Advertisement

ಗ್ರಾಮೀಣ ಪ್ರದೇಶಕ್ಕೂ ವಕ್ಕರಿಸಿದ ಮಹಾಮಾರಿ ಕೋವಿಡ್

11:36 AM May 10, 2021 | Team Udayavani |

­ ವರದಿ : ವೀರೇಶ ಮಡ್ಲೂರ

Advertisement

ಹಾವೇರಿ: ಬದುಕು ಕಟ್ಟಿಕೊಳ್ಳಲು ವಿವಿಧ ರಾಜ್ಯ, ಮಹಾ ನಗರಗಳಿಗೆ ತೆರಳಿದ್ದ ಜಿಲ್ಲೆಯ ಜನರು ತೀವ್ರಗತಿಯಲ್ಲಿ ಹರಡುತ್ತಿರುವ ಕೊರೊನಾ ಎರಡನೇ ಅಲೆ ಭೀತಿಯಿಂದ ಮರಳಿ ತಮ್ಮ ಗ್ರಾಮಗಳಿಗೆ ಆಗಮಿಸುತ್ತಿದ್ದಾರೆ. ಈ ರೀತಿ ನಗರ, ಪಟ್ಟಣಗಳಿಂದ ಜಿಲ್ಲೆಯ ಗ್ರಾಮೀಣ ಪ್ರದೇಶಕ್ಕೆ ಬಂದ ಜನರಲ್ಲಿ ಸೋಂಕು ಪತ್ತೆಯಾಗುತ್ತಿರುವುದು ಮತ್ತಷ್ಟು ಆತಂಕ ಮೂಡಿಸುತ್ತಿದೆ.

ಕಳೆದ ಬಾರಿ ಏಕಾಏಕಿ ಲಾಕ್‌ಡೌನ್‌ ಘೋಷಿಸಿದ ಹಿನ್ನೆಲೆ ತಮ್ಮ ಲಗೇಜು, ಮಕ್ಕಳನ್ನು ಕಟ್ಟಿಕೊಂಡು ಊರಿಗೆ ತೆರಳಬೇಕಾದರೆ ಪಡಬಾರದ ಕಷ್ಟಪಟ್ಟು ಹೈರಾಣಾಗಿದ್ದರು. ಆದರೆ, ಈಗ ಕೊರೊನಾ ಎರಡನೇ ಅಲೆ ತೀವ್ರಗೊಂಡು ಸಾವು, ನೋವಿನ ಪ್ರಮಾಣ ಹೆಚ್ಚುತ್ತಿದ್ದರಿಂದ ಬೆಂಗಳೂರು, ಮಂಗಳೂರು ಸೇರಿದಂತೆ ವಿವಿಧ ನಗರ ಪ್ರದೇಶಗಳಿಗೆ ತೆರಳಿದ್ದ ಜಿಲ್ಲೆಯ ಜನರು ಮತ್ತೆ ತಮ್ಮ ಗ್ರಾಮಗಳಿಗೆ ಮರಳುತ್ತಿದ್ದಾರೆ. ಈ ರೀತಿ ಜಿಲ್ಲೆಗೆ ಮರಳಿ ಬಂದವರಲ್ಲಿ ಸೋಂಕು ಪತ್ತೆಯಾತ್ತಿರುವುದು ಗ್ರಾಮೀಣ ಜನರ ನೆಮ್ಮದಿ ಹಾಳು ಮಾಡುತ್ತಿದೆ.

12 ಜನರಲ್ಲಿ ಸೋಂಕು ಪತ್ತೆ: ನಗರ, ಪಟ್ಟಣಗಳಿಂದ ಜಿಲ್ಲೆಯ ಗ್ರಾಮೀಣ ಭಾಗಕ್ಕೆ ಆಗಮಿಸಿದವರಲ್ಲಿ 1152 ಜನರನ್ನು ಕೋವಿಡ್‌ ಟೆಸ್ಟ್‌ಗೆ ಒಳಪಡಿಸಲಾಗಿದೆ. ಹಾನಗಲ್ಲ ತಾಲೂಕಿನಲ್ಲಿ 355 ಜನರು, ಹಾವೇರಿ 187, ಹಿರೇಕೆರೂರು 112, ರಾಣಿಬೆನ್ನೂರು 147, ರಟ್ಟಿಹಳ್ಳಿ 151, ಸವಣೂರು 122, ಶಿಗ್ಗಾವಿ 76 ಹಾಗೂ ಬ್ಯಾಡಗಿ ತಾಲೂಕಿನಲ್ಲಿ 2 ಜನರನ್ನು ಆರೋಗ್ಯ ತಪಾಸಣೆಗೆ ಒಳಪಡಿಸಲಾಗಿದೆ. ಇವರಲ್ಲಿ 12 ಜನರಲ್ಲಿ ಸೋಂಕು ಪತ್ತೆಯಾಗಿದ್ದು, ಸೋಂಕಿತರ ಪ್ರಾಥಮಿಕ ಸಂಪರ್ಕಿತರ ಮಾಹಿತಿ ಸಹ ಪತ್ತೆ ಮಾಡಿ, ಅವರನ್ನು ಸಹ ಕೊರೊನಾ ಟೆಸ್ಟ್‌ಗೆ ಒಳಪಡಿಸಲಾಗುತ್ತಿದೆ.

