Advertisement

ಕೋವಿಡ್ ಜತೆಗೆ ಜಿ4 ವೈರಸ್‌; ಜಗತ್ತಿಗೆ ಮತ್ತೂಂದು ಗಂಡಾಂತರ?

11:33 AM Jul 01, 2020 | sudhir |

ಬೀಜಿಂಗ್‌/ಹೊಸದಿಲ್ಲಿ: ಈಗಾಗಲೇ ಕೋವಿಡ್­­ ವೈರಸ್‌ನ ಅಟ್ಟಹಾಸದಿಂದ ತತ್ತರಿಸಿಹೋಗಿರುವ ಮನುಕುಲಕ್ಕೆ ಮತ್ತೂಂದು ಆಘಾತ ಎದುರಾಗಿದೆ. ಸೋಂಕುಗಳ ಸ್ವರ್ಗ­ವಾದ ಚೀನದಲ್ಲಿ ಹೊಸ ಬಗೆಯ ಹಂದಿ ಜ್ವರವೊಂದು ಪತ್ತೆಯಾಗಿದ್ದು, ಇದು ಕೂಡ ಸಾಂಕ್ರಾಮಿಕವಾಗಿ ಹಬ್ಬುವ ಸಾಧ್ಯತೆಯಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

Advertisement

2000ನೇ ಇಸವಿಯ ಆರಂಭದಲ್ಲೇ ಚೀನ­ದಲ್ಲಿ ಹಂದಿ ಜ್ವರ ಕಾಣಿಸಿ ಕೊಂಡಿತ್ತು. ಆದರೆ, ಈಗ ಹೊಸ ಬಗೆಯ ಹಂದಿ ಜ್ವರವೊಂದು ಪತ್ತೆಯಾಗಿದ್ದು, ಅದು ಹಂದಿಗಳಿಂದ ಮಾನ­ವರಿಗೆ ಹಬ್ಬಲಾರಂಭಿಸಿದೆ. ಚೀನದ ಹಂದಿ ಸಾಕಣೆ ಕೇಂದ್ರಗಳಲ್ಲಿರುವ ಕಾರ್ಮಿಕರಿಗೆ ಅತ್ಯಂತ ವೇಗವಾಗಿ ಈ ಸೋಂಕು ವ್ಯಾಪಿಸುತ್ತಿದೆ. ಹಂದಿ ಸಾಕಣೆ ಕೇಂದ್ರಗಳ ಕಾರ್ಮಿಕರ ರಕ್ತದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷಿಸಿದಾಗ, ಶೇ.10.4 ಮಂದಿಗೆ ಜಿ4 ಫ್ಲೂ ವೈರಸ್‌ ಪಾಸಿಟಿವ್‌ ಎಂದು ವರದಿ ಬಂದಿದೆ. ಇದು ಕೋವಿಡ್ ಮಾದರಿಯಲ್ಲೇ ಸಂಭಾವ್ಯ ಸಾಂಕ್ರಾಮಿಕ ವೈರಸ್‌ ಆಗಿ ಇದು ಜಗತ್ತಿನಾ­ದ್ಯಂತ ಹಬ್ಬುವ ಭೀತಿಯಿದ್ದರೂ, ಕೂಡಲೇ ಅಂಥ ಅಪಾಯ ಎದುರಾಗಲಿಕ್ಕಿಲ್ಲ ಎಂದು ಸಂಶೋಧಕರು ಭಿಪ್ರಾಯಪಟ್ಟಿದ್ದಾರೆ.

2011ರಿಂದ 2018ರವರೆಗೆ ಹಂದಿಗಳ ಮೇಲೆ ನಿಗಾ ವಹಿಸಿ ಅಧ್ಯಯನವೊಂದನ್ನು ಕೈಗೊಳ್ಳಲಾ ಗಿತ್ತು. ಅದರ ವರದಿಯು ಈಗ ಪಿಎನ್‌ಎಎಸ್‌ ಎಂಬ ನಿಯತಕಾಲಿಕೆಯಲ್ಲಿ ಪ್ರಕಟವಾಗಿದೆ. ಸಮಾಧಾನಕರ ಸಂಗತಿ­ಯೆಂದರೆ, ಇದು ಪ್ರಾಣಿಗಳಿಂದ ಮನುಷ್ಯರಿಗೆ ಹಬ್ಬುತ್ತಿರುವುದು ನಿಜವಾದರೂ, ಮಾನವ­ನಿಂದ ಮಾನವನಿಗೆ ಹಬ್ಬುತ್ತಿರುವುದಕ್ಕೆ ಈವರೆಗೆ ಯಾವುದೇ ಸಾಕ್ಷ್ಯ ದೊರೆತಿಲ್ಲ.

