ಬಳ್ಳಾರಿ: ಗಣಿ ನಾಡು ಬಳ್ಳಾರಿ ಜಿಲ್ಲೆಯಲ್ಲಿ ಕೋವಿಡ್ ಸೋಂಕನ್ನು ನಿಯಂತ್ರಿಸುವಲ್ಲಿ ಪೌರ ಕಾರ್ಮಿಕರು, ಪೊಲೀಸ್, ಆರೋಗ್ಯ ಇಲಾಖೆ ಹಗಲಿರುಳೆನ್ನದೇ ಕರ್ತವ್ಯನಿರ್ವಹಿಸಿದ್ದು ಮೂರು ಇಲಾಖೆಗಳಲ್ಲಿನ 18 ಜನ ಕೋವಿಡ್ ವಾರಿಯರ್ಸ್ ಮೃತಪಟ್ಟಿದ್ದಾರೆ. ಕೆಲವರಿಗೆ ಇನ್ನೂ ಪರಿಹಾರ ದೊರಕಿಲ್ಲ. ಜಿಲ್ಲೆಯ ವಿವಿಧ ಠಾಣೆಗಳಲ್ಲಿನ 8 ಜನ ಪೊಲೀಸರು, 8 ಮಂದಿ ಆರೋಗ್ಯ ಇಲಾಖೆ ಸಿಬ್ಬಂದಿ, ಇಬ್ಬರು ಪೌರ ಕಾರ್ಮಿಕರು ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ.
8 ಪೊಲೀಸರ ಬಲಿ: ಕೋವಿಡ್ ವೈರಸ್ ಹರಡದಂತೆ ತಡೆಯಲು ಜಾರಿಗೊಳಿಸಿದ್ದ ಲಾಕ್‌ಡೌನ್ ಅವಧಿಯಲ್ಲಿ ಜನರನ್ನು ನಿಯಂತ್ರಿಸಲು ಪೊಲೀಸರು ಹಗಲಿರುಳು ಶ್ರಮಿಸಿದರು. ಬಿರುಬಿಸಿಲನ್ನು ಲೆಕ್ಕಿಸದೆ ಇಡೀ ದಿನ ಕೋವಿಡ್ ಕರ್ತವ್ಯದಲ್ಲೇ ನಿರತರಾದರು. ಹೀಗೆ ವಿವಿಧೆಡೆ ಕರ್ತವ್ಯ ನಿರ್ವಹಿಸಿದ್ದ ಬಳ್ಳಾರಿಯ ಡಿಎಆರ್ ಪೇದೆ, ಗಾದಿಗನೂರು ಪೊಲೀಸ್ ಠಾಣೆಯ ಪೇದೆ, ಹೊಸಪೇಟೆ ಗ್ರಾಮೀಣ ಠಾಣೆಯ ಪೇದೆ, ಹಿರೇಹಡಗಲಿ ಠಾಣೆಯ ಪೇದೆ, ಹಗರಿಬೊಮ್ಮನ ಹಳ್ಳಿ ಠಾಣೆ ಪೇದೆ, ಹೊಸಪೇಟೆ ಸಂಚಾರಿ ಠಾಣೆ ಎಎಸ್‌ಐ, ಬಳ್ಳಾರಿ ಬ್ರೂಸ್‌ಪೇಟೆ ಪೊಲೀಸ್ ಠಾಣೆ ಪೇದೆ, ಡಿಎಆರ್‌ನ ಎಸ್‌ಐ ಸೇರಿ ಒಟ್ಟು 8 ಜನರಿಗೆ ಸೋಂಕು ಪತ್ತೆಯಾಗಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.
ಆರೋಗ್ಯ ಇಲಾಖೆಯಲ್ಲೂ 8 ಸಾವು: ಕೋವಿಡ್ ಸೋಂಕು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದ ಆರೋಗ್ಯ ಇಲಾಖೆಯಲ್ಲೂ 8 ಜನ ವಾರಿಯರ್ಗಳು ಮೃತಪಟ್ಟಿದ್ದಾರೆ. ಮನೆಮನೆಗೆ ಸಮೀಕ್ಷಾ ಕಾರ್ಯ ನಡೆಸುವುದರ ಜತೆಗೆ ವೃದ್ಧರು, ಗರ್ಭಿಣಿಯರು, ವಿವಿಧ ಕಾಯಿಲೆ ಗಳುಳ್ಳವರನ್ನು ಗುರುತಿಸಿ ಕೋವಿಡ್ ತಪಾಸಣೆಗೆ ಒಳಪಡಿಸುವುದರ ಮೂಲಕ ಸೋಂಕನ್ನು ಪತ್ತೆಹಚ್ಚುವಲ್ಲಿ ಫ್ರಂಟ್‌ಲೈನ್‌ನಲ್ಲಿ ಕಾರ್ಯನಿರ್ವಹಿಸಿದ್ದ 4 ಆಶಾ ಕಾರ್ಯಕರ್ತೆಯರಿಗೂ ಸೋಂಕು ಆವರಿಸಿದ್ದು, ಆಸ್ಪತ್ರೆಗಳಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಕೋವಿಡ್ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಒಬ್ಬ ಸ್ಟಾಫ್ ನರ್ಸ್, ಒಬ್ಬ ಮನೋರೋಗ ತಜ್ಞ, ಆರೋಗ್ಯ ಕಾರ್ಯಕರ್ತೆ, ಒಬ್ಬ ಆರೋಗ್ಯ ನಿರೀಕ್ಷಕರು ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ| ಎಚ್.ಎಲ್. ಜನಾರ್ಧನ ತಿಳಿಸಿದ್ದಾರೆ.
