Advertisement

ಜಿಲ್ಲೆಯೆಲ್ಲೆಡೆ ಕೊರೊನಾ ಕರಿನೆರಳು

03:36 PM Mar 15, 2020 | Suhan S |

ಗದಗ: ಕೊರೊನಾ ವೈರಸ್‌ ಆತಂಕದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ರಾಜ್ಯ ಸರ್ಕಾರ ಒಂದು ವಾರ ಬಂದ್‌ ಘೋಷಿಸಿದ್ದು, ಜಿಲ್ಲೆಯಲ್ಲಿ ಶನಿವಾರದಿಂದಲೇ ಶಾಲಾ-ಕಾಲೇಜುಗಳು ಬಂದ್‌ ಆಗಿದ್ದವು. ಉಳಿದಂತೆ ವ್ಯಾಪಾರ-ವ್ಯವಹಾರ, ಸಾರಿಗೆ ಪ್ರಯಾಣ, ಎಲ್ಲೆಡೆ ಜನದಟ್ಟಣೆ ಎಂದಿನಿಗಿಂತ ಕಡಿಮೆಯಾಗಿತ್ತು.

Advertisement

ಗದಗ-ಬೆಟಗೇರಿ ಅವಳಿ ನಗರದಲ್ಲಿ ಶುಕ್ರವಾರ ಹೋಳಿ ಆಚರಿಸಿದ್ದರಿಂದ ಕೆಲವು ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಒಂದು ವಾರ ರಜೆ ಘೋಷಿಸಿರುವ ಬಗ್ಗೆ ಹೇಳದೇ ಇರುವುದರಿಂದ ಕೆಲ ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ಶನಿವಾರ ಬಂದು ಮನೆಗೆ ವಾಪಸ್ಸಾದರು. 1ರಿಂದ 7ನೇ ತರಗತಿ ವರೆಗೆ ಪರೀಕ್ಷೆ ಆರಂಭಿಸಿರುವ ಶಾಲೆಗಳಲ್ಲಿ ಪರೀಕ್ಷೆಯನ್ನು ಶುಕ್ರವಾರಕ್ಕೇ ಮೊಟಕುಗೊಳಿಸಿದ್ದಾರೆ. ಇನ್ನುಳಿದ ವಿಷಯಗಳ ಪರೀಕ್ಷೆಗಳ ದಿನಾಂಕಗಳನ್ನು ಮುಂದೂಡಿದ್ದಾರೆ ಎನ್ನಲಾಗಿದೆ.

ಪ್ರಯಾಣಿಕರ ಸಂಖ್ಯೆ ಇಳಿಮುಖ: ಕೊರೊನಾ ಭೀತಿ ಜಿಲ್ಲೆಯ ಜನರನ್ನು ಯಾವುದೇ ರೀತಿಯಲ್ಲಿ ಬಾಧಿಸುತ್ತಿಲ್ಲ. ಆದರೂ, ಮುಂಜಾಗ್ರತಾ ಕ್ರಮವಾಗಿ ಸರಕಾರ ಒಂದು ವಾರದ ರಜೆ ಘೋಷಿಸಿರುವುದು ಹಾಗೂ ಬಿರು ಬಿಸಿಲಿನಿಂದಾಗಿ ದಿನದಿಂದ ದಿನಕ್ಕೆ ಸಾರ್ವಜನಿಕರ ಸಂಚಾರ ಕಡಿಮೆಯಾಗುತ್ತಿದೆ. ಶನಿವಾರದಿಂದ ಎಲ್ಲ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದ್ದರಿಂದ ಬೆಳಗ್ಗೆಯಿಂದಲೇ ಸಂಚಾರ ದಟ್ಟಣೆ ಕಡಿಮೆಯಾಗಿತ್ತು. ಗದಗ ಕೇಂದ್ರ ಬಸ್‌ ನಿಲ್ದಾಣದಿಂದ ಬೆಳಗ್ಗೆ 6ರಿಂದ ಮಧ್ಯಾಹ್ನ 2 ಗಂಟೆ ವರೆಗೆ ಗದಗ- ಹುಬ್ಬಳ್ಳಿ, ಗದಗ- ಹಾವೇರಿ, ಗದಗ- ಕೊಪ್ಪಳ ಮಾರ್ಗದಲ್ಲಿ ಕಾರ್ಯಾಚರಣೆ ನಡೆಸಿದ ಬಸ್‌ಗಳಲ್ಲಿ ಬಹುತೇಕ 25ಕ್ಕಿಂತ ಹೆಚ್ಚು ಪ್ರಯಾಣಿಕರಿರಲಿಲ್ಲ. ಇನ್ನು, ಗದಗದಿಂದ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಸಂಚರಿಸಿದ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಒಂದಂಕಿ ಮೀರಲಿಲ್ಲ. ಕೆಲ ಮಾರ್ಗಗಳಲ್ಲಿ ಬಸ್‌ ಗಳು ಖಾಲಿಯಾಗಿ ಸಂಚರಿಸಿವೆ ಎಂದು ಸಾರಿಗೆ ಇಲಾಖೆ ಮೂಲಗಳು ತಿಳಿಸಿವೆ. ಹೀಗಾಗಿ ಪ್ರಯಾಣಿಕರ ಕೊರತೆಯಿಂದಾಗಿ ನಗರದ ಕೇಂದ್ರ ಬಸ್‌ ನಿಲ್ದಾಣದಲ್ಲಿ ಭಾಗಶಃ ಬಣಗೊಡುತ್ತಿತ್ತು.

