ಹುಬ್ಬಳ್ಳಿ: ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಸರಕಾರ ಒಂದು ವಾರ ಕಾಲ ಆರೋಗ್ಯ ತುರ್ತು ಪರಿಸ್ಥಿತಿ ಹೇರಿದ್ದು, ಸರ್ಕಾರದ ಆದೇಶದಂತೆ ಮಹಾನಗರದಲ್ಲಿ ಮಾಲ್, ಚಿತ್ರಮಂದಿರ ಸಂಪೂರ್ಣ ಸ್ಥಬ್ಧವಾಗಿದ್ದು, ಸಾರ್ವಜನಿಕ ಸಭೆ-ಸಮಾರಂಭಗಳ ಮೇಲೂ ಪರಿಣಾಮ ಬೀರಿದೆ. ನಗರದ ಪ್ರಮುಖ ಮಾಲ್‌ಗಳಾದ ಅರ್ಬನ್ ಓಯಾಸಿಸ್ ಮಾಲ್, ಯೂ ಮಾಲ್, ಲಕ್ಷ್ಮೀ ಮಾಲ್, ಸಿಗ್ನೇಚರ್, ಗ್ಯಾಲಕ್ಸಿ ಮಾಲ್, ಬಿಗ್ ಬಜಾರ್, ರಿಲಾಯನ್ಸ್ ಮಾರ್ಕೆಟ್ ಹಾಗೂ ಮಾಲ್ ಸೇರಿದಂತೆ 12 ಮಾಲ್‌ಗಳ ವ್ಯಾಪಾರ ಸ್ಥಬ್ದವಾಗಿದೆ. ಇದರೊಂದಿಗೆ ಮಹಾನಗರ ವ್ಯಾಪ್ತಿಯಲ್ಲಿರುವ 13 ಚಿತ್ರಮಂದಿರಗಳಲ್ಲಿ ಪ್ರದರ್ಶನ ಸಂಪೂರ್ಣ ರದ್ದಾಗಿವೆ.
ಮಹಾನಗರ ವ್ಯಾಪ್ತಿಯಲ್ಲಿ ಮಾಲ್, ಚಿತ್ರ ಮಂದಿರ, ಕಲ್ಯಾಣ ಮಂಟಪ, ಕ್ಲಬ್, ಮೈದಾನ, ಪಾರ್ಕ್, ವಸ್ತು ಪ್ರದರ್ಶನ, ಜಿಮ್ ಸೇರಿದಂತೆ ಜನ ಸೇರುವ ಪ್ರಮುಖ 141 ಕೇಂದ್ರಗಳು ಸಂಪೂರ್ಣವಾಗಿ ಸ್ಥಗಿತಗೊಂಡಿವೆ. ಮಹಾನಗರ ಪಾಲಿಕೆಯ ಆಯಾ ವಲಯ ವ್ಯಾಪ್ತಿಯ ಅಧಿಕಾರಿಗಳು ಈ ಕೇಂದ್ರಗಳ ಮೇಲೆ ನಿಗಾ ವಹಿಸಿದ್ದಾರೆ. ಕೆಲವರು ಸರಕಾರ ಆದೇಶದ ಪ್ರಕಾರ ಸ್ವಯಂಪ್ರೇರಿತರಾಗಿ ಬಂದ್ ಮಾಡಿದ್ದರೆ ಇನ್ನೂ ಕೆಲವರು ಪಾಲಿಕೆ ಅಧಿಕಾರಿಗಳ ಸೂಚನೆ ಮೇರೆಗೆ ಬಂದ್ ಮಾಡಿದ್ದಾರೆ. ಕೆಲ ಮಾರ್ಕೆಟ್‌ಗಳು ಆರಂಭವಾಗಿದ್ದರೂ ಇತರೆ ದಿನದಂತೆ ಗ್ರಾಹಕರ ಪ್ರಮಾಣ ಇರಲಿಲ್ಲ. ಕೆಲವಡೆ ಅಗತ್ಯ ಸಿಬ್ಬಂದಿಗಳಿಗೆ ಮಾತ್ರ ಪ್ರವೇಶ ನೀಡುತ್ತಿರುವುದು ಕಂಡು ಬಂತು. ಇನ್ನೂ ಮಾಲ್‌ಗಳ ಮುಂದೆ ಜನರು ಬಂದು ವಿಚಾರಿಸಿ ಮರಳಿ ಹೋಗುತ್ತಿದ್ದರು.ಸಭೆ-ಸಮಾರಂಭ ಮುಂದೂಡಿಕೆ : ನಗರದಲ್ಲಿ ನಡೆಯಬೇಕಾಗಿದ್ದ ಹಲವು ಸಭೆ ಸಮಾರಂಭ, ವಸ್ತು ಪ್ರದರ್ಶನ, ಸಂಗೀತ ಹಬ್ಬ, ಕ್ರೀಡಾಕೂಟಗಳನ್ನು ಮುಂದೂಡಲಾಗಿದೆ. ಪಾಲಿಕೆಯ ಏಕೈಕ ಈಜುಕೊಳವನ್ನು ಒಂದು ವಾರದವರೆಗೆ ಬಂದ್ ಮಾಡುವುದಾಗಿ ಪಾಲಿಕೆ ಅಧಿಕೃತವಾಗಿ ಪ್ರಕಟಿಸಿದೆ.
