Advertisement

ಉಡುಪಿ ಜಿಲ್ಲೆಯಲ್ಲಿ ಚರ್ಮಗಂಟು ಸೋಂಕು ದೃಢಪಟ್ಟಿಲ್ಲ 

10:35 AM Oct 16, 2022 | Team Udayavani |

ಉಡುಪಿ/ಕುಂದಾಪುರ: ರಾಜ್ಯದ ಇತರ ಜಿಲ್ಲೆಗಳಲ್ಲಿ ಜಾನುವಾರುಗಳ ಚರ್ಮಗಂಟು (ಲುಂಪಿ ಸ್ಕಿನ್‌) ಸೋಂಕು ವ್ಯಾಪಕವಾಗಿದೆ. ಉಡುಪಿ ಜಿಲ್ಲೆಯಲ್ಲಿ ಇದುವರೆಗೆ ಈ ಸೋಂಕು ದೃಢಪಟ್ಟಿಲ್ಲ ಎಂದು ಪಶು ಸಂಗೋಪನೆ ಇಲಾಖೆ ಸ್ಪಷ್ಟಪಡಿಸಿದೆಯಾದರೂ ಸಾಮಾಜಿಕ ಜಾಲತಾಣ ಗಳಲ್ಲಿ ಬೇರೆ ಬೇರೆ ವದಂತಿಗಳು ಹಬ್ಬುತ್ತಿರುವುದರಿಂದ ಜಿಲ್ಲೆಯ ಹೈನುಗಾರರಲ್ಲಿಯೂ ಆತಂಕ ಉಲ್ಬಣಿಸಿದೆ. ಆದ್ದರಿಂದ ಪಶುವೈದ್ಯರನ್ನು ಸಂಪರ್ಕಿಸಿ ಮಾಹಿತಿ ನೀಡುವ ಯತ್ನವನ್ನು ಇಲ್ಲಿ ಮಾಡಲಾಗಿದೆ.

Advertisement

“ಮತ್ತೆ ಲುಂಪಿ ಚರ್ಮ ಸೋಂಕಿನ ಆತಂಕ’ ಎಂದು ಉದಯವಾಣಿ ಸೆ. 29ರಂದು ವಿಸ್ತೃತ ವರದಿ ಪ್ರಕಟಿಸಿದ್ದು, ವರದಿ ಆಧಾರದಲ್ಲಿ ಮುಖ್ಯಮಂತ್ರಿ ಕಚೇರಿ ಅಧೀನ ಕಾರ್ಯದರ್ಶಿಗಳಿಂದ ಈ ಬಗ್ಗೆ ಎಚ್ಚರ ವಹಿಸುವಂತೆ ಸೂಚನೆ ಬಂದಿದೆ. ಹಸುಗಳ ಲುಂಪಿ ಕಾಯಿಲೆಯು ಮನುಷ್ಯರಿಗಾಗಲಿ, ನಾಯಿ ಮತ್ತಿತರ ಪ್ರಾಣಿಗಳಿಗಾಗಲಿ ಹರಡುವುದಿಲ್ಲ. ಅಂತೆಯೇ ಸೋಂಕು ಬಾಧಿತ ಹಸುವಿನ ಹಾಲನ್ನು ಕುಡಿಯುವುದರಿಂದಲೂ ರೋಗ ಬರುವುದಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ.

ಹೈನುಗಾರರು ಇದನ್ನು ಪಾಲಿಸಿ
ಜಾನುವಾರುಗಳನ್ನು ಹಿಂಡಿನಲ್ಲಿ ಮೇಯಿಸುವುದು ಮತ್ತು ಹೊರಗಿನ ಜಾನುವಾರುಗಳನ್ನು ತಂದು ಹಿಂಡಿನಲ್ಲಿ ಬಿಡುವ ಕೆಲಸ ಮಾಡಬಾರದು. ಹಟ್ಟಿ ಹಾಗೂ ಜಾನುವಾರುಗಳನ್ನು ಶುಚಿಯಾಗಿಡಬೇಕು. ಕೊಟ್ಟಿಗೆಯಲ್ಲಿ ಹೊಗೆ, ಬೇವಿನೆಣ್ಣೆ ಹಾಕಿ ಉಣ್ಣಿ, ಸೊಳ್ಳೆ, ನೊಣಗಳು ಬಾರದಂತೆ ನೋಡಿಕೊಳ್ಳಬೇಕು. ಹಟ್ಟಿಯನ್ನು ಫಿನಾಯಿಲ್‌ / ಸೋಡಿಯಂ ಹೈಪೊಕ್ಲೊರೈಟ್‌ ಅಥವಾ ಪೆನಿಲ್‌ ದ್ರಾವಣದಲ್ಲಿ ಚೆನ್ನಾಗಿ ತೊಳೆಯಬೇಕು. ರೋಗಪೀಡಿತ ಪ್ರಾಣಿಗಳ ಸಾಗಾಟ ನಿರ್ಬಂಧಿಸಬೇಕು. ಕೃತಕ ಗರ್ಭಧಾರಣೆಗೆ ರೋಗಪೀಡಿತ ಹೋರಿಗಳ ವೀರ್ಯ ಉಪಯೋಗಿಸಬಾರದು. ಅಕಸ್ಮಾತ್‌ ಮರಣ ಹೊಂದಿದಲ್ಲಿ ಕ್ರಿಮಿನಾಶಕ ಸಿಂಪಡಿಸಿ ಹೊಂಡದಲ್ಲಿ ವೈಜ್ಞಾನಿಕವಾಗಿ ಹೂಳಬೇಕು. ಗುಳ್ಳೆಗಳಾಗಿ ಒಡೆದರೆ ಅದಕ್ಕೆ ಅರಶಿನ, ಬೇವಿನ ಸೊಪ್ಪನ್ನು ಮೊಸರಿನಲ್ಲಿ ಮಿಶ್ರಣ ಮಾಡಿ ಹಚ್ಚಿ ಮುಂಜಾಗ್ರತೆ ಕೈಗೊಳ್ಳುವ ಕ್ರಮ ಕೆಲವೆಡೆ ಮಾಡಲಾಗುತ್ತಿದೆ. ಗುಳ್ಳೆ ವಾಸಿಯಾಗಲು 15 ದಿನಗಳ ಅವಧಿ ಬೇಕಾಗುತ್ತದೆ. ರೋಗಪೀಡಿತ ಜಾನುವಾರನ್ನು ಪ್ರತ್ಯೇಕವಾಗಿಟ್ಟರೆ ಹರಡುವ ಸಾಧ್ಯತೆ ಕಡಿಮೆ.

