Advertisement
ಗುತ್ತಿಗೆ ವೈದ್ಯಕೀಯ ಸಿಬಂದಿ: 26 ಸಾವುಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗುತ್ತಿಗೆ, ಹೊರ ಗುತ್ತಿಗೆ ನೌಕರರು ಈ ಹೋರಾಟ ದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. 26 ವೈದ್ಯಕೀಯ ಸಿಬಂದಿ ಜೀವ ಕಳೆದುಕೊಂಡಿದ್ದಾರೆ. ಆದರೆ ಇದುವರೆಗೂ ಮೃತರ ಕುಟುಂಬಗಳಿಗೆ ಪರಿಹಾರ ಒದಗಿಸಿಲ್ಲ ಎಂದು ಗುತ್ತಿಗೆ, ಹೊರ ಗುತ್ತಿಗೆ ವೈದ್ಯಕೀಯ ಸಿಬಂದಿಯ ಸಂಘಟನೆ ತಿಳಿಸಿದೆ.
ಕೊರೊನಾ ಕರ್ತವ್ಯ ಸಂದರ್ಭ ಕಳೆದ ವರ್ಷ 12, ಈ ವರ್ಷ 7 ಮಂದಿ ಆಶಾ ಕಾರ್ಯಕರ್ತೆಯರು ಜೀವ ಕಳೆದುಕೊಂಡಿದ್ದಾರೆ. ಅವರಲ್ಲಿ ಕೇವಲ ಒಬ್ಬರಿಗೆ ಮಾತ್ರ ಪರಿಹಾರ ದೊರೆತಿದ್ದು, ಉಳಿದವರ ಕುಟುಂಬಕ್ಕೆ ಪರಿಹಾರ ಇನ್ನೂ ಮರಿಚೀಕೆಯಾಗಿದೆ. ತಾಂತ್ರಿಕ ಕಾರಣಗಳಿಂದ ಪರಿಹಾರ ವಿಳಂಬವಾಗುತ್ತಿದ್ದು, ನಿಧನ ಹೊಂದಿದವರ ಕುಟುಂಬಕ್ಕೆ ಪರಿಹಾರ ಗಗನಕುಸುಮವಾಗಿದೆ. ಪಂಚಾಯತ್ ಇಲಾಖೆ ಸಿಬಂದಿ: 63 ಸಾವು
ಕಳೆದ ವರ್ಷ 23, ಈ ವರ್ಷ 40 ಮಂದಿ ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಇಲಾಖೆಯ ಸಿಬಂದಿ ಮೃತಪಟ್ಟಿದ್ದಾರೆ. ಇದುವರೆಗೆ ಒಬ್ಬರಿಗೆ ಮಾತ್ರ ಪರಿಹಾರ ದೊರೆತಿದೆ. ಪಂಚಾಯತ್ ಸಿಬಂದಿ ಸರಕಾರಿ ನೌಕರರಾಗಿದ್ದು, ಸರಕಾರದಿಂದ ಪರಿಹಾರ ದೊರೆಯುತ್ತದೆ. ವಿಮೆ ಪರಿಹಾರದ ಬಗ್ಗೆ ಇಲಾಖೆ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ.
Related Articles
ಕೊರೊನಾ ಸಂದರ್ಭದಲ್ಲಿ ಕೃಷಿ ಇಲಾಖೆಯನ್ನು ಅಗತ್ಯ ಸೇವೆ ವ್ಯಾಪ್ತಿಗೆ ಒಳಪಡಿಸಲಾಗಿದೆ. ಹೀಗಾಗಿ ಲಾಕ್‌ಡೌನ್ ಸಂದರ್ಭದಲ್ಲಿಯೂ ಕೃಷಿ ಇಲಾಖೆಯ ಸಿಬಂದಿ ಗ್ರಾಮೀಣ ಭಾಗದಲ್ಲಿ ರೈತರೊಂದಿಗೆ ನಿರಂತರ ಸಂಪರ್ಕ ಇರಿಸಿಕೊಂಡಿದ್ದಾರೆ. ಹೀಗಾಗಿ ಇವರೂ ಕೊರೊನಾ ಬಾಧಿತರಾಗಿದ್ದು, ಕರ್ತವ್ಯ ಸಂದರ್ಭದಲ್ಲಿ ಸೋಂಕಿನಿಂದ 9 ಜನ ಸಾವಿಗೀಡಾಗಿದ್ದಾರೆ. ಆದರೆ ಪರಿಹಾರ ಸಿಕ್ಕಿಲ್ಲ.