ಬಿಕೋ ಎನ್ನುತ್ತಿರುವ ನಿಲ್ದಾಣಗಳು : ಪ್ರಯಾಣಿಕರಿಂದ ಗಿಜಿಗುಡುತ್ತಿದ್ದ ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ಸಂಖ್ಯೆ ಸಾಕಷ್ಟು ಪ್ರಮಾಣದಲ್ಲಿ ಕಡಿಮೆಯಾಗಿತ್ತು. ಹಳೇ ಬಸ್ ನಿಲ್ದಾಣದಲ್ಲಿ ಒಂದಿಷ್ಟು ಪ್ರಯಾಣಿಕರನ್ನು ಹೊರತುಪಡಿಸಿದರೆ ಗೋಕುಲ ರಸ್ತೆಯ ಹೊಸ ಬಸ್ ನಿಲ್ದಾಣ ಹಾಗೂ ಹೊಸೂರಿನ ಪ್ರಾದೇಶಿಕ ಬಸ್ ನಿಲ್ದಾಣಗಳು ಬಿಕೋ ಎನ್ನುತ್ತಿದ್ದವು. ಅಲ್ಲಿನ ಹೋಟೆಲ್, ಅಂಗಡಿಗಳಂತೂ ಜನರಿಲ್ಲದೆ ಖಾಲಿ ಖಾಲಿಯಾಗಿದ್ದವು. ಶೇ.50-60 ಪ್ರಯಾಣಿಕರ ಕೊರತೆ ಕಾಣುತ್ತಿದೆ ಎಂದು ಬಸ್ ನಿಲ್ದಾಣದ ಅಧಿಕಾರಿಗಳು ಸ್ಪಷ್ಟಪಡಿಸಿದರು. ಆರೋಗ್ಯ ಇಲಾಖೆಯಿಂದ ಕೊರೊನಾ ವೈರಸ್ ಕುರಿತು ಬಸ್ ನಿಲ್ದಾಣಗಳಲ್ಲಿ ಧ್ವನಿವರ್ಧಕದ ಮೂಲಕ ಜಾಗೃತಿ ಮೂಡಿಸುವುದು ಕಂಡು ಬಂತು.
ಬಸ್‌ಗಳ ಸಂಚಾರದಲ್ಲಿ ಕಡಿತ : ಪ್ರಯಾಣಿಕರ ಕೊರತೆಯಿಂದಾಗಿ ನಷ್ಟ ತಡೆಯುವ ನಿಟ್ಟಿನಲ್ಲಿ ಸಾರಿಗೆ ಸಂಸ್ಥೆ ಅಧಿಕಾರಿಗಳು ಬಸ್‌ಗಳ ಸಂಖ್ಯೆ ಕಡಿತಗೊಳಿಸಿದ್ದಾರೆ. ಅಗತ್ಯ ಮಾರ್ಗಗಳಲ್ಲಿ ಮಾತ್ರ ಬಸ್ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಮುಂಗಡ ಟಿಕೆಟ್ ಹಾಗೂ ಪ್ರಯಾಣಿಕರ ಬೇಡಿಕೆ ಆಧರಿಸಿ ಪ್ರಮುಖವಾಗಿ ವೇಗದೂತ, ಐಷಾರಾಮಿ ಸಾರಿಗೆ ಸೇವೆಗಳಲ್ಲಿ ಕಡಿತ ಮಾಡಲಾಗಿದೆ. ಹೀಗಾಗಿ ದೂರ ಪ್ರಯಾಣ ಮಾಡುವವರ ಸಂಖ್ಯೆಯಲ್ಲಿ ಸಾಕಷ್ಟು ಇಳಿಮುಖವಾದಂತಾಗಿದೆ.