ಕಾಯಿಲೆಯ ಲಕ್ಷಣ
ನೀರು, ಆಹಾರ, ಸೊಳ್ಳೆ, ಉಣ್ಣೆಗಳ ಮೂಲಕ ಬಾಧಿಸುತ್ತದೆ. ಬಾಧಿತ ಜಾನುವಾರುಗಳು ಮೇವು ತಿನ್ನುವುದಿಲ್ಲ, ವಿಪರೀತ ಜ್ವರ, ಕಣ್ಣಿನಿಂದ ನೀರು, ಮೂಗು ಬಾಯಿಗಳಿಂದ ದ್ರವ ಸುರಿಯುತ್ತದೆ. ಚರ್ಮದ ಮೇಲೆ 1ರಿಂದ 5ಸೆಂ.ಮೀ. ಗುಳ್ಳೆಗಳೇಳುತ್ತವೆ; ಬಳಿಕ ಒಡೆದು ಕೀವು ಹೊರ ಬರುತ್ತದೆ. ಚಿಕಿತ್ಸೆ ನೀಡದಿದ್ದಲ್ಲಿ ಗಾಯದಲ್ಲಿ ಹುಳಗಳಾಗಿ ಜಾನುವಾರು ಶಕ್ತಿಹೀನವಾಗುತ್ತದೆ. ಜೀವ ಕಳೆದುಕೊಳ್ಳುವ ಸಾಧ್ಯತೆಯೂ ಇದೆ.

ಚರ್ಮಗಂಟು ಕಾಯಿಲೆ ಬಗ್ಗೆ ಹೈನುಗಾರರು ಆತಂಕ ಪಡುವ ಅಗತ್ಯವಿಲ್ಲ. ಜಿಲ್ಲೆಯಲ್ಲಿ ಇದುವರೆಗೆ ಸೋಂಕು ದೃಢಪಟ್ಟಿಲ್ಲ. ಇಲಾಖೆ ಮಟ್ಟದಲ್ಲಿ ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದೆ. ಈ ಕಾಯಿಲೆಯನ್ನು ಸುಲಭದಲ್ಲಿ ಹತೋಟಿಗೆ ತರಬಹುದು. ಕೇವಲ ಶೇ. 2ರಷ್ಟು ಮಾತ್ರ ಮಾರಣಾಂತಿಕ. ಮುನ್ನೆಚ್ಚರಿಕೆ ಕ್ರಮವಾಗಿ ಅಗತ್ಯ ಲಸಿಕೆ, ಔಷಧಕ್ಕೆ ಆದೇಶಿಸಿದ್ದು 10 ಸಾವಿರ ಲಸಿಕೆ ಸರಬರಾಜು ಆಗಿದೆ.
– ಡಾ| ಶಂಕರ್‌ ಶೆಟ್ಟಿ, ಉಪ ನಿರ್ದೇಶಕರು, ಪಶು ಸಂಗೋಪನೆ ಇಲಾಖೆ, ಉಡುಪಿ ಜಿಲ್ಲೆ

Advertisement

ಇದನ್ನೂ ಓದಿ : ಆಂಧ್ರ ಸಚಿವೆ ರೋಜಾ ಕಾರಿನ ಮೇಲೆ ನಟ ಪವನ್ ಕಲ್ಯಾಣ್ ಬೆಂಬಲಿಗರಿಂದ ದಾಳಿ, ಚಾಲಕನಿಗೆ ಗಾಯ

Advertisement

Udayavani is now on Telegram. Click here to join our channel and stay updated with the latest news.

Next