Advertisement

ಚಾಮರಾಜನಗರ ಜಿಲ್ಲೆ: ಶೇ. 74.26 ಸೋಂಕಿತರಿಗೆ ರೋಗ ಲಕ್ಷಣಗಳಿಲ್ಲ, ಮರಣ ದರ ಶೇ.1.53

03:57 PM Sep 14, 2020 | keerthan |

ಚಾಮರಾಜನಗರ: ಜಿಲ್ಲೆಯಲ್ಲಿ ಇದುವರೆಗೆ ಕೋವಿಡ್‌ನಿಂದ 45 ಮಂದಿ ಮೃತಪಟ್ಟಿದ್ದು, ಮರಣ ಪ್ರಮಾಣ ಶೇ. 1.53ರಷ್ಟಿದೆ. ಮೃತಪಟ್ಟಿರುವವರಲ್ಲಿ ಚಾಮರಾಜನಗರ ತಾಲೂಕಿನವರೇ ಹೆಚ್ಚು, ಅದರಲ್ಲೂ ಚಾ.ನಗರ ಪಟ್ಟಣದಲ್ಲಿ ಮೃತಪಟ್ಟಿರುವವರೇ ಅಧಿಕ. ಒಟ್ಟು 22 ಮಂದಿ ಈ ತಾಲೂಕಿನಲ್ಲಿ ಸೋಂಕಿನ ಕಾರಣದಿಂದ ಸಾವಿಗೀಡಾಗಿದ್ದು, ಇವರ ಪೈಕಿ 15 ಮಂದಿ ಪಟ್ಟಣದವರು.

Advertisement

ಜಿಲ್ಲೆಯ ತಾಲೂಕುವಾರು ಮರಣ ಪ್ರಮಾಣದ ಅಂಕಿ ಅಂಶ ಗಮನಿಸಿದರೆ, ಚಾ.ನಗರ ತಾಲೂಕಿನಲ್ಲಿ ಹೆಚ್ಚು ಸೋಂಕಿತರು ಮೃತಪಟ್ಟಿದ್ದಾರೆ.  ಇವರಲ್ಲಿ ಚಾ.ನಗರ ಪಟ್ಟಣದವರೇ 15 ಮಂದಿ ಇದ್ದಾರೆ. 7 ಮಂದಿ ಗ್ರಾಮಾಂತರದವರು.  ಕೊಳ್ಳೇಗಾಲ ತಾಲೂಕಿನಲ್ಲಿ ಒಟ್ಟು 12 ಮಂದಿ ಮೃತರಾಗಿದ್ದಾರೆ. ಇದರಲ್ಲಿ ಪಟ್ಟಣದವರು 7, ಗ್ರಾಮೀಣದವರು 05. ಗುಂಡ್ಲುಪೇಟೆ ತಾಲೂಕಿನಲ್ಲಿ ಇಬ್ಬರು ಸೋಂಕಿತರು ಮೃತರಾಗಿದ್ದಾರೆ. ಇಬ್ಬರೂ ಪಟ್ಟಣದವರೇ. ಹನೂರು ತಾಲೂಕಿನಲ್ಲಿ 04 ಮಂದಿ, ಯಳಂದೂರು ತಾಲೂಕಿನಲ್ಲಿ 04 ಮಂದಿ ಮೃತಪಟ್ಟಿದ್ದಾರೆ. ಇವರೆಲ್ಲರೂ ಗ್ರಾಮೀಣದವರು. ಹೊರ ಜಿಲ್ಲೆಯ ಓರ್ವರು ಮೃತಪಟ್ಟಿದ್ದಾರೆ.

ಶೇ.74.26ರಷ್ಟು ಸೋಂಕಿತರಿಗೆ ರೋಗಲಕ್ಷಣಗಳಿಲ್ಲ!
ಒಟ್ಟು 2938 ಜನರಿಗೆ ಸೋಂಕು ತಗುಲಿದ್ದು, ಇವರಲ್ಲಿ ಶೇ. 74.26 ರಷ್ಟು ಜನರಿಗೆ ಯಾವುದೇ ರೋಗ ಲಕ್ಷಣಗಳಿಲ್ಲ! ಶೇ. 25.73ರಷ್ಟು ಜನರಿಗೆ ಮಾತ್ರ ರೋಗ ಲಕ್ಷಣಗಳು ಕಾಣಿಸಿಕೊಂಡಿವೆ. ಗುಣಮುಖರಾಗಿರುವವರ ಶೇಕಡಾವಾರು ಶೇ.79.16. ಹಾಲಿ ಸಕ್ರಿಯ ಪ್ರಕರಣಗಳು ಶೇ. 18.72.

