Advertisement

ಕುಂಬಾರರ ಬದುಕು ಕಸಿದ ಕೋವಿಡ್

06:16 PM May 11, 2020 | mahesh |

ಮೈಸೂರು: ಪ್ರತಿ ವರ್ಷ ಬೇಸಿಗೆ ಆರಂಭವಾಗುತ್ತಿದ್ದಂತೆ ನಗರದ ಮುಖ್ಯ ರಸ್ತೆಗಳಲ್ಲಿ ಹೆಚ್ಚು ಮಾರಾಟವಾಗುತ್ತಿದ್ದ ಮಣ್ಣಿನ ಮಡಕೆಗಳು ಈ ಬಾರಿಯ ಲಾಕ್‌ಡೌನ್‌ನಿಂದ
ಕಳೆಗುಂದಿದ್ದು, ಬೇಡಿಕೆ ಇಲ್ಲದೆ ಕುಂಬಾರರು, ಮಡಕೆ ಮಾರಾಟಗಾರ ಬದುಕು ಅತಂತ್ರವಾಗಿದೆ. ವಿಶೇಷವಾಗಿ ಮಡಕೆ ತಯಾರಕರು ಹಾಗೂ ಮಾರಾಟಗಾರರು ಬೇಸಿಗೆಯಲ್ಲಿ ಮಣ್ಣಿನ ಮಡಕೆಗಳನ್ನು ತಯಾರಿಸಿ, ಮಾರಾಟ ಮಾಡಿ ಆದಾಯ ಪಡೆಯುತ್ತಾರೆ. ಆದರೆ, ಈ ಬಾರಿ ಕೋವಿಡ್ ದಿಂದ ತಯಾರಿಸಿದ ಮಡಕೆಗಳು ಮನೆಯಲ್ಲಿಯೇ ಇಟ್ಟುಕೊಳ್ಳಬೇಕಾದ ದುಸ್ಥಿತಿ ಬಂದೊದಗಿದ್ದು, ವ್ಯಾಪಾರ ಇಲ್ಲದೇ ನಷ್ಟ ಅನುಭವಿಸುವಂತಾಗಿದೆ.

Advertisement

ನಗರದ ಕಲಾಮಂದಿರ, ಸರಸ್ವತಿಪುರಂ, ವಿಜಯನಗರದ ಐಶ್ವರ್ಯ ಪೆಟ್ರೋಲ್‌ ಬಂಕ್‌, ಕುವೆಂಪು ನಗರ, ಬಂಬೂಬಜಾರ್‌ ಸೇರಿದಂತೆ ಹಲವು ಸ್ಥಳಗಳಲ್ಲಿ ಮಡಕೆ ಮಾರಾಟ ಮಾಡುವವರು ಕಂಡು ಬರುತ್ತಿದ್ದರು. ಆದರೆ, ಈ ಬಾರಿ ಮಡಕೆ ತಯಾರಿಸುವ ಕುಂಬಾರರು, ವ್ಯಾಪಾರಸ್ಥರು ಕಡಿಮೆಯಾಗಿದ್ದು, ಇವರೆಲ್ಲರೂ ಕೊರೊನಾದಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ,
ಜೀವನ ನಿರ್ವಹಣೆಗಾಗಿ ಪರದಾಡುವಂತಾಗಿದೆ.

ವ್ಯಾಪಾರವಿಲ್ಲದೇ ಆರ್ಥಿಕ ನಷ್ಟ: ಸಾಮಾನ್ಯವಾಗಿ ರಾಜಾಸ್ಥಾನ, ಬಿಹಾರ ಮೂಲಗಳಿಂದ ಮಡಕೆ ಮಾರಾಟಗಾರರು ಪ್ರತಿವರ್ಷ ಮೈಸೂರಿಗೆ ಬಂದು ಆಯಕಟ್ಟಿನ ಸ್ಥಳಗಳಲ್ಲಿ ಮಡಕೆ ವ್ಯಾಪಾರ ನಡೆಸುತ್ತಿದ್ದರು. ಜೊತೆಗೆ ನಂಜನಗೂಡಿನ ದೂರ ಗ್ರಾಮ, ಕೆ. ಆರ್‌.ನಗರದ ಕುಂಬಾರ ಕೊಪ್ಪಲು, ಹುಣಸೂರಿನ ಗೌಡಗೆರೆಯಲ್ಲಿ ವಿವಿಧ ನಮೂನೆಯ ಮಣ್ಣಿನ ಮಡಕೆ ತಯಾರಿಸುತ್ತಿದ್ದರು. ಆದರೆ, 2 ತಿಂಗಳ ಹಿಂದೆಯೇ ತಂದಿರುವ ಮಡಕೆಗಳನ್ನು ಹಾಗೆಯೇ ಜೋಡಿಸಿಡಲಾಗಿದೆ. ಸಾಲಸೋಲ ಮಾಡಿ ಮಡಕೆ ತಯಾರಿಸಲಾಗಿತ್ತು. ಆದರೆ, ಈ ಬಾರಿ ವ್ಯಾಪಾರ ಇಲ್ಲದೆ ಆರ್ಥಿಕ ನಷ್ಟ ಅನುಭವಿಸುವಂತಾಗಿದೆ. ದಿನಕ್ಕೆ 300ರಿಂದ 600 ರೂ.ವರೆಗೆ ವ್ಯಾಪಾರ ಆಗುತ್ತಿತ್ತು.

