Advertisement

ಗೋವಿನ ವಿಶ್ವರೂಪ ತೆರೆದಿಟ್ಟ ಗೋಮಂತ್ರ ಚಿತ್ರಕಲಾ ಪ್ರದರ್ಶನ

06:00 AM Aug 31, 2018 | |

“ಪಾವನ ದೃಷ್ಟಿ’ ಚಿತ್ರದಲ್ಲಿ ಗೋವಿನ ದೃಷ್ಟಿಯಲ್ಲಿ  ಹೇಗೆ ಜಗತ್ತನ್ನು ನೋಡುತ್ತದೆ ಅನ್ನುವ ಪರಿಕಲ್ಪನೆಯ ಕಲಾಕೃತಿಯನ್ನು ರಚಿಸಲಾಗಿದೆ. ಕಣ್ಣ ಗೊಂಬೆಯನ್ನೇ  ಭೂಖಂಡದ  ರಚನೆಯಂದಿಗೆ ರೂಪಿಸಲಾಗಿದೆ. 

Advertisement

ಗೋವು ಇಂದು ಅತ್ಯಂತ ಚರ್ಚೆಗೆ ಒಳಗಾಗುತ್ತಿರುವ ಪ್ರಾಣಿ. ಅದು ಧಾರ್ಮಿಕ, ಸಾಮಾಜಿಕ ಹಾಗೂ ರಾಜಕೀಯ ಆಯಾಮಗಳನ್ನು ಪಡೆದುಕೊಂಡಿದೆ. ಈ ಸಂದರ್ಭದಲ್ಲಿ ಗೋವನ್ನು ಥೀಮ್‌ ಆಗಿಟ್ಟುಕೊಂಡು ಒಂದು ಕಲಾಪ್ರದರ್ಶನ ನಡೆದದ್ದು ಕುಂದಾಪುರದಲ್ಲಿ. ತ್ರಿವರ್ಣ ಆರ್ಟ್‌ ಕ್ಲಾಸ್‌ ಹಾಗೂ ರೋಟರಿ ಕ್ಲಬ್‌ ಕುಂದಾಪುರ ಸಹಯೋಗದೊಂದಿಗೆ ಕುಂದಾಪುರದ ಕಲಾಮಂದಿರದಲ್ಲಿ ನಡೆದ ಗೋ ಮಂತ್ರ ಚಿತ್ರಕಲಾ ಪ್ರದರ್ಶನ ಜನಮೆಚ್ಚುಗೆ ಪಡೆಯಿತು. ತ್ರಿವರ್ಣ ಆರ್ಟ್‌ ಕ್ಲಾಸ್‌ನ ತರಬೇತುದಾರ ಕಲಾವಿದ ಹರೀಶ್‌ ಸಾಗಾ ಅವರು ಕುಂದಾಪುರದ 24 ಮಂದಿ ಹಾಗೂ ಮಣಿಪಾಲದ 12 ಜನ ಕಲಾವಿದರಿಂದ ಏರ್ಪಡಿಸಿದ ಪ್ರದರ್ಶನದಲ್ಲಿ ಚಿತ್ರ ಬಿಡಿಸಿದವರೆಲ್ಲರೂ ಮಕ್ಕಳೇ. ಆದರೆ ಅವರ ಬಣ್ಣಗಳಿಗೆ ಎಳೆತನವಿರಲಿಲ್ಲ. ಕಲ್ಪನೆಗಳು ಬಾಲ್ಯ ಮೀರಿತ್ತು. ಚಿತ್ರಗಳು ಪ್ರೌಢಿಮೆಯಿಂದಿದ್ದವು. 

ಗೋವಿನ ವೈವಿಧ್ಯಮಯ ಬಳಕೆ, ಪಾವಿತ್ರ್ಯ, ಮರೆಯಾದ ಸಂಸ್ಕೃತಿ, ಈ ನೆಲದ ಸೊಗಡು ಎಲ್ಲವೂ ಈ ಒಂದು ಪ್ರದರ್ಶನದಲ್ಲಿತ್ತು. ಸಾಲದು ಎಂಬಂತೆ ಗೋ ರಕ್ಷಣೆಗಾಗಿ ಮೊರೆ, ಪ್ಲಾಸ್ಟಿಕ್‌ನಿಂದ ಗೋವುಗಳಿಗೆ ಆಗುತ್ತಿರುವ ತೊಂದರೆ, ಗೋ ವಿನಾಶದ ಕುರಿತೂ ಭರಪೂರ ಚಿತ್ರಮಾಹಿತಿಗಳಿದ್ದವು. ಪ್ರತಿ ಚಿತ್ರದ ಜತೆಗೂ ಅದರ ಕಲ್ಪನೆಯ ವಿವರಣೆಗಳಿದ್ದವು. 

