ತೆಕ್ಕಟ್ಟೆ : ಬೇಳೂರು ಗ್ರಾ.ಪಂ. ವ್ಯಾಪ್ತಿಯ ಗುಳ್ಳಾಡಿ ಸರಕಾರಿ ಪ್ರಾಥಮಿಕ ಶಾಲೆಯ ಸಮೀಪದಲ್ಲಿ ಸಿಡಿಲು ಎರಗಿ ಕೊಟ್ಟಿಗೆಯಲ್ಲಿದ್ದ ನಾಲ್ಕು ತಿಂಗಳ ಗರ್ಭಿಣಿ ಹಸು ಸಾವಿಗೀಡಾದ ಘಟನೆ ಸೋಮವಾರ ಬೆಳಗ್ಗೆ ಸಂಭವಿಸಿದೆ. ಸಿಡಿಲಿನಿಂದ ಮನೆಗೂ ಹಾನಿಯಾಗಿದ್ದು, ಒಟ್ಟು ಸುಮಾರು 2 ಲ.ರೂ. ನಷ್ಟ ಅಂದಾಜಿಸಲಾಗಿದೆ.
ಗುಳ್ಳಾಡಿಯ ಕೃಷಿಕ ನಾರಾಯಣ ಹೆಗ್ಡೆ ಅವರ ಮನೆಗೆ ಮತ್ತು ಹಟ್ಟಿಗೆ ಸಿಡಿಲು ಬಡಿದಿದ್ದು, ಕೊಟ್ಟಿಗೆಯಲ್ಲಿದ್ದ ಗಬ್ಬದ ಹಸು ಸಾವಿಗೀಡಾಗಿದೆ. ಮನೆಯ ಗೋಡೆಗೆ ಹಾನಿಯಾಗಿದ್ದು, ವಿದ್ಯುತ್ ಮೀಟರ್ ಸಹಿತ ವಯರಿಂಗ್ ಪೂರ್ತಿಯಾಗಿ ಸುಟ್ಟು ಹೋಗಿದೆ.
ಮನೆಯಲ್ಲಿ ನಾರಾಯಣ ಹೆಗ್ಡೆ, ಅವರ ಪತ್ನಿ ವನಜಾಕ್ಷಿ ಶೆಡ್ತಿ, ಇಬ್ಬರು ಮಕ್ಕಳು ಸಹಿತ ಐದು ಮಂದಿ ಇದ್ದರು. ಅವರೆಲ್ಲರೂ ಸಿಡಿಲಿನ ಶಬ್ದಕ್ಕೆ ಆಘಾತಗೊಂಡು ಬಳಿಕ ಚೇತರಿಸಿದ್ದಾರೆ.
ಘಟನೆಯ ಬಗ್ಗೆ ತಿಳಿಯುತ್ತಿದ್ದಂತೆ ಬೇಳೂರು ಗ್ರಾಮ ಪಂಚಾಯತ್ ಅಧ್ಯಕ್ಷ ಬೇಳೂರು ಕರುಣಾಕರ ಶೆಟ್ಟಿ, ಗ್ರಾ.ಪಂ.ಸದಸ್ಯರಾದ ಜಯಶೀಲ ಶೆಟ್ಟಿ , ಶ್ರೀಲತಾ ಹಾಗೂ ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ , ಕೆದೂರು ಪಶು ಸಂಗೋಪನಾ ಕೇಂದ್ರ ವೈದ್ಯಾಧಿಕಾರಿ ಡಾ| ನಿರಂಜನ್ ಮೊದಲಾದವರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಸಿಡಿಲಿಗೆ ಚಿಂದಿಯಾದ ಬಕೆಟ್
ಸಿಡಿಲಿನ ಏಟಿಗೆ ಮನೆಯ ವಿದ್ಯುತ್ ಮೀಟರ್ ಪಕ್ಕದಲ್ಲಿದ್ದ ಪ್ಲಾಸ್ಟಿಕ್ ಬಕೆಟ್ ಸಂಪೂರ್ಣ ಚಿಂದಿಯಾಗಿದೆ. ಅಲ್ಲಿಯೇ ಇದ್ದ ಅಲ್ಯುಮಿನಿಯಂ ಪಾತ್ರೆಯಲ್ಲಿ ದೊಡ್ಡ ರಂಧ್ರವಾಗಿದ್ದು, ಪಾತ್ರೆ ನಜ್ಜುಗುಜ್ಜಾಗಿ ಮನೆಯಿಂದ ಸುಮಾರು 200 ಮೀಟರ್ ದೂರ ಬಿದ್ದಿತ್ತು.