Advertisement

ಗೋ ರಕ್ಷಣೆಗೆ ಮುಸ್ಲಿಮರೂ ಪ್ರಾಣತೆತ್ತಿದ್ದಾರೆ!

06:00 AM Oct 01, 2017 | Team Udayavani |

ನಾಗ್ಪುರ: ಗೋವುಗಳ ರಕ್ಷಣೆ ಎನ್ನುವುದು ಧರ್ಮಾತೀತ ವಿಚಾರ, ಭಜರಂಗದಳದ ಕಾರ್ಯಕರ್ತರು ಜೀವ ತೆತ್ತಂತೆ ಮುಸ್ಲಿಂ ಸಮುದಾಯದವರೂ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಪ್ರತಿಪಾದಿಸಿದ್ದಾರೆ.

Advertisement

ನಾಗ್ಪುರದಲ್ಲಿರುವ ಆರ್‌ಎಸ್‌ಎಸ್‌ ಪ್ರಧಾನ ಕಚೇರಿಯಲ್ಲಿ ವಿಜಯದಶಮಿ ನಿಮಿತ್ತ ಶನಿವಾರ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದನಗಳ ರಕ್ಷಣೆಯ ಹೆಸರಲ್ಲಿ ಕೊಲ್ಲುವುದು ಖಂಡನೀಯ. ಅದೇ ರೀತಿ ಹಲವರು ಗೋ ಕಳ್ಳರಿಂದಲೂ ಅಸುನೀಗಿದ್ದಾರೆ ಎಂದರು. ಅಲ್ಲದೆ ಗೋವುಗಳನ್ನು ಸಂರಕ್ಷಿಸುತ್ತಿರುವವರನ್ನು ಶುದ್ಧ ಕಾರ್ಯಕರ್ತರು ಎಂದು ಕರೆದ ಅವರು, ಇಂಥವರು ಯಾವುದೇ ರೀತಿಯ ಹಿಂಸಾಚಾರದಲ್ಲಿ ತೊಡಗುವುದಿಲ್ಲ ಎಂದು ಅಭಿಪ್ರಾಯಪಟ್ಟರು.

ಹಸುಗಳನ್ನು ರಕ್ಷಿಸುತ್ತಿರುವ ಧಾರ್ಮಿಕ ಕಾರ್ಯಕರ್ತರಿಗೂ, ಸಮಾಜದಲ್ಲಿ ಹಿಂಸೆಯುಂಟು ಮಾಡುತ್ತಿರುವ ಕ್ರಿಮಿನಲ್‌ಗ‌ಳನ್ನು ಒಂದೇ ಎಂದು ಭಾವಿಸುವುದು ತಪ್ಪು ಎಂದ ಅವರು, ಇವರ ನಡುವಿನ ವ್ಯತ್ಯಾಸ ಅರಿಯುವುದು ಒಳಿತು ಎಂದರು. ಇದರ ಜತೆಗೆ, ಹಲವಾರು ಮುಸ್ಲಿಂ ಸಮುದಾಯದ ಬಾಂಧವರು ಗೋ ರಕ್ಷಕರ ಜತೆ ಸೇರಿಕೊಂಡು ಗೋವುಗಳನ್ನು ರಕ್ಷಿಸುತ್ತಿದ್ದಾರೆ. ಇವರಲ್ಲೇ ಕೆಲವರು ತಮ್ಮ ಬಳಿ, ಗೋ ರಕ್ಷಣೆ ಬಗ್ಗೆ ಹಬ್ಬಿಸಲಾಗುತ್ತಿರುವ ಅಪ ಪ್ರಚಾರಗಳ ಬಗ್ಗೆಯೂ ಧ್ವನಿ ಎತ್ತಿದ್ದಾರೆ. ಇದಷ್ಟೇ ಅಲ್ಲ, ಕೆಲವು ಮುಸ್ಲಿಮರು ಗೋವುಗಳನ್ನು ಪ್ರೀತಿಯಿಂದ ಸಾಕುತ್ತಿದ್ದಾರೆ ಎಂದು ಹೇಳಿದರು.

