Advertisement

ಕೋವಿಡ್ 19 : ಜಿಲ್ಲೆಗೆ ಕಿತ್ತಲೆ ಕಲರ್ ಪಟ್ಟ

12:57 PM May 03, 2020 | Suhan S |

ಬಾಗಲಕೋಟೆ: ಕೋವಿಡ್ 19 ವೈರಸ್‌ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಕಳೆದ ಮಾರ್ಚ್‌ 24ರಿಂದ ಜಾರಿಗೊಳಿಸಿದ ಲಾಕ್‌ಡೌನ್‌ ಪ್ರಕ್ರಿಯೆ ನಾಳೆ 3ನೇ ಹಂತಕ್ಕೆ ತಲುಪಿದೆ. ಮೇ 4ರಿಂದ 3ನೇ ಹಂತದಲ್ಲಿ ಕೊಂಚ ಸಡಿಲಿಕೆಯೊಂದಿಗೆ ಲಾಕ್‌ಡೌನ್‌ ಮುಂದುವರಿಯಲಿದ್ದು, ಜಿಲ್ಲೆಯಲ್ಲಿ ಕೋವಿಡ್ 19 ವೈರಸ್‌ ಕಿತ್ತಳೆಯ ಕಲರ್‌ ಪಟ್ಟ ಪಡೆದಿದೆ.

Advertisement

ಹೌದು, ಮೇ 1ರವರೆಗೆ ಕೆಂಪು ವಲಯದಲ್ಲಿದ್ದ ಜಿಲ್ಲೆ, ಇದೀಗ ಕಿತ್ತಳೆ ಕಲರ್‌ಗೆ ಬದಲಿಸಿದ್ದು, ಕೇಂದ್ರ ಸರ್ಕಾರ, ಲಾಕ್‌ಡೌನ್‌ ನಿಯಮಗಳಲ್ಲಿ ಹಲವು ರಿಲೀಫ್‌ ನೀಡಿದೆ. ಆದರೆ, ವ್ಯಾಪಾರ-ವಹಿವಾಟು ನಡೆಸಲು, ಖಾಸಗಿ ಆಸ್ಪತ್ರೆ ಆರಂಭಿಸಲು ವೈದ್ಯರೂ ಹಿಂಜರಿಯುತ್ತಿದ್ದಾರೆ. ಕೆಲವು ವೈದ್ಯರು, ಹಲವು ಮುಂಜಾಗ್ರತೆಯೊಂದಿಗೆ ಸೇವೆಗೆ ಸಜ್ಜಾಗಿದ್ದರೂ ಅವರ ಆಸ್ಪತ್ರೆಗೆ ಬರುತ್ತಿದ್ದ ನರ್ಸ್‌ ಗಳು, ಆಯಾಗಳು, ಇತರೆ ಸಿಬ್ಬಂದಿ ಬರುತ್ತಿಲ್ಲ.

