ಮಾನ್ವಿ: ದೇಶದಲ್ಲಿ ಹಂತ ಹಂತವಾಗಿ ಕೋವಿಡ್ ವ್ಯಾಕ್ಸಿನ್ ನೀಡಲಾಗುತ್ತಿದ್ದು, ಮಾನ್ವಿ ಮತ್ತು ಸಿರವಾರ ವಿಭಾಗದಲ್ಲಿ ಚುಚ್ಚುಮದ್ದು ಪಡೆದವರ ಸಂಖ್ಯೆ 10 ಸಾವಿರದ ಗಡಿ ದಾಟಿದೆ.
ತಾಲೂಕಿನ 11 ಆರೋಗ್ಯ ಕೇಂದ್ರಗಳಲ್ಲಿ ಚುಚ್ಚುಮದ್ದು ನೀಡಲಾಗುತ್ತಿದ್ದು, 9 ಪ್ರಾಥಮಿಕ ಆರೋಗ್ಯ ಕೇಂದ್ರ, 1 ಸಮುದಾಯ ಆರೋಗ್ಯ ಕೇಂದ್ರ ಹಾಗೂ 1 ಪಟ್ಟಣದ ತಾಲೂಕು ಸಾರ್ವಜನಿಕ ಆರೋಗ್ಯ ಕೇಂದ್ರದಲ್ಲಿ ಚುಚ್ಚುಮದ್ದು ನೀಡಲಾಗುತ್ತಿದೆ. ಇದೇ ವರ್ಷ ಜ.16ರಿಂದ ವಿವಿಧ ಇಲಾಖೆಯ ಕೋವಿಡ್ ವಾರಿಯರ್ಗೆ ಚುಚ್ಚುಮದ್ದು ನೀಡಲು ಆರಂಭಿಸಲಾಗಿತ್ತು. ಮಾರ್ಚ್ 1ರಿಂದ 60 ವರ್ಷ ದಾಟಿದ ಎಲ್ಲರಿಗೂ ಮತ್ತು 45ವರ್ಷ ದಾಟಿದ ಬಿಪಿ, ಮಧುಮೇಹ ಸೇರಿದಂತೆ ಇತರೆ ಆರೋಗ್ಯ ಸಮಸ್ಯೆ ಇರುವವರಿಗೆ ಮಾತ್ರ ವ್ಯಾಕ್ಸಿನ್ ನೀಡಲಾಗುತ್ತಿದ್ದು, ಏ.1ರಿಂದ 45ವರ್ಷ ದಾಟಿ ಎಲ್ಲರಿಗೆ ಚುಚ್ಚುಮದ್ದು ನೀಡಲಾಗುತ್ತದೆ.
10ಸಾವಿರ ದಾಟಿದ ಚುಚ್ಚುಮದ್ದು: ಕೋವಿಡ್ ವ್ಯಾಕ್ಸಿನ್‌ನ ಒಂದನೇ ಚುಚ್ಚುಮದ್ದು ಪಡೆದವರ ಸಂಖ್ಯೆ ಮಾರ್ಚ್ 25ಕ್ಕೆ 10145 (45ವರ್ಷ ದಾಟಿದ) ಆಗಿದೆ. ಸರ್ಕಾರಿ, ಖಾಸಗಿ ಆಸ್ಪತ್ರೆ ಸಿಬ್ಬಂದಿ ಮತ್ತು ಇತರೆ ಇಲಾಖೆಗಳ ಕೋವಿಡ್ ವಾರಿಯರ್ಗಳು ಸೇರಿ 1919 ಮುಖ್ಯವಾಹಿನಿ ಜನರಿಗೆ ಒಂದು ಮತ್ತು ಎರಡನೇ ಚುಚ್ಚುಮದ್ದು ನೀಡಲಾಗಿದೆ.
ತಾಲೂಕಿನಲ್ಲಿ ಇದುವರೆಗೂ 12064 ಜನರಿಗೆ ಚುಚ್ಚುಮದ್ದು ನೀಡಲಾಗಿದ್ದು, 5296 ಪುರುಷರು, 6768 ಮಹಿಳೆಯರು ವ್ಯಾಕ್ಸಿನ್ ಪಡೆದಿದ್ದಾರೆ. ಪ್ರಕರಣ ಪತ್ತೆ: ಮಾ.12ರಂದು 1,ಮಾ.18ರಂದು 3, ಮಾ.24ರಂದು 1, ಮಾ.26ರಂದು ಮಲ್ಲದಗುಡ್ಡ, ಕವಿತಾಳ, ಕೆ.ಗುಡದಿನ್ನಿ, ಮಾನ್ವಿಯಲ್ಲಿ ಒಂದೊಂದು ಪ್ರಕರಣಗಳು ಹಾಗೂ ಮಾ.28ರಂದು ಮಾನ್ವಿ-2, ಮತ್ತು ಕವಿತಾಳ-2 ಪ್ರಕರಣ ಸೇರಿ ಈ ತಿಂಗಳಲ್ಲಿ ಒಟ್ಟು 13 ಕೋವಿಡ್ -19 ಪಾಜಿಟಿವ್ ಪ್ರಕರಣಗಳು ತಾಲೂಕಿನಲ್ಲಿ ಪತ್ತೆಯಾಗಿವೆ. ಭಯ ಪಡದಿರಿ: ಕೋವಿಡ್ ವ್ಯಾಕ್ಸಿನ್ ಚುಚ್ಚುಮದ್ದು ಪಡೆಯುವುದರಿಂದ ಅಡ್ಡಪರಿಣಾಮವಿಲ್ಲ. ವ್ಯಾಕ್ಸಿನ್ ನೀಡಿದ ನಂತರ ಆಸ್ಪತ್ರೆಯಲ್ಲೇ ಅರ್ಧಗಂಟೆ ನಿಗಾ ವಹಿಸಲಾಗುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸಂದೇಶಗಳಿಗೆ ತಲೆ ಕೆಡಿಸಿಕೆಳ್ಳಬಾರದು.
ತಲೆ ನೋವು, ಕೈಕಾಲು ನೋವು ಇತರೆ ಸಮಸ್ಯೆ ಕಂಡು ಬಂದರೆ ಕೂಡಲೆ ಚಿಕಿತ್ಸೆ ನೀಡಲಾಗುತ್ತದೆಹೀಗಾಗುವುದು ತುಂಬಾ ವಿರಳ. ವ್ಯಾಕ್ಸಿನ್ ಪಡೆಯಲು ಮುಂದಾಗಬೇಕು ಎನ್ನುತ್ತಾರೆ ವೈದ್ಯ ಡಾ|ಚಂದ್ರಶೇಖರಯ್ಯ ಸ್ವಾಮಿ.