Advertisement
ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ಹಗಲಿರುಳು ಎನ್ನದೇ ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಪೌರಕಾರ್ಮಿಕರು, ವೈದ್ಯರು, ಆರೋಗ್ಯ, ಪೊಲೀಸ್, ಸೆಸ್‌ಕ್ ಕೆ.ಎಸ್.ಆರ್.ಟಿ.ಸಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಕೋವಿಡ್ ಪರಿಸ್ಥಿತಿಯನ್ನು ಲೆಕ್ಕಿಸದೇ ವಿವಿಧ ಹಂತಗಳಲ್ಲಿ ಕೆಲಸದಲ್ಲಿ ತೋಡಗಿರುವ ಜಿಲ್ಲೆಯ 109 ಅಧಿಕಾರಿ, ಸಿಬ್ಬಂದಿ ಕೋವಿಡ್ ಸೋಂಕಿಗೆ ಒಳಗಾಗಿದ್ದಾರೆ. ಇವರಲ್ಲಿ ಆರೋಗ್ಯ ಇಲಾಖೆಯ 34 ಮಂದಿ ಸೇರಿದ್ದಾರೆ. ಈ ಪೈಕಿ ಐವರು ವೈದ್ಯರಾಗಿದ್ದು ಇವರಿಗೂ ಸಹ ಸೋಂಕು ತಗುಲಿತ್ತು. ಪೊಲೀಸ್ ಇಲಾಖೆಯಲ್ಲಿ ನಾಲ್ವರು ಇನ್‌ಸ್ಪೆಕ್ಟರ್, ಸಬ್‌ಇನ್‌ಸ್ಪೆಕ್ಟರ್ ಸೇರಿದಂತೆ ಇತರೆ 26 ಮಂದಿ, ಕೆ.ಎಸ್.ಆರ್.ಟಿ.ಸಿಯ 24, ವಿದ್ಯುತ್ ಸರಬರಾಜು ನಿಗಮದ 5, ಕಂದಾಯ, ಶಿಕ್ಷಣ ಇಲಾಖೆ, ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿ, ಸಿಬ್ಬಂದಿ, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಪೌರಕಾರ್ಮಿಕರು, ಬ್ಯಾಂಕುಗಳ ನೌಕರರು ಸೇರಿ 20 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು.
Related Articles
Advertisement
ಪ್ರಸ್ತುತ 20 ಮಂದಿ ಕೋವಿಡ್ ಯೋಧರು, ಆಸ್ಪತ್ರೆ, ಕೋವಿಡ್ ಕೇರ್ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋವಿಡ್ ವಾರಿಯಾರ್ಸ್ ಗಳು ಸಹ ಕರ್ತವ್ಯ ಸಂದರ್ಭದಲ್ಲಿ ಸೋಂಕಿಗೆ ಒಳಗಾಗುತ್ತಿರುವುದನ್ನು ಮನಗಂಡ ಜಿಲ್ಲಾಡಳಿತ ಕೋವಿಡ್ ಯೋಧರ ಆತ್ಮಸ್ಥೈರ್ಯ ಹೆಚ್ಚಿಸುವ ಮಹತ್ತರ ಉದ್ದೇಶದೊಂದಿಗೆ ಕೋವಿಡ್ ಕೇರ್ ಕೇಂದ್ರಗಳಲ್ಲಿ ಪುರುಷ ಹಾಗೂ ಮಹಿಳಾ ಕೋವಿಡ್ ವಾರಿಯರ್‌ಸ್ಗಳಿಗಾಗಿಯೇ ಪ್ರತ್ಯೇಕ ವಾರ್ಡ್‌ಗಳನ್ನು ಮೀಸಲಿರಿಸಿದೆ. ಈ ಮೂಲಕ ಕೊರೊನಾ ವಿರುದ್ದದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಅಧಿಕಾರಿ, ಸೇವಾ ಸಿಬ್ಬಂದಿ ಜತೆ ಇದ್ದೇವೆ ಎಂಬ ವಿಶ್ವಾಸ ಮೂಡಿಸಿದೆ.