Advertisement
ಕೆಲ ದಿನಗಳ ಹಿಂದೆ ಕೇಂದ್ರ ಸರಕಾರ ಗೋ ಮಾರಾಟ ನಿರ್ಬಂಧ ಕಾಯಿದೆಯನ್ನು ದೇಶದಲ್ಲಿ ಜಾರಿಗೆ ತರುವ ಕ್ರಮವನ್ನು ವಿರೋಧಿಸಿ ಕೇರಳ ಯುವ ಕಾಂಗ್ರೆಸಿನ ಕೆಲವು ಕಾರ್ಯಕರ್ತರು ಮುಗ್ಧ ಕರುವಿನ ರುಂಡ ಕತ್ತರಿಸಿ ಮೆರವಣಿಗೆ ಮಾಡಿದರು. ಗೋ ಮಾರಾಟ ನಿರ್ಬಂಧ ಕಾನೂನು ಜಾರಿಯ ವಿರುದ್ಧ ಅವರು ತಮ್ಮ ಪ್ರತಿಭಟನೆಯನ್ನು ಪ್ರದರ್ಶಿಸಲು ಇಷ್ಟು ಕೆಳಮಟ್ಟಕ್ಕೆ ಇಳಿದದ್ದು ವಿಷಾದನೀಯ. ತಮ್ಮ ಸೆಕ್ಯಲರಿಸಂನ್ನು ರುಜುವಾತು ಮಾಡಲು ಮತ್ತು ತಮ್ಮ ಪಕ್ಷದ ಮುಖಂಡರ ಮೆಚ್ಚುಗೆ ಗಳಿಸುವ ಉದ್ದೇಶದಿಂದ ಈ ಕಾರ್ಯಕರ್ತರು ಇಂತಹ ಅಮಾನವೀಯ ಕೃತ್ಯ ಎಸಗಿದ್ದಾರೆ. ಇನ್ನು ಚೆನ್ನೈಯಲ್ಲಿ ಐಐಟಿ ವಿದ್ಯಾರ್ಥಿಗಳು ಬೀಫ್ ಫೆಸ್ಟಿವಲ್ ಮಾಡಿರುವುದು ಕೂಡ ಅಷ್ಟೇ ಅಪಾಯಕಾರಿ ಬೆಳವಣಿಗೆ. ವಿದ್ಯಾರ್ಥಿಗಳಿಗೆ ಪ್ರತಿಭಟಿಸುವ ಹಲವಾರು ವಿಧಾನಗಳಿರುವಾಗ ಈ ರೀತಿಯ ಅತಿರೇಕದ ವರ್ತನೆ ಖಂಡಿತ ಸರಿಯಲ್ಲ. ಸರಕಾರದ ಕ್ರಮ ವಿರೋಧಿಸುವ ಸಲುವಾಗಿ ಈ ರೀತಿಯ ಹಿಂಸಾ ಪ್ರವೃತ್ತಿಯ ಪ್ರದರ್ಶನವನ್ನು ನಮ್ಮ ಸೆಕ್ಯುಲರ್‌ವಾದಿಗಳು ಖಂಡಿಸದಿರುವುದು ಕೂಡ ಒಂದು ಆತಂಕಕಾರಿ ಬೆಳವಣಿಗೆ. ಖಂಡಿಸಿದ್ದಲ್ಲಿ ತಮ್ಮ ಸೆಕ್ಯುಲರ್ ವ್ಯಕ್ತಿತ್ವಕ್ಕೆ ಧಕ್ಕೆ ಬರಬಹುದು ಎಂಬ ಭೀತಿ ಇವರನ್ನು ಕಾಡುತ್ತಿರಬೇಕು.
