Advertisement

ಚಾಮರಾಜ ನಗರ: ಸೋಂಕಿಗೆ ಕೋವಿಡ್ ಯೋಧ ಬಲಿ ; ASI ಬಲಿ ತೆಗೆದುಕೊಂಡ ಮಹಾಮಾರಿ

09:04 PM Aug 13, 2020 | Hari Prasad |

ಚಾಮರಾಜನಗರ: ಜಿಲ್ಲೆಯಲ್ಲಿ ಕೋವಿಡ್ 19 ಸೋಂಕಿಗೆ ಸಹಾಯಕ ಸಬ್ ಇನ್‌ಸ್ಪೆಕ್ಟೆರ್ ಒಬ್ಬರು ಬಲಿಯಾಗಿದ್ದಾರೆ.

Advertisement

ಈ ಮೂಲಕ ಜಿಲ್ಲೆಯಲ್ಲಿ ಕೋವಿಡ್ ಯೋಧರೊಬ್ಬರು ಮೃತಪಟ್ಟ ಮೊದಲ ಪ್ರಕರಣ ಇದಾಗಿದೆ.

ತಾಲೂಕಿನ ಕುದೇರು ಠಾಣೆಯ ಸಹಾಯಕ ಸಬ್ ಇನ್‌ಸ್ಪೆಕ್ಟರ್ ಕೆ.ಜಿ. ಪರಮೇಶ್ವರಪ್ಪ (55) ಮೃತಪಟ್ಟ ಕೋವಿಡ್ ಯೋಧ.

ಇವರಲ್ಲಿ ಕೋವಿಡ್ 19 ಸೋಂಕು ದೃಢಪಟ್ಟಿದ್ದ ಕಾರಣ ಜು.30ರಂದು ನಗರದ ಕೋವಿಡ್ ಆಸ್ಪತ್ರೆಗೆ ದಾಖಲಾಗಿ, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ದುರದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೇ ಪರಮೇಶ್ವರಪ್ಪರ ಅವರು ಗುರುವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ.

ಮರಣೋತ್ತರ ಕೋವಿಡ್ ಪರೀಕ್ಷೆ ಮಾಡಿದಾಗಲೂ ಅವರಲ್ಲಿ ಕೋವಿಡ್ ಸೋಂಕು ಪಾಸಿಟಿವ್ ಇರುವುದು ಫಲಿತಾಂಶದಲ್ಲಿ ಕಂಡುಬಂದಿದೆ. ಆದರೆ ಜಿಲ್ಲಾಡಳಿತದ ಪ್ರಕಟಣೆಯಲ್ಲಿ ಈ ಪ್ರಕರಣವನ್ನು ಕೋವಿಡೇತರ ಕಾರಣದಿಂದ ಉಂಟಾಗಿರುವ ಸಾವು ಎಂದು ನಮೂದಿಸಲಾಗಿದೆ.

Advertisement


ಮೃತರು ಪತ್ನಿ ಹಾಗೂ ಮೂವರು ಪುತ್ರರನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ಮೃತರ ಸ್ವಗ್ರಾಮ ಗುಂಡ್ಲುಪೇಟೆ ತಾಲೂಕಿನ ಕುಣಗಹಳ್ಳಿ ತೋಟದಲ್ಲಿ ಕೋವಿಡ್ ಶಿಷ್ಟಾಚಾರದ ಪ್ರಕಾರ ಗುರುವಾರ ಸಂಜೆ ನಡೆಸಲಾಯಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಸಾರಾ ಥಾಮಸ್, ಎಎಸ್ಪಿ ಅನಿತಾ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು.

ಇದಲ್ಲದೇ, ಹನೂರು ತಾಲೂಕಿನ ಎಲ್ಲೆಮಾಳ ಗ್ರಾಮದ 64 ವರ್ಷದ ಮಹಿಳೆ ಕಿಡ್ನಿ ತೊಂದರೆಯಿಂದ ಬುಧವಾರ ಮೃತಪಟ್ಟಿದ್ದಾರೆ. ನಿಧನಾನಂತರ ಆ ಮಹಿಳೆಯಲ್ಲಿ ಕೋವಿಡ್ 19 ಸೋಂಕು ದೃಢಪಟ್ಟಿದೆ.

ಇದನ್ನೂ ಓದಿ: COVID-19 ಕಳವಳ- ಆ.13: 6706 ಹೊಸ ಪ್ರಕರಣಗಳೊಂದಿಗೆ 2ಲಕ್ಷ ದಾಟಿದ ಸೋಂಕು; 121242 ಚೇತರಿಕೆ

ಜಿಲ್ಲಾಡಳಿತದ ಪ್ರಕಾರ ಗುರುವಾರ ಜಿಲ್ಲೆಯಲ್ಲಿ 60 ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. 54 ಮಂದಿ ಗುಣಮುಖರಾಗಿದ್ದಾರೆ. 425 ಸಕ್ರಿಯ ಪ್ರಕರಣಗಳಿದ್ದು, ಒಟ್ಟು ಸೋಂಕಿತರ ಸಂಖ್ಯೆ 1432 ಆಗಿದೆ. 979 ಮಂದಿ ಗುಣಮುಖರಾಗಿದ್ದಾರೆ.

ಕೋವಿಡ್‌ನಿಂದ ಒಟ್ಟು 17 ಮಂದಿ ಮೃತಪಟ್ಟಿದ್ದಾರೆ. ಕೋವಿಡೇತರ ಕಾರಣದಿಂದ 11 ಮಂದಿ ಸಾವಿಗೀಡಾಗಿದ್ದಾರೆ. 22 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗುರುವಾರ 528 ಮಾದರಿಗಳನ್ನು ಪರೀಕ್ಷೆಗೊಳಪಡಿಸಲಾಗಿತ್ತು.

ಗುರುವಾರ ಇಬ್ಬರು ಹೋಂ ಐಸೋಲೇಷನ್‌ಗೆ ಒಳಪಟ್ಟಿದ್ದಾರೆ. ಒಟ್ಟು 114 ಮಂದಿ ಹೋಂ ಐಸೋಲೇಷನ್‌ನಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next