ಬಳ್ಳಾರಿ: ಕೋವಿಡ್ 19 ವೈರಸ್ ತಡೆಯಲು ವಿಧಿಸಿರುವ ಲಾಕ್‌ಡೌನ್‌ನಿಂದಾಗಿ ಕೆಲಸಗಳೇ ಇಲ್ಲದಂತಾಗಿರುವ ಬಡ, ಕೂಲಿ ಕಾರ್ಮಿಕರಿಗೆ ಹಣದ ಕೊರತೆ ಎದುರಾಗಿದ್ದು, ಸಾಲ ನೀಡುವಂತೆ ಬ್ಯಾಂಕ್ ನ ಮೊರೆ ಹೋಗಿದ್ದಾರೆ. ಇದಕ್ಕಾಗಿ ನಗರದ ವಿವಿಧ ಏರಿಯಾಗಳ ಮಹಿಳೆಯರು ಬೆಳಗ್ಗೆ 7 ಗಂಟೆಗೆ ಇಲ್ಲಿನ ಸುಕೋಬ್ಯಾಂಕ್ ಬಳಿ ಸಾಲುಗಟ್ಟಿ ನಿಲ್ಲುತ್ತಿದ್ದಾರೆ.
ಕೋವಿಡ್ 19 ವೈರಸ್ ದಿನೇದಿನೆ ತನ್ನ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳುತ್ತಿದೆ. ಮನೆಯಿಂದ ಯಾರೊಬ್ಬರೂ ಹೊರಬಾರದಿದ್ದರೆ ಕೋವಿಡ್ 19 ವೈರಸ್‌ನ್ನು ನಿಯಂತ್ರಿಸಬಹುದು ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಕಳೆದ ಮಾರ್ಚ್ 23 ರಂದು ದೇಶಾದ್ಯಂತ ಲಾಕ್‌ಡೌನ್ ವಿಧಿ ಸಿ ಎಲ್ಲ ಕ್ಷೇತ್ರಗಳ ಕೆಲಸ, ಕಾರ್ಯಗಳನ್ನು ಬಂದ್ ಮಾಡುವಂತೆ ಸೂಚಿಸಿತು. ಈ ಲಾಕ್‌ಡೌನ್ ಆದೇಶದಿಂದ ಕೂಲಿ ಕಾರ್ಮಿಕರಿಗೆ, ಮನೆಗೆಲಸ ಮಾಡುವ ಮಹಿಳೆಯರಿಗೆ, ಗಾರೆ ಕೆಲಸಕ್ಕೆ ಹೋಗುವವರ ಮೇಲೆ ತೀವ್ರ ಪರಿಣಾಮ ಬೀರಿದೆ. ಮೇಲಾಗಿ ಬ್ಯಾಂಕ್‌ನವರು ಸಹ 10 ಸಾವಿರ ರೂ. ಸಾಲ ನೀಡುವುದಾಗಿಯೂ ತಿಳಿಸಿದೆ.
ಹಾಗಾಗಿ ಸಾಲಕ್ಕಾಗಿ ಬೆಳಗ್ಗೆ 7ಗಂಟೆಗೆ ಸುಕೋಬ್ಯಾಂಕ್ ಎದುರು ಬಂದು ಮಹಿಳೆಯರು ಸರತಿ ಸಾಲಲ್ಲಿ ನಿಲ್ಲುತ್ತಿದ್ದಾರೆ. ಮನೆಗೆಲಸಕ್ಕೂ ಬೇಡ: ಮನೆಗೆಲಸ ಮಾಡುವವರನ್ನೂ ಮಾಲೀಕರು ಬರಬೇಡಿ ಎನ್ನುತ್ತಿದ್ದಾರೆ. ಅಂದಿನ ಕೂಲಿ ಅಂದಿಗೇ ಸರಿಹೋಗುವ ನಮಗೆ ಕೆಲಸ ಇಲ್ಲದಿದ್ದರೆ ಜೀವನ ಮಾಡುವುದು ಹೇಗೆ? ಒಂದೊಪ್ಪತ್ತು ಊಟ ಇಲ್ಲದಿದ್ದರೂ ನಾವು ಹೇಗೋ ಸುಧಾರಿಸಿಕೊಳ್ಳುತ್ತೇವೆ. ಹೊಟ್ಟೆ ಹಸಿದುಕೊಂಡಿರುವ ಮಕ್ಕಳನ್ನು ಸುಧಾರಿಸುವುದು ಹೇಗೆ? ನಮ್ಮ ಗಂಡಂದಿರು ದುಡಿದರೂ ಮನೆಯಲ್ಲಿ ಕೊಡುವ ಹಣ ಅಷ್ಟಕ್ಕಷ್ಟೇ. ನಾವು ಮಹಿಳೆಯರು ದುಡಿದ ಹಣ (ಕೂಲಿ)ದಿಂದಲೇ ಮನೆ ನಡೆಯೋದು. ಅಂತಹದ್ದರಲ್ಲಿ ಕಳೆದ 8-10 ದಿನಗಳಿಂದ ಕೆಲಸ ಇಲ್ಲದೆ ನಮ್ಮ ಮನೆಗಳು ಹೇಗೆ ನಡೆಸಬೇಕು? ಎಂದು ಇಲ್ಲಿನ ಗೌತಮ್‌ನಗರದ ದಿವ್ಯಾ ಪ್ರಶ್ನಿಸಿದರು.
