Advertisement

ಲಸಿಕೆ ಕೇವಲ 1 ವರ್ಷದ ರಕ್ಷಕ!

12:35 AM Nov 25, 2020 | mahesh |

9- 12 ತಿಂಗಳು ಮಾತ್ರ ನಮ್ಮನ್ನು ಕಾಪಾಡುತ್ತೆ: ಏಮ್ಸ್‌ ಮುಖ್ಯಸ್ಥ
2023ರವರೆಗೂ ಕೊರೊನಾ ಸೋಂಕು ತೊಲಗುವುದೇ ಅನುಮಾನ

Advertisement

ಹೊಸದಿಲ್ಲಿ: ಇನ್ನೇನು ಕೆಲವೇ ತಿಂಗಳು, ಕೊರೊ­ನಾಕ್ಕೆ ಲಸಿಕೆ ಬರುತ್ತೆ. ಒಮ್ಮೆ ಲಸಿಕೆ ತೆಗೆದುಕೊಂಡರೆ ಜೀವನಪರ್ಯಂತ ಅದು ನಮ್ಮನ್ನು ಕೊರೊನಾ­ದಿಂದ ಕಾಪಾಡುತ್ತದೆಯಾ? ಖಂಡಿತಾ ಇಲ್ಲ!

ಲಸಿಕೆ ಕುರಿತಾದ ಈ ಪ್ರಶ್ನೆಗೆ ಹೊಸದಿಲ್ಲಿಯ ಅಖೀಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್‌) ನಿರ್ದೇಶಕ ಡಾ. ರಣದೀಪ್‌ ಗುಲೇರಿಯಾ ಸ್ಪಷ್ಟ ಉತ್ತರ ಮುಂದಿಟ್ಟಿ­ದ್ದಾರೆ. “ಲಸಿಕೆಗಳು ನಮ್ಮನ್ನು ಕೇವಲ 9 ತಿಂಗಳಿಂದ 1 ವರ್ಷಗಳವರೆಗೆ ಮಾತ್ರವೇ ಕೊರೊನಾದಿಂದ ರಕ್ಷಿಸಲು ಸಮರ್ಥವಾಗಿರುತ್ತವೆ’ ಎನ್ನುತ್ತಾರೆ, ಗುಲೇರಿಯಾ.

ಕೊರೊನಾ ಕಣ್ಮರೆಯಾಗದು: “ಕೊರೊನಾ ಜಗತ್ತಿನಿಂದ ಕಣ್ಮರೆ ಆಗುವುದಿಲ್ಲ. ಕೆಲ ವರ್ಷಗಳವರೆಗೂ ಇದನ್ನು ನಾವು ಸಂಪೂರ್ಣ ನಿರ್ಮೂಲನೆ ಮಾಡುವುದು ಅಸಾಧ್ಯ. ಇದೊಂದು ಸೌಮ್ಯ ರೋಗವಾಗಿ ನಮ್ಮೊಂದಿಗೆ ಇರುವ ಸಾಧ್ಯತೆಯೇ ಅಧಿಕ’ ಎಂದಿದ್ದಾರೆ. “2023ರ ವೇಳೆಗೆ ಕೊರೊನಾ ಸಾಂಕ್ರಾಮಿಕ ತಗ್ಗಬಹುದು. ಆದರೂ, ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯು ಎಚ್‌ಒ) 2023ಕ್ಕೂ ಮೊದಲೇ ಕೊರೊನಾ ಅಂತ್ಯ ಘೋಷಿ­ಸಲು ಶ್ರಮಪಡುತ್ತಿದೆ’ ಎಂದು ಹೇಳಿದ್ದಾರೆ.

