ನೆಲಮಂಗಲ: ಕೋಳಿ ಸೇವಿಸುವುದರಿಂದ ಕೊರೊನಾ ವೈರಸ್ ಬರಲು ಕಾರಣವಾಗುತ್ತದೆ ಎಂಬ ವದಂತಿಯಿಂದ ಕೋಳಿ ಉದ್ಯಮ ಸಂಪೂರ್ಣವಾಗಿ ನೆಲಕಚ್ಚಿದ್ದು, ತಾಲೂಕಿನ ಕೋಳಿ ಸಾಕಾಣಿಕೆದಾರರು ನಷ್ಟದಿಂದ ಕೋಳಿಗಳ ಜೀವಂತ ಸಮಾಧಿಗೆ ಮುಂದಾಗಿದ್ದಾರೆ.
ನೆಲಮಂಗಲ ವಿಧಾನಸಭಾ ಕ್ಷೇತ್ರದ ಕುಪ್ಪೆಮಳ ಹಾಗೂ ಎಣ್ಣೆಗೆರೆ ಗ್ರಾಮದಲ್ಲಿ ರೈತ ರಘು 21 ಸಾವಿರ ಕೋಳಿಗಳನ್ನು ಜೆಸಿಬಿಯಿಂದ ಗುಂಡಿ ತೆಗೆಸಿ ಜೀವಂತ ಸಮಾಧಿ ಮಾಡಿದರೆ, ತಾಲೂಕಿನ ಅನೇಕ ಸಾಕಾಣಿಕೆದಾರರು ಹಂತ ಹಂತವಾಗಿ ಕೋಳಿಗಳ ಜೀವಂತ ಸಮಾಧಿ ಮಾಡಲು ನಿರ್ಧರಿಸಿದ್ದಾರೆ.
ಉಚಿತ ಕೊಟ್ಟರು ಪಡೆಯುತಿಲ್ಲ: ಕೋಳಿಗಳನ್ನು ಉಚಿತವಾಗಿ ನೀಡಿದರೂ, ಯಾವ ಮಾಂಸಪ್ರಿಯರು ತೆಗೆದುಕೊಂಡು ಹೋಗಲು ಮುಂದಾಗುತ್ತಿಲ್ಲ . ಮಾರಾಟಗಾರರು ಕೋಳಿಯ ಬೆಲೆ ದಿಢೀರ್ ಕುಸಿತವಾದ ಕಾರಣ ಖರೀದಿದಾರರಿಲ್ಲದೆ ನಷ್ಟದಿಂದ ಸಾಕಾಣಿಕೆದಾರರ ಕಡೆ ಮುಖಮಾಡುತ್ತಿಲ್ಲ. ಕೋಳಿ ಖರೀದಿಸುವ ಜನರಿಲ್ಲದ ಕಾರಣ ಮಣ್ಣಿನಲ್ಲಿ ಮುಚ್ಚುವ ನಿರ್ಧಾರಕ್ಕೆ ಸಾಕಾಣಿಕೆದಾರರು ಮುಂದಾಗಿದ್ದಾರೆ.
ಬೆಲೆ ದಿಢೀರ್ ಕುಸಿತ : ರಾಜ್ಯದಲ್ಲಿ ಜನವರಿ ತಿಂಗಳು ಫಾರಂ ಕೋಳಿ ಕೆಜಿಗೆ 96 ರಿಂದ 116 ರೂ.ಇದ್ದ ಬೆಲೆ ಮಾರ್ಚ್ ಆರಂಭದಲ್ಲಿ 36ರೂ.ಗೆ ಕುಸಿತ ಕಂಡಿದ್ದು, ಇದರಿಂದ ಫಾರಂ ಕೋಳಿಗಳ ನಿರ್ವಹಣೆ ಖರ್ಚು ಹೆಚ್ಚಾಗುತ್ತಿರುವ ಕಾರಣ ಅಪಾರ ಪ್ರಮಾಣದ ನಷ್ಟದಿಂದ ತಪ್ಪಿಸಿಕೊಳ್ಳಲು ಕೋಳಿಗಳನ್ನು ಸಾಯಿಸಲಾಗುತ್ತಿದೆ ಎಂದು ಸಾಕಾಣಿಕೆದಾರರು ಬೇಸರ ವ್ಯಕ್ತಪಡಿಸಿದರು.
ಕೋಳಿ ಅಂಗಡಿ ಬಂದ್ : ಸರ್ಕಾರ ಆದೇಶದಂತೆಎಲ್ಲಾ ಕೋಳಿ ಹಾಗೂ ಕೋಳಿ ಮಾಂಸ ಮಾರಾಟ ಅಂಗಡಿಗಳು ಸಂಪೂರ್ಣವಾಗಿ ಬಂದ್ ಮಾಡಿದ ಹಿನ್ನಲೆ ಫಾರಂ ಗಳಿಂದ ಕೋಳಿಗಳನ್ನು ಖರೀದಿಸುವವರು ಇಲ್ಲದಂತಾಗಿದೆ. ಒಟ್ಟಾರೆ ಕೊರೊನಾ ಭೀತಿ ಕೋಳಿ ಉದ್ಯಮಕ್ಕೆ ಭಾರಿ ಹೊಡೆತ ನೀಡಿದ್ದು ಕೆಲ ಸಾಗಾಣಿಕೆದಾರರು ಫಾರಂಗಳನ್ನು ನಿಲ್ಲಿಸುವ ನಿರ್ಧಾರ ಮಾಡಿದ್ದಾರೆ.
ನಿರ್ವಹಣೆ ಖರ್ಚು ಹೆಚ್ಚುತ್ತಿದೆ: ಕೋಳಿ ಸಾಗಣಿಕೆದಾರ ರಘು ಪ್ರತಿಕ್ರಿಯಿಸಿ, ಕೊರೊನಾಭೀತಿಯಿಂದ ಕೋಳಿ ಬೆಲೆ ಸಂಪೂರ್ಣ ಕುಸಿತ ಕಂಡಿದ್ದು, ಕೋಳಿಗಳ ನಿರ್ವಹಣೆ ಮಾಡಲು ಖರ್ಚು ಹೆಚ್ಚಾಗುತ್ತಿದ್ದು ಹೆಚ್ಚು ನಷ್ಟಕ್ಕೆ ಒಳಗಾಗುವ ಮುಂಚೆಯೇ ತಪ್ಪಿಸಿಕೊಳ್ಳಲು ಈ ನಿರ್ಧಾರ ಮಾಡಿದ್ದೇನೆ ಎಂದರು.
ಕೋಳಿ ಅಂಗಡಿಯ ಕೆಲಸಗಾರ ಸುರೇಶ್ ಪ್ರತಿಕ್ರಿಯಿಸಿ, ಕೋಳಿ ಮಾಂಸವನ್ನು ಕೇಳುವವರಿಲ್ಲ ಸರ್ಕಾರ ಆದೇಶದ ನಂತರ ಕೋಳಿ ಅಂಗಡಿ ಮುಚ್ಚಲಾಗಿದೆ. ಆದ್ದರಿಂದ ಕೋಳಿ ಉದ್ಯಮ ಸಂಪೂರ್ಣ ಸ್ಥಗಿತವಾಗಿದೆ ಎಂದರು.