Advertisement

ಕಚೇರಿಯಲ್ಲಿ ಲಸಿಕೆ; ಪ್ರಸ್ತುತದಲ್ಲಿ ಉತ್ತಮ ನಿರ್ಧಾರ

11:05 PM Apr 08, 2021 | Team Udayavani |

ದೇಶದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಭಾರೀ ಪ್ರಮಾಣದಲ್ಲಿಯೇ ಏರಿಕೆಯಾಗುತ್ತಿದೆ. ಗುರುವಾರವಂತೂ ಸೋಂಕಿತರ ಸಂಖ್ಯೆಯಲ್ಲಿ ದಾಖಲೆಯೇ ಆಗಿದೆ. ಕೋವಿಡ್ ಕಾಣಿಸಿಕೊಂಡ ಬಳಿಕ, ಇದೇ ಮೊದಲ ಬಾರಿಗೆ ದೇಶದಲ್ಲಿ ಸೋಂಕಿತರ ಸಂಖ್ಯೆ 1.26 ಲಕ್ಷ ದಾಟಿದೆ. ಕರ್ನಾಟಕದಲ್ಲೂ ಇತ್ತೀಚೆಗೆ ಪ್ರತೀ ದಿನವೂ 5 ರಿಂದ 6 ಸಾವಿರದಾಚೆ ಸೋಂಕಿನ ಪ್ರಕರಣಗಳು ಕಾಣಿಸುತ್ತಿವೆ.

Advertisement

ಕೋವಿಡ್ ಹೆಚ್ಚಾಗುತ್ತಿರುವ ಮಧ್ಯೆಯೇ ಲಸಿಕೆಯನ್ನು ಹೆಚ್ಚೆಚ್ಚು ಮಂದಿ ಪಡೆದುಕೊಳ್ಳಬೇಕು ಎಂದು ವೈದ್ಯರು ಸಲಹೆ ನೀಡುತ್ತಿದ್ದಾರೆ. ಕೊರೊನಾ ಮುನ್ನೆಚ್ಚರಿಕೆಗಳ ಪಾಲನೆ ಜತೆಯಲ್ಲಿ ಲಸಿಕೆ ಪಡೆದರೆ ಕೋವಿಡ್ ತಡೆಗಟ್ಟ ಬಹುದು ಎಂದು ತಜ್ಞ  ವೈದ್ಯರೇ ಹೇಳುತ್ತಿದ್ದಾರೆ. ಹೀಗಾ ಗಿ ಸರಕಾರಗಳೂ ಲಸಿಕೆ ನೀಡುವ ಪ್ರಮಾಣವನ್ನು ಹೆಚ್ಚಳ ಮಾಡುತ್ತಿವೆ.

ಇದರ ಮಧ್ಯೆಯೇ ಕೆಲಸದ ಸ್ಥಳದಲ್ಲಿಯೇ ಲಸಿಕೆ ಕೊಡಲು ಹೊರಟಿರುವ ಕೇಂದ್ರ ಸರಕಾರದ ನಿರ್ಧಾರ ಇಂದಿನ ಪರಿಸ್ಥಿತಿಯಲ್ಲಿ ಸ್ವಾಗತಾರ್ಹವಾದದ್ದು. ಎಪ್ರಿಲ್‌ 11ರಿಂದ ಈ ನಿರ್ಧಾರ ಜಾರಿಯಾಗಲಿದ್ದು, ಎಲ್ಲ ರಾಜ್ಯಗಳಲ್ಲೂ ಲಸಿಕೆ ಪಡೆಯಲು ಅವಕಾಶವುಂಟು. ಜತೆಯಲ್ಲಿ 45 ವರ್ಷ ಮೇಲ್ಪಟ್ಟ ಉದ್ಯೋಗಿಗಳಿಗೆ ಮಾತ್ರ ಲಸಿಕೆ ಸಿಗಲಿದೆ. ಅಂದರೆ ಸುಮಾರು 100ಕ್ಕಿಂತ ಹೆಚ್ಚು ಇರುವ ಸಂಸ್ಥೆಗಳಲ್ಲಿ ಮಾತ್ರ ಈ ಅವಕಾಶ ಸಿಗಲಿದೆ.

