Advertisement

ಕೋವಿಡ್ ಸೋಂಕಿನ ಸುಳಿಯಲ್ಲಿ ರಿಯಲ್ ವಾರಿಯರ್ಸ್

09:26 AM Jul 20, 2020 | Suhan S |

ರಾಜಧಾನಿಯಲ್ಲಿ ಸೋಂಕು ಪ್ರಕರಣಗಳು ತಾರಕಕ್ಕೇರುತ್ತಿದ್ದು, ಸೋಂಕಿತರ ಸಾವಿನ ಸಂಖ್ಯೆಯೂ ಹೆಚ್ಚಳವಾಗುತ್ತಿದೆ. ಸೋಂಕಿತರಿಗೆ ಚಿಕಿತ್ಸೆ ನೀಡಬೇಕಿದ್ದ ವೈದ್ಯಕೀಯ ಸಿಬ್ಬಂದಿಗಳೇ ಸೋಂಕಿತರಾಗುತ್ತಿದ್ದು, ಪರಿಸ್ಥಿತಿ ಕೈಮೀರುವ ಹಂತಕ್ಕೆ ಹೋಗುತ್ತಿದೆ. ಆಸ್ಪತ್ರೆ ಮತ್ತು ಪ್ರಯೋಗಾಲಯ, ಆ್ಯಂಬುಲೆನ್ಸ್‌ ಚಾಲಕ ಮತ್ತು ತುರ್ತು ವೈದ್ಯಕೀಯ ತಂತ್ರಜ್ಞರಲ್ಲಿ ಎಷ್ಟು ಮಂದಿಗೆ ಸೋಂಕು ತಗುಲಿದೆ?. ಸೋಂಕು ಹತೋಟಿಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಬಿಬಿಎಂಪಿ ಮತ್ತು ಪೊಲೀಸ್‌ ಸಿಬ್ಬಂದಿ ಪರಿಸ್ಥಿತಿ ಹೇಗಿದೆ ಎಂಬುದರ ಕುರಿತು ಈ ವಾರದ “ಸುದ್ದಿ ಸುತ್ತಾಟ’ದಲ್ಲಿ…

