ವಿಶ್ವಕ್ಕೆ ಕಾಣದ ವಿಷಜಂತುವಿನ ಆಗಮನವಾಗಿದೆ. ಬದುಕಲು ಹೊರಗೆ ಹೋಗಿ ದುಡಿಯುತ್ತಿದ್ದವರು ಇಂದು ಬದುಕುಳಿಯಲು ಮನೆಯ ಒಳಗೆ ಕುಳಿತುಕೊಳ್ಳುವ ಪ್ರಮೇಯ ಒದಗಿ ಬಂದಿದೆ. ಕಾಲೇಜು ನಡೆಯುತ್ತಿದ್ದ ಸಂದರ್ಭದಲ್ಲಿ ನಾವಾಗಿಯೇ ರಜೆ ಮಾಡಿ ಮನೆಯಲ್ಲಿ ಕುಳಿತುಕೊಳ್ಳೋಣ ಎನ್ನುವಷ್ಟರ ಮಟ್ಟಿಗೆ ಕೆಲಸದ ಒತ್ತಡಗಳು ಅಂದಾಜು ಮಾಡಿಸಿಬಿಟ್ಟಿದ್ದವು. ಆದರೆ ಇಂದು ಸಾಕಪ್ಪ ಸಾಕು ಅನ್ನುವಂತಿದ್ದರೂ ಎಲ್ಲಾ ದಿನಗಳು ರಜೆಯಾಗಿಯೇ ಉಳಿದುಬಿಟ್ಟಿದೆ.
ಸಮಯ ಹಾಗೂ ಸಮುದ್ರದ ಅಲೆಗಳನ್ನು ಯಾರಿಂದಲೂ ತಡೆ ಹಿಡಿಯಲು ಸಾಧ್ಯವಿಲ್ಲ. ಸಮಯವನ್ನು ನಾವು ಯಾವ ರೀತಿ ಸದುಪಯೋಗಪಡಿಸಿಕೊಳ್ಳುತ್ತೇವೆ ಎಂಬುವುದರ ಮೇಲೆ ನಮ್ಮ ಭವಿಷ್ಯದ ಯಶಸ್ಸು ನಿಂತಿದೆ. ಕೋವಿಡ್ ವೈರಸ್ ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೊಳಿಸಿರುವ ದೇಶವ್ಯಾಪಿ ಲಾಕ್ ಡೌನ್ ಸಂದರ್ಭವು ನನಗೆ ಅನೇಕ ರೀತಿಯ ಹೊಸ ವಿಚಾರಗಳನ್ನು ಕಲಿಯಲು ಪೂರಕವಾಯಿತು.
ಮೂಕ ಪ್ರಾಣಿಗಳೂ ಮಾತಾಡುತ್ತವೆ. ಆದರೆ ಅದನ್ನು ಕೇಳುವ ಕಿವಿ ನಮ್ಮದಾಗಬೇಕು ಅನ್ನುತ್ತಾರೆ ಹಿರಿಯರು. ಅದೇ ರೀತಿ ಮನೆಯಲ್ಲಿರುವ ಬೆಕ್ಕು, ನಾಯಿ, ದನಗಳ ಜೊತೆ ಉತ್ತಮ ರೀತಿಯಲ್ಲಿ ಸಮಯವನ್ನು ವ್ಯಯ ಮಾಡುವ ಭಾಗ್ಯವು ಒದಗಿದೆ. ಅದೇ ರೀತಿ ಮನದ ಭಾವನೆಗೆ ಪ್ರಕೃತಿಯೂ ಕೆಲವೊಮ್ಮೆ ಸ್ಪಂದಿಸುತ್ತದೆಯಂತೆ. ಹಾಗಿರುವಾಗ ಹಸಿರ ಪರಿಸರದ ನಡುವೆ ಹೂಗಿಡ, ತೋಟದ ಕೆಲಸ ಮಾಡುತ್ತಾ ಪ್ರಕೃತಿಯ ಜೊತೆ ಅವಿನಾಭಾವ ಸಂಬಂಧ ರೂಪಿಸಿಕೊಂಡಿದ್ದೇನೆ.
ಹೆಣ್ಣು ಮಕ್ಕಳು ಅಂದ ಮೇಲೆ ಅಡುಗೆ ಕೆಲಸದಲ್ಲಿ ನಿಪುಣರಿರಬೇಕು ಎನ್ನುವ ಅಜ್ಜಿಯ ಸಲಹೆಯಂತೆ ಈ ರಜೆಯಲ್ಲಿ ಹೆಸರಿಲ್ಲದ ಅನೇಕ ಅನಾಮಧೇಯ ರೆಸಿಪಿಗಳನ್ನು ಕೂಡ ಕಲಿತು ಅದಕ್ಕೆ ನಾವಾಗಿಯೇ ನಾಮಕರಣ ಮಾಡಿಕೊಂಡ ತೃಪ್ತಿಯ ಭಾವ ನಮ್ಮಲ್ಲಿದೆ. ಅಷ್ಟೇ ಏಕೆ ಮನೆಯ ಸುತ್ತಮುತ್ತ ಸ್ವಚ್ಛಗೊಳಿಸುವುದರಲ್ಲಿ ಈಗ ಸಮಯ ಕಳೆಯುವುದೇ ತಿಳಿಯುವುದಿಲ್ಲ.
ನಾನು ಸಾಹಿತ್ಯಾಸಕ್ತರಾಗಿರುವುದರಿಂದ ಬರವಣಿಗೆ ಮತ್ತು ಓದುವಿಕೆಯ ಮೇಲೆ ಒಲವು ಹೆಚ್ಚು. ಈ ಸಂದರ್ಭದಲ್ಲಿ ನೆಚ್ಚಿನ ಲೇಖಕ ಎ.ಆರ್. ಮಣಿಕಾಂತ್ ಅವರ ನವಿಲುಗರಿ ಪುಸ್ತಕ ಮತ್ತು ನಾಗೇಶ್ ಶೆಟ್ಟಿಯವರ ಡೇಂಜರ್ ಝೋನ್ ಕೃತಿಯು ಮನಸ್ಸಿಗೆ ಅತ್ಯಂತ ಮುದ ನೀಡಿತು. ಈ ರಜೆಯು ನನ್ನೊಳಗಿನ ಅನೇಕ ಭಾವನೆಗಳಿಗೆ ಲೇಖನದ ಮುಖಾಂತರ ರೂಪ ಕೊಡುವಲ್ಲಿ ಪ್ರೋತ್ಸಾಹ ನೀಡಿತು.ದಿನನಿತ್ಯದ ಕೆಲಸಗಳನ್ನು ಮನೆಯಲ್ಲೇ ಕೂತು ನಿರ್ವಹಿಸುವ ನಮಗೆ ಮನೆಯೇ ಶ್ರೀ ರಕ್ಷೆಯಾಗಿರಲಿ ಎಂಬ ಆಶಯ.
ಅರ್ಪಿತಾ ಕುಂದರ್
ಪ್ರಥಮ ಎಮ್.ಸಿ.ಜೆ ವಿಭಾಗ
ವಿವೇಕಾನಂದ ಕಾಲೇಜು
ನೆಹರುನಗರ ಪುತ್ತೂರು