Advertisement

ಹಸು, ಹಸಿರು ಉಸಿರಾದಾಗ ಬಾಳು ಹಸನು: ಪೇಜಾವರ ಶ್ರೀ

03:35 AM Jun 29, 2017 | |

ಉಡುಪಿ: ಜೀವನಕ್ಕೆ ಉಪಯುಕ್ತವಾದ ಅಂಶಗಳನ್ನೇ ನೀಡುತ್ತಿರುವ ಹಸು ಮತ್ತು ಹಸಿರು ನಮ್ಮೆಲ್ಲರ ಉಸಿರಾದಾಗ ಬಾಳು ಹಸನಾಗುವುದು ಎಂದು ಪರ್ಯಾಯ ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಹೇಳಿದರು.

Advertisement

ಸಮರ್ಥ ಭಾರತ ಸಂಘಟನೆಯ ಮುಖಾಂತರ ರಾಜ್ಯದಾದ್ಯಂತ 1 ಕೋಟಿ ಗಿಡ ನೆಡುವ ಬೃಹತ್‌ ಅಭಿಯಾನಕ್ಕೆ ಮಂಗಳವಾರ ರಾಜಾಂಗಣದಲ್ಲಿ ಚಾಲನೆ ಇತ್ತು ಸಾಂಕೇತಿಕವಾಗಿ ಸಸಿಗಳನ್ನು ವಿತರಿಸಿ ಶ್ರೀಗಳು ಆಶೀರ್ವಚಿಸಿದರು.
ಜನೋಪಕಾರಿಯಾಗಿರುವುದನ್ನು ಮರೆಯದೆ ಅದನ್ನು ಪೋಷಿಸಿ ಬೆಳೆಸಬೇಕು. ಗೋವಿನ ಹಾಲಿನಿಂದ ಹಿಡಿದು ಎಲ್ಲವೂ ನಮ್ಮ ಆರೋಗ್ಯಕರ ಜೀವನಕ್ಕೆ ಪೂರಕ. ಅದೇ ರೀತಿ ಗಿಡ, ಮರಗಳು ಆಮ್ಲಜನಕದಿಂದ ಹಿಡಿದು ಬದುಕು ಸಾಗಿಸಲು ಬೇಕಾದುದನ್ನು ಕೊಡುತ್ತವೆ. ಹೀಗಿರುವಾಗ ಅವುಗಳ ರಕ್ಷಣೆ ನಮ್ಮ ಕರ್ತವ್ಯವಾಗಬೇಕು ಎಂದು ಶ್ರೀಗಳು ತಿಳಿಸಿದರು.

ಪೇಜಾವರ ಕಿರಿಯ ಯತಿ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಆಶೀರ್ವಚನ ನೀಡಿದರು. ಆರೆಸ್ಸೆಸ್‌ನ ದಕ್ಷಿಣ ಪ್ರಾಂತ ಸಹಸಂಪರ್ಕ ಪ್ರಮುಖ್‌ ಪ್ರಕಾಶ್‌ ಪಿ.ಎಸ್‌. ಶುಭಾಶಂಸನೆಗೈದರು. ಜಿ.ಪಂ. ಅಧ್ಯಕ್ಷ ದಿನಕರ ಬಾಬು, ಅದಾನಿ ಯುಪಿಸಿಎಲ್‌ನ ಕಿಶೋರ್‌ ಆಳ್ವ, ವಿಹಿಂಪದ ಪ್ರೊ| ಎಂ.ಬಿ. ಪುರಾಣಿಕ್‌, ಟಿ. ಶಂಭು ಶೆಟ್ಟಿ, ಜಗದೀಶ್‌ ಅಲ್ಸೆ, ಪ್ರಕಾಶ್‌ ಕ್ರಮಧಾರಿ ಉಪಸ್ಥಿತರಿದ್ದರು. ತಾರಾ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

ಆ. 15ರ ವರೆಗೆ ಅಭಿಯಾನ 
ಬೈಕಾಡಿ ಸುಪ್ರಸಾದ್‌ ಶೆಟ್ಟಿ ಅವರು ಸ್ವಾಗತಿಸಿ, ಪ್ರಸ್ತಾವನೆಗೈದು, ಪರಿಸರ ಉಳಿಸಿ ಬೆಳೆಸುವ ಸಂಕಲ್ಪದೊಂದಿಗೆ ಕೈಗೊಂಡಿರುವ ಈ ಮಹಾ ಅಭಿಯಾನ ಯಶಸ್ಸಿಗೆ ಎಲ್ಲರೂ ಸಹಕರಿಸುತ್ತಿದ್ದಾರೆ. ಆ. 15ರ ವರೆಗೆ ಅಭಿಯಾನ ನಡೆಯಲಿದೆ. ಶಾಲೆ, ಕಾಲೇಜು, ಆಸ್ಪತ್ರೆ, ಗ್ರಾ.ಪಂ., ದೇವಸ್ಥಾನ, ಭಜನ ಮಂಡಳಿ, ಯುವಕ/ಯುವತಿ ಮಂಡಲಗಳು, ವಿವಿಧ ಒಕ್ಕೂಟ ಮೊದಲಾದ ಸಂಸ್ಥೆಯವರನ್ನು ಸಂಪರ್ಕಿಸಲಾಗಿದ್ದು, ಅವರವರಿಗೆ ಉಪಲಭ್ಯವಿರುವ ಜಾಗದಲ್ಲಿ ಸಾಧ್ಯವಾದಷ್ಟರ ಮಟ್ಟಿಗೆ ಗಿಡ ನೆಡಲು ಮನವಿ ಮಾಡಲಾಗಿದೆ. ಯುಪಿಸಿಎಲ್‌ ಕೂಡ ಹಲವು ಲಕ್ಷ ಗಿಡ ನೆಡುವ ಭರವಸೆಯನ್ನು ಸಮರ್ಥ ಭಾರತಕ್ಕೆ ನೀಡಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next