Advertisement
ಎರಡು ದಿನಗಳಿಂದ ಹೊಸದಿಲ್ಲಿ ಪ್ರವಾಸದಲ್ಲಿರುವ ಸಿಎಂ ಸಿದ್ದರಾಮಯ್ಯ ಅವರು ಗುರುವಾರ ಬೆಂಗಳೂರಿನಲ್ಲಿ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸಭೆ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳ ಸಭೆ ಕರೆದಿದ್ದಾರೆ. ರಾಜ್ಯದಲ್ಲಿ ಕೋವಿಡ್ ನಿರ್ವಹಣೆಗೆ ಮುಖ್ಯಮಂತ್ರಿಗಳು ಆದ್ಯತೆ ನೀಡಿದ್ದು, ಗುರುವಾರವೇ ಸಚಿವ ಸಂಪುಟ ಸಭೆಯೂ ಇರುವುದರಿಂದ ಹೊಸ ಮಾರ್ಗಸೂಚಿ ಹೊರಬರುವ ಸಾಧ್ಯತೆಯೂ ಇದೆ ಎನ್ನಲಾಗಿದೆ.
ಕೋವಿಡ್ ಬಗ್ಗೆ ಹೆದರುವ ಅಗತ್ಯವಿಲ್ಲ ಎಂದು ಕೇಂದ್ರ ಸರಕಾರವೂ ತಿಳಿಸಿದ್ದು, ಮುಂಜಾಗ್ರತೆಯಾಗಿ ರಾಜ್ಯ ಸರಕಾರ ಬಿಡುಗಡೆ ಮಾಡಿರುವ ಮಾರ್ಗಸೂಚಿಯನ್ನು ಎಲ್ಲರೂ ಪಾಲಿಸಬೇಕು ಎಂದು ಮುಜರಾಯಿ ಸಚಿವರೂ ಆಗಿರುವ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಲಹೆ ನೀಡಿದ್ದಾರೆ. ಬುಧವಾರ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಪ್ರಮುಖವಾಗಿ 60 ವರ್ಷ ಮೇಲ್ಪಟ್ಟವರಿಗೆ ಮಾಸ್ಕ್ ಧರಿಸಲು ಮಾರ್ಗಸೂಚಿಯಲ್ಲಿ ಸಲಹೆ ನೀಡಿದ್ದು, ದೇವಸ್ಥಾನಗಳಿಗೆ ಬರುವ ಭಕ್ತರು, ಬಸ್, ಮೆಟ್ರೋ ಸೇರಿದಂತೆ ಸಾರ್ವಜನಿಕ ಸಾರಿಗೆ ಸಂಪರ್ಕ ಸಾಧನಗಳನ್ನು ಬಳಸುವ ಪ್ರಯಾಣಿಕರು ಮಾಸ್ಕ್ ಧರಿಸುವುದು ಒಳಿತು. ರೋಗ ಲಕ್ಷಣ ಇದ್ದವರು ತಮ್ಮ ಹಾಗೂ ಸುತ್ತಮುತ್ತಲು ಇರುವವರ ಆರೋಗ್ಯದ ದೃಷ್ಟಿಯಿಂದ ಕಾಳಜಿ ವಹಿಸಬೇಕು. ಯಾರಿಗೂ ತೊಂದರೆ ಆಗಬಾರದು. ದೇವಸ್ಥಾನಗಳಲ್ಲೂ ಜನಜಂಗುಳಿ ಇರುವುದರಿಂದ ಎಚ್ಚರಿಕೆ ವಹಿಸಬೇಕು ಎಂದು ಮನವಿ ಮಾಡಿದರು.
Related Articles
Advertisement
ಇನ್ನು ಅಯ್ಯಪ್ಪ ಸ್ವಾಮಿ ಭಕ್ತರು ಸೇರಿದಂತೆ ಕೇರಳಕ್ಕೆ ಹೋಗಿ ಬರುತ್ತಿರುವವರು ಕೋವಿಡ್ ತಪಾಸಣೆಗೆ ಒಳಗಾಗುವುದು ಒಳಿತು ಎಂದು ಅಭಿಪ್ರಾಯಪಟ್ಟಿರುವ ಸಚಿವ ರಾಮಲಿಂಗಾರೆಡ್ಡಿ, ಕೇರಳಕ್ಕೆ ಎಂದಿನಂತೆ ಬಸ್ ಸಂಚರಿಸುತ್ತಿದ್ದು, ಸದ್ಯಕ್ಕೆ ಎಲ್ಲ ಬಸ್‌ಗಳನ್ನು ಸ್ಯಾನಿಟೈಸ್ ಮಾಡುವ ಪರಿಸ್ಥಿತಿ ಬಂದಿಲ್ಲ ಎಂದರು.