ರೊಹಿಂಗ್ಯಾ ಮುಸ್ಲಿಮರು ಬೇಡ
ರೊಹಿಂಗ್ಯಾ ಮುಸ್ಲಿಮರು ರಾಷ್ಟ್ರೀಯ ಭದ್ರತೆಗೆ ಅಪಾಯಕಾರಿ. ಅವರ ಬಗ್ಗೆ ನಿರ್ಧರಿಸುವಾಗ ಈ ವಿಚಾರ ನೆನಪಿನಲ್ಲಿಟ್ಟುಕೊಳ್ಳಬೇಕಾದ್ದು ಮುಖ್ಯ. ಈಗಾಗಲೇ ಬಾಂಗ್ಲಾದೇಶಿಯರ ಅಕ್ರಮ ವಲಸೆಯಿಂದ ಸಮಸ್ಯೆ ಎದುರಿಸುವಂತಾಗಿದೆ. ಈಗ  ರೊಹಿಂಗ್ಯಾಗಳ ಮೂಲಕ ಮತ್ತೂಂದು ಸಮಸ್ಯೆಯನ್ನು ದೇಶ ಎದುರಿಸುವಂತಾಗುವುದು ಬೇಡ. ಇನ್ನೂ ನೂರಾರು ಮಂದಿ ದೇಶದೊಳಕ್ಕೆ ನುಸುಳುವ ಸಾಧ್ಯತೆ ಇದೆ. ಅವರನ್ನು ಒಳಕ್ಕೆ ಬಿಟ್ಟರೆ, ದೇಶದ ಭದ್ರತೆ ಮತ್ತು ಜನರ ಉದ್ಯೋಗಕ್ಕೆ ಬೆದರಿಕೆ ಉಂಟಾಗುವ ಸಾಧ್ಯತೆ ಇದೆ. ಆ ಸಮುದಾಯಕ್ಕೆ ಉಗ್ರ ಸಂಘಟನೆಗಳ ಜತೆ ಸಂಪರ್ಕ ಇದೆ ಎಂಬ ಗುಮಾನಿಯೂ ಉಂಟು ಎಂದರು ಭಾಗವತ್‌.

ತಿದ್ದುಪಡಿಯಾಗಬೇಕು
ಕಾಶ್ಮೀರ ಕಣಿವೆಯಲ್ಲಿ 1990ರ ದಶಕದಲ್ಲಿನ ಭಾರಿ ಹಿಂಸಾಚಾರದಿಂದ ಪಲಾಯನ ಮಾಡಿದ ಕಾಶ್ಮೀರ ಪಂಡಿತರಿಗೆ ಪುನರ್‌ ವಸತಿ ಕೆಲಸವಾಗಬೇಕು ಎಂದು ಭಾಗವತ್‌ ಹೇಳಿದ್ದಾರೆ. ಕಣಿವೆ ರಾಜ್ಯಕ್ಕೆ ಸಂವಿಧಾನದ 370ನೇ ವಿಧಿಯನ್ವಯ ಇರುವ ವಿಶೇಷ ಸವಲತ್ತುಗಳ ಪೂರೈಕೆಯಲ್ಲಿ ಬದಲಾವಣೆಯಾಗಬೇಕು ಎಂದು ಪರೋಕ್ಷವಾಗಿ ಪ್ರಸ್ತಾಪಿಸಿದ್ದಾರೆ. “ಸಂವಿಧಾನಾತ್ಮಕವಾಗಿ ಕೆಲವೊಂದು ಬದಲಾವಣೆಯನ್ನು ಜಾರಿಗೆ ತಂದಾಗ ಮಾತ್ರ ಜಮ್ಮು ಮತ್ತು ಕಾಶ್ಮೀರ ದೇಶದ ಇತರ ಭಾಗದ ಜತೆ ವಿಲೀನವಾಗಲು ಸಾಧ್ಯ. ಹಳೆಯ ವ್ಯವಸ್ಥೆಯಲ್ಲಿ ಬದಲಾವಣೆಯಾಗಬೇಕು’ ಎಂದು ಹೇಳಿದ್ದಾರೆ.