ಸರಕಾರದ ಈ ನಿರ್ಧಾರದಿಂದಾಗಿ ದೇಶಾದ್ಯಂತ ಲಸಿಕೆ ಪಡೆಯುವವರ ಪ್ರಮಾಣ ಇನ್ನೂ ಏರಿಕೆಯಾಗುವ ಸಾಧ್ಯತೆ ಇದೆ. ಎಷ್ಟೋ ಮಂದಿಗೆ ಕೆಲಸದ ಸಮಯದಲ್ಲಿ ನೋಂದಣಿ ಮಾಡಿಸಿ, ಲಸಿಕೆ ಪಡೆಯಲು ಸಾಧ್ಯವಾಗದೇ ಹೋಗಿರಬಹುದು. ಕೆಲಸದ ಸ್ಥಳದಲ್ಲಿಯೇ ಲಸಿಕೆ ಕೊಡುವುದರಿಂದ ಇಂಥವರಿಗೆ ಹೆಚ್ಚಿನ ಪ್ರಯೋಜನ ಸಿಗುವ ಸಾಧ್ಯತೆ ಇದೆ. ಅದರಲ್ಲೂ ದೊಡ್ಡ ದೊಡ್ಡ ಕಂಪೆನಿಗಳಲ್ಲಿ ಇದು ಇನ್ನಷ್ಟು ಪರಿಣಾ ಮಕಾರಿಯಾಗಬಹುದು. ಉದ್ಯೋಗಿಗಳೂ ಈ ಅವಕಾಶವನ್ನು ಸೂಕ್ತವಾಗಿ ಬಳಸಿಕೊಳ್ಳಬೇಕು.

ಇನ್ನು ಕರ್ನಾಟಕದಲ್ಲಿ ಲಸಿಕೆ ನೀಡುವ ಪ್ರಮಾಣದಲ್ಲಿ ಭಾರೀ ಹೆಚ್ಚಳವಾಗಿದೆ. ಮೊದಲ ಮತ್ತು ಎರಡನೇ ಹಂತವೂ ಸೇರಿ, ರಾಜ್ಯದಲ್ಲಿ 50 ಲಕ್ಷ ಮಂದಿಗೆ ಈಗಾಗಲೇ ಲಸಿಕೆ ನೀಡಲಾಗಿದೆ. ದೇಶದ ಲೆಕ್ಕಾಚಾರದಲ್ಲೂ ಲಸಿಕೆ ನೀಡುವ ವಿಚಾರದಲ್ಲಿ ಹೊಸ ದಾಖಲೆ ನಿರ್ಮಾಣವಾಗಿದೆ. ಭಾರತ ಅಮೆರಿಕವನ್ನೇ ಹಿಂದಿಕ್ಕಿದೆ. ಪ್ರತೀ ದಿನ ಸರಾಸರಿ 30 ಲಕ್ಷ ಮಂದಿಗೆ ಲಸಿಕೆ ಡೋಸ್‌ ನೀಡಲಾಗಿದೆ. ಇದುವರೆಗೆ 8.70 ಕೋಟಿ ಮಂದಿಗೆ ಲಸಿಕೆ ನೀಡಲಾಗಿದೆ. ಮಂಗಳವಾರದಿಂದ ಬುಧವಾರಕ್ಕೆ 33 ಲಕ್ಷ ಮಂದಿಗೆ ಡೋಸ್‌ ನೀಡಲಾಗಿದೆ. ಅದೇ ಅಮೆರಿಕದಲ್ಲಿ 29 ಲಕ್ಷ ಮಂದಿಗೆ ಲಸಿಕೆ ನೀಡಲಾಗುತ್ತಿದೆ.

Advertisement

ಇವೆಲ್ಲದರ ಮಧ್ಯೆ ಕೆಲವು ರಾಜ್ಯಗಳು ಲಸಿಕೆ ಕೊರತೆಯ ಬಗ್ಗೆ ಆಕ್ಷೇಪವೆತ್ತಿರುವುದು ಆತಂಕದ ವಿಚಾರ. ಈ ಬಗ್ಗೆ ಕೇಂದ್ರ ಸರಕಾರವೂ ಗಮನ ಹರಿಸಬೇಕು. ಹೆಚ್ಚಾಗಿ ಸೋಂಕು ಕಾಣಿಸಿಕೊಂಡಿರುವ ರಾಜ್ಯಗಳಿಗೆ, ಹೆಚ್ಚು ಲಸಿಕೆ ಕಳುಹಿಸಿದರೆ ಉತ್ತಮ. ಆಗ ಈ ರಾಜ್ಯಗಳಲ್ಲಿ ಕೋವಿಡ್ ಹತೋಟಿಗೆ ಬರುವ ಸಾಧ್ಯತೆ ಇದೆ. ಜತೆಗೆ ಇಂಥ ವಿಚಾರದಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳೂ ರಾಜಕೀಯ ಮಾಡುವುದನ್ನು ಬದಿಗಿಟ್ಟು, ಲಸಿಕೆ ವಿತರಣೆಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು.

ಇನ್ನು ಗುರುವಾರ ರಾತ್ರಿ ಮಾತನಾಡಿದ ಪ್ರಧಾನಿ ಮೋದಿ ಅವರು ಲಸಿಕೆ ವ್ಯರ್ಥ ಮಾಡುವುದು ಬೇಡ ಎಂದಿದ್ದಾರೆ. ಇದಕ್ಕಾಗಿಯೇ ಎ.11ರಿಂದ 14ರ ವರೆಗೆ ಲಸಿಕಾ ಉತ್ಸವ ಮಾಡಲು ಕರೆ ನೀಡಿದ್ದಾರೆ. ಇದೂ ಕೂಡ ಉತ್ತಮ ನಿರ್ಧಾರವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next