ಆಂಧ್ರಪ್ರದೇಶ:ಆಘಾತಕಾರಿ ಘಟನೆಯೊಂದರಲ್ಲಿ ಕೋವಿಡ್ -19 ಸೋಂಕಿಗೆ ತುತ್ತಾಗಿ ಸಾವನ್ನಪ್ಪಿದ ವ್ಯಕ್ತಿಗಳ ದೇಹವನ್ನು ಜೆಸಿಬಿ ಮತ್ತು ಟ್ರ್ಯಾಕ್ಟರ್ ನಲ್ಲಿ ಸ್ಮಶಾನಕ್ಕೆ ಸಾಗಿಸಲಾಗಿದೆ.
ಆಂಧ್ರಪ್ರದೇಶದ ಶ್ರೀಕಾಕುಲಂ ಜಿಲ್ಲೆಯ ಪುರಸಭೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು. 72 ವರ್ಷದ ವೃದ್ಧರ ದೇಹವನ್ನು ಜಿಸಿಬಿ ಯಂತ್ರದ ಮೇಲಿಟ್ಟು, ಪಿಪಿಇ ಕಿಟ್ ಧರಿಸಿದ ಪುರಸಭೆಯ ಸಿಬ್ಬಂದಿಗಳು ಸ್ಮಶಾನಕ್ಕೆ ಕೊಂಡೊಯ್ದಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಜಿಲ್ಲೆಯ ಸೋಮ್ ಪೇಟಾ ಪಟ್ಟಣದಲ್ಲಿ ಮಹಿಳೆಯೊಬ್ಬರ ದೇಹವನ್ನು ಟ್ರ್ಯಾಕ್ಟರ್ ನಲ್ಲಿ ಸಾಗಿಸಲಾಗಿದೆ.
ಶ್ರೀಕಾಕುಲಂ ಜಿಲ್ಲೆಯ ಉದಯಪುರಂ ಪ್ರದೇಶದಲ್ಲಿ ಅತೀ ಹೆಚ್ಚು ಜನರು ಕೋವಿಡ್ ಸೊಂಕಿಗೆ ತುತ್ತಾಗಿದ್ದಾರೆ. ಮೃತ ವೃದ್ಧ ಕೂಡ ಪುರಸಭೆಯ ಸಿಬ್ಬಂದಿಯಾಗಿದ್ದರು ಎಂದು ತಿಳಿದುಬಂದಿದೆ. ಆದರೇ ದುರಾದೃಷ್ಟವಶಾತ್ ಈ ವ್ಯಕ್ತಿ ಸೊಂಕಿಗೆ ತುತ್ತಾಗಿ ಮೃತಪಟ್ಟಿದ್ದರು. ಇದರಿಂದ ಆತಂಕಕ್ಕೀಡಾದ ಸ್ಥಳೀಯರು ಕೂಡಲೇ ಮೃತದೇಹವನ್ನು ಕೊಂಡೊಯ್ಯುವಂತೆ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು: ಧರ್ಮಸ್ಥಳಕ್ಕೆ ತೆರಳುತ್ತಿದ್ದ ಇಬ್ಬರು ಸ್ಥಳದಲ್ಲೇ ಸಾವು
ಇದರಿಂದ ಪುರಸಭೆಯ ಸಿಬ್ಬಂದಿಗಳು ಜಿಸಿಬಿಯ ಮೂಲಕ ದೇಹವನ್ನು ಸಾಗಿಸಿದ್ದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಮಾತ್ರವಲ್ಲದೆ ಮೃತದೇಹವನ್ನು ಸ್ಥಳಾಂತರಿಸುವಾಗ ನಿಯಮಗಳನ್ನು ಪಾಲಿಸಿಲ್ಲ ಎಂದು ಕಿಡಿಕಾರಿದ್ದಾರೆ.
ಘಟನೆ ಕುರಿತು ಮಾಹಿತಿ ಪಡೆದ ಆಂಧ್ರಪ್ರದೇಶ ಸರ್ಕಾರ ಕೂಡಲೇ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಜೆ. ನಿವಾಸ್ ಅವರಿಗೆ ಸೂಚನೆ ನೀಡಿದೆ. ಈ ಸಂಬಂಧ ಪುರಸಭೆ ಆಯುಕ್ತ ಟಿ. ನಾಗೇಂದ್ರ ಕುಮಾರ್ ಹಾಗೂ ಸ್ಯಾನಿಟರಿ ಇನ್ ಸ್ಪೆಕ್ಟರ್ ಎನ್ ರಾಜೀವ್ ಅವರನ್ನು ಅಮಾನತು ಮಾಡಲಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಟಿಡಿಪಿ ನಾಯಕ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು , ಕೋವಿಡ್ 19 ಸಂತ್ರಸ್ತರ ಮೃತ ದೇಹಗಳನ್ನು ಪ್ಲಾಸ್ಟಿಕ್ ನಿಂದ ಸುತ್ತಿ ಜೆಸಿಬಿ ಮತ್ತು ಟ್ರ್ಯಾಕ್ಟರ್ ನಲ್ಲಿ ಸಾಗಿಸಿವುದನ್ನು ನೋಡಿ ಆಘಾತಗೊಂಡಿದ್ದೇನೆ. ಮೃತರೂ ಸಾವಿನಲ್ಲೂ ಗೌರವ ಮತ್ತು ಘನತೆಗೆ ಅರ್ಹರು ಎಂದು ಟ್ವೀಟ್ ಮಾಡಿದ್ದಾರೆ.