ಕಲಬುರಗಿ: ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ -2020 ಜಾರಿಯಲ್ಲಿದ್ದು, ಬಕ್ರೀದ್ ಹಬ್ಬದ ಆಚರಣೆ ಸಂದರ್ಭದಲ್ಲಿ ಜಾನುವಾರುಗಳ ಹತ್ಯೆ ಹಾಗೂ ಸಾಗಾಣಿಕೆ ಮಾಡಬಾರದು ಎಂದು ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಜುಲೈ 10ರಂದು ಬಕ್ರೀದ್ ಆಚರಿಸುವ ನಿಟ್ಟಿನಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕರೆದಿದ್ದ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಪೊಲೀಸ್ ಇಲಾಖೆ, ಪಶುಸಂಗೋಪನಾ ಇಲಾಖೆ, ಸಾರಿಗೆ ಇಲಾಖೆ, ಮಹಾ ನಗರ ಪಾಲಿಕೆ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಇಲಾಖೆಗಳ ಸಹಯೋಗದೊಂದಿಗೆ ಜಿಲ್ಲೆಯಾದ್ಯಂತ ಬಕ್ರೀದ್ ಹಬ್ಬದ ಮೂರು ದಿನಗಳ ಮುಂಚಿತವಾಗಿ ಜಾನುವಾರುಗಳ ಸಾಗಾಣಿಕೆ ಬಗ್ಗೆ ಕಣ್ಗಾವಲು ಇಡಬೇಕು. ಕರ್ನಾಟಕದಲ್ಲಿ ಜಾರಿಯಲ್ಲಿರುವ ಕರ್ನಾಟಕ ಜಾನುವಾರು ವಧೆ ಪ್ರತಿಬಂಧಕ ಮತ್ತು ಸಂರಕ್ಷಣೆ ಕಾಯ್ದೆ -2020 ಕುರಿತು ಜಾಗೃತಿ ಮೂಡಿಸುವ ಕಾರ್ಯವಾಗಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರು.
ಈಗಾಗಲೇ ಕಲಬುರ್ಗಿ ನಗರದ ಪೋಲಿಸ್ ಆಯುಕ್ತಾಲಯ ವ್ಯಾಪ್ತಿಯಲ್ಲಿ 10ಚೆಕ್ ಪೋಸ್ಟ್ ಗಳನ್ನು ನಿರ್ಮಿಸಲಾಗಿದೆ. ಜಿಲ್ಲೆ ವ್ಯಾಪ್ತಿಯಲ್ಲಿ ಎಲ್ಲಾ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಚೆಕ್ ನಿರ್ಮಿಸಲಾಗಿದೆ. ಫ್ಲೈಯಿಂಗ್ ಸ್ಕ್ವಾಡ್ ಕೂಡ ರಚಿಸಲಾಗಿದೆ. ಪೊಲೀಸ್ ಅಧಿಕಾರಿಗಳು ಹಾಗೂ ಪಶು ವೈದ್ಯಕೀಯ ಅಧಿಕಾರಿಗಳ ಜಂಟಿ ತಂಡ ಹಾಗೂ ಸಿಬ್ಬಂದಿ ಎಚ್ಚರಿಕೆಯಿಂದ ಕೆಲಸವನ್ನು ನಿರ್ವಹಿಸಬೇಕೆಂದು, ಅನಧಿಕೃತವಾಗಿ ಪ್ರಾಣಿ ವಧೆ, ಸಾಗಾಟ ತಡೆಗೆ ಕ್ರಮ ಕೈಗೊಳ್ಳಬೇಕೆಂದು ಹೇಳಿದರು.
ಸಾಗಾಣೆ ಮಾಡಲ್ಪಡುವ ಜಾನುವಾರುಗಳನ್ನು ವಶಪಡಿಸಿಕೊಂಡು ಎಫ್‌ಐಆರ್ ಮಾಡುವುದು, ಬಳಿಕ ಇವುಗಳನ್ನು ಗೋಶಾಲೆಗಳಿಗೆ ಸಾಗಿಸಿ, ಆರೋಗ್ಯ ತಪಾಸಣೆ ಒಳಪಡಿಸಬೇಕು ಎಂದು ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಡಾ| ಗಿರೀಶ್ ಬದೋಲೆ, ಡಿಸಿಪಿ ಅಡೂxರು ಶ್ರೀನಿವಾಸಲು , ಪಾಲಿಕೆ ಆಯುಕ್ತರಾದ ಭುವನೇಶ್ವರ ದೇವದಾಸ ಪಾಟೀಲ, ಅಪರ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ, ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿ ಸದಸ್ಯ ಕೇಶವ ಮೋಟಗಿ, ಪಶು ಸಂಗೋಪನೆ ಉಪ ನಿರ್ದೇಶಕ ಹಾಗೂ ತಾಂತ್ರಿಕ ಅಧಿಕಾರಿಗಳು, ಜಿಲ್ಲಾಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.