ಮಂಕಾದ ವ್ಯಾಪಾರ: ಕೊರೊನಾ ಭೀತಿ ಹಾಗೂ ಉರಿ ಬಿಸಿಲಿನಿಂದಾಗಿ ಬೆಳಗ್ಗೆ 11ರ ನಂತರ ಜನರು ಮನೆಯಿಂದ ಹೊರ ಬರಲು ಹಿಂದೇಟು ಹಾಕುತ್ತಿದ್ದಾರೆ. ಪರಿಣಾಮ ಅವಳಿ ನಗರದ ಮಾರುಕಟ್ಟೆ ಪ್ರದೇಶದಲ್ಲಿ ಜನಸಂದಣಿ ಸಾಮಾನ್ಯಕ್ಕಿಂತ ಕಡಿಮೆಯಾಗಿತ್ತು. ಇಲ್ಲಿನ ಪಂಚರಹೊಂಡ ಬಳಿ ಬೀದಿ ಬದಿ ಮಾರುಕಟ್ಟೆ ಯಲ್ಲಿ ಎಂದಿಗಿಂತ ಜನದಟ್ಟಣೆ ಕಡಿಮೆಯಾಗಿದ್ದರೆ, ಗ್ರೇನ್‌ ಮಾರುಕಟ್ಟೆ ಬಹುತೇಕ ಗ್ರಾಹಕರಿಲ್ಲದೇ ಬಣಬಣ ಎನ್ನುತ್ತಿತ್ತು. ಗ್ರಾಹಕರಿಲ್ಲದೇ ಅಂಗಡಿಕಾರರು ಕಾದು ಕೂರುವಂತಾಯಿತು. ಇನ್ನುಳಿದಂತೆ ಕಿರಾಣಿ, ಸಗಟು ವ್ಯಾಪಾರ ಹಾಗೂ ಸರಾಫ್‌ ಬಜಾರ್‌, ಬಟ್ಟೆ ಬಜಾರ್‌ ಪರಿಸ್ಥಿತಿ ಕೂಡಾ ಇದಕ್ಕಿಂತ ಭಿನ್ನವಾಗಿರಲಿಲ್ಲ. ಕರೊನಾ ಭೀತಿಯಿಂದಾಗಿ ಕಳೆದ 15 ದಿನಗಳಿಂದ ಮಾಂಸ ಉದ್ಯಮ ಬಹುತೇಕ ನೆಲಕಚ್ಚಿದೆ.

ಮಾಸ್ಕ್ ಗೆ ಹೆಚ್ಚಿದ ಬೇಡಿಕೆ: ಮುಂಜಾಗ್ರತಾ ಕ್ರಮ ಕೈಗೊಳ್ಳುವ ಭಾಗವಾಗಿ ಸಾರ್ವಜನಿಕರು ಮಾಸ್ಕ್ಗೆ ಮೋರೆ ಹೋಗಿದ್ದು, ಬೇಡಿಕೆ ಹೆಚ್ಚಿದೆ. ಆದರೆ, ಮಾರುಕಟ್ಟೆಯಲ್ಲಿ ಶನಿವಾರವೂ ಮಾಸ್ಕ್ಗಳು ಗ್ರಾಹಕರಿಗೆ ಸುಲಭವಾಗಿ ಸಿಗಲಿಲ್ಲ. ಹಲವು ಅಂಗಡಿಗಳಲ್ಲಿ ವಿಚಾರಿಸಿದರೂ, ದಾಸ್ತಾನು ಇಲ್ಲ. ಇನ್ನೂ ಒಂದೆರಡು ದಿನಗಳಲ್ಲಿ ಸ್ಟಾಕ್‌ ಬರಲಿದೆ ಎಂಬ ಉತ್ತರಗಳು ದೊರೆಯುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next