Advertisement

 ಸೋಂಕಿತರೊಂದಿಗೆ ನೇರ ಒಡನಾಟ ಹೊಂದಿರುವ ವೈದ್ಯಕೀಯ ಸಿಬ್ಬಂದಿ ಸಂಕಷ್ಟಕ್ಕೆ ಸಿಲುಕಿದೆ. ರಾಜಧಾನಿ ಬೆಂಗಳೂರು ಒಂದರಲ್ಲಿಯೇ ಪ್ರಮುಖ ಆಸ್ಪತ್ರೆಗಳ 400ಕ್ಕೂ ಹೆಚ್ಚು ವೈದ್ಯಕೀಯ ಸಿಬ್ಬಂದಿ, 20ಕ್ಕೂ ಅಧಿಕ ಆ್ಯಂಬುಲೆನ್ಸ್‌ ಚಾಲಕರು ಹಾಗೂ ತುರ್ತು ವೈದ್ಯಕೀಯ ತಂತ್ರಜ್ಞರು, ಖಾಸಗಿ ಆಸ್ಪತ್ರೆಗಳ ಶೇ.5 ರಷ್ಟು ಸಿಬ್ಬಂದಿಗೆ ಸೋಂಕು ದೃಢಪಟ್ಟಿರುವುದು ಆತಂಕ ಮೂಡಿಸಿದೆ. ಸಕಾಲದಲ್ಲಿ ಸೋಂಕಿತರ ಸ್ಥಳಾಂತರಕ್ಕೆ ಆ್ಯಂಬುಲೆನ್ಸ್‌ ಇಲ್ಲ, ಆಸ್ಪತ್ರೆಯಲ್ಲಿ ಹಾಸಿಗೆ ಸಿಗುತ್ತಿಲ್ಲ, ವೆಂಟಿಲೇಟರ್‌ಗಳಿಲ್ಲ. ಈಗ ಸೋಂಕಿತರಿಗೆ ಚಿಕಿತ್ಸೆ ನೀಡಬೇಕಿರುವ ವೈದ್ಯಕೀಯ ಸಿಬ್ಬಂದಿಗಳೇ ಸೋಂಕಿನ ಸುಳಿಗೆ ಸಿಲುಕಿರುವುದುಸಮಸ್ಯೆಯನ್ನು ಇನ್ನಷ್ಟು ಬಿಗಡಾಯಿಸಿದಂತಾಗಿದೆ. ನಗರದ ಜನಸಂಖ್ಯೆ 1.2 ಕೋಟಿ ಇದ್ದು ಈಗಾಗಲೇ ರಾಜ್ಯ ಮತ್ತು ಬಿಬಿಎಂಪಿ ಆರೋಗ್ಯ ಇಲಾಖೆಗಳು ಸಾಕಷ್ಟು ಸಿಬ್ಬಂದಿ ಕೊರತೆ ಎದುರಿಸುತ್ತಿವೆ. ಆದರೆ, ಈ ಸಿಬ್ಬಂದಿಗಳೇ ಸೋಂಕಿತರಾಗುತ್ತಿದ್ದು, ಸೋಂಕಿತರ ಪ್ರಾಥಮಿಕ ಸಂಪರ್ಕ ಹಿನ್ನೆಲೆ ಇನ್ನಷ್ಟು ಸಿಬ್ಬಂದಿ ಕ್ವಾರಂಟೈನ್‌ ಒಳಗಾಗುತ್ತಿದ್ದಾರೆ. ನಗರದ ಪ್ರಮುಖ ಆಸ್ಪತ್ರೆಗಳಲ್ಲಿ ವೈದ್ಯರು, ಶುಶ್ರೂಷಕಿಯರು, ಪ್ರಯೋಗಾಲಯ ಮತ್ತು ಹೌಸ್‌ ಕೀಪಿಂಗ್‌ ಸಿಬ್ಬಂದಿ ಸೇರಿ ಶೇ.10 ರಷ್ಟು ಮಂದಿಗೆ ಸೋಂಕು ಕಾಣಿಸಿಕೊಂಡಿದೆ. ಈ ಪೈಕಿ ವಿಕ್ಟೋರಿಯಾ, ಕೆ.ಸಿ.ಜನರಲ್‌ ಆಸ್ಪತ್ರೆ ಸೇರಿ 8 ಕೋವಿಡ್ ಚಿಕಿತ್ಸಾ ಕೇಂದ್ರಗಳಿವೆ. ಈಗಾಗಲೇ ಬಹುತೇಕರು ಗುಣಮುಖರಾಗಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ಅಂದಾಜು 400ಕ್ಕೂ ಹೆಚ್ಚು ವೈದ್ಯಕೀಯ ಸಿಬ್ಬಂದಿಗೆ ಸೋಂಕು ದೃಢಪಟ್ಟಿದ್ದು, ಅತಿ ಹೆಚ್ಚು ನಿಮ್ಹಾನ್ಸ್‌ನಲ್ಲಿ 100, ಕೆ.ಸಿ.ಜನರಲ್‌ 69, ವಿಕ್ಟೋರಿಯಾ 70 ಕಿದ್ವಾಯಿಯಲ್ಲಿ 40 ಮಂದಿ ಸೋಂಕಿತರಾಗಿದ್ದರು. ಸೋಂಕಿಗೊಳಗಾಗುತ್ತಿರುವವರಲ್ಲಿ ಶೇ.25 ರಷ್ಟು ಮಾತ್ರ ವೈದ್ಯರು ಬಾಕಿ ಶುಶ್ರೂಷಕಿಯರು, ಸಹಾಯಕ ಸಿಬ್ಬಂದಿ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಸೂಕ್ತ ಪರೀಕ್ಷೆ, ಕ್ವಾರಂಟೈನ್‌ ಇಲ್ಲ? : ಬಿಬಿಎಂಪಿ ವಾರ್ಡ್‌ಗಳಲ್ಲಿ ಆರೋಗ್ಯಾಧಿಕಾರಿಗಳು, ಆರೋಗ್ಯ ನಿರೀಕ್ಷಕರು, ಸಹಾಯಕ ವೈದ್ಯರು ಸೋಂಕಿತರ ಐಸೋಲೇಷನ್‌ ಮತ್ತು ಸಂಪರ್ಕಿತರ ಕ್ವಾರಂಟೈನ್‌ನಲ್ಲಿ ನಿರತರಾಗಿದ್ದಾರೆ. ಆದರೆ, ಇವರಿಗೆ ನಿಯಮದ ಅನ್ವಯ ನಿಗದಿತ ಅವಧಿಗೆ ಸೋಂಕು ಪರೀಕ್ಷೆ, ಕ್ವಾರಂಟೈನ್‌ ನಡೆಸುತ್ತಿಲ್ಲ ಎಂಬ ದೂರುಗಳೂ ಕೇಳಿ ಬಂದಿವೆ. ಕೆಲ ವಾರ್ಡ್‌ಗಳಲ್ಲಿ ಬಿಬಿಎಂಪಿ ಆರೋಗ್ಯ ಇಲಾಖೆ ಸಿಬ್ಬಂದಿ ಅನಾರೋಗ್ಯ ಹಿನ್ನೆಲೆ ರಜೆ ತೆರಳಿದ್ದು, ಕೋವಿಡ್ ಕೆಲಸಕ್ಕೆ ಸಿಬ್ಬಂದಿಯೇ ಇಲ್ಲದಂತಾಗಿದೆ. ಇರುವ ಸಿಬ್ಬಂದಿಗೆ ಸೋಂಕು ಪರೀಕ್ಷೆ ನಡೆಸಿದಾಗ ಒಂದು ವೇಳೆ ಸೋಂಕು ದೃಢಪಟ್ಟು ಅವರು ಐಸೋಲೇಷನ್‌ ಆಗುವ ಸಾಧ್ಯತೆ ಇದೆ ಎಂದು ಪರೀಕ್ಷೆ ಮಾಡಿಸುತ್ತಿಲ್ಲ. 2 ವಾರದ ಕೆಲಸ ಮಾಡಿದ