Related Articles
Advertisement
ಭಾರತದ ಸುಮಾರು 24 ರಾಜ್ಯಗಳಲ್ಲಿ ಗೋಹತ್ಯೆ ನಿಷೇಧ ಅಥವಾ ಗೋಮಾಂಸ ಮಾರಾಟ ನಿಷೇಧದ ವಿವಿಧ ರೂಪದ ಕಾನೂನುಗಳು ಜಾರಿಯಲ್ಲಿವೆ. ವಿಶೇಷವೆಂದರೆ ಈ ವಿವಿಧ ಕಾನೂನುಗಳು ಸುಮಾರು 50 ವರ್ಷಕ್ಕೂ ಮೇಲ್ಪಟ್ಟು ವಯಸ್ಸಿನವು. ಅಂದರೆ ಈ ರಾಜ್ಯಗಳಲ್ಲಿ ಈ ಗೋಹತ್ಯೆ ನಿಷೇಧ ಕಾನೂನುಗಳು ಜಾರಿಗೆ ಬಂದಾಗ ಕಾಂಗ್ರೆಸ್ ಸರಕಾರಗಳೇ ಅಧಿಕಾರದಲ್ಲಿ ಇದ್ದವು. ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಂಸತ್ ಸದಸ್ಯರಾಗಿದ್ದಾಗ ರಾಷ್ಟ್ರವ್ಯಾಪಿ ಗೋಹತ್ಯೆ ನಿಷೇಧ ಕಾನೂನು ಜಾರಿಗೆ ತರಬೇಕು ಎಂದು ಖಾಸಗಿ ಮಸೂದೆಯನ್ನು ಸಂಸತ್ತಿನಲ್ಲಿ ಮಂಡನೆ ಮಾಡಿದ್ದರು. ಅವರು ಮುಖ್ಯಮಂತ್ರಿ ಆದ ಅನಂತರ ಉತ್ತರಪ್ರದೇಶದ ಕಸಾಯಿಖಾನೆಗಳನ್ನು ಮುಚ್ಚಿಸಿರುವುದು ಮಾಧ್ಯಮಗಳಲ್ಲಿ ಬಹಳಷ್ಟು ಟೀಕೆಗೆ ಎಡೆ ಮಾಡಿದೆ. ಆದರೆ 1955ರಲ್ಲಿಯೇ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಆಗಿನ ಉತ್ತರಪ್ರದೇಶದ ಮುಖ್ಯಮಂತ್ರಿ ಸಂಪೂರ್ಣನಂದಾ ಅವರು ಪ್ರಧಾನಿ ನೆಹರು ಅವರ ಅಸಮ್ಮತಿ ಇದ್ದಾಗ್ಯೂ ಗೋಹತ್ಯೆ ನಿಷೇಧ ಕಾನೂನು ಜಾರಿಗೆ ತಂದದ್ದು ಈಗ ಇತಿಹಾಸ. ಸಂವಿಧಾನದ ಅನುಚ್ಛೇದ 48ರಲ್ಲಿ (Directive principles) ಗೋಹತ್ಯೆ ನಿಷೇಧ ಸೇರಿಸಿಕೊಂಡ ಪರಿಣಾಮ ನೆಹರು ಸಮ್ಮತಿ ಇಲ್ಲದಿದ್ದರೂ ಸಂಪೂರ್ಣಾನಂದರಿಗೆ ಗೋಹತ್ಯೆ ನಿಷೇಧ ಕಾನೂನು ಜಾರಿಗೆ ತರಲು ಸಾಧ್ಯವಾಯಿತು. ಇದಕ್ಕೂ ಮೊದಲು ಜಮ್ಮು ಕಾಶ್ಮೀರ ಮತ್ತು ಮಣಿಪುರಗಳಲ್ಲಿ ಗೋಹತ್ಯೆ ನಿಷೇಧ ಕಾನೂನುಗಳು ಅನುಕ್ರಮವಾಗಿ 1932 ಮತ್ತು 1936ರಿಂದಲೇ ಜಾರಿಯಲ್ಲಿದ್ದವು. ಸ್ವಾತಂತ್ರ್ಯಾನಂತರ ಕೂಡ ಈ ಕಾನೂನು ಮುಂದುವರಿಯಿತು. ಕರ್ನಾಟಕದಲ್ಲಿ ಎಸ್. ನಿಜಲಿಂಗಪ್ಪ ಅವರ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿದ್ದಾಗ Karnataka Prevention of Cow Slaughter and. Cattle Preservation Act, 1964 ಜಾರಿಗೆ ಬಂತು. 1964 ಆಗಸ್ಟ್ 14ರಂದು ಈ ಕಾಯಿದೆಗೆ ರಾಷ್ಟ್ರಪತಿ ಅವರ ಅನುಮೋದನೆ ದೊರಕಿತು ಮತ್ತು ಕರ್ನಾಟಕ ಗಝೆಟ್‌ನಲ್ಲಿ ಆಗಸ್ಟ್ 27, 1964ರಂದು ಪ್ರಕಟವಾಯಿತು ಮತ್ತು ಆ ಕೂಡಲೇ ಜಾರಿಗೆ ಬಂತು.
