Advertisement

ಕರಾವಳಿಯಲ್ಲಿ ಇಂದಿನಿಂದ ಲಸಿಕೆ ವಿತರಣೆ

02:12 AM Jan 16, 2021 | Team Udayavani |

ಮಂಗಳೂರ: ದ.ಕ. ಜಿಲ್ಲೆಯ 6 ಲಸಿಕಾ ಕೇಂದ್ರಗಳಲ್ಲಿ ಜ.16ರಂದು ಮೊದಲನೇ ಹಂತದ ಕೋವಿಡ್‌ ಲಸಿಕೆ ವಿತರಣೆಗೆ ತಯಾರಿ ನಡೆಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ| ಕೆ.ವಿ. ರಾಜೇಂದ್ರ ಹೇಳಿದರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಗೆ ಈಗಾಗಲೇ 24,500 ಡೋಸ್‌ ಕೋವಿಡ್‌ ಲಸಿಕೆ ಸರಬರಾಜು ಆಗಿದೆ. ಮೊದಲನೇ ಹಂತದಲ್ಲಿ ನೋಂದಣಿಗೊಂಡ ಆರೋಗ್ಯ ಕಾರ್ಯಕರ್ತೆಯರಿಗೆ ಲಸಿಕೆ ನೀಡಲಾಗುವುದು. ವೆನ್ಲಾಕ್‌ ಆಸ್ಪತ್ರೆಯ ಆಯುಷ್‌ ವಿಭಾಗ, ನಗರ ಪ್ರಾ. ಆರೋಗ್ಯ ಕೇಂದ್ರ ಸುರತ್ಕಲ್‌, ಬಂಟ್ವಾಳ, ಬೆಳ್ತಂಗಡಿ, ಸುಳ್ಯ ತಾ. ಆಸ್ಪತ್ರೆ, ಪುತ್ತೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಲಸಿಕೆ ನೀಡಲಾಗುವುದು ಎಂದರು.

ಒಂದು ಲಸಿಕಾ ಶಿಬಿರದಲ್ಲಿ ದಿನಕ್ಕೆ 100 ಮಂದಿ ಫಲಾನುಭವಿಗಳಿಗೆ ಮಾತ್ರ ಲಸಿಕೆ ನೀಡಲಾಗುವುದು. ಲಸಿಕೆ ನೀಡಿದ ಬಳಿಕ ಪ್ರತಿಯೊಬ್ಬ ಫಲಾನುಭವಿಯೂ 30 ನಿಮಿಷಗಳ ಕಾಲ ಆರೋಗ್ಯ ಕಾರ್ಯಕರ್ತೆಯರ ನಿಗಾವಣೆಯಲ್ಲಿ ಕಡ್ಡಾಯವಾಗಿ ವಿಶ್ರಾಂತಿ ಪಡೆಯಬೇಕು. ಲಸಿಕೆ ನಂತರ ಏನಾದರೂ ಅಡ್ಡಪರಿಣಾಮ ಕಾಣಿಸಿಕೊಂಡಲ್ಲಿ ವೈದ್ಯಕೀಯ ತಂಡದ ಮೂಲಕ ಚಿಕಿತ್ಸೆಗೆ ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ಕೋವಿನ್‌ ವೆಬ್‌ನಲ್ಲಿ ಸರಕಾರಿ ವ್ಯವಸ್ಥೆಯಲ್ಲಿ 89 ಸಂಸ್ಥೆಗಳಲ್ಲಿ 10,212 ಹಾಗೂ ಖಾಸಗಿ ವ್ಯವಸ್ಥೆಯಲ್ಲಿ 818 ಸಂಸ್ಥೆಗಳಲ್ಲಿ 42,169 ಮಂದಿ ನೋಂದಣಿ ಮೂಲಕ ಒಟ್ಟು 52,381 ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ಇದರಲ್ಲಿ 89 ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿದಂತೆ ಆಸ್ಪತ್ರೆಗಳಲ್ಲಿ ನೀಡುವ ವ್ಯವಸ್ಥೆ ಮಾಡಲಾಗಿದೆ. ಇದೇ ರೀತಿ ಖಾಸಗಿಯಲ್ಲಿ 17 ಸಂಸ್ಥೆಗಳಲ್ಲಿ ಮುಖ್ಯವಾಗಿ ಮೆಡಿಕಲ್‌ ಕಾಲೇಜು, ನರ್ಸಿಂಗ್‌ ಹಾಸ್ಪಿಟಲ್‌ನಲ್ಲಿ ನೀಡಲಾಗುತ್ತದೆ ಎಂದು ವಿವರಿಸಿದರು.

