ಹುಬ್ಬಳ್ಳಿ: ಸದಾ ವಾಹನಗಳ ಸಂಚಾರ, ಜನ ದಟ್ಟಣೆಯಿಂದ ಮಾರುಕಟ್ಟೆ ಪ್ರದೇಶವಾಗಿದ್ದ ಮುಲ್ಲಾ ಓಣಿ ಸೇರಿದಂತೆ ಸುತ್ತಲಿನ ಪ್ರದೇಶಗಳು ಅಕ್ಷರಶಃ ಸ್ತಬ್ದವಾಗಿದ್ದು, ಕಂಟೇನ್ಮೆಂಟ್ ವಲಯದ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲಾಗಿದೆ. ಯಾರೊಬ್ಬರು ಹೊರ ಬಾರದಂತೆ ಕಟ್ಟೆಚ್ಚರ ವಹಿಸಲಾಗಿದೆ. ಅಗತ್ಯ ವಸ್ತುಗಳಿಗೆ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ.
ಏ.9ರಂದು ಮುಲ್ಲಾ ಓಣಿಯ ಓರ್ವ ವ್ಯಕ್ತಿಗೆ ಸೋಂಕು ತಗುಲಿರುವುದು ಪತ್ತೆಯಾಗುತ್ತಿದ್ದಂತೆ, ಸುತ್ತಮುತ್ತಲಿನ ಪ್ರದೇಶಗಳನ್ನು ಕಂಟೈನ್ಮೆಂಟ್ ಪ್ರದೇಶಗಳೆಂದು ಘೋಷಿಸಲಾಯಿತು. ಆದರೆ ಈ ವ್ಯಕ್ತಿಯ ಟ್ರಾವೆಲ್ ಹಿಸ್ಟರಿ ಮತ್ತಷ್ಟು ಜನರಿಗೆ ಸೋಂಕು ತಗುಲಿರಬಹುದು ಎಂದು ಅಂದಾಜಿಸಿರುವುದು ನಂತರದಲ್ಲಿ ಸತ್ಯವಾಯಿತು. ಈ ವ್ಯಕ್ತಿಯ ಸಂಬಂಧಿಗಳ ನಾಲ್ವರಲ್ಲಿ ಸೋಂಕು ದೃಢಪಟ್ಟಿತು, ನಂತರ ಕರಾಡಿ ಓಣಿಯ ನಿವಾಸಿಯಲ್ಲಿ ಸೋಂಕು ಖಚಿತವಾಗುತ್ತಿದ್ದಂತೆ ಮುಲ್ಲಾ ಓಣಿ ಸೇರಿದಂತೆ ಸುತ್ತಲಿನ 5 ಕಿಮೀ ವ್ಯಾಪ್ತಿಯನ್ನು ಬಫರ್ ಜೋನ್ ಎಂದು ಸೋಂಕಿತರ ಮನೆ ಸುತ್ತಲಿನ 100 ಮೀ. ಪ್ರದೇಶವನ್ನು ನಿಯಂತ್ರಿತ ಪ್ರದೇಶವೆಂದು ಘೋಷಣೆ ಮಾಡಿ, ಇದನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲಾಗುತ್ತಿದ್ದು, ವಿನಾಕಾರಣ ಜನರನ್ನು ಹೊರ ಬಾರದಂತೆ ಗೃಹ ದಿಗ್ಭಂದನದಲ್ಲಿ ಇರಿಸಲಾಗಿದೆ.
ಸಂಪೂರ್ಣ ಸ್ತಬ್ಧ: ಮೊದಲ ಸೋಂಕಿತನ ಟ್ರಾವೆಲ್ ಹಿಸ್ಟರಿ ಪರಿಶೀಲಿಸಿದ ಜಿಲ್ಲಾಡಳಿತ ಯಾವುದೇ ಕಾರಣಕ್ಕೂ ಕಂಟೈನ್ಮೆಂಟ್ ಪ್ರದೇಶ ನಿಯಮಾವಳಿಗಳನ್ನು ಸಡಿಲಿಕೆ ಮಾಡದೆ ಅನುಷ್ಠಾನಗೊಳಿಸಿದ್ದು, ಸೋಂಕಿತನ ಮನೆಯ 100 ಮೀಟರ್ ಪ್ರದೇಶವಂತೂ ಅಕ್ಷರಶಃ ಸ್ತಬ್ಧವಾಗಿದೆ. ಇನ್ನೂ ಒಂದು ಕಿಮೀ ವ್ಯಾಪ್ತಿ ಪ್ರದೇಶಗಳು ಕೂಡ ಇದಕ್ಕೆ ಹೊರತಾಗಿಲ್ಲ. ಆದರೂ ಅಗತ್ಯ ವಸ್ತುಗಳಿಗಾಗಿ ಬೆಳಿಗಿನ ಸಮಯದಲ್ಲಿ ಒಂದಿಷ್ಟು ಅವಕಾಶ ನೀಡಲಾಗುತ್ತಿದೆ. ಈ ಭಾಗದ ಪ್ರದೇಶಗಳು ಬಿಕೋ ಎನ್ನುತ್ತಿವೆ. ಎಲ್ಲಾ ರಸ್ತೆಗಳು ಸಂಪೂರ್ಣ ಖಾಲಿಯಾಗಿವೆ. ಯಾವುದೇ ಕಾರಣಕ್ಕೂ ಈ ಭಾಗದ ಜನರು ಹೊರಗೆ ಹೋಗದಂತೆ, ಹೊರಗಿನಿಂದ ಒಳ ಬಾರದಂತೆ ಕಟ್ಟೆಚ್ಚರ ವಹಿಸಲಾಗಿದೆ.