ಬಳಿಕ 1 ವಾರ ಕ್ವಾರಂಟೈನ್‌ ಇದ್ದು ಅದನ್ನು ನೀಡುತ್ತಿಲ್ಲ. ಇನ್ನು ರಜೆ ವಿಚಾರ ದೂರದ ಮಾತು ಎಂದು ಆರೋಗ್ಯ ನಿರೀಕ್ಷಕರೊಬ್ಬರು ಬೇಸರ ವ್ಯಕ್ತಪಡಿಸಿದರು. ಬಿಬಿಎಂಪಿ ಒಟ್ಟಾರೆ ಸಿಬ್ಬಂದಿ ಪೈಕಿ ಈಗಾಗಲೇ 100ಕ್ಕೂ ಹೆಚ್ಚು ಮಂದಿ ಸೋಂಕಿತರಾಗಿದ್ದು, ಇಬ್ಬರು ಸಾವಿಗೀಡಾಗಿದ್ದಾರೆ. ಸೂಕ್ತ ಮಾಹಿತಿ ಸಂಗ್ರಹ ವ್ಯವಸ್ಥೆ ಇಲ್ಲದೆ ಸಾಮಾನ್ಯ ರೋಗಿಗಳಂತೆ ಅವರೂ ಚಿಕಿತ್ಸೆ ಪಡೆದು ಗುಣಮುಖರಾಗುತ್ತಿದ್ದಾರೆಂದು ಮೂಲಗಳು ತಿಳಿಸಿವೆ.

