ಉಡುಪಿ: ಕೋವಿಡ್-19 ಸೋಂಕಿತರ ಪಟ್ಟಿಯಲ್ಲಿ ರಾಜ್ಯದಲ್ಲಿ ಮೊದಲ ಸ್ಥಾನ ಪಡೆದಿರುವ ಉಡುಪಿ ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಜಿಲ್ಲೆಯಲ್ಲಿ ಇಂದು ಮತ್ತೆ 62 ಹೊಸ ಸೋಂಕು ಪ್ರಕರಣಗಳು ದೃಢವಾಗಿದೆ.
ಇದರೊಂದಿಗೆ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 472ಕ್ಕೆ ಏರಿಕೆಯಾಗಿದೆ.
ಮಹಾರಾಷ್ಟ್ರದಿಂದ ಬಂದು ಜಿಲ್ಲೆಯಲ್ಲಿ ಕ್ವಾರಂಟೈನ್ ನಲ್ಲಿದ್ದ ಮಂದಿಗೆ ಸೋಂಕು ಕಾಣಿಸಿಕೊಳ್ಳುತ್ತಿದೆ. ಕಳೆದ ಕೆಲವು ದಿನಗಳಿಂದ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಭಾರಿ ಏರಿಕೆ ಕಂಡುಬರುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಅನ್ಯ ರಾಜ್ಯಗಳಿಂದ ಬಂದು ಕ್ವಾರಂಟೈನ್ ನಲ್ಲಿದ್ದ ಜನರನ್ನು ಕೋವಿಡ್ ವರದಿ ಬರದೆಯೂ ಮನೆಗೆ ಕಳುಹಿಸಲಾಗಿತ್ತು. ಅಂತವರಲ್ಲಿ ಈಗ ಕೋವಿಡ್ ಪಾಸಿಟಿವ್ ಕಂಡುಬರುತ್ತಿದೆ. ಇದು ಜಿಲ್ಲೆಯ ಜನತೆಯ ಆತಂಕಕ್ಕೆ ಕಾರಣವಾಗಿದೆ.
ಉಡುಪಿ ಜಿಲ್ಲಾ ಶಸಸ್ತ್ರ ಮೀಸಲು ಪಡೆಯ ಅಧಿಕಾರಿಯೋರ್ವರಿಗೆ ಕೋವಿಡ್ -19 ಸೋಂಕು ದೃಢವಾದ ಹಿನ್ನಲೆಯಲ್ಲಿ ಅವರು ವಾಸಿಸುತ್ತಿದ್ದ ಶಿರ್ವ ಬಲ್ಲಾಡಿ ಪ್ರದೇಶವನ್ನು ಮುನ್ನೆಚ್ಚರಿಕಾ ಕ್ರಮವಾಗಿ ಸೀಲ್ ಡೌನ್ ಮಾಡಲಾಗಿತ್ತು ಜೂನ್ ಒಂದರಂದು ಈ ಅಧಿಕಾರಿಗೆ ಕೋವಿಡ್ ಸೋಂಕು ತಾಗಿರುವ ವರದಿ ಪಾಸಿಟಿವ್ ಬಂದಿತ್ತು. ಆದರೆ ಈಗ ಮತ್ತೆ ಮರು ಪರೀಕ್ಷೆಗೆ ಕಳುಹಿಸಲಾದ ವರದಿ ನೆಗೆಟಿವ್ ಬಂದಿದೆ ಎಂದು ದೃಢಪಡಿಸಿದ್ದಾರೆ.
ಜಿಲ್ಲೆಗೆ ಮಂಗಳವಾರ ಕೋವಿಡ್ ಪ್ರವಾಹವೇ ಹರಿದಿತ್ತು. ಇದುವರೆಗೆ ಯಾವ ಜಿಲ್ಲೆಯಲ್ಲೂ ಕಂಡುಬರದಿದ್ದ ಸೋಂಕಿತರ ಸಂಖ್ಯೆ ನಿನ್ನೆ ಉಡುಪಿಯಲ್ಲಿ ದಾಖಲಾಗಿತ್ತು. ನಿನ್ನೆ ಒಂದೇ ದಿನ ಉಡುಪಿ ಜಿಲ್ಲೆಯಲ್ಲಿ 150 ಸೋಂಕು ಪ್ರಕರಣಗಳು ದೃಢವಾಗಿತ್ತು.