ಮಾಲೀಕರು ತಮ್ಮ ಗೋವುಗಳಿಗೆ ಬೇಕಾದ ಸೂಕ್ತ ಸಂಗಾತಿಗಳನ್ನು ಆರಿಸಿಕೊಳ್ಳಬಹುದು. ಸ್ವದೇಶಿ ಗೋವುಗಳ ತಳಿ ಅಭಿವೃದ್ಧಿಗೆ ಇದು ನೆರವಾಗಲಿದೆ.
ಭೋಪಾಲ್‌ನ ವೀರ್ಯಾಣು ವಂಶಾಭಿವೃದ್ಧಿ ಘಟಕದಿಂದ ಈ ಗೂಳಿಗಳನ್ನು ಕರೆತರಲಾಗುವುದು ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಪ್ರತಿ ಗೂಳಿಗಳ ವಿವರ ತಿಳಿಯಲು ಮೂರು ಮಾದರಿಯಲ್ಲಿ ಮಾಹಿತಿ ನೀಡಲಾಗುತ್ತದೆ.
ಮೊದಲನೆಯದಾಗಿ ತಳಿ, ವಯಸ್ಸು ಇರುತ್ತದೆ. ಎರಡನೆಯದಾಗಿ ಕಾರ್ಯಕ್ಷಮತೆ ಸ್ವಭಾವ, ಹಾಲು ಉತ್ಪಾದನೆ ವಿವರ, ಹಾಲಿನ ಜಿಡ್ಡಿನಾಂಶ, ಗರ್ಭಧಾರಣೆ ಮಾಹಿತಿ ಇರಲಿದೆ. ಮೂರನೆಯದಾಗಿ ವಂಶವಾಹಿ ಕಾಯಿಲೆಗಳ ವಿವರ ಇರುತ್ತದೆ.
ಭೋಪಾಲ್‌ನಲ್ಲಿರುವ ವೀರ್ಯಾಣು ವಂಶಾಭಿವೃದ್ಧಿ ಘಟಕವು ದೇಶದಲ್ಲೇ ನಂಬರ್ ವನ್ ಆಗಿದೆ. ಪ್ರತಿ ವರ್ಷ 16 ತಳಿಗಳ 24 ಲಕ್ಷ ವೀರ್ಯಾಣು ಡೋಸ್ (ವೀರ್ಯಾಣು ಪೈಪ್) ತಯಾರಿಸಿ, ರೈತರಿಗೆ ನೀಡಲಾಗುತ್ತಿದೆ. ವರ್ಷಕ್ಕೆ 40 ಲಕ್ಷ ಡೋಸ್ ತಯಾರಿಸುವ ಗುರಿ ಹೊಂದಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.