ಉಡುಪಿ: ಕರ್ನಾಟಕದ ಕರಾವಳಿ ಜಿಲ್ಲೆ ಉಡುಪಿಯಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆಗೆ ಇಂದುಸ್ವಲ್ಪ ಮಟ್ಟಿಗೆ ಇಳಿಮುಖವಾಗಿದೆ. ಇಂದು ಮತ್ತೆ 13 ಹೊಸ ಸೋಂಕು ಪ್ರಕರಣಗಳು ಜಿಲ್ಲೆಯಲ್ಲಿ ದೃಢವಾಗಿದೆ.
ಕಳೆದೆರಡು ವಾರಗಳ ಕೋವಿಡ್ ಸೋಂಕಿತರ ಪಟ್ಟಿ ಗಮಿನಿಸಿದಲ್ಲಿ ಇಂದು ಜಿಲ್ಲೆಯ ಜನತೆಗೆ ಸ್ವಲ್ಪ ಮಟ್ಟಿನ ಸಮಾಧಾನ ತಂದಿದೆ. ದಿನವೂ 50ಕ್ಕಿಂತ ಮೇಲಿದ್ದ ಸೋಂಕಿತರ ಸಂಖ್ಯೆ ಇಂದು ಇಳಿಮುಖವಾಗಿದ್ದು ಸಮಾಧಾನಕರವಾಗಿದೆ
ಕಳೆದೆರಡು ವಾರಗಳಲ್ಲಿ ಜಿಲ್ಲೆಯ ಸೋಂಕಿತರ ಸಂಖ್ಯೆಯಲ್ಲಿ ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಮಹಾರಾಷ್ಟ್ರ ಸೇರಿದಂತೆ ಅನ್ಯರಾಜ್ಯಗಳಿಂದ ಜಿಲ್ಲೆಗೆ ಆಗಮಿಸಿದ್ದ ಜನರ ಗಂಟಲು ದ್ರವ ಪರೀಕ್ಷೆಯ ವರದಿ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದು, ಸೋಂಕಿತರ ಸಂಖ್ಯೆ ಏರಿಕೆ ಕಾಣಲು ಕಾರಣವಾಗುತ್ತಿದೆ.
ಇಂದಿನ 13 ಮಂದಿ ಸೋಂಕಿತರಲ್ಲಿ 12 ಮಂದಿ ಮಹಾರಾಷ್ಟ್ರದಿಂದ ಬಂದವರಾಗಿದ್ದು, ಓರ್ವನ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.
ರಾಜ್ಯದಲ್ಲಿಂದು 239 ಜನರಿಗೆ ಕೋವಿಡ್-19 ಸೋಂಕು ಕಾಣಿಸಿಕೊಂಡಿದ್ದು, ಒಟ್ಟು ಸೋಂಕಿತರ ಸಂಖ್ಯೆ 5452ಕ್ಕೆ ಏರಿಕೆಯಾಗಿದೆ. ಇಂದು 143 ಜನರು ಗುಣಮುಖರಾಗಿದ್ದು, ಒಟ್ಟು 2132 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇಂದು ಇಬ್ಬರು ಸೋಂಕಿನ ಕಾರಣದಿಂದ ಮರಣ ಹೊಂದಿದ್ದು, ರಾಜ್ಯದಲ್ಲಿ ಇದುವರೆಗೆ 61 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಇಬ್ಬರು ಕೋವಿಡ್ ಅಲ್ಲದ ಕಾರಣದಿಂದ ಸಾವನ್ನಪ್ಪಿದ್ದಾರೆ