ಬೆಂಗಳೂರು: ನಗರದ ಆಡುಗೋಡಿ ಪೊಲೀಸ್ ಠಾಣೆಯಲ್ಲಿ ವಿಚಿತ್ರ ದೂರೊಂದು ದಾಖಲಾಗಿದೆ. ಪ್ರಕರಣ ದಾಖಲಾಗಿರುವುದು ಒಂದು ಹಸುವಿನ ವಿರುದ್ಧ. ಹೀಗಾಗಿ ಆರೋಪಿ ಹಸುವಿನ ಬಂಧನ ವಿಚಾರ ಇದೀಗ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.
ಹೌದು, ಇತ್ತೀಚೆಗೆ ಈ ದೂರು ದಾಖಲಾಗಿದ್ದು, “”ನನ್ನ ತಾಯಿಗೆ ಹಸುವೊಂದು ಗುದ್ದಿ ಗಾಯಗೊಳಿಸಿದೆ,” ಎಂದು ವೃತ್ತಿಯಲ್ಲಿ ಪೊಲೀಸ್ ಪೇದೆಯೇ ಆಗಿರುವ ರಾಜು ಎಂಬುವವರು ಆಡುಗೋಡಿ ಠಾಣೆಯಲ್ಲಿ ಹಸುವಿನ ವಿರುದ್ಧ ದೂರು ಕೊಟ್ಟಿದ್ದಾರೆ.
ನಗರ ಪೊಲೀಸ್ ಆಯುಕ್ತರ ಕಚೇರಿಯ ಕಾನ್ಸ್‌ಟೇಬಲ್ ರಾಜು ಅವರ ತಾಯಿ ಭಾಗ್ಯಮ್ಮ ಅವರಿಗೆ ಇತ್ತೀಚೆಗೆ ಹಸು ತಿವಿದು ಭುಜದ ಮೂಳೆ ಮುರಿದಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವ ಅವರು, ಡಿಸಾcರ್ಜ್ ಕೂಡ ಆಗಿದ್ದಾರೆ ಎನ್ನಲಾಗಿದೆ.
ಘಟನೆ ಏನು?: ಆಡುಗೋಡಿ ಪೊಲೀಸ್ ಕ್ವಾಟ್ರìಸ್‌ನಲ್ಲಿ ನೆಲೆಸಿರುವ ಭಾಗ್ಯಮ್ಮ ಅವರು ಇತ್ತೀಚೆಗೆ ಮಧ್ಯಾಹ್ನ 12.30ರಲ್ಲಿ ತಮ್ಮ ಮೊಮ್ಮಗನನ್ನು ಶಾಲೆಯಿಂದ ಕರೆದುಕೊಂಡು ಬರುತ್ತಿದ್ದರು. ಹೊಸೂರು-ಲಷ್ಕರ್ ರಸ್ತೆಯಲ್ಲಿ ಬರುತ್ತಿದ್ದಾಗ ಹಿಂದಿನಿಂದ ಬಂದ ಹಸು ಭಾಗ್ಯಮ್ಮ ಅವರ ಬೆನ್ನಿಗೆ ತಿವಿದು ಬೀಳಿಸಿದೆ.
ಜತೆಗೆ ವೃದ್ಧೆಗೆ ಕಾಲಿನಿಂದ ಒದ್ದಿದೆ. ಕೂಡಲೇ ಸ್ಥಳೀಯರು ಭಾಗ್ಯಮ್ಮ ಅವರ ರಕ್ಷಣೆಗೆ ಧಾವಿಸಿ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಭಾಗ್ಯಮ್ಮ ಅವರ ಪುತ್ರ, ಕಾನ್ಸ್‌ಟೇಬಲ್ ರಾಜು ಅವರು ಆಡುಗೋಡಿ ಠಾಣೆಯಲ್ಲಿ ಹಸುವಿನ ವಿರುದ್ಧ ದೂರು ದಾಖಲಿಸಿದ್ದಾರೆ.
ಮೂಕ ಪ್ರಾಣಿಗಳನ್ನು ಬಂಧಿಸಕ್ಕಾಗುತ್ತಾ?
ಈ ದೂರಿನ ಕುರಿತು ಪ್ರತಿಕ್ರಿಯಿಸಿರುವ ಆಡುಗೋಡಿ ಪೊಲೀಸರು, “ನಾವು ಎಂದೂ ಕೂಡ ಇಂತಹ ಸಂದರ್ಭವನ್ನು ಎದುರಿಸಿಲ್ಲ. ಘಟನೆ ನಡೆದ ಸ್ಥಳದಲ್ಲಿ ಯಾವುದೇ ಸಿಸಿಟಿವಿ ಕೂಡ ಇಲ್ಲ. ಸಿಕ್ಕ -ಸಿಕ್ಕ ಮೂಕ ಪ್ರಾಣಿಗಳನ್ನು ಹಿಡಿದು ಪ್ರಶ್ನಿಸಲು ಸಾಧ್ಯವೇ? ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.