ಕೆಲವಡೆ ಪೊಲೀಸರು ಬ್ಯಾರಿಕೇಡ್‌ಗಳನ್ನು ಹಾಕಿದ್ದರೆ, ಇನ್ನೂ ಕೆಲವಡೆ ಜನರೇ ಸ್ವಯಂ ಪ್ರೇರಣೆಯಿಂದ ಪ್ರವೇಶಕ್ಕೆ ನಿರ್ಬಂಧ ಹೇರಿಕೊಂಡಿದ್ದಾರೆ. ತುರ್ತು ಕಾರ್ಯಗಳಿಗಾಗಿ ಮಾತ್ರ ಒಂದು ರಸ್ತೆಯನ್ನು ಸಂಚಾರಕ್ಕೆ ಇಟ್ಟುಕೊಂಡಿದ್ದು, ಇಂತಹ ಮಾರ್ಗಗಳಲ್ಲಿ ಪೊಲೀಸರ ದಂಡೇ ಕಾವಲಿಗಿದೆ. ವಿನಾಕಾರಣ ತಿರುಗಾಡುವುದು ಕಂಡು ಬಂದರೆ ಲಾಠಿ ರುಚಿ ತೋರಿಸಿ ವಾಹನ ಜಪು¤ ಮಾಡಲಾಗುತ್ತಿದೆ. ಪೊಲೀಸ್ ಪಹರೆ ಹೆಚ್ಚಿಸಿರುವ ಹಿನ್ನೆಲೆಯಲ್ಲಿ ಪುಂಡಾಡಿಕೆ ನಡೆಸುವವರು ಬಾಲ ಬಿಚ್ಚದಂತಾಗಿದೆ.
ಹಗಲಿನಲ್ಲಿರುವಷ್ಟೇ ರಾತ್ರಿಯೂ ಕೂಡ ಪೊಲೀಸರ ಗಸ್ತು ಇರುವುದರಿಂದ ಜನರು ರಸ್ತೆಗಿಳಿಯುತ್ತಿಲ್ಲ. ಅಗತ್ಯ ವಸ್ತುಗಳಿಲ್ಲ ಸಮಸ್ಯೆ: ಇಷ್ಟೊಂದು ಕಠಿಣ ಕ್ರಮಗಳ ನಡುವೆ ಅಗತ್ಯ ವಸ್ತುಗಳಿಗೆ ಜನರು ಪರದಾಡಬಾರದು ಎನ್ನುವ ಕಾರಣಕ್ಕೆ ಜಿಲ್ಲಾಡಳಿತ, ಮಹಾನಗರ ಪಾಲಿಕೆ ಸೂಕ್ತ ಕ್ರಮಗಳನ್ನು ಕೈಗೊಂಡಿದೆ. ಪಾಸ್ ಪಡೆದ ವ್ಯಾಪಾರಿಗಳು ಬೆಳಗಿನ ಸಮಯದಲ್ಲಿ ತರಕಾರಿ, ಹಣ್ಣು ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಇದೊಂದು ಸಮಯ ಬಿಟ್ಟು ಇನ್ನುಳಿದ ಸಮಯದಲ್ಲಿ ಕೊರೊನಾ ವಾರಿಯರ್ಸ್‌ಗಳು ಮಾತ್ರ ಈ ಪ್ರದೇಶಗಳಲ್ಲಿ ಕಾಣಸಿಗುತ್ತಾರೆ. ಕಿರಾಣಿ ಸಾಮಾಗ್ರಿಗಳು ಕೂಡ ಅಕ್ಕಪಕ್ಕದ ಅಂಗಡಿಯವರು ಬೆಳಗಿನ ಸಂದರ್ಭದಲ್ಲಿ ಪೂರೈಸುವ ಕೆಲಸ ಮಾಡುತ್ತಿದ್ದಾರೆ. ಓಡಾಟಕ್ಕೆ ಒಂದು ತೊಂದರೆ ಬಿಟ್ಟರೆ ಉಳಿದಂತೆ ಯಾವುದಕ್ಕೂ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ. ಪರಿಚಯದ ವ್ಯಕ್ತಿಗಳಿಗೆ ಮಾತ್ರ ಕಿರಾಣಿ ಸಾಮಗ್ರಿ ನೀಡುತ್ತಿದ್ದು, ಅಪರಿಚಿತರಿಗೆ ಮಾರಾಟ ಮಾಡದೆ ಸ್ವಯಂ ನಿಯಂತ್ರಣ ಹೇರಿಕೊಂಡಿದ್ದಾರೆ. ಜಿಲ್ಲಾಡಳಿತವೇ ಬಡ ಕುಟುಂಬಗಳಿಗೆ ಉಚಿತವಾಗಿ ಹಾಲು ವಿತರಣೆ ಮಾಡುತ್ತಿದೆ.