Advertisement

ಸೋಂಕಿತರ ಚಿಕಿತ್ಸೆ, ಆರೈಕೆಗೆ ವೈದ್ಯರು ಸೇರಿದಂತೆ ಆಸ್ಪತ್ರೆ ಇತರೆ ಸಿಬ್ಬಂದಿ ಭಯ ಪಡುತ್ತಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲಿ ಶೇ.30 ವೈದ್ಯರು, ಶೇ.50ರಷ್ಟು ಶುಶ್ರೂಷಕರು, ಡಿ ಗ್ರೂಪ್‌ ಹಾಗೂ ಹೌಸ್‌ ಕೀಪಿಂಗ್‌ ಸಿಬ್ಬಂದಿ ಕೊರತೆ ಉಂಟಾಗಿದೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿದ್ದ 6,000 ಶುಶ್ರೂಷಕಿಯರಲ್ಲಿ ಶೇ.30 ರಷ್ಟು ಮಂದಿ ಕೋವಿಡ್ ಲಾಕ್‌ಡೌನ್‌ ಸಮಯದಲ್ಲಿ ತಮ್ಮ ಊರುಗಳಿಗೆ ತೆರಳಿದರು. ಶೇ.5 ರಷ್ಟು ಮಂದಿಗೆ ಕೋವಿಡ್ ಬಂದಿದೆ. ಇನ್ನು ಶೇ.10 ರಷ್ಟು ಮಂದಿ ಭಯದಿಂದ ಕೋವಿಡ್ ಕೇಂದ್ರದಲ್ಲಿ ಕೆಲಸ ಮಾಡುವುದಿಲ್ಲ ಎಂದಿದ್ದಾರೆ. ಡಿ ಗ್ರೂಪ್‌ ಮತ್ತು ಹೌಸ್‌ ಕೀಪಿಂಗ್‌ ಸಿಬ್ಬಂದಿಗೆ ದುಪ್ಪಟ್ಟು ಸಂಬಳ ನೀಡುತ್ತೇವೆ ಎಂದರೂ ಕೆಲಸಕ್ಕೆ ಬರುತ್ತಿಲ್ಲ. ಸಿಬ್ಬಂದಿ ಕೊರತೆ ಮತ್ತು ಲಾಕ್‌ಡೌನ್‌ ವೇಳೆ ಆರ್ಥಿಕ ಸಮಸ್ಯೆಯಿಂದ ಫಾನಾ ಅಡಿಯಲ್ಲಿ 384 ನೋಂದಣಿ ಆಸ್ಪತ್ರೆಗಳಲ್ಲಿ 58 ಆಸ್ಪತ್ರೆ ಬಂದ್‌ ಆಗಿವೆ ಎಂದು ಖಾಸಗಿ ಆಸ್ಪತ್ರೆ ಮತ್ತು ನರ್ಸಿಂಗ್‌ ಹೋಂಗಳ ಸಂಘ (ಫಾನಾ) ಅಧ್ಯಕ್ಷ ಡಾ.ರವೀಂದ್ರ ತಿಳಿಸಿದ್ದಾರೆ.

20ಕ್ಕೂ ಅಧಿಕ ಆ್ಯಂಬುಲೆನ್ಸ್‌ ಸಿಬ್ಬಂದಿಗೆ ಸೋಂಕು : ಆ್ಯಂಬುಲೆನ್ಸ್‌ ಸಕಾಲದಲ್ಲಿ ಬಾರದೆ ರೋಗಿಗಳು ಸಾವನ್ನಪ್ಪುತ್ತಿರುವ ಘಟನೆಗಳು ಬೆಳಕಿಗೆ ಬರುತ್ತಿರುವ ಬೆನ್ನಲ್ಲೇ ಆ್ಯಂಬುಲೆನ್ಸ್‌ ಚಾಲನಾ ಸಿಬ್ಬಂದಿಗೂ ಸೋಂಕು ತಗಲುತ್ತಿದ್ದು ಸಮಸ್ಯೆ ಮತ್ತಷ್ಟು ಉಲ½ಣಗೊಳ್ಳುವ ಆತಂಕ ಕಾಡುತ್ತಿದೆ. 20ಕ್ಕೂ ಅಧಿಕ ಆ್ಯಂಬುಲೆನ್ಸ್‌ ಚಾಲಕರು, ತುರ್ತು ವೈದ್ಯಕೀಯ ತಂತ್ರಜ್ಞರಲ್ಲಿ ಸೋಂಕು ಕಾಣಿಸಿಕೊಂಡಿದೆ. ಇವರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕದಲ್ಲಿದ್ದ 25ರಿಂದ 30 ಜನರನ್ನು ಕ್ವಾರಂಟೈನ್‌ ಮಾಡಲಾಗಿದೆ. ನಿತ್ಯ ಇವರು ರೋಗಿಗಳ ಜತೆ ನಿಕಟ ಒಡನಾಟ ಹೊಂದಿರುತ್ತಾರೆ. ಕರೆ ಬಂದ ತಕ್ಷಣ ಸೋಂಕಿತರನ್ನು ಮನೆಯಿಂದ ಆಸ್ಪತ್ರೆಗೆ ಸಾಗಿಸುತ್ತಾರೆ. ಈ ವೇಳೆ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಿದ್ದರೂ ಕೆಲವರಿಗೆ ವೈರಸ್‌ ತಗುಲಿದೆ. ಇನ್ನು ಬಹುತೇಕ ಆ್ಯಂಬುಲೆನ್ಸ್‌ ಚಾಲಕರು ಒಂದೇ ಕಡೆ ರೂಂ ಮಾಡಿಕೊಂಡಿದ್ದಾರೆ. ಹೀಗಾಗಿ ಇದು ಒಬ್ಬರಿಂದ ಸಹಜವಾಗಿ ಜತೆಗಿದ್ದವರಿಗೆ ಹರಡುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಸಂಪರ್ಕದಲ್ಲಿದ್ದವರನ್ನೂ ಕ್ವಾರಂಟೈನ್‌ ಮಾಡಲಾಗುತ್ತಿದೆ.

