Advertisement

ಕೋವಿಡ್ ಲಸಿಕೆ ಅಭಿಯಾನ : 50 ವರ್ಷ ಮೇಲ್ಪಟ್ಟವರ ಸರ್ವೇ ಕಾರ್ಯ

11:53 PM Feb 16, 2021 | Team Udayavani |

ಮಹಾನಗರ: ಕೊರೊನಾ ರೋಗ ನಿರೋಧಕ ಲಸಿಕೆಯ ಮೂರನೇ ಹಂತವನ್ನು ಪರಿಪೂರ್ಣವಾಗಿ ನಿರ್ವಹಿ ಸುವ ಉದ್ದೇಶದಿಂದ ದ.ಕ. ಜಿಲ್ಲೆಯಲ್ಲಿ ಐವತ್ತು ವರ್ಷ ಮೇಲ್ಪಟ್ಟವರ ಸರ್ವೇ ನಡೆ ಸಲು ಆರೋಗ್ಯ ಇಲಾಖೆ ನಿರ್ಧರಿಸಿದೆ.

Advertisement

ದ.ಕ. ಜಿಲ್ಲೆಯ ಪ್ರತಿಯೊಂದು ಗ್ರಾಮ ದಲ್ಲಿಯೂ ಈ ಸರ್ವೇ ನಡೆಯಲಿದೆ. ಸರ್ವೇಯ ಉದ್ದೇಶಕ್ಕೆಂದು ಮನೆ-ಮನೆ ಭೇಟಿಗೆ ಆಶಾ ಕಾರ್ಯಕರ್ತೆಯರು ಮತ್ತು ಕಿರಿಯ ಆರೋಗ್ಯ ಸಹಾಯಕರನ್ನು ನೇಮಕ ಮಾಡಲಾಗಿದ್ದು, ಅವರು ದತ್ತಾಂಶ ಸಂಗ್ರಹ ಮಾಡಲಿದ್ದಾರೆ. ದ.ಕ. ಜಿಲ್ಲೆಗೆ ಮೂರನೇ ಹಂತದಲ್ಲಿ ಲಸಿಕೆ ಎಷ್ಟು ಪ್ರಮಾಣದಲ್ಲಿಬೇಕು ಎಂದು ಅಂದಾಜು ಪಟ್ಟಿಗೆ ಈ ಸರ್ವೇ ಸಹಾಯಕವಾಗಲಿದೆ.

ದ.ಕ. ಜಿಲ್ಲೆಯಲ್ಲಿ ಈಗಾಗಲೇ ಮೊದಲನೇ ಹಂತದಲ್ಲಿ ಆರೋಗ್ಯ ಕಾರ್ಯಕರ್ತರು ಮತ್ತು ಎರಡನೇ ಹಂತದಲ್ಲಿ ಮುಂಚೂಣಿ ಕಾರ್ಯಕರ್ತರಿಗೆ (ಫ್ರಂಟ್‌ ಲೈನ್‌ ವರ್ಕರ್) ಲಸಿಕೆ ನೀಡಲಾಗುತ್ತಿದೆ. ಈ ಎರಡೂ ವಿಭಾಗಗಳಲ್ಲಿ ಲಸಿಕೆ ಪಡೆಯಲು ಫಲಾನುಭವಿಗಳು ನಿರೀಕ್ಷಿತ ಪ್ರಮಾಣದಲ್ಲಿ ಬರಲಿಲ್ಲ. ಇದೇ ಕಾರಣಕ್ಕೆ ಮೂರನೇ ಹಂತದಲ್ಲಿ ಹಿರಿಯ ನಾಗರಿಕರು ಮತ್ತು ಆರೋಗ್ಯ ಸಮಸ್ಯೆ ಹೊಂದಿರುವವರ ದತ್ತಾಂಶ ಸಂಗ್ರಹಿಸಿ, ಆ ಪಟ್ಟಿಯನ್ನು ರಾಜ್ಯ ಸರಕಾರಕ್ಕೆ ಸಲ್ಲಿಕೆ ಮಾಡಲಾಗುತ್ತದೆ.

