ಚಿಕ್ಕಮಗಳೂರು: ಸಮಾಜದ ಹಿತಕ್ಕಾಗಿ ದುಡಿಯುವ ಕೋವಿಡ್ ಯೋಧರ ಮೇಲೆ ಹಲ್ಲೆ ಮಾಡುವ ಚಾಳಿ ಚಿಕ್ಕಮಗಳೂರಿಗೂ ಹಬ್ಬಿದೆ. ಇಲ್ಲಿನ ಉಪ್ಪಳ್ಳಿ ಮಸೀದಿ ಬಳಿ ಪೌರ ಕಾರ್ಮಿಕರ ಮೇಲೆ ಹಲ್ಲೆ ಮಾಡಲಾಗಿದೆ.
ಚಿಕ್ಕಮಗಳೂರು ನಗರದ ಉಪ್ಪಳ್ಳಿ ಮಸೀದಿ ಬಳಿ ಪೌರಕಾರ್ಮಿಕರು ಕಸ ಸಂಗ್ರಹಿಸುತ್ತಿದ್ದರು. ಆ ವೇಳೆ ಕಿಡಿಗೇಡಿಗಳು ಏಕಾಏಕಿ ಹಲ್ಲೆನಡೆಸಿದ್ದಾರೆ.
ಪೌರ ಕಾರ್ಮಿಕರು ಕೋವಿಡ್-19 ಸೋಂಕು ಜಾಗೃತಿ ಹಾಡು ಹಾಕಿಕೊಂಡು ಕಸ ಸಂಗ್ರಹಿಸುತ್ತಿದ್ದರು.
ಪೌರಕಾರ್ಮಿಕರಾದ ಮಂಜುನಾಥ್ ಅವರಿಗೆ ಹಲ್ಲೆ ಮಾಡಲಾಗಿದ್ದು, ಮಹಿಳಾ ಕಾರ್ಮಿಕ ಗೀತಾ ಎನ್ನುವವರಿಗೆ ಬೆದರಿಕೆ ಹಾಕಲಾಗಿದೆ. ತೀವ್ರ ಹಲ್ಲೆಗೊಳಗಾದ ಪೌರಕಾರ್ಮಿಕ ಮಂಜುನಾಥ್ ರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಈ ವೇಳೆ ಹಲ್ಲೆ ಮಾಡಿದ ವ್ಯಕ್ತಿಗೆ ಹಲವು ಪೌರಕಾರ್ಮಿಕರಿಂದಲೂ ಮರು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಆರೋಪಿ ಸ್ಥಳದಿಂದ ನಾಪತ್ತೆಯಾಗಿದ್ದು ಚಿಕ್ಕಮಗಳೂರು ನಗರದ ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.