ಭಾರತಕ್ಕೆ ಆಕ್ಸ್‌ಫ‌ರ್ಡ್‌ ಲಸಿಕೆಯೇ ಸೂಕ್ತ?
“ಶೇ.60- 90ರಷ್ಟು ಪರಿಣಾಮಕಾರತ್ವ ಹೊಂದಿರುವ ಆಕ್ಸ್‌ಫ‌ರ್ಡ್‌ ವಿವಿ- ಅಸ್ಟ್ರಾಜೆನೆಕಾ ಲಸಿಕೆ ಭಾರತಕ್ಕೆ ಎಲ್ಲ ರೀತಿಯಿಂದಲೂ ಸೂಕ್ತ. ಆದರೆ, ಇದನ್ನು ಈಗಲೇ ಅಂದಾಜಿಸುವುದು ಕಷ್ಟ’ ಎಂದು ತಜ್ಞರು “ಪಿಟಿಐ’ ಜತೆಗೆ ಅನಿಸಿಕೆ ಹಂಚಿಕೊಂಡಿದ್ದಾರೆ. “ಮಾಡೆರ್ನಾ, ಫೈಜರ್‌ ಅಥವಾ ಸ್ಪುಟ್ನಿಕ್‌-5ಕ್ಕೆ ಹೋಲಿಸಿದಲ್ಲಿ ಆಕ್ಸ್‌ಫ‌ರ್ಡ್‌ ವಿವಿ ಸಿದ್ಧಪಡಿಸುತ್ತಿರುವ ಲಸಿಕೆ ಭಾರತಕ್ಕೆ ಹೆಚ್ಚು ಕಾರ್ಯಸಾಧ್ಯವಾಗುವ ಆಯ್ಕೆ’ ಎಂದಿದ್ದಾರೆ. “ಬೇರೆಲ್ಲ ಲಸಿಕೆಗಳಿಗೆ ಹೋಲಿಸಿದಲ್ಲಿ ಆಕ್ಸ್‌ಫ‌ರ್ಡ್‌ ಲಸಿಕೆಗೆ ಕಡಿಮೆ ದರವಿದೆ. ಅಲ್ಲದೆ ಫೈಜರ್‌- ಬಯೋಎನ್‌ಟೆಕ್‌ ಸಂಗ್ರಹಕ್ಕೆ -70 ಡಿಗ್ರಿ, ಸ್ಪುಟ್ನಿಕ್‌ 5ಕ್ಕೆ -20 ಡಿಗ್ರಿ, ಮಾಡೆರ್ನಾಗೆ -22 ಡಿಗ್ರಿ ಕನಿಷ್ಠ ಉಷ್ಣಾಂಶ ಕಾಪಾಡಿಕೊಳ್ಳಬೇಕು. ಆದರೆ, ಆಕ್ಸ್‌ಫ‌ರ್ಡ್‌ ಲಸಿಕೆಯನ್ನು ಸಾಮಾನ್ಯ ಫ್ರಿಡ್ಜ್ ನಲ್ಲೂ ಸಂರಕ್ಷಿಸಿಟ್ಟುಕೊಳ್ಳಬಹುದು. ಅತ್ಯಂತ ಸುಲಭವಾಗಿ ಸರಬರಾಜು ಮಾಡಬಹುದು’ ಎಂದು ಆಕ್ಸ್‌ಫ‌ರ್ಡ್‌ ವ್ಯಾಕ್ಸಿನ್‌ ಗ್ರೂಪ್‌ನ ನಿರ್ದೇಶಕ ಆ್ಯಂಡ್ರೂ ಪೊಲಾರ್ಡ್‌ ತಿಳಿಸಿದ್ದಾರೆ.

Advertisement

ಕೈದಿಗಳಿಗೆ ಕೊರೊನಾ ತಂದ ಪರೋಲ್‌ ಗಿಫ್ಟ್
ಕೊರೊನಾದಿಂದ ಯಾರಿಗೆ ನಷ್ಟವಾಗಿದೆಯೋ ಗೊತ್ತಿಲ್ಲ, ಆದರೆ ಕೈದಿಗಳಿಗೆ ಮಾತ್ರ ಈ ಬಿಕ್ಕಟ್ಟು ಭರ್ಜರಿ ಗಿಫ್ಟ್ ನೀಡಿದೆ. ಅದರಲ್ಲೂ ಮಧ್ಯಪ್ರದೇಶದಲ್ಲಿ 4 ಸಾವಿರ ಕೈದಿಗಳಿಗೆ ಪರೋಲ್‌ ಅವಧಿಯನ್ನು ಮತ್ತೆ 60 ದಿನಗಳವರೆಗೆ ವಿಸ್ತರಿಸಲಾಗಿದೆ! 2ನೇ ಅಲೆ ಭೀತಿಯಲ್ಲಿರುವ ಮಧ್ಯಪ್ರದೇಶದಲ್ಲಿ ಈಗಾಗಲೇ 4 ಸಾವಿರ ಕೈದಿಗಳನ್ನು ಪರೋಲ್‌ ರಜೆ ಮೇಲೆ ಮನೆಗಳಿಗೆ ಕಳುಹಿಸಲಾಗಿತ್ತು. ಕಳೆದೊಂದು ವಾರದಿಂದ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮತ್ತೆ 2 ತಿಂಗಳು ಪರೋಲ್‌ ನೀಡಲಾಗಿದೆ.