ದ.ಕ. ಜಿಲ್ಲೆಯಲ್ಲಿ ಮೊದಲ ಮತ್ತು ಎರಡನೇ ಹಂತದ ಲಸಿಕೆ ಅಭಿಯಾನದಲ್ಲಿ ಶೇ. 50ರಷ್ಟೂ ಗುರಿ ತಲುಪಿಲ್ಲ. ಆರೋಗ್ಯ ಇಲಾಖೆಯ ಮಾಹಿತಿಯಂತೆ ದ.ಕ. ಜಿಲ್ಲೆಯಲ್ಲಿ ಒಟ್ಟು 56,632 ಮಂದಿ ಆರೋಗ್ಯ ಕಾರ್ಯಕರ್ತರು ಮೊದಲನೇ ಹಂತದ ಲಸಿಕೆ ಪಡೆಯಲು ನೋಂದಣಿ ಮಾಡಿದ್ದು, ಸದ್ಯ 26,821 ಮಂದಿ ಮಾತ್ರ ಲಸಿಕೆ ಪಡೆದಿದ್ದಾರೆ. ಇದರೊಂದಿಗೆ ಶೇ. 48ರಷ್ಟು ಗುರಿ ಮಾತ್ರ ತಲುಪಿದೆ. ಕೆಲ ದಿನಗಳ ಹಿಂದೆ ಎರಡನೇ ಹಂತವೂ ಆರಂಭಗೊಂಡಿದ್ದು, ಒಟ್ಟು 8,593 ಮಂದಿ ನೋಂದಣಿಯಲ್ಲಿ 2,801 ಮಂದಿ ಮಾತ್ರ ಲಸಿಕೆ ಪಡೆದು ಶೇ.33 ಗುರಿ ತಲುಪಿದೆ.

ಕೊರೊನಾ ವಾರಿಯರ್ ನಿರೀಕ್ಷಿತ ಪ್ರಮಾಣದಲ್ಲಿ ಲಸಿಕೆ ಪಡೆಯಲು ಮುಂದೆ ಬಾರದೇ ಇರುವುದು ಮೂರನೇ ಹಂತದ ಅಭಿಯಾನ ಜಿಲ್ಲಾಡಳಿತಕ್ಕೆ ಸವಾಲಾಗಿದೆ.

Advertisement

ಸರ್ವೇ ಆರಂಭ
ಕೊರೊನಾ ಮೂರನೇ ಹಂತದ ಲಸಿಕೆ ಆರಂಭಕ್ಕೂ ಮುನ್ನ ಆರೋಗ್ಯ ಇಲಾಖೆಯ ಸೂಚನೆಯಂತೆ ದ.ಕ. ಜಿಲ್ಲೆಯಲ್ಲಿ ಸರ್ವೇ ಆರಂಭವಾಗಿದೆ. ಅದರಂತೆ ಜಿಲ್ಲೆಯಲ್ಲಿ 50 ವರ್ಷ ಮೇಲ್ಪಟ್ಟವರ ಸರ್ವೇ ನಡೆಸಲಾಗುತ್ತಿದೆ. ಅವರಿಗೆ ರಕ್ತದೊತ್ತಡ, ಸಕ್ಕರೆ ಕಾಯಿಲೆ ಸಹಿತ ಬೇರೆ ಕಾಯಿಲೆ ಇದೆಯೇ ಎಂಬ ದತ್ತಾಂಶ ಸಂಗ್ರಹ ಮಾಡಲಾಗುತ್ತಿದೆ. ಇದಕ್ಕೆಂದು ಮಾದರಿಯೊಂದನ್ನು ಸಿದ್ಧಪಡಿಸಲಾಗಿದೆ.
-ಡಾ| ರಾಮಚಂದ್ರ ಬಾಯರಿ, ದ.ಕ. ಜಿಲ್ಲಾ ಆರೋಗ್ಯಾಧಿಕಾರಿ

ಮಾರ್ಚ್‌ನಲ್ಲಿ ಮೂರನೇ ಹಂತ
ಕೊರೊನಾ ರೋಗ ನಿರೋಧಕ ಲಸಿಕೆಯನ್ನು ಮೂರನೇ ಹಂತದಲ್ಲಿ ಆದ್ಯತೆಯ ಗುಂಪು 50 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮತ್ತು ಆರೋಗ್ಯ ಸಮಸ್ಯೆ ಹೊಂದಿದವರಿಗೆ (ಕೊಮೊರ್ಬಿಡಿಟಿ) ನೀಡಲಾಗುತ್ತದೆ. ಮೊದಲನೇ ಮತ್ತು ಎರಡನೇ ಹಂತದ ಲಸಿಕೆ ಅಭಿಯಾನ ಸದ್ಯ ನಡೆಯುತ್ತಿದ್ದು, ಮೂರನೇ ಹಂತದ ಅಭಿಯಾನಕ್ಕೆ ಮಾರ್ಚ್‌ ತಿಂಗಳಲ್ಲಿ ನೋಂದಣಿ ನಡೆಯುವ ಸಾಧ್ಯತೆ ಇದೆ ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next