ಇಂದಿರಾ ಗಾಂಧಿ ಕೂಡ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಗೋಹತ್ಯೆ ನಿಷೇಧಕ್ಕೆ ಸಮ್ಮತಿ ನೀಡಿದವರು. 1982ರಲ್ಲಿ ಅವರು ಕಾಂಗ್ರೆಸ್ ಆಡಳಿತದಲ್ಲಿರುವ 14 ರಾಜ್ಯಗಳಿಗೆ ಪತ್ರ ಬರೆದು ಗೋಹತ್ಯೆ ನಿಷೇಧ ಕಾನೂನನ್ನು ಅಕ್ಷರಶಃ ಪಾಲಿಸುವಂತೆ ಆಜ್ಞೆ ಮಾಡಿದ್ದರು ಮಾತ್ರವಲ್ಲದೆ, ಇದನ್ನು ಜಾರಿಗೆ ತರುವಲ್ಲಿ ನುಣುಚಿಕೊಳ್ಳುವ ಪ್ರಯತ್ನ ಮಾಡಬಾರದೆಂದು ತಾಕೀತು ಮಾಡಿದ್ದರು. ಇಂದಿರಾ ಗಾಂಧಿಯವರು ಹಿಂದೂ ಸಂಘಟನೆಗಳನ್ನು ಮತ್ತು ಬಹುಸಂಖ್ಯಾತ ಹಿಂದೂಗಳನ್ನು ಖುಷಿಪಡಿಸಲು ಇಂತಹ ಕ್ರಮ ಕೈಗೊಂಡಿರಬಹುದು ಎಂಬುದು ನಿಸ್ಸಂದೇಹ. ಇಂದಿರ ಅವರ ಪತ್ರದ ಪರಿಣಾಮವಾಗಿಯೇ ಈ 14 ರಾಜ್ಯಗಳಲ್ಲಿ ಗೋಹತ್ಯೆ ನಿಷೇಧ ಕಾನೂನು ಜಾರಿಗೆ ತರುವ ನಿಟ್ಟಿನಲ್ಲಿ ಹೆಚ್ಚು ಮುತುವರ್ಜಿ ತೋರಲು ಸಾಧ್ಯವಾಯಿತು. ಬಹುಶಃ ಈ ಕಾನೂನುಗಳು ಜಾರಿಗೆ ಬಂದ ಕಾಲದಲ್ಲಿ ಬಹುಸಂಖ್ಯಾತ ಹಿಂದೂಗಳನ್ನು ಕಡೆಗಣಿಸುವ ಸಾಹಸ ಮಾಡುವ ಮೊಂಡು ಧೈರ್ಯ ಕಾಂಗ್ರೆಸ್ ನಾಯಕರಿಗೆ ಇರಲಿಲ್ಲ. ಈಗ ಪರಿಸ್ಥಿತಿ ಬದಲಾಗಿದೆ. ಬಹುಸಂಖ್ಯೆಯಲ್ಲಿರುವ ಹಿಂದೂಗಳನ್ನು ಕಡೆಗಣಿಸಿದರೂ ಅಲ್ಪಸಂಖ್ಯಾತರ ತುಷ್ಟೀಕರಣ ಮಾಡಿಯೇ ತಮ್ಮ ರಾಜಕೀಯ ನೆಲೆಯನ್ನು ಭದ್ರ ಮಾಡಬಹುದು ಎಂದು ಕಾಂಗ್ರೆಸ್ ನಾಯಕರು ಭಾವಿಸಿದ್ದಾರೆ.