Advertisement

ಲಡಾಖ್‌, ಜಮ್ಮು ಪ್ರದೇಶ ಸೇರಿದಂತೆ ಸಂಪೂರ್ಣ ಜಮ್ಮು ಮತ್ತು ಕಾಶ್ಮೀರದ ಸರ್ವಾಂಗೀಣ ಅಭಿವೃದ್ಧಿಗೆ ತುರ್ತಾಗಿ ಹೆಚ್ಚಿನ ಆದ್ಯತೆ ನೀಡಬೇಕು. ಇದರಿಂದ ಜನರಿಗೇ ಅನುಕೂಲ. ದಶಕಗಳಿಂದ ರಾಜ್ಯದಲ್ಲಿ ವಲಸಿಗರ ಸಮಸ್ಯೆ ಪರಿಹಾರ ಮಾಡಿಲ್ಲ. ಭಾರತದ ಪ್ರಜೆಗಳಾಗಿಯೂ ಅವರಿಗೆ ಕನಿಷ್ಠ ಮೂಲ ಸೌಕರ್ಯಗಳಾಗಿರುವ ಶಿಕ್ಷಣ, ಉದ್ಯೋಗ ಮತ್ತು ಪ್ರಜಾಸತ್ತಾತ್ಮಕ ಹಕ್ಕುಗಳೇ ಇಲ್ಲ ಎಂದಿದ್ದಾರೆ. 1947ರಲ್ಲಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಿಂದ ಬಂದವರು ಮತ್ತು 1990ರಲ್ಲಿನ ಹಿಂಸಾಚಾರದಿಂದ ನೊಂದವರಿಗೆ ಪುನರ್ವಸತಿ ಆಗಿಲ್ಲ. ಅದು ಪೂರ್ಣಗೊಂಡಾಗಲೇ ನಮ್ಮ ಸಹೋದರ-ಸಹೋದರಿಯರು ಸಂತಸದಿಂದ ಇರಲು ಸಾಧ್ಯ ಎಂದರು.

ಹೆಮ್ಮೆಯ ವಿಚಾರ: ಎಪ್ಪತ್ತೈದು ದಿನಗಳ ಕಾಲ ಚೀನಾದೊಂದಿಗೆ ತಲೆದೋರಿದ್ದ ಡೋಕ್ಲಾಂ ವಿವಾದವನ್ನು ಯಶಸ್ವಿಯಾಗಿ ಬಗೆಹರಿಸಿದ್ದು ಕೇಂದ್ರ ಸರ್ಕಾರದ ಸಾಧನೆ ಎಂದಿದ್ದಾರೆ ಆರೆಸ್ಸೆಸ್‌ ಮುಖ್ಯಸ್ಥ. ಪಾಕಿಸ್ತಾನ ಪಶ್ಚಿಮ ಭಾಗದಲ್ಲಿ ತಕರಾರು ಎಬ್ಬಿಸುತ್ತಿದ್ದರೂ ಕೇಂದ್ರ ಸರ್ಕಾರ ರಾಜತಾಂತ್ರಿಕ ಮುತ್ಸದ್ದಿತನ ತೋರಿಸಿ, ಸಮಸ್ಯೆ ಪರಿಹಾರ ಮಾಡಿದೆ ಎಂದು ಶ್ಲಾ ಸಿದರು. ಇದರಿಂದಾಗಿ ಅಂತಾರಾಷ್ಟ್ರೀಯ ಮಟ್ಟದ ರಾಜತಾಂತ್ರಿಕತೆಯಲ್ಲಿ ದೇಶದ ವರ್ಚಸ್ಸು  ವೃದ್ಧಿಸಿದೆ ಎಂದರು.