ಗ್ರಾಪಂಗೆ ಕಟ್ಟುನಿಟ್ಟಿನ ಸೂಚನೆ: ನಗರ, ಪಟ್ಟಣಗಳಿಂದ ಜಿಲ್ಲೆಯ ಗ್ರಾಮಗಳಿಗೆ ಆಗಮಿಸುವ ಜನರನ್ನು ಗುರುತಿಸಿ ತಕ್ಷಣ ಅವರನ್ನು ಕೋವಿಡ್‌ ಟೆಸ್ಟ್‌ಗೆ ಒಳಪಡಿಸುವ ಜವಾಬ್ದಾರಿ ಸಂಬಂಧಪಟ್ಟ ಗ್ರಾಪಂಗಳಿಗೆ ವಹಿಸಿದ್ದು, ಈ ಬಗ್ಗೆ ಜಿಲ್ಲಾಡಳಿತ ಈಗಾಗಲೇ ಗ್ರಾಪಂಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಕೋವಿಡ್‌ ಟೆಸ್ಟ್‌ನಲ್ಲಿ ಸೋಂಕು ದೃಢಪಟ್ಟರೆ ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Advertisement

ಕೆಲವು ಸಂದರ್ಭದಲ್ಲಿ ಸೋಂಕು ದೃಢಪಟ್ಟ ವ್ಯಕ್ತಿಯ ಮನೆಯಲ್ಲಿ ಉಳಿದುಕೊಳ್ಳಲು ಪ್ರತ್ಯೇಕ ವ್ಯವಸ್ಥೆ ಇದ್ದರೆ ಅದನ್ನು ಪರಿಶೀಲಿಸಿ ಹೋಂ ಕ್ವಾರಂಟೈನ್‌ಗೆ ಅವಕಾಶ ನೀಡಲಾಗುತ್ತಿದೆ. ಗ್ರಾಮೀಣ ಜನರಲ್ಲಿ ಹೆಚ್ಚಿದ ಆತಂಕ: ಇದುವರೆಗೆ ಕೊರೊನಾ ಎರಡನೇ ಅಲೆ ಕೇವಲ ನಗರ ಪ್ರದೇಶದಲ್ಲಷ್ಟೇ ತೀವ್ರಗತಿಯಲ್ಲಿ ಕಂಡು ಬರುತ್ತಿತ್ತು. ಆದರೆ ಈಗ ಗ್ರಾಮೀಣ ಪ್ರದೇಶಕ್ಕೂ ಲಗ್ಗೆ ಇಟ್ಟಿರುವುದು ಜನರಲ್ಲಿ ಆತಂಕ ಮೂಡಿಸಿದೆ. ಟಿವಿ, ಮಾಧ್ಯಮಗಳಲ್ಲಿ ಕೊರೊನಾ ಸಂಕಷ್ಟದ ಪರಿಸ್ಥಿತಿ ನೋಡುತ್ತಿದ್ದ ಗ್ರಾಮೀಣ ಜನರು ಸ್ವತಃ ತಮ್ಮ ಗ್ರಾಮಗಳಲ್ಲಿ ಸೋಂಕು ಪತ್ತೆಯಾಗಿರುವುದುನ್ನು ಕಂಡು ಆತಂಕ ಪಡುವಂತಾಗಿದೆ.

ಈಗಾಗಲೇ ಜಿಲ್ಲಾಡಳಿತ ಗ್ರಾಪಂ ಪಿಡಿಒ, ಆಶಾ ಕಾರ್ಯಕರ್ತೆಯರ ಸೇವೆ ಬಳಸಿಕೊಂಡು ಸೋಂಕಿತರ ಪತ್ತೆ ಮಾಡುತ್ತಿದ್ದು, ಗ್ರಾಮೀಣ ಜನರಲ್ಲಿ ಕೊರೊನಾ ಮುಂಜಾಗ್ರತಾ ಕ್ರಮ, ಸಾಮಾಜಿಕ ಅಂತರ, ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಸೇರಿದಂತೆ ಸುರಕ್ಷತಾ ಕ್ರಮಗಳನ್ನು ಅನುಸರಿಸುವಂತೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next