ಆದರೆ ಈಗ ಇದು ಸುಳ್ಳಾಗಿದೆ. ಬಿಜೆಪಿ ಇಡೀ ದೇಶದಲ್ಲಿ ಭದ್ರ ಅಡಿಪಾಯ ಹಾಕುವಲ್ಲಿ ಯಶಸ್ವಿಯಾದರೂ ಕಾಂಗ್ರೆಸ್ ಯಾವುದೇ ಪಾಠ ಕಲಿಯಲಿಲ್ಲ. ಗೋಹತ್ಯೆ ನಿಷೇಧ ಕಾನೂನಿನ ಕುರಿತು ಈ ಪಕ್ಷಕ್ಕೆ ಸ್ಪಷ್ಟ ನಿಲುವು ತೆಗೆದುಕೊಳ್ಳಲು ಸಾಧ್ಯವಾಗಿಲ್ಲ. ಗೋಹತ್ಯೆ ನಿಷೇಧದ ಕುರಿತು ಕಾಂಗ್ರೆಸ್ ಈಗ ತಾಳಿರುವ ಇಬ್ಬಗೆಯ ನೀತಿ ಈ ಪಕ್ಷದ ಧೂರ್ತತನಕ್ಕೆ ಹಿಡಿದ ಕನ್ನಡಿ ಅಲ್ಲವೇ? ಗೋಹತ್ಯೆ ನಿಷೇಧ ಕಾನೂನುಗಳ ಕುರಿತು ನಮ್ಮ ರಾಜಕೀಯ ಧುರೀಣರು ಮತ್ತು ಪಕ್ಷಗಳು ಅನುಸರಿಸಿದ ಇಬ್ಬಗೆಯ ನೀತಿಯಿಂದಲೇ ಈ ಸಮಸ್ಯೆ ಉಂಟಾಗಿದೆ ಮತ್ತು ಉಲ್ಬಣಗೊಂಡಿದೆ. ಇದರ ವಿಷ ಬೀಜವನ್ನು ಸಂವಿಧಾನ ರಚಿಸುವ ಸಮಯದಲ್ಲಿಯೇ ಬಿತ್ತಲಾಗಿತ್ತು. ಸಂವಿಧಾನ ರಚಿಸುವ ಸಮಯದಲ್ಲಿ ಗೋಹತ್ಯೆ ನಿಷೇಧ ಕಾನೂನನ್ನು ಸಂವಿಧಾನದಲ್ಲಿ ಎಲ್ಲಿ ಸೇರಿಸಬೇಕು ಎಂಬುದರ ಬಗ್ಗೆ ಸಂವಿಧಾನ ಸಭೆಯ ಸದಸ್ಯರ ನಡುವೆ ಒಮ್ಮತ ಇರಲಿಲ್ಲ. ಗೋಹತ್ಯೆ ನಿಷೇಧವನ್ನು ಮೂಲಭೂತ ಹಕ್ಕನ್ನಾಗಿ ಸಂವಿಧಾನದಲ್ಲಿ ಸೇರ್ಪಡಿಸುವಂತೆ ಸಂವಿಧಾನ ಸಭೆಯ ಬಹಳಷ್ಟು ಸದಸ್ಯರು ಪಟ್ಟು ಹಿಡಿದಿದ್ದರು. ಆದರೆ ಮೂಲಭೂತ ಹಕ್ಕುಗಳನ್ನು ಮನುಷ್ಯರಿಗೆ ಮಾತ್ರ ಕೊಡಬಹುದು, ಪ್ರಾಣಿಗಳಿಗಲ್ಲ ಎಂಬ ಸಂದಿಗ್ಧತೆಗೆ ಒಳಗಾದಾಗ ಅದನ್ನು ಸಂವಿಧಾನದ Directive Principles of State Policyಯಲ್ಲಿ ಸೇರಿಸಲಾಯಿತು. ಆದ್ದರಿಂದ ಗೋಹತ್ಯೆ ನಿಷೇಧ ಸಂವಿಧಾನಕ್ಕೆ ವಿರೋಧ ಅಥವಾ ಸರಕಾರ ಜನರ ಮೂಲಭೂತ ಹಕ್ಕುಗಳನ್ನು ಉಲ್ಲಂ ಸುತ್ತದೆ ಎಂದು ವಾದ ಹೂಡುವುದರಲ್ಲಿ ತಿರುಳಿಲ್ಲ.
– ಕ್ಲಾಡ್ ಡಿ’ಸೋಜಾ