Advertisement

ಊರಿಗೆ ಯಾವುದಯ್ಯಾ ದಾರಿ

03:17 PM Mar 25, 2020 | Suhan S |

ಮೈಸೂರು: ಹಲವು ಕಾರಣಗಳಿಗಾಗಿ ನಗರಕ್ಕೆ ಬಂದವರು, ರಾಜ್ಯ ಲಾಕ್‌ಡೌನ್‌ ಆಗಿದ್ದರಿಂದ ಮರಳಿ ಊರಿಗೆ ತೆರಳಲಾಗದೇ ನಗರದಲ್ಲೇ ಉಳಿಯುವಂತಾಗಿದೆ.

Advertisement

ನಗರದ ಕೆ.ಆರ್‌.ಆಸ್ಪತ್ರೆ ಸೇರಿದಂತೆ ಗ್ರಾಮಾಂತರ ಬಸ್‌ ನಿಲ್ದಾಣದಲ್ಲಿ ತಮ್ಮ ಸ್ವಂತ ಊರುಗಳಿಗೆ ತೆರಳಲು ಬಸ್‌ ಹಾಗೂ ಇತರೆ ವಾಹನ ವ್ಯವಸ್ಥೆಯಿ ಲ್ಲದೆ ಜನತೆ ಪರಿತಪಿಸುವಂತಾಗಿದೆ. ಬಸ್‌ ನಿಲ್ದಾಣದಲ್ಲಿ ಹಲವಾರು ಮಂದಿ ನಿರ್ಗತಿಕರು ಕಳೆದೆರಡು ದಿನಗಳಿಂದ ಸೇವಿಸಲು ಊಟ-ಕುಡಿಯಲು ನೀರು ಇಲ್ಲದೆ ಪರಿತಪಿಸುತ್ತಿರುವ ದೃಶ್ಯ ಕಂಡುಬಂತು. ಕಳೆದ 4 ದಿನಗಳ ಹಿಂದೆ ನಮ್ಮ ಸಂಬಂಧಿಯೊಬ್ಬರು ಚಿಕಿತ್ಸೆಗಾಗಿ ಕೆ.ಆರ್‌.ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಯೋಗಕ್ಷೇಮ ವಿಚಾರಿಸಲು ಬಂದಿದ್ದೆವು. ಈಗ ಏಕಾಏಕಿ ಬಸ್ಸುಗಳ ಸಂಚಾರ ಸ್ಥಗಿತ ಗೊಳಿಸಿರುವುದರಿಂದ ನಮ್ಮ ಸ್ವಂತ ಸ್ಥಳಗಳಿಗೆ ತೆರಳಲು ಸಾಧ್ಯವಾಗುತ್ತಿಲ್ಲ. ಇದ್ದ ಅಲ್ಪಸ್ವಲ್ಪ ಹಣದಿಂದ ಹೇಗೋ ಎರಡು ದಿನ ಕಳೆದೆವು. ಈಗ ನಮ್ಮ ಬಳಿ ಹಣವಿಲ್ಲದ ಕಾರಣ ನಾವು ಉಪವಾಸ ಬೀಳುವ ಅನಿವಾರ್ಯ ಉಂಟಾಗಿದೆ ಎಂದು ತಮ್ಮ ಅಸಹಾಯಕತೆ ತೋಡಿಕೊಂಡರು.

ಮೈಸೂರು ಸಂಪೂರ್ಣ ಸ್ತಬ್ಧ: ಮಾ.22ರಂದು ಜನತಾ ಕರ್ಫ್ಯೂ ವೇಳೆ ಸ್ತಬ್ಧವಾಗಿದ್ದಂತೆ ಮಂಗಳ ವಾರವೂ ಮೈಸೂರು ಸಂಪೂರ್ಣ ಸ್ತಬ್ಧವಾಗಿತ್ತು. ಬೆಳಗ್ಗೆ ಅಗತ್ಯವಸ್ತುಗಳನ್ನು ಕೊಳ್ಳಲು ಮುಗಿಬಿದ್ದ ಸಾರ್ವಜನಿಕರು ಬಳಿಕ ಮನೆ ಸೇರಿಕೊಂಡರು. ನಂತರ ಮೈಸೂರು ಸ್ತಬ್ಧವಾಯಿತು. ಸದಾ ವಾಹನ, ಸಾರ್ವಜನಿಕರಿಂದ ಗಿಜುಗುಡುತ್ತಿದ್ದ ಅರಸು ರಸ್ತೆ, ಸಯ್ನಾಜಿರಾವ್‌ ರಸ್ತೆ, ಕೆ.ಆರ್‌.ವೃತ್ತ, ಅಶೋಕರಸ್ತೆ, ಇರ್ವಿನ್‌ ರಸ್ತೆ, ಹಾರ್ಡಿಂಜ್‌ ವೃತ್ತ, ಅಗ್ರಹಾರ ಸೇರಿದಂತೆ ನಗರವಿಡೀ ಸಾರ್ವಜನಿಕರು ಹಾಗೂ ವಾಹನಗಳಿಲ್ಲದೆ ಸಂಪೂರ್ಣ ಸ್ತಬ್ಧವಾಗಿತ್ತು. ಹಾಲು, ಮೆಡಿಕಲ್‌, ದಿನಸಿ ಸೇರಿದಂತೆ ಅಗತ್ಯವಸ್ತುಗಳನ್ನು ಹೊರತುಪಡಿಸಿ ಅಂಗಡಿ ಮುಂಗಟ್ಟು ಗಳು ಮುಚ್ಚಿದ್ದವು. ಮಾ.31ರವರೆಗೂ ಲಾಕ್‌ ಡೌನ್‌ ಇರುವುದರಿಂದ ಇದೇ ವಾತಾವರಣ ಮುಂದುವರಿಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next