ಸ್ಪುಟ್ನಿಕ್‌- 5 ಶೇ.95 ಪರಿಣಾಮಕಾರಿ!
“ರಷ್ಯಾ ಸಿದ್ಧಪಡಿಸಿರುವ ಸ್ಪುಟ್ನಿಕ್‌-5 ಲಸಿಕೆ ಶೇ.95 ಪರಿಣಾಮಕಾರಿ’ ಎಂದು ರಷ್ಯನ್‌ ಡೈರೆಕ್ಟ್ ಇನ್ವೆಸ್ಟ್‌ಮೆಂಟ್‌ ಫ‌ಂಡ್‌ (ಆರ್‌ಡಿಐಎಫ್) ಸಿಇಒ ಕಿರಿಲ್ ಡಿಮಿಟ್ರೀವ್‌ ತಿಳಿಸಿದ್ದಾರೆ. “ಇದು ಕೇವಲ ರಷ್ಯಾಕ್ಕೆ ಮಾತ್ರ ಸಿಹಿಸುದ್ದಿ ಅಲ್ಲ, ವಿಶ್ವಕ್ಕೇ ಮಹಾನ್‌ ಸುದ್ದಿ. ಏಕೆಂದರೆ, ಹೆಚ್ಚು ಪರಿಣಾಮಕಾರಿ­ಯಾಗಿರುವ ಲಸಿಕೆಗಳಲ್ಲಿ ಒಂದಾಗಿರುವ ಸ್ಪುಟ್ನಿಕ್‌-5 ಕೈಗೆಟುಕುವ ದರದಲ್ಲಿ ಲಭ್ಯವಾಗಲಿದೆ’ ಎಂಬ ಭರವಸೆ ನೀಡಿ ದ್ದಾರೆ. ರಷ್ಯಾದ ಗ್ಯಾಮೆಲಿಯಾ ಸಂಶೋ­ಧನಾ ಕೇಂದ್ರ, ಹೈದರಾಬಾದ್‌ನ ಡಾ. ರೆಡ್ಡೀಸ್‌ ಲ್ಯಾಬ್‌ನ ಸಹಭಾಗಿತ್ವ­ದೊಂದಿಗೆ ಭಾರತದಲ್ಲಿ ಲಸಿಕೆ
ಪ್ರಯೋಗ ನಡೆಸುತ್ತಿದೆ.

ಸೈಡ್‌ ಎಫೆಕ್ಟ್ ತಡೆಗೆ ಎಐಎಫ್ಐ ತಂಡ ರಚಿಸಿ
ಲಸಿಕೆ ಬಂದಾದ ಮೇಲೆ “ಸೈಡ್‌ ಎಫೆಕ್ಟ್’ ಹಾವಳಿ ಇನ್ನೊಂದು ತಲೆನೋವು. ಇದನ್ನು ನಿಯಂತ್ರಿಸಲು ಎಲ್ಲ ರಾಜ್ಯ ಸರಕಾರಗಳು, ಜಿಲ್ಲಾಡಳಿತಗಳು “ರೋಗ ನಿರೋಧಕ ನಂತರದ ಪ್ರತಿಕೂಲ ಘಟನೆಗಳ ಕಣ್ಗಾವಲು ವ್ಯವಸ್ಥೆ’ (ಎಇಎಫ್ಐ) ಜಾರಿಗೆ ತರುವಂತೆ ಆರೋಗ್ಯ ಸಚಿವಾ ಲಯ ಕಾರ್ಯದರ್ಶಿ ಡಾ. ಮನೋಹರ ಅಗ್ನಾನಿ, ಸರಕಾರಗಳಿಗೆ ಪತ್ರ ಬರೆದಿದ್ದಾರೆ. “ಲಸಿಕೆ ತಲುಪುವ ಮೊದಲೇ ಎಇಎಫ್ಐ ತಂಡ ರಚಿಸುವ ಅವಶ್ಯಕತೆ ಬಹಳ ಇದೆ. ನರರೋಗತಜ್ಞರು, ಹೃದ್ರೋಗ ತಜ್ಞರು, ಶ್ವಾಸಕೋಶ ತಜ್ಞರನ್ನೊಳಗೊಂಡ ತಂಡವಿದ್ದರೆ ಲಸಿಕೆ ಅಡ್ಡಪರಿಣಾಮಗಳನ್ನು ನಿಯಂತ್ರಿಸಬಹುದು’ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next