ಸಂತೆಯಲ್ಲಿ ಕೊರೊನಾ ಸದ್ದು : ಶನಿವಾರದ ಬೆಂಗೇರಿ ಸಂತೆಯಲ್ಲೂ ಕೊರೊನಾ ವೈರಸ್ ಸದ್ದು ಮಾಡಿದೆ. ಪ್ರತಿ ವಾರದಂತೆ ಈ ಬಾರಿ ಸಂತೆಯಲ್ಲಿ ಜನರು ಕಾಣಲಿಲ್ಲ. ಮುಖಕ್ಕೆ ಮಾಸ್ಕ್, ಕರವಸ್ತ್ರ ಕಟ್ಟಿಕೊಂಡು ಬಂದಿರುವುದು ಕಂಡು ಬಂತು. ವ್ಯಾಪಾರಿಗಳೂ ಮುಂಜಾಗ್ರತೆ ಕ್ರಮವಾಗಿ ಮುಖ ಮುಚ್ಚಿಕೊಂಡು ವ್ಯಾಪಾರ ಮಾಡುತ್ತಿದ್ದರು. ಉಳಿದಂತೆ ಹೋಟೆಲ್, ಬಾರ್ ಆ್ಯಂಡ್ ರೆಸ್ಟೋರೆಂಟ್ ಗಳಲ್ಲಿ ಕೊರೊನಾ ಅಷ್ಟೊಂದು ಪರಿಣಾಮ ಬೀರಿಲ್ಲ. ರೈಲ್ವೆ ನಿಲ್ದಾಣದಲ್ಲೂ ಕೂಡ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿತ್ತು.
ಉಚಿತ ಮಾಸ್ಕ್ ವಿತರಿಸಿದ ಚಾಲಕ-ನಿರ್ವಾಹಕ : ಕೊರೊನಾ ವೈರಸ್ ಹಿನ್ನೆಲೆಯಲ್ಲಿ ರಾಜ್ಯ ಸಾರಿಗೆ ಸಂಸ್ಥೆಯ ಚಾಲಕ ಮತ್ತು ನಿರ್ವಾಹಕ ಸ್ವಂತ ಖರ್ಚಿನಲ್ಲಿ ಪ್ರಯಾಣಿಕರಿಗೆ ಮಾಸ್ಕ್ ವಿತರಿಸಿದ್ದಾರೆ. ಹುಬ್ಬಳ್ಳಿಯಿಂದ ಯರಗುಪ್ಪಿಗೆ ಸಂಚರಿಸುವ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ನಲ್ಲಿ ನಿರ್ವಾಹಕ ಎಂ.ಎಲ್. ನದಾಫ ಹಾಗೂ ಚಾಲಕ ಎಚ್.ಟಿ. ಮಾಯನವರ ಪ್ರಯಾಣಿಕರಿಗೆ ಟಿಕೆಟ್ ಜತೆ ಉಚಿತವಾಗಿ ಮಾಸ್ಕ್ ವಿತರಿಸುತ್ತಿದ್ದಾರೆ. ಪ್ರಯಾಣಿಕರು ಆರೋಗ್ಯವಾಗಿದ್ದರೆ ಸಂಸ್ಥೆ ಕೂಡ ಉತ್ತಮ ರೀತಿಯಲ್ಲಿರುತ್ತದೆ ಎಂಬ ಆಶಯ ಚಾಲಕ-ನಿರ್ವಾಹಕರದ್ದು.
ವೃತ್ತಪತ್ರಿಕೆ, ಟಿವಿಗಳು ಸೇರಿದಂತೆ ಯಾವುದೇ ಸಾಮಾಜಿಕ ಜಾಲತಾಣಗಳು ವದಂತಿಗಳಿಗೆ ಅವಕಾಶ ನೀಡಬಾರದು. ಜಿಲ್ಲಾಡಳಿತದ ಮೂಲಕ ಜಿಲ್ಲಾ ಧಿಕಾರಿಯಿಂದ ಮಾತ್ರ ಅ ಧಿಕೃತ ಪ್ರಕಟಣೆಗಳನ್ನು ಹೊರಡಿಸಲಾಗುವುದು.
-ದೀಪಾ ಚೋಳನ್,ಜಿಲ್ಲಾಧಿಕಾರಿ