ಸರ್ಕಾರಗಳಿಗೆ ಟೀಕೆ: ಕೇರಳ ಮತ್ತು ಪಶ್ಚಿಮ ಬಂಗಾಳಗಳಲ್ಲಿ ರಾಷ್ಟ್ರ ವಿರೋಧಿ ಕೃತ್ಯಗಳಿಗೆ ಪ್ರೋತ್ಸಾಹ ಸಿಗುತ್ತಿದೆ ಎಂದು ಆರೋಪಿಸಿದ ಭಾಗವತ್‌, ಆಯಾ ರಾಜ್ಯ ಸರ್ಕಾರಗಳು ರಾಜಕೀಯ ಕಾರಣಗಳಿಗಾಗಿ ಅಂಥವುಗಳಿಗೆ ಬೆಂಬಲ ನೀಡುತ್ತಿವೆ ಎಂದು ದೂರಿದರು. ಎರಡೂ ರಾಜ್ಯಗಳಲ್ಲಿ ಆಡಳಿತ ವ್ಯವಸ್ಥೆಯನ್ನು ರಾಜಕೀಯಗೊಳಿಸಲಾಗಿದೆ ಎಂದರು. ಕೇಂದ್ರ ಸರ್ಕಾರಕ್ಕೆ ಇಂಥ ಮಾಹಿತಿಗಳು ತಲಪುವುದರಿಂದ ಅದುವೇ ಇಂಥ ಶಕ್ತಿಗಳನ್ನು ಹತ್ತಿಕ್ಕಲು ಮುಂದಾಗಬೇಕು ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಸಲಹೆ ಮಾಡಿದ್ದಾರೆ.

ರೈತರಿಗೆ ಸಂಕಷ್ಟ:
ರೈತಾಪಿ ವರ್ಗ ಸಂಕಷ್ಟದಲ್ಲಿದೆ ಎಂದು ಪ್ರತಿಪಾದಿಸಿದ ಆರ್‌ಎಸ್‌ಎಸ್‌ ವರಿಷ್ಠ, ಸಾಲ ಮನ್ನಾದಂಥ ತಾತ್ಕಾಲಿಕ ಕ್ರಮಗಳಿಂದ ಏನೂ ಲಾಭವಾಗಲಾರದು ಎಂದಿದ್ದಾರೆ. ನೋಟು ಅಮಾನ್ಯ ಮತ್ತು ಜಿಎಸ್‌ಟಿ ಜಾರಿಯ ಬಗ್ಗೆ ಪರೋಕ್ಷ ಪ್ರಸ್ತಾಪ ಮಾಡಿದ ಅವರು, ಹೊಸ ವ್ಯವಸ್ಥೆ ಜಾರಿಯಿಂದ ಅಸಾಂಪ್ರದಾಯಿಕ ಅರ್ಥ ವ್ಯವಸ್ಥೆಯ ಮೇಲೆ ಕೊಂಚ ಕಂಪನ ಮತ್ತು ಪ್ರತಿಕೂಲ ಪರಿಣಾಮ ಬೀರುವುದು ನಿಶ್ಚಿತ ಎಂದರು. ಸಣ್ಣ, ಮಧ್ಯಮ ಕೈಗಾರಿಕೆಗಳು ಮತ್ತು ಸ್ವಯಂ ಉದೋಗ್ಯ ಕ್ಷೇತ್ರಗಳು ಅರ್ಥ ವ್ಯವಸ್ಥೆಯ ಮೇಲೆ ಹೆಚ್ಚಿನ ಕೊಡುಗೆ ನೀಡುವುದರಿಂದ ಆ ಕ್ಷೇತ್ರಗಳ ಹಿತಾಸಕ್ತಿ ಗಮನಿಸಬೇಕಾದದ್ದು ಅಗತ್ಯವೆಂದರು ಭಾಗವತ್‌.ಬಿಜೆಪಿಯ ಹಿರಿಯ ತಲೆಯಾಳು ಲಾಲ್‌ ಕೃಷ್ಣ ಅಡ್ವಾಣಿ, ಕೇಂದ್ರ ಸಚಿವ ನಿತಿನ್‌ ಗಡ್ಕರಿ ಮತ್ತಿತರರು ಕಾರ್ಯಕ್ರಮದಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next