Advertisement
ವೈದ್ಯರು: 50 ಸಾವುಕೊರೊನಾ ಸೋಂಕಿನಿಂದ ರಾಜ್ಯದಲ್ಲಿ ಕಳೆದ ವರ್ಷ 40 ಜನ ವೈದ್ಯರು ಜೀವ ತೆತ್ತಿದ್ದಾರೆ. ಈ ವರ್ಷ 10 ಜನ ವೈದ್ಯರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಅವರಲ್ಲಿ ಮೂವರು ಸರಕಾರಿ ವೈದ್ಯರು. ವೈದ್ಯರನ್ನು ಸರಕಾರ ಕೊರೊನಾ ಸೇನಾನಿಗಳು ಎಂದು ಆರಂಭದಿಂದಲೂ ಪರಿಗಣಿಸಿದೆ. ವೈದ್ಯರು ನಿಧನ ಹೊಂದಿದರೆ ಅವರ ಕುಟುಂಬಕ್ಕೆ ಕೇಂದ್ರ ಸರಕಾರದಿಂದ 50 ಲಕ್ಷ ರೂ. ಪರಿಹಾರ ನೀಡಲಾಗುತ್ತಿದೆ. ರಾಜ್ಯದಲ್ಲಿ ಮೃತಪಟ್ಟ ಬಹುತೇಕ ವೈದ್ಯರ ಕುಟುಂಬಕ್ಕೆ ಸೂಕ್ತ ಪರಿಹಾರ ದೊರಕಿಸಲಾಗಿದೆ. ಪೋಲೀಸರು: 146 ಸಾವು
ಪೋಲೀಸರು ಮುಂಚೂಣಿ ಯೋಧರಾಗಿದ್ದು, ಎರಡು ವರ್ಷಗಳಲ್ಲಿ 146 ಮಂದಿ ಮೃತಪಟ್ಟಿದ್ದಾರೆ. ಕಳೆದ ವರ್ಷ 103, ಈ ವರ್ಷ 43 ಜನ ಪೋಲೀಸರು ಜೀವ ತೆತ್ತಿದ್ದಾರೆ. ಗೃಹ ಸಚಿವ ಬಸವರಾಜ ಬೊಮ್ಮಾಯಿ ಮತ್ತು ಡಿಜಿಪಿ ಪ್ರವೀಣ್ ಸೂದ್ ಮುತುವರ್ಜಿ ವಹಿಸಿದ್ದು, ಮೃತ ಪೊಲೀಸರ ಕುಟುಂಬಕ್ಕೆ 30 ಲಕ್ಷ ರೂ. ವಿಮೆ ಪರಿಹಾರ ಒದಗಿಸುವ ಕೆಲಸ ಮಾಡಲಾಗುತ್ತಿದೆ. ಅಂಗನವಾಡಿ ಕಾರ್ಯಕರ್ತೆಯರು: 44 ಸಾವು
ಕಳೆದ ವರ್ಷ 25, ಈ ವರ್ಷ 19 ಅಂಗನವಾಡಿ ಕಾರ್ಯಕರ್ತೆ ಯರು ಸಾವಿಗೀಡಾಗಿದ್ದಾರೆ. ಇದುವರೆಗೆ ಐವರಿಗೆ ಮಾತ್ರ ಪರಿಹಾರ ನೀಡಲಾಗಿದೆ. 15 ಜನರಿಗೆ ಪರಿಹಾರ ನೀಡಲು ತಾಂತ್ರಿಕ ಕಾರಣದಿಂದ ವಿಳಂಬವಾಗಿದ್ದು, ಅವರಿಗೂ ಪರಿಹಾರ ನೀಡಲು ಇಲಾಖೆ ನಿರ್ಧರಿಸಿದೆ. ಈ ವರ್ಷ ನಿಧನ ಹೊಂದಿದ ಕಾರ್ಯಕರ್ತೆಯರ ಬಗ್ಗೆ ಇಲಾಖೆ ಅಧಿಕೃತ ಮಾಹಿತಿ ಕಲೆ ಹಾಕುತ್ತಿದೆ. ಶಿಕ್ಷಕರು: 300 ಸಾವು
ಸರಕಾರ ಶಿಕ್ಷಕರನ್ನು ಕೊರೊನಾ ಕರ್ತವ್ಯಕ್ಕೆ ನಿಯೋಜಿಸುತ್ತಿದೆ. ಸೋಂಕಿನಿಂದ 300ಕ್ಕೂ ಹೆಚ್ಚು ಶಿಕ್ಷಕರು ನಿಧನ ಹೊಂದಿದ್ದಾರೆ. ಅಧಿಕೃತ ಮಾಹಿತಿ ನೀಡುವಂತೆ ಶಿಕ್ಷಣ ಇಲಾಖೆ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ. ಸರಕಾರ ಶಿಕ್ಷಕರನ್ನು ಇದುವರೆಗೆ ಮುಂಚೂಣಿ ಯೋಧರೆಂದು ಪರಿಗಣಿಸಿರಲಿಲ್ಲ. ಇದರಿಂದ ನಿಧನ ಹೊಂದಿದ ಶಿಕ್ಷಕರ ಕುಟುಂಬಕ್ಕೆ ಪರಿಹಾರ ಮರೀಚಿಕೆಯಾಗಿದೆ. ಕಂದಾಯ ಇಲಾಖೆ: 43 ಸಾವು
ಕಂದಾಯ ಇಲಾಖೆ ಕೊರೊನಾ ನಿಯಂತ್ರಣದಲ್ಲಿ ಮಾತೃ ಇಲಾಖೆಯಾಗಿ ಕಾರ್ಯ ನಿರ್ವಹಿಸುತ್ತಿದೆ. ಗ್ರಾಮೀಣ ಮಟ್ಟದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು ಜನರೊಂದಿಗೆ ನೇರವಾಗಿ ಬೆರೆಯುತ್ತಿದ್ದಾರೆ. ಈ ವರೆಗೆ 43 ಮಂದಿ ಕೊರೊನಾದಿಂದ ಜೀವ ಕಳೆದುಕೊಂಡಿದ್ದಾರೆ. ಆದರೆ ಇದುವರೆಗೆ ಯಾರಿಗೂ ಸರಕಾರದಿಂದ ಪರಿಹಾರ ದೊರೆತಿಲ್ಲ. – ಶಂಕರ ಪಾಗೋಜಿ