ಸೋಂಕಿತರ ಸಂಖ್ಯೆ 30ಕ್ಕೇರಿಕೆ: ಜಿಲ್ಲೆಯಲ್ಲಿ ಈವರೆಗೆ ಒಟ್ಟು 30 ಜನರಿಗೆ ಸೋಂಕು ತಗುಲಿದೆ. ಬಾಗಲಕೋಟೆ ನಗರದಲ್ಲಿ ಕಳೆದ ಏ. 18ರಿಂದ, ಮುಧೋಳದಲ್ಲಿ ಏ.24ರಿಂದ ಹಾಗೂ ಜಮಖಂಡಿಯಲ್ಲಿ ಏ. 28ರಿಂದ ಯಾವುದೇ ಸೋಂಕು ಪತ್ತೆಯಾಗಿರಲಿಲ್ಲ. ಬಾಗಲಕೋಟೆ-13, ಮುಧೋಳ-7 ಹಾಗೂ ಜಮಖಂಡಿ-9 ಜನರಿಗೆ ಸೋಂಕು ದೃಢಪಟ್ಟು, ಒಟ್ಟು 29ಕ್ಕೆ ಸೋಂಕಿತರ ಸಂಖ್ಯೆ ತಲುಪಿತ್ತು. ಆದರೆ, ಶನಿವಾರ ಜಮಖಂಡಿ ನಗರದಲ್ಲಿ ರೋಗಿ ಸಂಖ್ಯೆ-381 (ಕಟ್ಟಡ ಕಾರ್ಮಿಕ) ವ್ಯಕ್ತಿಯ ಸಂಪರ್ಕದಿಂದ 45 ವರ್ಷದ ಮಹಿಳೆ ಪಿ-597ಗೆ ಸೋಂಕು ದೃಢಪಟ್ಟಿದೆ. ಈ ಮಹಿಳೆಗೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಶನಿವಾರದ ಒಂದು ಪ್ರಕರಣ ಸಹಿತ ಜಿಲ್ಲೆಯಲ್ಲಿ ಇಲ್ಲಿಯವರೆಗೆ ಒಟ್ಟು 30 ಜನರಿಗೆ ಸೋಂಕು ದೃಢಪಟ್ಟಿದ್ದು, ಆರು ಜನ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಇನ್ನೆರಡು ದಿನಗಳಲ್ಲಿ ಇನ್ನೂ ಆರು ಜನ ಬಿಡುಗಡೆಗೊಳ್ಳುವ ಸಾಧ್ಯತೆ ಇದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ನಿಯಮ ಸಡಿಲಿಕೆ: ಜಿಲ್ಲೆಯಲ್ಲಿ ಕೊಂಚ ಮಟ್ಟಿಗೆ ಲಾಕ್‌ ಡೌನ್‌ ಸಡಿಲಿಕೆಯಾಗಿದ್ದು, ಸೋಂಕಿತ ಪ್ರಕರಣಗಳು ಕಂಡು ಬಂದ ಏರಿಯಾಗಳಲ್ಲಿ ಯಾವುದೇ ಸಡಿಲಿಕೆ ಮಾಡಿಲ್ಲ. ಉಳಿದೆಡೆ ಕಟ್ಟಡ ಕಾರ್ಮಿಕರು, ಉದ್ಯೋಗ ಖಾತ್ರಿ ಯೋಜನೆ, ಔಷಧ ಮಳಿಗೆ, ತರಕಾರಿ ಮಳಿಗೆ, ಆಸ್ಪತ್ರೆಗಳು ಮುಂಜಾಗ್ರತೆಯೊಂದಿಗೆ ಆರಂಭಿಸಲು ಅನುಮತಿಸಲಾಗಿದೆ. ಸದ್ಯ ಜಿಲ್ಲೆಯಲ್ಲಿ ಎರಡು ಕಾರ್ಖಾನೆಗಳು ಆರಂಭಗೊಂಡಿದ್ದು, 280 ಜನರು ಕೆಲಸ ಮಾಡುತ್ತಿದ್ದಾರೆ. ಉದ್ಯೋಗ ಖಾತ್ರಿ ಯೋಜನೆಯಡಿ ಜಿಲ್ಲೆಯಲ್ಲಿ 52,334 ದಿನಗಳ ಉದ್ಯೋಗ ಸೃಷ್ಟಿ ಮಾಡಲಾಗಿದೆ. ಕಾರ್ಮಿಕ ಇಲಾಖೆಯಡಿ 1 ಘಟಕ ಆರಂಭಿಸಿದ್ದು, 160 ಜನರು ಕೆಲಸ ಮಾಡುತ್ತಿದ್ದಾರೆ.

ಸಾಮಾಜಿಕ ಅಂತರ ಕಡ್ಡಾಯ: ಮೇ 3ಕ್ಕೆ ಕೊನೆಗೊಳ್ಳಬೇಕಿದ್ದ ಲಾಕಡೌನ್‌, ಮತ್ತೆ ಎರಡು ವಾರ (ಮೇ 17ರವರೆಗೆ ಮುಂದುವರಿದಿದ್ದು) ಆರೇಂಜ್‌ ವಲಯ ಪಟ್ಟಿಯಲ್ಲಿರುವ ಜಿಲ್ಲೆಗೆ ಕೆಲವೊಂದು ವಿನಾಯಿತಿ ನೀಡಲಾಗಿದೆ. ಬಾಗಲಕೋಟೆ ನಗರದ ವಾರ್ಡ್‌ ನಂ.7 ಮತ್ತು 8, ಮುಧೋಳದ 9, ಮುಗಳಖೋಡ ಗ್ರಾಮ, ಜಮಖಂಡಿಯ ವಾರ್ಡ್‌ ನಂ.14, 5, 25 ಕಂಟೈನ್‌ಮೆಂಟ್‌ ಝೋನ್‌ ಪ್ರದೇಶವಾಗಿವೆ. ಅಲ್ಲದೇ ಬಾಗಲಕೋಟೆ, ಮುಧೋಳ, ಜಮಖಂಡಿ ತಾಲೂಕುಗಳು ಕೆಂಪು ವಲಯದಿಂದ ಆರೇಂಜ್‌ ಕಲರ್‌ಗೆ ಬದಲಾಗಿವೆ. ಆರೆಂಜ್‌ ವಲಯಕ್ಕೆ ರಾಜ್ಯ ಸರ್ಕಾರ ನಿಗದಿ ಮಾಡಿದ ನಿಯಮಾವಳಿಗಳ ಪ್ರಕಾರವೇ ಎಲ್ಲ ವಲಯಕ್ಕೆ ಸಡಿಲಿಕೆ ನೀಡಲಾಗುವುದು ಎಂದು ಜಿಲ್ಲಾಡಳಿತ ತಿಳಿಸಿದೆ.