ಮೂಲಗಳ ಪ್ರಕಾರ ನಗರದಲ್ಲಿ ಜಿವಿಕೆ ಗ್ರೂಪ್‌ನ 35, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿರ್ವಹಣೆ ಮಾಡುವ 65, ಬಿಬಿಎಂಪಿಯ 400 ಸೇರಿ ಒಟ್ಟಾರೆ 500 ಆ್ಯಂಬುಲೆನ್ಸ್‌ಗಳು ಕಾರ್ಯಾಚರಣೆ ಮಾಡುತ್ತಿವೆ. ಇವೆಲ್ಲವೂ ವಿಶೇಷವಾಗಿ ಕೋವಿಡ್‌ -19 ಕಾರ್ಯಾಚರಣೆಗಾಗಿಯೇ ಮೀಸಲಿಡಲಾಗಿದೆ. ಇದರಲ್ಲಿ ನೂರಾರು ಸಿಬ್ಬಂದಿ ದಿನದಲ್ಲಿ 2 ಪಾಳಿಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸುರಕ್ಷತೆಗಾಗಿ ಪಿಪಿಇ ಕಿಟ್‌, ಮಾಸ್ಕ್ ಮತ್ತಿತರ ಅಗತ್ಯ ಉಪಕರಣ ನೀಡಲಾಗಿದೆ. ಆದರೆ, ಆರಂಭದಲ್ಲಿ (ಕೆಲವೆಡೆ ಈಗಲೂ!) ಅವುಗಳ ಗುಣಮಟ್ಟ ಅತ್ಯಂತ ಕಳಪೆಯಾಗಿತ್ತು. ಕೆಲವರು ಎಚ್‌ಐವಿ ಅಥವಾ ಹೆರಿಗೆ ಕಿಟ್‌ ಧರಿಸಿ, ಕರ್ತವ್ಯ ನಿರ್ವಹಿಸಿದ್ದಾರೆ. ಬಹುಶಃ ಅದರ ಪರಿಣಾಮ ತಡವಾಗಿ ಬೀರುತ್ತಿದೆ ಎಂದು ಹೆಸರು ಹೇಳಲಿಚ್ಛಿಸದ ಆ್ಯಂಬುಲೆನ್ಸ್‌ ಚಾಲಕರೊಬ್ಬರು ತಿಳಿಸುತ್ತಾರೆ.