“ಗೋಪೂಜೆ’ಯ ದೃಶ್ಯದ ಕಲಾಕೃತಿಯಲ್ಲಿ ತಾಯಿಯು ಪುಷ್ಪ, ದೀಪ, ಗಂಧಗಳುಳ್ಳ ಹರಿವಾಣದಲ್ಲಿ ಆರತಿ ಮಾಡಿ ತಿಲಕವನ್ನಿಡುವ ದೃಶ್ಯವಿತ್ತು. “ತೈಲಧಾರಣೆ’ಯಲ್ಲಿ ಗಾಣದೆತ್ತಿನ ಚಿತ್ರಣವಿತ್ತು. “ಉಳುಮೆ’ಜಲವರ್ಣದ ಕಲಾಕೃತಿಯಲ್ಲಿ ಮಳೆಗಾಲದಲ್ಲಿ ರೈತನ ಉಳುಮೆ ಮತ್ತು ಹೆಂಗಸರು ನಾಟಿಯಲ್ಲಿ ತೊಡಗಿಕೊಂಡಿರುವುದನ್ನು ಹಸಿರು ಗದ್ದೆಯಲ್ಲಿ ಕಾಣಬಹುದಿತ್ತು. “ತಾಯಿ ಮಮತೆ‌’ಯಲ್ಲಿ ಪ್ರೀತಿ ಮತ್ತು ಹಾರೈಕೆ ಇತ್ತು. ನಾಲಿಗೆ ಅಥವಾ ಮುಖಸವರುವ ಮೂಲಕ ಭಾವನೆಯನ್ನು ವ್ಯಕ್ತ ಪಡಿಸಿದರೆ, ಮನುಷ್ಯನಿಗೆ ಕೈ ಕಾಲು, ಕಣ್ಣುಗಳ ಚಲನವಲನದಿಂದ ಅವಿನಾನುಭವದ ಸಂಬಂಧವನ್ನು ಬೆಸೆಯುವಲ್ಲಿ ಹೆಚ್ಚು ಸ್ಪಂದನೀಯವಾಗಿರುತ್ತದೆ. ಇದು ಹೂವಿನಂತೆ ಕೋಮುಲವೂ ಹೌದು ಎನ್ನುವುದಕ್ಕೆ ಹೂವಿನ ಚಿತ್ರಗಳು ರಚಿಸಲ್ಪಟ್ಟಿದೆ.

“ಎತ್ತಿನ ಗಾಡಿ’, “ಪುಣ್ಯ ಕೋಟಿ’ ಚಿತ್ರದ ಜತೆಗೆ ಮಕ್ಕಳ ಅದ್ಭುತ ಕಲ್ಪನೆಯಲ್ಲಿ ಪಡಿಮೂಡಿದ್ದು “ಒಡೆದ ಪ್ರತಿಕೃತಿ’ ಎನ್ನುವ ಚಿತ್ರ. ಒಡೆದ ಕನ್ನಡಿಯಲ್ಲಿ ಗೋವು ತನ್ನ ಪ್ರತಿಬಿಂಬವನ್ನು ಕಾಣುವ ಅದ್ಭುತ ಚಿತ್ರಣ ಇತ್ತು. “ಪ್ರಕೃತಿ ಬಿಂಬ’ದಲ್ಲಿ ಪ್ರಕೃತಿದತ್ತ ಸೃಷ್ಟಿ, ಜೀವಿಗಳ ನಂಟು ಇತ್ಯಾದಿ ಚಿತ್ರಣ ಇತ್ತು. 

Advertisement

ಧಾರ್ಮಿಕವಾಗಿ ಗೋವಿನ ಮಹತ್ವ ತಿಳಿಸುವ “ಗೃಹ ಪ್ರವೇಶ’, “ಗೋ ಮಾತಾ’, “ಗೋ ಮೂತ್ರ’, ಮನುಷ್ಯನ ದಿನಚರಿ ಹೇಗೆ ಗೋವಿನ ಜತೆಗೆ ಆರಂಭವಾಗುತ್ತದೆ ಎನ್ನಲು “ಮುಂಜಾನೆ’, “ಗೋ ಪಾಲಕ’, “ಗೋಮಯ’,”ಜಾಗತಿಕ ಹಸಿರು’ ಚಿತ್ರದಲ್ಲಿ ಪರಿಶುದ್ಧ ವಾತಾವರಣಕ್ಕೆ ಗೋವಿನ ಕೊಡುಗೆಯನ್ನು ಬಿಂಬಿಸುವ ಚಿತ್ರಣ ನೀಡಲಾಗಿತ್ತು. “ಬುಡಕಟ್ಟಿನ ರೂಪ’,”ನಗರ ಜೀವನ’, “ಸಂತಸದ ಕ್ಷಣ’ “ಗೋವಿನ ಆರೈಕೆ’, “ಭಕ್ತಿ’,”ಮಣ್ಣಿನ ಚಿಲುಮೆ’, “ಮೇಯಿಸುವಿಕೆ’, “ಇಂದಿನ ಜೀವನ’, “ಬಣ್ಣದ ಸಂಸ್ಕೃತಿ’, “ಗೋವರ್ಣ’, “ದೇವಾಲಯದೊಳಗೆ’ ಹೀಗೆ ಪ್ರತಿಯೊಂದೂ ಉತ್ತಮ ಚಿತ್ರಗಳು.

ಲಕ್ಷ್ಮೀ ಮಚ್ಚಿನ 

Advertisement

Udayavani is now on Telegram. Click here to join our channel and stay updated with the latest news.

Next