Advertisement

ಮದ್ಯ ಪ್ರಿಯರು ಖುಷ್‌ :  ಮದ್ಯ ಸಿಗದೇ ಪರದಾಡುತ್ತಿದ್ದ ಮದ್ಯ ಪ್ರಿಯರು, ಸರ್ಕಾರದ ಘೋಷಣೆ ಕೇಳಿ ಖುಷಿಯಾಗಿದ್ದಾರೆ. ಮೇ 4ರಿಂದ ಎಂಎಸ್‌ ಐಎಲ್‌, ಸಿಎಲ್‌-2, ಸಿಎಲ್‌-11 ಮದ್ಯ ಮಳಿಗೆಗಳಲ್ಲಿ ಮದ್ಯ ಮಾರಾಟಕ್ಕೆ ಅನುಮತಿಸಿದೆ. ಹಲವು ಷರತ್ತು ಹಾಕಿದ್ದು, ಅಂಗಡಿಕಾರರು ಪಾಲಿಸದೇ ಇದ್ದರೆ, ಮದ್ಯದ ಅಂಗಡಿ ಪರವಾನಗಿ ರದ್ದುಗೊಳ್ಳಲಿದೆ.

ನಿಲ್ಲದ ವಾಹನ ಓಡಾಟ ;  ಕೆಂಪು ವಲಯದಲ್ಲಿ ಕೇಸರಿ ವಲಯಕ್ಕೆ ಬಂದ ಜಿಲ್ಲೆಯ ಕೋವಿಡ್ 19 ವೈರಸ್‌ ಸ್ಥಿತಿಗತಿಯಲ್ಲೂ ವಾಹನಗಳ ಓಡಾಟ ನಿಲ್ಲುತ್ತಿಲ್ಲ. ಅಗತ್ಯದ ಸಂದರ್ಭದಲ್ಲಿ ವಾಹನಗಳ ಸಂಚಾರಕ್ಕೆ ಯಾವುದೇ ತೊಂದರೆ ಕೊಡುತ್ತಿಲ್ಲ. ಕೆಲವರು ಅನಗತ್ಯವಾಗಿ ಓಡಾಡುವುದೂ ನಡೆಯುತ್ತಲೇ ಇದೆ. ದಾಖಲೆಯಲ್ಲಿ ವಾಹನ ಓಡಾಟವಿಲ್ಲವೆಂದರೂ ಏನೋ ಸಮಸ್ಯೆ ಇರುತ್ತದೆ ಹೋಗ್ಲಿ ಬಿಡಿ ಎಂಬ ಔದಾರ್ಯ ತೋರಲಾಗುತ್ತಿದೆ. ಆದರೆ, ಮುಧೋಳ ಮತ್ತು ಜಮಖಂಡಿ ನಗರದಲ್ಲಿ ಲಾಕ್‌ಡೌನ್‌ ಕಟ್ಟುನಿಟ್ಟಾಗಿದೆ.

ನಮ್ಮ ಜಿಲ್ಲೆ ಆರೇಂಜ್‌ ವಲಯದಲ್ಲಿದೆ. ದುಡಿಯಲು ವಲಸೆ ಹೋಗಿದ್ದ ಸುಮಾರು 1763 ಕಾರ್ಮಿಕರು ಮರಳಿ ಬಂದಿದ್ದು, ತಪಾಸಣೆ ಬಳಿಕ ಅವರನ್ನು ಊರಿಗೆ ಕಳುಹಿಸಲಾಗಿದೆ. ಅವರು ಕ್ವಾರಂಟೈನ್‌ ಬಳಿಕವೇ ಬಂದಿದ್ದು, ಆದರೂ 14 ದಿನ ಮನೆಯಲ್ಲಿರಲು ಸೂಚಿಸಲಾಗಿದೆ. ಮೇ 4ರ ಬಳಿಕ ಆರೇಂಜ್‌ ವಲಯದಲ್ಲಿ ಕೆಲವು ಸಡಿಲಿಕೆಯೊಂದಿಗೆ ಲಾಕ್‌ ಡೌನ್‌ ಮುಂದುವರಿಯಲಿದೆ. ಆದರೆ,  ಕಂಟೈನ್‌ಮೆಂಟ್‌ ಪ್ರದೇಶದಲ್ಲಿ ಯಾವುದೇ ಸಡಿಲಿಕೆ ಮಾಡುವುದಿಲ್ಲ.ಗೋವಿಂದ ಕಾರಜೋಳ, ಡಿಸಿಎಂ

 

-ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next