ಸಾರ್ವಜನಿಕರು ತಮ್ಮ ಮನೆಗಳಿಗೆ, ಶಿಕ್ಷಣ ಸಂಸ್ಥೆಗಳು, ಕಾಲೇಜು, ಸಂಘ-ಸಂಸ್ಥೆಗಳು ನೀರನ್ನು ಸಂಗ್ರಹಿಸಿಡಲು ಖರೀದಿ ಮಾಡುತ್ತಿದ್ದವು. ಆದರೆ, ಈ ಬಾರಿ ಕೋವಿಡ್
ನಮ್ಮ ಬದುಕನ್ನು ಕಸಿದಿದೆ ಎಂದು ಮಡಿಕೆ ವ್ಯಾಪಾರಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ರಾಜಸ್ಥಾನ ಮೂಲದ ವ್ಯಾಪಾರಿ ಗುಂಪಿನವರು ಸುಮಾರು 3 ದಶಕಗಳಿಂದ ಮೈಸೂರಿನಲ್ಲೇ ನೆಲೆಸಿದ್ದು, ಬೇರೆ ಋತುವಿನಲ್ಲಿ ಮಣ್ಣಿನ ಆಕೃತಿಗಳು ಬೊಂಬೆಗಳು, ಪಿಂಗಾಣಿ ಸಾಮಗ್ರಿಗಳು ಹೀಗೆ ಹಲವು ಬಗೆಯ ವಸ್ತುಗಳನ್ನು ಮಾರಾಟ ಮಾಡುತ್ತಾರೆ. ಬೇಸಿಗೆ ಪ್ರಾರಂಭವಾಗುತ್ತಿದ್ದಂತೆ ಗುಜರಾತಿನಿಂದ ಮಡಕೆಗಳನ್ನು ತರಿಸಿ, ಬಣ್ಣ-ಬಣ್ಣದ ಚಿತ್ತಾರಗಳಿಂದ ಅಲಂಕರಿಸಿ ರೂಪ ಕೊಡುತ್ತಾರೆ. ಹೀಗೆ ಆಕರ್ಷಕವಾಗಿ ಕಾಣುವ ಮಡಕೆ ಮೈಸೂರಿನ ಹಲವು ಸ್ಥಳಗಳಲ್ಲಿ
ಮಾರಾಟ ಮಾಡುತ್ತಾರೆ. ಆದರೆ, ಕೋವಿಡ್  ಇವರೆಲ್ಲರ ಬದುಕನ್ನು ಅತಂತ್ರಗೊಳಿಸಿದೆ.

ನಮ್ಮ ಬಳಿ 3ರಿಂದ 20 ಲೀಟರ್‌ ನೀರು ಹಿಡಿಯುವ ತರಾವರಿ ಆಕಾರಗಳ ಮಡಕೆಗಳಿವೆ. ಮಣ್ಣಿನ ಮಡಕೆ ಯಿಂದ ಬಹಳಷ್ಟು ಉಪಯೋಗವಿರುವುದರಿಂದ ಜನರು ಇದನ್ನು ಕಂಡುಕೊಳ್ಳುವಲ್ಲಿ ಉತ್ಸುಕರಾಗಿದ್ದರು. ಆದರೆ, ಲಾಕ್‌ಡೌನ್‌ನಿಂದ ವ್ಯಾಪಾರವಿಲ್ಲದೆ ನಾವು ಆರ್ಥಿಕ ನಷ್ಟಕ್ಕೆ ಸಿಲುಕಿದ್ದೇವೆ. 
ದಿನೇಶ್‌, ಮಡಿಕೆ ವ್ಯಾಪಾರಿ

Advertisement

ಸತೀಶ್‌ ದೇಪುರ

Advertisement

Udayavani is now on Telegram. Click here to join our channel and stay updated with the latest news.

Next