ನಮಗೇನು ಅವರು ಸುಮ್ಮನೆ ಕೊಡುವುದು ಬೇಡ. ಲಾಕ್‌ಡೌನ್ ತೆಗೆದ ಬಳಿಕ ನಾವೂ ಕೆಲಸಕ್ಕೆ ಹೋಗುತ್ತೇವೆ. ಬ್ಯಾಂಕ್ ಸಾಲವನ್ನು ತೀರಿಸುತ್ತೇವೆ ಎಂದು ಮನವಿ ಮಾಡಿದರು. ಅಕ್ಕಿಯೊಂದೇ ವಿತರಣೆ: ಲಾಕ್‌ಡೌನ್ ಹಿನ್ನೆಲೆಯಲ್ಲಿ ದುಡಿವ ಕೈಗಳಿಗೆ ಕೆಲಸಗಳಿಲ್ಲದೇ ಮನೆಯಲ್ಲಿರುವ ಬಡ, ಕೂಲಿ ಕಾರ್ಮಿಕರಿಗೆ ಕೆಲವೊಂದು ಕಡೆ ಜನಪ್ರತಿನಿಧಿ ಗಳು ಅಕ್ಕಿಯನ್ನು ವಿತರಿಸುತ್ತಿರುವುದು ಒಳ್ಳೆಯ ಕೆಲಸವೇನೋ ಸರಿ. ಆದರೆ ಕೆಲಸವೇ ಇಲ್ಲದೇ ಬರಿಗೈಯಲ್ಲಿರುವ ನಾವು ಕೇವಲ ಅಕ್ಕಿಯೊಂದನ್ನು ತೆಗೆದುಕೊಂಡು ಏನು ಮಾಡಬೇಕು? ಬರೀ ಅನ್ನವನ್ನೇ ತಿನ್ನೋಕ್ಕಾಗುತ್ತಾ? ಅದಕ್ಕೆ ಬೇಳೆ, ಎಣ್ಣೆ ಸೇರಿ ಇತರೆ ತರಕಾರಿಯನ್ನು ಯಾರು ಕೊಡುತ್ತಾರೆ. ಇದ್ದ ಹಣವೆಲ್ಲಾ ಈಗಾಗಲೇ ಖರ್ಚಾಗಿದ್ದು, ಸದ್ಯ ಮಕ್ಕಳಿಗೆ ಜ್ವರ ಕಾಣಿಸಿಕೊಂಡರೆ ಆಸ್ಪತ್ರೆಗೆ ಹೋಗೋಕೂ ಹಣವಿಲ್ಲದಂತಾಗಿದೆ. ಆದ್ದರಿಂದ ಸಾಲಕ್ಕಾಗಿ ಬ್ಯಾಂಕಿಗೆ ಬಂದಿದ್ದೇವೆ ಎಂದು ದಿವ್ಯಾ ಅಳಲು ತೋಡಿಕೊಳ್ಳುತ್ತಾರೆ. ಬ್ಯಾಂಕ್‌ನಲ್ಲಿ ಸಾಲ ನೀಡುತ್ತಾರೆ ಎಂದಾಕ್ಷಣ ಇಲ್ಲಿನ ಗೌತಮನಗರ, ಬಸವನಕುಂಟೆ ಸೇರಿನಗರದ ವಿವಿಧ ಪ್ರದೇಶದಿಂದ ಬಂದಿದ್ದ ಮಹಿಳೆಯರು ಸಾಮಾಜಿಕ ಅಂತರ ಕಾಯ್ದುಕೊಂಡು ಸಾಲುಗಟ್ಟಿ ನಿಂತಿದ್ದರು.
ಲಾಕ್‌ಡೌನ್ ಆಗಿದ್ದರಿಂದ ದುಡಿವ ಕೈಗಳಿಗೆ ಕೆಲಸವಿಲ್ಲದೇ ಬರಿಗೈಯಲ್ಲಿದ್ದೇವೆ. ಮನೆಯಲ್ಲಿಊಟಕ್ಕೂ ಸಮಸ್ಯೆಯಾಗುತ್ತಿದೆ. ನಾವು ಹೇಗೊ ಸುಧಾರಿಸಿಕೊಂಡರು ಮಕ್ಕಳನ್ನು ಸುಧಾರಿಸುವುದು ಕಷ್ಟವಾಗುತ್ತಿದೆ. ಮನೆಕೆಲಸವೂ ಇಲ್ಲದಂತಾಗಿದ್ದು, ವೈರಸ್ ಭೀತಿಯಿಂದಾಗಿ ಮಾಲೀಕರು ತಾತ್ಕಾಲಿಕವಾಗಿ ಬರಬೇಡಿ ಎನ್ನುತ್ತಿದ್ದಾರೆ. ಆದ್ದರಿಂದ ಜೀವನ ನಡೆಸುವ ಸಲುವಾಗಿ ಸಾಲ ನೀಡುವಂತೆ ಬ್ಯಾಂಕ್‌ಗೆ ಮೊರೆ ಹೋಗಿದ್ದೇವೆ. ಲಾಕ್‌ಡೌನ್ ನಂತರ ಕೆಲಸಕ್ಕೆ ಹೋಗಿ ಸಾಲ ತೀರಿಸುತ್ತೇವೆ.-
ದಿವ್ಯಾ, ಈರಮ್ಮ, ಗೌತಮ್ ನಗರದ ಕೂಲಿ ಕಾರ್ಮಿಕರು.
-ವೆಂಕೋಬಿ ಸಂಗನಕಲ್ಲು