11.30ಕ್ಕೆ ಉದ್ಘಾಟನೆ :

Advertisement

ದಿಲ್ಲಿಯಲ್ಲಿ ಪ್ರಧಾನಿ ಮೋದಿ ಅವರು ಜ.16ರಂದು ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಬಳಿಕ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ವೆನ್ಲಾಕ್‌ನ ಆಯುಷ್‌ ಕಟ್ಟಡದಲ್ಲಿ ಬೆಳಗ್ಗೆ 11.30ಕ್ಕೆ ಲಸಿಕೆ ವಿತರಣೆಗೆ ಚಾಲನೆ ನೀಡಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ದ.ಕ. ಜಿಲ್ಲಾ ಆರೋಗ್ಯಾ ಧಿಕಾರಿ ರಾಮಚಂದ್ರ ಬಾಯರಿ ಇದ್ದರು.

ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಚಾಲನೆ :

ಉಡುಪಿ: ರಾಷ್ಟ್ರಮಟ್ಟದಲ್ಲಿ ಕೋವಿಡ್ ಲಸಿಕೆ ವಿತರಣೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಉದ್ಘಾಟಿಸಿದ ಬಳಿಕ ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಜ. 16ರ ಬೆಳಗ್ಗೆ 10.30ಕ್ಕೆ ಉದ್ಘಾಟಿಸಲಾಗುತ್ತಿದೆ.

ಶಾಸಕ ಕೆ.ರಘುಪತಿ ಭಟ್‌, ಜಿ.ಪಂ. ಅಧ್ಯಕ್ಷ ದಿನಕರ ಬಾಬು, ಜಿಲ್ಲಾಧಿಕಾರಿ ಜಿ. ಜಗದೀಶ್‌, ಜಿ.ಪಂ. ಸಿಇಒ ಡಾ| ನವೀನ್‌ ಭಟ್‌, ಜಿಲ್ಲಾ ಆರೋಗ್ಯಾಧಿಕಾರಿ ಡಾ| ಸುಧೀರ್‌ಚಂದ್ರ ಸೂಡ ಮೊದಲಾದವರು ಭಾಗವಹಿಸುವರು.  ಜಿಲ್ಲೆಗೆ 12,000 ಲಸಿಕೆ ಬಂದಿದ್ದು ಜ. 16ರಂದು ಆರು ಕೇಂದ್ರಗಳಲ್ಲಿ ತಲಾ ನೂರರಂತೆ 600 ಕೋವಿಡ್‌ ಕಾರ್ಯಕರ್ತರಿಗೆ ವಿತರಿಸಲಾಗುತ್ತದೆ. ಉಡುಪಿ ಜಿಲ್ಲಾಸ್ಪತ್ರೆ, ಡಾ| ಟಿಎಂಎ ಪೈ ಆಸ್ಪತ್ರೆ, ಉಡುಪಿ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರ, ಕುಂದಾಪುರ ಮತ್ತು ಕಾರ್ಕಳದ ತಾಲೂಕು ಆಸ್ಪತ್ರೆ, ಕಂಡೂÉರು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ವಿತರಣೆ ನಡೆಯಲಿದೆ.  ಪ್ರಥಮ ಲಸಿಕೆಯನ್ನು ಸರಕಾರದ ಮಾರ್ಗದರ್ಶಿ ಸೂತ್ರದ ಪ್ರಕಾರ ಗ್ರೂಪ್‌ ಡಿ ಅಥವಾ ನಾನ್‌ಕ್ಲಿನಿಕಲ್‌ ಸಿಬಂದಿಗೆ ವಿತರಿಸಲಾಗುತ್ತದೆ.

ಲಸಿಕೆಯ ಬಗ್ಗೆ  ಭಯ ಬೇಡ :

“ವ್ಯಕ್ತಿಯ ಕೈ ಭುಜದ ಮಾಂಸ ಖಂಡಕ್ಕೆ ನೀಡುವ ಈ ಲಸಿಕೆಯ ಕುರಿತು ಯಾವುದೇ ಗೊಂದಲ, ಭಯದ ಅಗತ್ಯ ಬೇಡ. ವ್ಯಕ್ತಿಯಲ್ಲಿ ಅಡ್ವಾನ್ಸ್‌ ರಿಯಾಕ್ಷನ್‌ ಬಂದರೆ ಕೇಂದ್ರದಲ್ಲಿ ಆ್ಯಂಬುಲೆನ್ಸ್‌ ಜತೆಗೆ ವೈದ್ಯಕೀಯ ತಂಡ, ಹೆಲ್ತ್‌ ಕಿಟ್‌ಗಳನ್ನು ನೀಡಲಾಗುತ್ತಿದೆ’ -ಡಾ| ರಾಜೇಂದ್ರ ಕೆ.ವಿ.,  ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next