ಗುಣಮುಖ ಪ್ರಮಾಣ ಶೇ.60
ಕೋವಿಡ್ ಕಾಟ ಮಿತಿಮೀರುತ್ತಿರುವ ನಡುವೆಯೇ ಧನಾತ್ಮಕ ವರದಿಯೊಂದು ಬಂದಿದ್ದು, ದೇಶದಲ್ಲಿ ಸೋಂಕಿತರ ಗುಣಮುಖ ಪ್ರಮಾಣ ಶೇ.60ರ ಸಮೀಪಕ್ಕೆ ತಲುಪಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಇದು ಸೋಂಕಿನ ವ್ಯಾಪಿಸುವಿಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕೈಗೊಂಡ ಸಾಮೂಹಿಕ ಪ್ರಯತ್ನದ ಫ‌ಲ ಎಂದೂ ಅಧಿಕಾರಿಗಳು ಹೇಳಿದ್ದಾರೆ. ಈವರೆಗೆ ದೇಶಾದ್ಯಂತ 3,34,821 ಮಂದಿ ಗುಣಮುಖರಾಗಿ ಮನೆಗೆ ಮರಳಿದ್ದಾರೆ.

ಸೋಮವಾರದಿಂದ ಮಂಗಳವಾರಕ್ಕೆ ಒಂದೇ ದಿನ 13,099 ಮಂದಿಗೆ ಗುಣಮುಖರಾಗಿದ್ದು, ಗುಣಮುಖ ಪ್ರಮಾಣ ಶೇ.59.07ಕ್ಕೆ ತಲುಪಿದೆೆ ಎಂದೂ ಅವರು ತಿಳಿಸಿದ್ದಾರೆ. ಜತೆಗೆ, ದೇಶದಲ್ಲಿ ರೋಗಪತ್ತೆ ಪ್ರಯೋಗಾಲಯಗಳ ಸಂಖ್ಯೆಯನ್ನೂ ವೃದ್ಧಿಸಲಾಗಿದ್ದು, ಸದ್ಯ 1,049 ಲ್ಯಾಬ್‌ಗಳನ್ನು ಕೋವಿಡ್ ಪರೀಕ್ಷೆಗೆಂದೇ ನಿಯೋಜಿಸಲಾಗಿದೆ. ಈವರೆಗೆ 86.08 ಲಕ್ಷ ಸ್ಯಾಂಪಲ್‌ಗ‌ಳನ್ನು ಪರೀಕ್ಷಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ತಿಳಿಸಿದೆ.

Advertisement

24 ಗಂಟೆಗಳಲ್ಲಿ 18,522 ಪ್ರಕರಣ
ದೇಶದ ಕೋವಿಡ್ ಸೋಂಕಿತರ ಸಂಖ್ಯೆ 5.66 ಲಕ್ಷ ದಾಟಿದ್ದು, ಸೋಮವಾರ ಬೆಳಗ್ಗೆ 8ರಿಂದ ಮಂಗಳವಾರ ಬೆಳಗ್ಗೆ 8ರವರೆಗೆ 18,522 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಅವಧಿಯಲ್ಲಿ 418 ಸೋಂಕಿತರು ಬಲಿಯಾಗಿದ್ದಾರೆ. 24 ಗಂಟೆಗಳಲ್ಲಿ ಸುಮಾರು 4 ಸಾವಿರ ಪ್ರಕರಣಗಳಿಗೆ ಸಾಕ್ಷಿಯಾಗುವ ಮೂಲಕ ತಮಿಳುನಾಡು ಮತ್ತೂಮ್ಮೆ ದಿಲ್ಲಿಯನ್ನು ಹಿಂದಿಕ್ಕೆ ದೇಶದ ಎರಡನೇ ಹಾಟ್‌ಸ್ಪಾಟ್‌ ರಾಜ್ಯವೆಂಬ ಕುಖ್ಯಾತಿ ಪಡೆದಿದೆ. ಮಹಾರಾಷ್ಟ್ರದಲ್ಲಿ ಒಂದೇ ದಿನ 5200 ಪ್ರಕರಣ ಪತ್ತೆಯಾಗಿದ್ದು, ದಿಲ್ಲಿಯಲ್ಲಿ 2,084 ಮಂದಿಗೆ ಸೋಂಕು ದೃಢಪಟ್ಟಿದೆ.