ಇಬ್ಬರು ಪೌರ ಕಾರ್ಮಿಕರ ಸಾವು: ಕೋವಿಡ್ ಸಂದರ್ಭದಲ್ಲಿ ಎಲ್ಲೆಡೆ ಸ್ವಚ್ಛತೆ ಕಾಪಾಡುವಲ್ಲಿ ನಿರತವಾಗಿದ್ದ ಹರಪನಹಳ್ಳಿಯ ಪುರಸಭೆಯಲ್ಲಿ ಪೌರ ಕಾರ್ಮಿಕರಾಗಿ ಕರ್ತವ್ಯ ನಿರ್ವಹಿಸಿದ್ದ ಬಂಡಿ ಹನುಮಂತಪ್ಪ, ಬಳ್ಳಾರಿ ಮಹಾನಗರ ಪಾಲಿಕೆಯ ರಾಮಾಂಜಿನಮ್ಮ ಅವರು ಸೋಂಕಿನಿಂದ ಮೃತಪಟ್ಟಿದ್ದಾರೆ. ಜಿಲ್ಲೆಯಾದ್ಯಂತ ಒಟ್ಟು 18 ಜನರು ಮೃತಪಟ್ಟಿದ್ದಾರೆ.
ಬಹುತೇಕರಿಗೆ ಲಭಿಸಿಲ್ಲ ಪರಿಹಾರ: ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದ 18 ಕೋವಿಡ್ ವಾರಿಯರ್ಸ್ ಗಳಲ್ಲಿ ಬಹುತೇಕರಿಗೆ ಪರಿಹಾರ ಲಭಿಸಬೇಕಾಗಿದೆ. ಪೊಲೀಸ್ ಇಲಾಖೆಯಲ್ಲಿನ 8 ಪೊಲೀಸರಿಗೆ ಕೇಂದ್ರ ಸರ್ಕಾರ ಘೋಷಣೆ ಮಾಡಿದ್ದ ತಲಾ 30 ಲಕ್ಷ ರೂ. ಪರಿಹಾರ ದೊರಕಿದೆ ಎನ್ನಲಾಗುತ್ತಿದೆ. ಇಬ್ಬರು ಪೌರ ಕಾರ್ಮಿಕರಲ್ಲಿ ಹರಪನಹಳ್ಳಿಯ ಬಂಡಿ ಹನುಮಂತಪ್ಪರಿಗೆ 30 ಲಕ್ಷ ರೂ.ಗಳ ಪರಿಹಾರ ನೀಡಲಾಗಿದೆ. ಇನ್ನುಳಿದ ಬಳ್ಳಾರಿ ಮಹಾನಗರ ಪಾಲಿಕೆಯ ರಾಮಾಂಜಿನಮ್ಮಗೆ ಶೀಘ್ರದಲ್ಲೇ 30 ಲಕ್ಷ ರೂ.ಗಳ ಪರಿಹಾರ ಲಭಿಸಲಿದೆ ಎಂದು ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಮೇಶ್‌ತಿಳಿಸಿದ್ದಾರೆ.
ಆರೋಗ್ಯ ಇಲಾಖೆಯ 8 ಜನ ವಾರಿಯರ್ಸ್ ಗಳಿಗೆ 50 ಲಕ್ಷ ರೂ. ಪರಿಹಾರ ಕೊಡಿಸುವಲ್ಲಿ ಅಗತ್ಯ ದಾಖಲೆಗಳನ್ನು ಸಲ್ಲಿಸಲಾಗಿದೆ. ಇನ್ನು ಯಾರಿಗೂ ವಿತರಣೆಯಾಗಿಲ್ಲ. ಶೀಘ್ರದಲ್ಲೇ ವಿತರಣೆಯಾಗಲಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ| ಎಚ್.ಎಲ್. ಜನಾರ್ದನ್ ತಿಳಿಸಿದ್ದಾರೆ.
ಆರೋಗ್ಯ ಇಲಾಖೆಯಲ್ಲಿ 8 ಜನ ಸಿಬ್ಬಂದಿ ಕೋವಿಡ್ ಸೋಂಕಿಗೆ ಮೃತಪಟ್ಟಿದ್ದಾರೆ. ಈ 8 ಜನರಿಗೂ ಕೇಂದ್ರ ಸರ್ಕಾರ ಘೋಷಿಸಿದ್ದ ಕೋವಿಡ್ ಪರಿಹಾರ ಲಭಿಸಲಿದೆ. ಅಗತ್ಯ ದಾಖಲೆಗಳನ್ನು ಕಳುಹಿಸಲಾಗಿದ್ದು, ಶೀಘ್ರದಲ್ಲೇ ಪರಿಹಾರ ಲಭಿಸಲಿದೆ.
-ಡಾ| ಎಚ್.ಎಲ್.ಜನಾರ್ದನ್, ಜಿಲ್ಲಾ ಆರೋಗ್ಯಾಧಿಕಾರಿ, ಆರೋಗ್ಯ ಇಲಾಖೆ, ಬಳ್ಳಾರಿ
-ವೆಂಕೋಬಿ ಸಂಗನಕಲ್ಲು