ದೊಡ್ಡಬಳ್ಳಾಪುರ : ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಬಂದಿದ್ದ ರೋಗಿಯೊಬ್ಬರಿಗೆ ಕೋವಿಡ್-19 ಸೋಂಕಿದೆ ಎಂದು ಹೆಚ್ಚಿನ ಪರೀಕ್ಷೆಗಾಗಿ ಬೆಂಗಳೂರಿಗೆ ಶಿಫಾರಸ್ಸು ಮಾಡಿದ ವೈದ್ಯರೊಬ್ಬರ ಆತುರ ಹಾಗೂ ಅಚಾತುರ್ಯದಿಂದ ಇಡೀ ತಾಲೂಕು ಆತಂಕಗೊಂಡಿದ್ದ ಘಟನೆ ಶುಕ್ರವಾರ ನಡೆದಿದೆ.
ಘಟನೆ ಏನು: ಜವಳಿಪಾರ್ಕ್‌ನ ಗಾರ್ಮೆಂಟ್ಸ್‌ನಲ್ಲಿ ಕೆಲಸಕ್ಕೆ ಹೋಗುತ್ತಿದ್ದ ದೊಡ್ಡಬಳ್ಳಾಪುರದ ಮಹಿಳೆಯೊಬ್ಬರು ಎರಡು ದಿನಗಳ ಹಿಂದೆ ಜ್ವರ ಇರುವ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದಿದ್ದಾರೆ. ಜ್ವರ, ಕೆಮ್ಮು ಇದ್ದರಿಂದ ಶುಕ್ರವಾರ ಕಫಾ ಪರೀಕ್ಷೆ ಮಾಡಿಸಿಕೊಳ್ಳಲು ಬೆಂಗಳೂರಿನ ರಾಜೀವ್ ಗಾಂಧಿ ಆಸ್ಪತ್ರೆಗೆ ಹೋಗುವಂತೆ ಡಾ.ಷರೀಪ್ ಚೀಟಿ ಬರೆದುಕೊಡುವಾಗ ಕೋವಿಡ್-19 ಇರುವ ಶಂಕೆ ಇದೆ ಎಂದು ಬರೆದಿದ್ದಾರೆ. ಇಷ್ಟೇ ಅಲ್ಲದೇ, ಈ ಚೀಟಿಯನ್ನು ಮೊಬೈಲ್ ಮೂಲಕ ಪೋಟೋ ತೆಗೆದು ವಿವಿಧ ವಾಟ್ಸ್ ಆ್ಯಪ್ ಗ್ರೂಪ್‌ಗ್ಳಿಗೆ ಹರಿದು ಬಿಟ್ಟಿದ್ದೇ ಕೋವಿಡ್-19 ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗಲು ಕಾರಣವಾಗಿದೆ.
ಇದು ಸುಳ್ಳು ಸುದ್ದಿ, ವೈದ್ಯಾಧಿಕಾರಿಗೆ ನೊಟೀಸ್: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕೋವಿಡ್-19 ವೈರಸ್ ಪ್ರಕರಣ ಇದುವರೆಗೂ ಪತ್ತೆಯಾಗಿಲ್ಲ. ದೊಡ್ಡಬಳ್ಳಾಪುರ ತಾಯಿ ಮಗು ಸರ್ಕಾರಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯ ಡಾ.ಷರೀಪ್ ಎಂಬ ವೈದ್ಯರು ಸೃಷ್ಟಿಸಿರುವ ಗೊಂದಲವೇ ಸುಳ್ಳು ಸುದ್ದಿ ಹರಡಲು ಕಾರಣವಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಅವರು , ಜಿಲ್ಲೆಯಲ್ಲಿ ಹೆಚ್ಚು ಜನ ಸೇರುವ ಯಾವುದೇ ಅಧಕೃತ ಸಮಾರಂಭಗಳನ್ನು ನಡೆಸದಂತೆ ತಿಳಿಸಲಾಗಿದೆ. ಇದಲ್ಲದೆ ರಾಜ್ಯ ಸರ್ಕಾರ ಕೋವಿಡ್-19 ತಡೆಗೆ ನೀಡುತ್ತಿರುವ ಎಲ್ಲಾ ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಆರೋಗ್ಯ ಇಲಾಖೆ ಸೇರಿದಂತೆ ಎಲ್ಲಾ ಇಲಾಖೆಯ ಅಧಕಾರಿಗಳಿಗೂ ತಿಳಿಸಲಾಗಿದೆ ಎಂದರು.
ವೈದ್ಯರ ಮೇಲೆ ಕ್ರಮ: ಕೋವಿಡ್-19 ಶಂಕೆ ಇದೆ ಎಂದು ಯಾವುದೇ ಪರೀಕ್ಷೆಯನ್ನು ಮಾಡದಲೇ ನಿರ್ಧಾರಕ್ಕೆ ಬಂದು ಚೀಟಿ ಬರೆದುಕೊಟ್ಟು, ಅದನ್ನು ವಾಟ್ಸ್‌ಆ್ಯಪ್‌ಗ್ಳಲ್ಲಿ ಹರಿದು ಬಿಡಲು ಕಾರಣವಾಗಿರುವ ಡಾ.ಷರೀಪ್ ಅವರಿಗೆ ಕಾರಣ ಕೇಳಿ ನೊಟೀಸ್ ನೀಡಲಾಗಿದೆ ಎಂದು ದೊಡ್ಡಬಳ್ಳಾಪುರದ ಸಾರ್ವಜನಿಕ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ.ರಮೇಶ್ ತಿಳಿಸಿದ್ದಾರೆ.