Advertisement

Covid variant XBB: ದೇಶದಲ್ಲಿ ಹೊಸ ರೂಪಾಂತರಿ ಎಕ್ಸ್‌ಬಿಬಿ ದೃಢ

09:00 PM Apr 08, 2023 | Team Udayavani |

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕು ಪ್ರಮಾಣ ಏರಿಕೆಯಾಗುತ್ತಿರುವಂತೆಯೇ ಹೊಸತಾಗಿ ಇರುವ ರೂಪಾಂತರಿಯೊಂದು ಬೆಳಕಿಗೆ ಬಂದಿದೆ. ಅದನ್ನು ಎಕ್ಸ್‌ಬಿಬಿ.1.16.1 ಎಂದು ಗುರುತಿಸಲಾಗಿದೆ. ಇದುವರೆಗೆ ದೇಶದಲ್ಲಿ 113 ಪ್ರಕರಣಗಳು ದೃಢಪಟ್ಟಿವೆ. ಹೊಸತಾಗಿ ದೃಢಪಟ್ಟಿರುವ ಈ ರೂಪಾಂತರಿಯು ಒಮಿಕ್ರಾನ್‌ ತಳಿಯ ಉಪ ರೂಪಾಂತರಿಯಾಗಿದೆ. ಹದಿನೈದು ತಿಂಗಳ ಅವಧಿಯಲ್ಲಿ ಒಮಿಕ್ರಾನ್‌ನ 400 ಉಪತಳಿಗಳು ಇರುವುದು ಖಚಿತಪಟ್ಟಿವೆ. ಈ ಪೈಕಿ ಶೇ.90 ಎಕ್ಸ್‌ಬಿಬಿಯ ರೂಪಾಂತರಿಯವೇ ಆಗಿದೆ.

Advertisement

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮತ್ತು ಜೀವ ವಿಜ್ಞಾನ ಸಚಿವಾಲಯ ಜಂಟಿಯಾಗಿ ರೂಪಿಸಿರುವ ಇಂಡಿಯನ್‌ ಸಾರ್ಸ್‌-ಸಿಒವಿ-2 ಜಿನೋಮಿಕ್ಸ್‌ ಕಾನ್ಸಾರ್ಶಿಯಮ್‌ (ಇನ್ಸಾಕಾಗ್‌) ಇದುವರೆಗೆ ಎಕ್ಸ್‌ಬಿಬಿ ರೂಪಾಂತರಿಯನ್ನು ಸೇರ್ಪಡೆ ಮಾಡಿಲ್ಲ. ಆದರೆ, ದೇಶದಲ್ಲಿ ಇದುವರೆಗೆ ದೃಢಪಟ್ಟಿರುವ ಸೋಂಕುಗಳ ಪ್ರಮಾಣದಲ್ಲಿ ಶೇ.38.2 ಇವುಗಳ ಪಾಲಿದೆ.

ಹೊಸ ಕೇಸು 6,155: ದೇಶದಲ್ಲಿ ಶುಕ್ರವಾರದಿಂದ ಶನಿವಾರದ ಅವಧಿಯಲ್ಲಿ ಹೊಸತಾಗಿ 6,155 ಹೊಸ ಕೊರೊನಾ ಪ್ರಕರಣಗಳು ದೃಢಪಟ್ಟಿವೆ. ಇದರ ಜತೆಗೆ ಸಕ್ರಿಯ ಪ್ರಕರಣಗಳ ಸಂಖ್ಯೆ 31,194ಕ್ಕೆ ಏರಿಕೆಯಾಗಿದೆ. ಒಟ್ಟು ಹನ್ನೊಂದು ಮಂದಿ ಅಸುನೀಗಿದ್ದಾರೆ. ದೈನಂದಿನ ಸೋಂಕಿತರ ಪ್ರಮಾಣ ಶೇ.5.63 ಆಗಿದೆ.

ಉ.ಪ್ರ.ದಲ್ಲಿ ಅಂ.ರಾ. ಪ್ರಯಾಣಿಕರಿಗೆ ಕಡ್ಡಾಯ ಪರೀಕ್ಷೆ
ಕೊರೊನಾ ಸೋಂಕುಗಳ ಸಂಖ್ಯೆ ಹೆಚ್ಚುತ್ತಿರುವಂತೆಯೇ ಉತ್ತರಪ್ರದೇಶದ ಮೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಿಗೆ ಆಗಮಿಸುವ ವಿದೇಶಗಳಿಂದ ಆಗಮಿಸುವ ಪ್ರಯಾಣಿಕರಿಗೆ ಸೋಂಕು ಪರೀಕ್ಷೆ ಕಡ್ಡಾಯ ಮಾಡಲಾಗಿದೆ. ಉತ್ತರಪ್ರದೇಶದ ಈ ಕ್ರಮ, ನಿಧಾನಕ್ಕೆ ಕೊರೊನಾ ವಿರುದ್ಧ ಎಲ್ಲ ರಾಜ್ಯಗಳು ಎಚ್ಚೆತ್ತುಕೊಳ್ಳುತ್ತಿರುವ ಲಕ್ಷಣವಾಗಿದೆ. ಶುಕ್ರವಾರವಷ್ಟೇ ಕೇಂದ್ರ ಆರೋಗ್ಯ ಸಚಿವ ಮನಸುಖ ಮಾಂಡವಿಯ ಅಧಿಕಾರಿಗಳ ಸಭೆ ನಡೆಸಿ ಹಲವು ಮುನ್ನೆಚ್ಚರಿಕೆಗಳ ಬಗ್ಗೆ ಚರ್ಚಿಸಿದ್ದರು. ಶನಿವಾರ ಜಾರ್ಖಂಡ್‌ ಸರ್ಕಾರ ಕೇಂದ್ರ 50,000ಕ್ಕೂ ಅಧಿಕ ಕೊರೊನಾ ಲಸಿಕೆಗಳಿಗಾಗಿ ಬೇಡಿಕೆಯಿಟ್ಟಿದೆ. ಮುಂದಿನ ದಿನಗಳಲ್ಲಿ ಮತ್ತೆ ಕೆಲವು ಕ್ರಮಗಳು ಬಿಗಿಯಾಗುವ ಸಾಧ್ಯತೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next