“ಕೆಲವರಿಗೆ ಸೋಂಕು ಬಂದರೂ ಅದನ್ನು ಬಹಿರಂಗಪಡಿಸುತ್ತಿಲ್ಲ. ಖಾಸಗಿ ಆ್ಯಂಬುಲೆನ್ಸ್‌ ಚಾಲನಾ ಸಿಬ್ಬಂದಿಯಲ್ಲಿಯೂ ಸೋಂಕು ಇರುವ ಸ್ಪಷ್ಟ ಮಾಹಿತಿ ಇರುವುದಿಲ್ಲ. ಆತಂಕದಲ್ಲಿ ಕಾರ್ಯನಿರ್ವಹಿಸುವಂತಾಗಿದೆ’ ಎಂದು ಹೆಸರು ಹೇಳಲಿಚ್ಛಿಸದ ಆ್ಯಂಬುಲೆನ್ಸ್‌ ಚಾಲಕರೊಬ್ಬರು ಅವಲತ್ತುಕೊಳ್ಳುತ್ತಾರೆ. ಸಮಸ್ಯೆ ಇಲ್ಲ; ಜಿವಿಕೆ: “ಜಿವಿಕೆ ಸಂಸ್ಥೆಯಿಂದ ಕಾರ್ಯನಿರ್ವಹಿಸುತ್ತಿರುವ ಆ್ಯಂಬುಲೆನ್ಸ್‌ಗಳು ಸುಮಾರು 35 ಇದ್ದು, ನಿರ್ವಹಣೆಗಾಗಿ 140 ಜನ ಇದ್ದಾರೆ. ಇದರಲ್ಲಿ 20 ಸಿಬ್ಬಂದಿಗೆ ಸೋಂಕು ತಗುಲಿದ್ದು, 15 ಜನ ಈಗಾಗಲೇ ಗುಣಮುಖರಾಗಿದ್ದಾರೆ. ಪ್ರಾಥಮಿಕ ಸಂಪರ್ಕದಲ್ಲಿದ್ದ 16 ಜನ ಸಿಬ್ಬಂದಿಯನ್ನು ತರಬೇತಿ ಕೇಂದ್ರದಲ್ಲಿ ಕ್ವಾರಂಟೈನ್‌ ಮಾಡಿ, ಸೌಕರ್ಯ ಒದಗಿಸಲಾಗಿದೆ. ಇನ್ನು 65 ಆ್ಯಂಬುಲೆನ್ಸ್‌ಗಳನ್ನು ಖಾಸಗಿಯಿಂದ ಬಾಡಿಗೆ ಪಡೆದಿದ್ದು, ಅದರಲ್ಲಿ 130 ಜನ ಕಾರ್ಯನಿರ್ವಹಿಸುತ್ತಿದ್ದಾರೆ. ಅವುಗಳ ನಿರ್ವಹಣೆಯನ್ನೂ ಸದ್ಯಕ್ಕೆ ನಾವೇ ಮಾಡುತ್ತಿದ್ದೇವೆ. ಇದರ ಜತೆಗೆ ಬಿಬಿಎಂಪಿಯೂ 400 ಆ್ಯಂಬುಲೆನ್ಸ್‌ ನಿಯೋಜಿಸಿದೆ. ಅಲ್ಲದೆ, ಮೃತರ ಪ್ರಮಾಣ ತುಂಬಾ ಕಡಿಮೆ ಇರುವುದರಿಂದ ಸಮಸ್ಯೆ ಆಗದು’ ಎಂದು ಜಿವಿಕೆ ಇಎಂಆರ್‌ಐ ರಾಜ್ಯ ಮುಖ್ಯಸ್ಥ ಆರ್‌.ಜಿ.ಹನುಮಂತ “ಉದಯವಾಣಿ’ಗೆ ಮಾಹಿತಿ ನೀಡಿದರು. “ಸೋಂಕು ದೃಢಪಟ್ಟ ನಂತರ ಗುಣಮುಖರಾದವರು ಪುನಃ ಸೇವೆಗೆ ಹಾಜರಾಗಿದ್ದಾರೆ. ಅಷ್ಟರ ಮಟ್ಟಿಗೆ ಆತ್ಮಸ್ಥೈರ್ಯ ಆ್ಯಂಬುಲೆನ್ಸ್‌ ಸಿಬ್ಬಂದಿಯಲ್ಲಿದೆ. ಇದಕ್ಕೆ ಪೂರಕವಾಗಿ ಸಂಸ್ಥೆಯೂ ಅವರಿಗೆ ನೈತಿಕ ಬಲದ ಜತೆಗೆ ಅಗತ್ಯ ಸೌಕರ್ಯ ನೀಡುತ್ತಿದೆ’ ಎಂದೂ ಹೇಳಿದರು.

 

 ವಿಜಯಕುಮಾರ ಚಂದರಗಿ/ ಜಯಪ್ರಕಾಶ್‌ ಬಿರಾದಾರ್‌

Advertisement

Udayavani is now on Telegram. Click here to join our channel and stay updated with the latest news.

Next