ಇದನ್ನೂ ಓದಿ:ಬೀಜಿಂಗ್ ಬೆದರಿಕೆ ನಡುವೆ ಕೋವಿಡ್ 19 ಮೂಲದ ಬಗ್ಗೆ ಸಾಕ್ಷ್ಯ ಇದೆ ಎಂದ ಚೀನಾ ವೈರಾಲಜಿಸ್ಟ್!

ಇದುವರೆಗೆ ಜಿಲ್ಲೆಯಲ್ಲಿ ಒಟ್ಟು 2938 ಪ್ರಕರಣಗಳು ಪಾಸಿಟಿವ್ ಆಗಿದ್ದು, ಇವರಲ್ಲಿ 2,182 ಜನರಿಗೆ ಯಾವುದೇ ರೋಗ ಲಕ್ಷಣಗಳಿಲ್ಲ. 756 ಜನರಿಗೆ ರೋಗ ಲಕ್ಷಣಗಳಿದ್ದವು. 2326 ಮಂದಿ ಗುಣಮುಖರಾಗಿದ್ದಾರೆ. 550 ಸಕ್ರಿಯ ಪ್ರಕರಣಗಳಿವೆ.

Advertisement

ತಿಂಗಳುವಾರು ಪ್ರಕರಣಗಳು: ಜೂನ್ 9ರಂದು ಜಿಲ್ಲೆಯಲ್ಲಿ ಮೊದಲ ಪ್ರಕರಣ ದೃಢಪಟ್ಟಿತು. ಆ ತಿಂಗಳು ಒಟ್ಟು 33 ಪ್ರಕರಣಗಳು, ಜುಲೈನಲ್ಲಿ 636 ಪ್ರಕರಣಗಳು, ಆಗಸ್‌ಟ್ನಲ್ಲಿ 1702 ಪ್ರಕರಣಗಳು ವರದಿಯಾಗಿವೆ. ಸೆ.12ರವರೆಗೆ 567 ಪ್ರಕರಣಗಳು ದೃಢಪಟ್ಟಿವೆ.

ಚಾ.ನಗರ ತಾಲೂಕಿನಿಂದ ಹೆಚ್ಚು ಪಾಸಿಟಿವ್ ಪ್ರಕರಣ: ಗ್ರಾಮಾಂತರ ಪ್ರದೇಶಗಳಿಂದ 1633 ಪ್ರಕರಣಗಳು ವರದಿಯಾಗಿದ್ದರೆ, ಪಟ್ಟಣ ಪ್ರದೇಶಗಳಿಂದ 1305 ಪ್ರಕರಣಗಳು ವರದಿಯಾಗಿವೆ. ಚಾಮರಾಜನಗರ ತಾಲೂಕಿನಿಂದ ಅತಿ ಹೆಚ್ಚು ಅಂದರೆ 999 ಪ್ರಕರಣ ವರದಿಯಾಗಿದ್ದರೆ, ಹನೂರು ತಾಲೂಕಿನಿಂದ ಅತಿ ಕಡಿಮೆ, ಅಂದರೆ 156 ಪ್ರಕರಣಗಳು ವರದಿಯಾಗಿವೆ.  ಕೊಳ್ಳೇಗಾಲ ತಾಲೂಕಿನಿಂದ 789, ಗುಂಡ್ಲುಪೇಟೆ ತಾಲೂಕಿನಿಂದ 694, ಯಳಂದೂರು ತಾಲೂಕಿನಿಂದ 270, ಹೊರ ಜಿಲ್ಲೆಗಳ 30 ಪ್ರಕರಣ ವರದಿಯಾಗಿವೆ.

ಸೋಂಕಿತರಲ್ಲಿ 21 ರಿಂದ 40 ವರ್ಷದವರೇ ಹೆಚ್ಚು: 10 ವರ್ಷದೊಳಗಿನ 126 ಜನರಿಗೆ, 10 ರಿಂದ 20 ವರ್ಷದ 295 ಜನರಿಗೆ, 21 ರಿಂದ 40 ವರ್ಷದ 1304 ಜನರಿಗೆ, 41 ರಿಂದ 60 ವರ್ಷದ 760 ಜನರಿಗೆ, 60 ವರ್ಷದ ಮೇಲಿನ 453 ಜನರಿಗೆ ಸೋಂಕು ತಗುಲಿದೆ.

ಐಸಿಯುನಲ್ಲಿದ್ದವರ ಸಂಖ್ಯೆ: ಐಸಿಯುನಲ್ಲಿ ದಾಖಲಾಗಿದ್ದವರಲ್ಲಿ 20 ವರ್ಷದೊಳಗಿನವರ ಸಂಖ್ಯೆ ಶೂನ್ಯ. 21 ರಿಂದ 40 ವರ್ಷದವರು 33 ಮಂದಿ, 41 ರಿಂದ 60 ವರ್ಷದವರು 59 ಹಾಗೂ 60 ವರ್ಷ ಮೇಲ್ಪಟ್ಟವರು 49 ಮಂದಿ.