“ಭೀಕರ ಸ್ಥಿತಿ ಇನ್ನಷ್ಟೇ ಬರಬೇಕಿದೆ’
ಸೋಂಕಿನ ಭೀಕರ ಸ್ಥಿತಿ ಇನ್ನಷ್ಟೇ ಬರಬೇಕಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮಹಾನಿರ್ದೇಶಕ ಟರ್ದೂಸ್ ಅಧನಮ್‌ ಗೇಬ್ರೆಯೇಸಸ್‌ ಎಚ್ಚರಿಕೆ ನೀಡಿದ್ದಾರೆ. ಜಿನೀವಾದಲ್ಲಿ ಮಾತನಾಡಿದ ಅವರು, ಜಗತ್ತಿನಲ್ಲಿ ಸೋಂಕು ನಿರ್ಮೂಲನೆಯ ಸಮೀಪಕ್ಕೂ ತಲುಪಲಾಗಿಲ್ಲ. ಹೀಗಾಗಿ, ಅದನ್ನು ಹರಡಂತೆ ಮಾಡುವುದೇ ಪ್ರಧಾನ ಎಂದಿದ್ದಾರೆ. ರಾಷ್ಟ್ರಗಳಲ್ಲಿ ಮತ್ತು ವಿಶ್ವದಲ್ಲಿ ಒಟ್ಟಾಗಿ ಸೋಂಕಿನ ವಿರುದ್ಧ ಹೋರಾಟ ಇಲ್ಲದಿರುವುದೇ ಪರಿಸ್ಥಿತಿ ಕೈಮೀರಲು ಕಾರಣವೆಂದರು. ಇದೀಗ ಸೋಂಕಿನ ವಿಚಾರದಲ್ಲಿ ರಾಜಕೀಯ ಮಾಡಲಾಗುತ್ತಿದೆ ಎಂದು ದೂರಿದರು. ಲಸಿಕೆ ಸಂಶೋಧನೆಯಾಗಿ ಮಾರುಕಟ್ಟೆಗೆ ಬರುವ ವರೆಗೆ ನಿಯಂತ್ರಣವೇ ಪ್ರಧಾನ. ಅದಕ್ಕಾಗಿ ಐದು ಅಂಶಗಳನ್ನು ಗಮನಿಸಬೇಕಾಗಿದೆ ಎಂದರು.

ಜಿ4 ವೈರಸ್‌ ಕುರಿತು
ಹೊಸದಾಗಿ ಪತ್ತೆಯಾಗಿರುವ ಜಿ4 ಇಎ ಎಚ್‌1ಎನ್‌1 ವೈರಸ್‌ 2009ರ ಹಂದಿ ಜ್ವರದ ಮಾದರಿಯಲ್ಲೇ ಇದ್ದರೂ, ಕೆಲವೊಂದು ಬದಲಾವಣೆಗಳು ಹೊಸ ವೈರಸ್‌ನಲ್ಲಿವೆ.

ಜಿ4 ಜಿನೋಟೈಪ್‌ನ ವೈರಸ್‌ 2016ರ ಬಳಿಕವೇ ಹೆಚ್ಚು ವ್ಯಾಪಿಸಲು ಶುರುವಾಗಿದ್ದು. ಈ ವೈರಸ್‌ ಫೆರೆಟ್ಸ್‌ನಂಥ ಜೀವಿಗಳ ದೇಹಕ್ಕೆ ಸೇರುತ್ತವೆ. ನಂತರ ಆ ಜೀವಿ­ಗಳಲ್ಲಿ ಉಬ್ಬಸ, ಸೀನುವಿಕೆ, ಕೆಮ್ಮು, ತೂಕ ಕಡಿಮೆಯಾಗುವುದು ಮತ್ತಿತರ ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತವೆ.

ಜಿ4 ವೈರಸ್‌ಗಳು ಪ್ರೊಟೀನ್‌ ಕಣ (ಪ್ರತಿವರ್ತನಾ ಕಣ)ಗಳ ಮೂಲಕ ಮಾನವನ ಜೀವಕೋಶವನ್ನು ಸೇರುತ್ತವೆ. ನಂತರ ಶ್ವಾಸಕೋಶ ವ್ಯವಸ್ಥೆಯ ಬಾಹ್ಯ ಪದರಗಳಲ್ಲಿ ಸಂತಾನೋತ್ಪತ್ತಿ ಆರಂಭಿಸುತ್ತವೆ.
ಪ್ರಸ್ತುತ ಹಂದಿ ಸಾಕಾಣಿಕೆ ಕೇಂದ್ರಗಳಲ್ಲಿ 10ರಲ್ಲಿ ಒಬ್ಬರಿಗೆ ಈ ಸೋಂಕು.
ಚೀನ ಜನಸಂಖ್ಯೆಯ ಶೇ.4.4ರಷ್ಟು ಮಂದಿಗೆ ಸೋಂಕು ಸಾಧ್ಯತೆ.

ಈ ಫ್ಲೂನಿಂದಾಗಿ ಗಂಭೀರ ಸೋಂಕಿಗೆ ಗುರಿಯಾಗಿ, ಸಾವಿಗೀಡಾಗುವ ಸಾಧ್ಯತೆಯೂ ಇದೆ.
ಈ ವೈರಸ್‌ ಪ್ರಾಣಿಗಳಿಂದ ಮಾನವನಿಗೆ ಹಬ್ಬುತ್ತದೆಯಾದರೂ, ಮಾನವನಿಂದ ಮಾನವನಿಗೆ ವ್ಯಾಪಿಸುತ್ತದೆ ಎಂಬುದಕ್ಕೆ ಇನ್ನೂ ಯಾವುದೇ ಪುರಾವೆ ದೊರೆತಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next