ಬೆಂಗಳೂರು: ಕೋವಿಡ್ 19 ವೈರಸ್ ಭೀತಿಯ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕರಾವಳಿ ಗಂಡು ಕಲೆ ಯಕ್ಷಗಾನವನ್ನು ಬಳಕೆ ಮಾಡಲಾಗುತ್ತಿದೆ. ಈಗಾಗಲೇ ಕೋವಿಡ್ 19 ಬಗ್ಗೆ ಅರಿವು ಮೂಡಿಸುವ ಯಕ್ಷಗಾನದ ತುಣುಕುಗಳನ್ನು ಫೇಸ್‌ಬುಕ್ ಸಹಿತ ಸಾಮಾಜಿಕ ತಾಣಗಳಲ್ಲಿ ಹರಿಯಬಿಡಲಾಗಿದ್ದು ಪ್ರಶಂಸೆ ವ್ಯಕ್ತವಾಗುತ್ತಿದೆ.
ಕೋವಿಡ್ 19 ವೈರಸ್ ಬಗ್ಗೆ ಅರಿವು ಮೂಡಿಸಬೇಕೆಂಬ ನಿಟ್ಟಿನಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ| ಎಂ.ಎ.ಹೆಗಡೆ, ಯಕ್ಷಗಾನ ಹಾಡುಗಳನ್ನು ರಚಿಸಿ ಜಾಗೃತಿ ಉಂಟು ಮಾಡುವ ನಿಟ್ಟಿನಲ್ಲಿ ಹೆಜ್ಜೆಯಿರಿಸಿ ಸಫಲರಾದರು. ಇವರೊಂದಿಗೆ ಕವಿ ಶ್ರೀಧರ್ ಡಿ.ಎಸ್. ಕೂಡ ಯಕ್ಷಗಾನ ಪದ್ಯಗಳನ್ನು ರಚಿಸಿ ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ಕೆ ಮುಂದಾಗಿದ್ದು ಈ ಪದ್ಯಗಳು ಈಗಾಗಲೇ ಸಾಮಾಜಿಕ ಜಾಲತಾಣ ಮೂಲಕ ಜನರನ್ನು ತಲುಪುವಲ್ಲಿ ಸಫಲವಾಗಿದೆ. ಕೋವಿಡ್ 19 ಬಗ್ಗೆ ಜನತೆ ಆತಂಕದಲ್ಲಿದ್ದಾರೆ.
ಅವರಿಗೆ ಯಕ್ಷಗಾನ ಪದ್ಯಗಳ ಮೂಲಕ ಭಯವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಪ್ರೊ|ಎಂ.ಎ.ಹೆಗಡೆ ಅವರು ಸ್ವತಃ ಮೂರು ಸಾಲಿನ ಪದ್ಯ ರಚಿಸಿ ವ್ಯಾಟ್ಸ್ ಆ್ಯಪ್‌ನಲ್ಲಿ ಹರಿಯ ಬಿಟ್ಟು ಸಫಲತೆ ಕಂಡಿದ್ದಾರೆ. ಮಂಗಳೂರು, ಉಡುಪಿ, ಶಿರಸಿ, ಸಿದ್ದಾಪುರ, ಸಾಗರ ಸಹಿತ ಹಲವು ಭಾಗಗಳಲ್ಲಿರುವ ಯಕ್ಷಗಾನ ಪ್ರೇಮಿಗಳು ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.
ಕಾಸರಗೊಡಿನ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಪಾuನದ ಮುಖ್ಯಸ್ಥರಾದ ಸಿರಿಬಾಗಿಲು ರಾಮಕೃಷ್ಣ ಮಯ್ಯ, ಕೋವಿಡ್ 19 ಕೇಂದ್ರೀಕರಿಸಿಯೇ ಹಾಡು ರಚಿಸಿ, ಪುಟ್ಟ ಯಕ್ಷಗಾನ ಪ್ರಸಂಗವನ್ನು ಸಿದ್ಧಪಡಿಸಿದರು. ಜತೆಗೆ ವಾಸುದೇವ ರಂಗಾ ಭಟ್, ಜಯಪ್ರಕಾಶ ಶೆಟ್ಟಿ ಸಹಿತ ಹಲವು ಕಲಾವಿದರು ಸೇರಿ “ಕೊರೊನಾಸುರ ಕಾಳಗ’ ಎಂಬ ಯಕ್ಷಗಾನ ಪ್ರಸಂಗ ಸಿದ್ಧಪಡಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ಈ ಬಗ್ಗೆ “ಉದಯವಾಣಿ’ಯೊಂದಿಗೆ ಮಾತನಾಡಿದ ಸಿರಿಬಾಗಿಲು ರಾಮಕೃಷ್ಣ ಮಯ್ಯ, ಕೋವಿಡ್ 19 ಕುರಿತು ವದಂತಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡಲಾಗುತ್ತಿದೆ. ಆ ಹಿನ್ನೆಲೆಯಲ್ಲಿ ಮಾನವ ಸಂಸ್ಕೃತಿಯ ಬಗ್ಗೆ ತಿಳಿ ಹೇಳಲು “ಕೊರೊನಾಸುರ’ ಕಾಳಗ’ ಯಕ್ಷ ಪ್ರಸಂಗ ಹುಟ್ಟಿಕೊಂಡಿತು ಎಂದರು.
ಕಲಾವಿದರು ಸಹಿತ ಯಾರೂ ಸಂಭಾವನೆ ಪಡೆದಿಲ್ಲ. ಜನರಲ್ಲಿ ಅರಿವು ಮೂಡಿಸುವುದೇ ನಮ್ಮ ಮೂಲ ಉದ್ದೇಶವಾಗಿತ್ತು ಎಂದು ತಿಳಿಸಿದರು.
ಕೋವಿಡ್ 19 ಬಗ್ಗೆ ಜಾಗೃತಿ ಮೂಡಿಸುವ ಮುಖ್ಯ ಉದ್ದೇಶ ನಮ್ಮದಾಗಿತ್ತು. ಆ ಪ್ರಯತ್ನ ಲಕ್ಷಾಂತರ ಯಕ್ಷಗಾನ ಪ್ರೇಮಿಗಳನ್ನು ತಲುಪಿರುವುದು ಖುಷಿ ಕೊಟ್ಟಿದೆ.
-ಪ್ರೊ| ಎಂ.ಎ.ಹೆಗಡೆ
ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