40 ರಿಂದ 60 ಹಾಗೂ 60 ವರ್ಷ ಮೇಲ್ಪಟ್ಟ 40 ಜನರು ಸಾವು
ಜಿಲ್ಲೆಯಲ್ಲಿ ಕೋವಿಡ್ ಸೋಂಕಿನಿಂದಾಗಿ 45 ಮಂದಿ ಸಾವಿಗೀಡಾಗಿದ್ದಾರೆ. ಮೃತಪಟ್ಟವರಲ್ಲಿ 60 ವರ್ಷ ಮೇಲ್ಪಟ್ಟವರು 20 ಮಂದಿ ಇದ್ದರೆ, 40 ರಿಂದ 60 ವರ್ಷದವರು ಸಹ 20 ಜನರಿದ್ದಾರೆ. 20 ರಿಂದ 40 ವರ್ಷದವರು 5 ಮಂದಿ ಇದ್ದಾರೆ.

ಮೃತಪಟ್ಟವರಲ್ಲಿ 28 ಮಂದಿಗೆ ಕೋವಿಡ್ ಜೊತೆಗೆ ಇತರ ಕಾಯಿಲೆಗಳಿದ್ದವು. 16 ಮಂದಿಗೆ ಬೇರೆ ಕಾಯಿಲೆಗಳಿರಲಿಲ್ಲ. ಮೃತಪಟ್ಟವರಲ್ಲಿ 6 ಮಂದಿ ಆಸ್ಪತ್ರೆಗೆ ಸೇರಿಸುವ ಮುನ್ನವೇ ಮೃತಪಟ್ಟಿದ್ದಾರೆ. ಆಸ್ಪತ್ರೆಗೆ ದಾಖಲಿಸಿದ 48 ಗಂಟೆಯೊಳಗೆ 13 ಮಂದಿ ಸಾವಿಗೀಡಾಗಿದ್ದಾರೆ. 25 ಮಂದಿ ಎರಡು ದಿನಗಳ ನಂತರ ಮೃತಪಟ್ಟಿದ್ದಾರೆ.

ಹೊಸ ಕಟ್ಟಡದಲ್ಲಿ ಮತ್ತೆ 100 ಹಾಸಿಗೆ ಕೋವಿಡ್ ಆಸ್ಪತ್ರೆ
ಜಿಲ್ಲಾ ಕೇಂದ್ರದಲ್ಲಿರುವ ಜಿಲ್ಲಾಸ್ಪತ್ರೆಯ ಹಳೆಯ ಕಟ್ಟಡವನ್ನು ಈಗ ನಿಗದಿತ ಕೋವಿಡ್ ಆಸ್ಪತ್ರೆಯನ್ನಾಗಿ ಪರಿವರ್ತಿಸಲಾಗಿದೆ. ಈ ಆಸ್ಪತ್ರೆಯಲ್ಲಿ 24 ವೆಂಟಿಲೇಟರ್‌ಗಳಿವೆ. 38 ಐಸಿಯು ಹಾಸಿಗೆಗಳಿವೆ. ಒಟ್ಟು 110 ಹಾಸಿಗೆಗಳ ಸಾಮರ್ಥ್ಯವನ್ನು ಆಸ್ಪತ್ರೆ ಹೊಂದಿದೆ. ಈಗ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಜಿಲ್ಲಾಸ್ಪತ್ರೆಯ ಹೊಸ ಕಟ್ಟಡದಲ್ಲೂ 100 ಹಾಸಿಗೆಗಳ ಕೋವಿಡ್ ಕೇಂದ್ರ ತೆರೆಯಲು ಸಿದ್ಧತೆಗಳು ನಡೆಯುತ್ತಿವೆ.

ಹಾಲಿ ಹೊಸ ಕಟ್ಟಡದಲ್ಲಿರುವ ಕೋವಿಡೇತರ ಒಳರೋಗಿಗಳ ವಿಭಾಗವನ್ನು ಜೆಎಸ್‌ಎಸ್ ಖಾಸಗಿ ಆಸ್ಪತ್ರೆಗೆ ತಾತ್ಕಾಲಿಕವಾಗಿ ವರ್ಗಾಯಿಸಲು ಒಪ್ಪಂದ ಮಾಡಿಕೊಳ್ಳಲಾಗಿದೆ.

ಕೆ.ಎಸ್. ಬನಶಂಕರ ಆರಾಧ್ಯ

Advertisement

Udayavani is now on Telegram. Click here to join our channel and stay updated with the latest news.

Next