ಉಡುಪಿ: ಭಾರತೀಯ ತಳಿ ಹಸುಗಳ ಸಂತಾನ ಉಳಿಯ ಬೇಕು. ಇದಕ್ಕಾಗಿ ಜನರಲ್ಲಿ ಗೋಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವ ಕೆಲಸವಾಗಬೇಕು. ರಾಜ್ಯವನ್ನು ‘ಗೋ’ಪುರ ಮಾಡಿ ಈ ಮೂಲಕ ಗೋವುಗಳನ್ನು ರಕ್ಷಿಸುವ ಕೆಲಸವಾಗಬೇಕು ಎಂದು ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ನುಡಿದರು.
ಪರ್ಯಾಯ ಶ್ರೀ ಪಲಿಮಾರು ಮಠದ ಆಶ್ರಯದಲ್ಲಿ ಪೇಜಾವರ ಮಠದ ಬಳಿ ಆಯೋಜಿಸಲಾಗಿದ್ದ ಗೋಪುರಂ, ‘ಭಾರತೀಯ ದೇಸೀ ಗೋ ಸಮ್ಮೇಳನ-2019’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಆರ್ಥಿಕ, ಧಾರ್ಮಿಕ, ಮಾನವೀಯ ದೃಷ್ಟಿಯಿಂದಲೂ ಗೋವುಗಳ ರಕ್ಷಣೆ ಯಾಗಬೇಕು. ಕೇಂದ್ರ ಸರಕಾರವೂ ಗೋವುಗಳ ರಕ್ಷಣೆ ಬಗ್ಗೆ ವಿಶೇಷ ಗಮನಹರಿಸಬೇಕು. ಭಾರತೀಯ ಗೋವುಗಳು ಆರೋಗ್ಯಯುತ ಹಾಲು ನೀಡುತ್ತವೆ. ಇವುಗಳನ್ನು ಉಳಿಸುವ ಕೆಲಸವಾಗಬೇಕು ಎಂದರು.
ಪೇಜಾವರ ಕಿರಿಯ ಶ್ರೀ ವಿಶ್ವ ಪ್ರಸನ್ನತೀರ್ಥ ಶ್ರೀಪಾದರು ಮಾತನಾಡಿ, ಕರಾವಳಿ ಪ್ರದೇಶ ಧಾರ್ಮಿ ಕತೆಯಲ್ಲಿ ಮುಂದಿದೆ. ಹಲವಾರು ದೇಗುಲಗಳು ಜೀರ್ಣೋದ್ಧಾರ ಗೊಂಡಿವೆ ಮತ್ತು ಜೀರ್ಣೋ ದ್ಧಾರ ಗೊಳ್ಳುತ್ತಿವೆ. ಪ್ರತಿ ಯೊಂದು ಊರಿನಲ್ಲಿ ಶಾಲೆ, ಆಸ್ಪತ್ರೆ ಇದ್ದಂತೆ 1 ದೇವಸ್ಥಾನ ಹಾಗೂ 1 ಗೋಶಾಲೆ ಇರಬೇಕು. ಈ ಬಗ್ಗೆ ಎಲ್ಲರೂ ಸಂಕಲ್ಪ ತೊಡಬೇಕು ಎಂದರು. ಈ ಸಂದರ್ಭ ಗೋ ಸಮ್ಮೇಳನದ ಕರಪತ್ರ ಬಿಡುಗಡೆಗೊಳಿಸಲಾಯಿತು.
ಪರ್ಯಾಯ ಶ್ರೀ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿ ಮಾತನಾಡಿ, ಗೋಮಾತೆ ಯನ್ನು ಪೂಜಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ತಿಳಿಸಿದರು.
ಪರ್ಯಾಯ ಪಲಿಮಾರು ಮಠದ ಕಿರಿಯ ಶ್ರೀಗಳಾದ ವಿದ್ಯಾ ರಾಜೇಶ್ವರ ತೀರ್ಥ ಶ್ರೀಪಾದರು, ಅದಮಾರು ಕಿರಿಯ ಮಠಾಧೀಶ ಶ್ರೀ ಈಶಪ್ರಿಯತೀರ್ಥ ಸ್ವಾಮೀಜಿ, ಬಾಲಾಜಿ ರಾಘವೇಂದ್ರ ಆಚಾರ್ಯ ಉಪಸ್ಥಿತರಿದ್ದರು. ಶ್ರೀನಿವಾಸ ಪೆಜತ್ತಾಯ ಪ್ರಸ್ತಾವನೆಗೈದರು. ವಿಜಯೇಂದ್ರ ನಿರೂಪಿಸಿದರು.