ಪೌರ ಕಾರ್ಮಿಕರ ಸ್ವಚ್ಛತೆಗಿಲ್ಲ ಯಾವುದೇ ಅಡ್ಡಿ : ಕೋವಿಡ್ 19 ವಿರುದ್ಧದ ಹೋರಾಟದಲ್ಲಿ ಪ್ರಮುಖವಾಗಿರುವ ಪೌರ ಕಾರ್ಮಿಕರ ಸ್ವಚ್ಛತಾ ಕಾರ್ಯಕ್ಕೆ ಯಾವುದೇ ಅಡ್ಡಿಯಿಲ್ಲ. ಈ ಪ್ರದೇಶಗಳ ವ್ಯಾಪ್ತಿಯಲ್ಲಿ ಸುಮಾರು 225 ಪೌರ ಕಾರ್ಮಿಕರು ಸ್ವತ್ಛತಾ ಕಾರ್ಯ ನಿರ್ವಹಿಸುತ್ತಿದ್ದಾರೆ. 100 ಮೀಟರ್ ವ್ಯಾಪ್ತಿಯ ನಿಯಂತ್ರಿತ ಪ್ರದೇಶದಿಂದ ಹಿಡಿದು 5 ಕಿಮೀ ಬಫರ್ ಜೋನ್‌ವರೆಗಿನ ಮನೆಗಳ ಕಸವನ್ನು ಸಂಗ್ರಹ ಮಾಡುತ್ತಿದ್ದಾರೆ. ಇನ್ನೂ ಅಲ್ಲಲ್ಲಿ ಕಸದ ಡಬ್ಬಿಗಳಲ್ಲಿ ಹಾಕಿದ ಕಸವನ್ನು ಸಾಗಿಸುವ ಕೆಲಸ ಮಾಡುತ್ತಿದ್ದು, ಆ ಭಾಗದ ನೈರ್ಮಲ್ಯಕ್ಕೂ ಹೆಚ್ಚಿನ ಆದ್ಯತೆ ನೀಡಲಾಗಿದೆ. ಈ ಪ್ರದೇಶ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ಪೌರ ಕಾರ್ಮಿಕರಿಗೆ ಸುರಕ್ಷತಾ ಪರಿಕರ ನೀಡಲಾಗಿದ್ದು, ಕಾಲ ಕಾಲಕ್ಕೆ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ.
ನಿತ್ಯವೂ ದ್ರಾವಣ ಸಿಂಪರಣೆ : ಅಗ್ನಿ ಶಾಮಕ ದಳ ವಾಹನ ಹಾಗೂ ಪಾಲಿಕೆಯ ಜೆಟ್ ಯಂತ್ರಗಳಿಂದ ನಿತ್ಯವೂ ಈ ಭಾಗದಲ್ಲಿ ಸೋಡಿಯಂ ಹೈಡ್ರೋಕ್ಲೋರೈಡ್ ದ್ರಾವಣ ಸಿಂಪರಿಸಲಾಗುತ್ತಿದೆ. ಫಾಗಿಂಗ್ ಕಾರ್ಯ ಕೂಡ ನಡೆದಿದೆ. ಚರಂಡಿ, ಗಟಾರು ಹಾಗೂ ನೀರು ನಿಲ್ಲುತ್ತಿರುವ ಪ್ರದೇಶಗಳಲ್ಲಿ ಬ್ಲಿಚಿಂಗ್ ಪೌಡರ್ ಹಾಕಲಾಗುತ್ತಿದೆ. ಬೆಳಗ್ಗೆ 10ರೊಳಗೆ ಈ ಎಲ್ಲಾ ಕಾರ್ಯಗಳು ಪೂರ್ಣಗೊಳುತ್ತಿದ್ದಂತೆ ಈ ಪ್ರದೇಶಗಳಲ್ಲಿ ಯಾರ ಓಡಾಟವೂ ಇರುವುದಿಲ್ಲ.
ಪೌರ ಕಾರ್ಮಿಕರು ನಿತ್ಯವೂ ಮನೆಗಳಿಗೆ ತೆರಳಿ ಕಸ ಸಂಗ್ರಹಿಸುತ್ತಿರುವುದರಿಂದ ಸ್ವಚ್ಛತೆ ವಿಚಾರದಲ್ಲಿ ಎರಡು ಮಾತಿಲ್ಲ. ನಿತ್ಯವೂ ದ್ರಾವಣ ಸಿಂಪಡಿಸುತ್ತಿದ್ದಾರೆ. ತರಕಾರಿ, ಹಣ್ಣು, ಕಿರಾಣಿ ಮನೆ ಮುಂದೆ ದೊರೆಯುತ್ತಿವೆ. –
ವಿನಯ ಸಜ್ಜನರ, ನಿವಾಸಿ
-ಹೇಮರಡ್ಡಿ ಸೈದಾಪುರ/ಬಸವರಾಜ ಹೂಗಾರ