ವರದಿ: ಡಾ|ಬಸವರಾಜ ಹೊಂಗಲ್
ಧಾರವಾಡ: ಹಲವು ವರ್ಷಗಳಿಂದ ಪೀಡಿಸುತ್ತಿದ್ದ ಮಂಡೆನೋವು ಮಂಗಮಾಯ, ಎದೆಯುರಿ, ಉರಿಯೂತ ಸಂಬಂಧಿ ಕರುಳು ಕಾಯಿಲೆಗಳಿಗೂ ಮುಕ್ತಿ ಸಿಕ್ಕಿದೆ, ಮಂಜು ಮುಸುಕಾಗಿದ್ದ ಕಣ್ಣುಗಳಲ್ಲಿ ದೃಷ್ಟಿ ಸ್ಪಷ್ಟವಾಗಿದೆ, ಬೆನ್ನು ನೋವು ನಿವಾರಣೆಯಾಗಿದೆ. ಅಬ್ಬಬ್ಟಾ ಲಸಿಕೆಯೊಂದು ಪ್ರಯೋಜನ ಹಲವು ಎನ್ನುತ್ತಿದ್ದಾರೆ ಲಸಿಕೆ ಪಡೆದವರಲ್ಲಿ ಅನೇಕರು.
ಹೌದು. ನೀವು ನಂಬಿದರೆ ನಂಬಿ ಬಿಟ್ಟರೆ ಬಿಡಿ. ಜಗತ್ತನ್ನೇ ಪೀಡಿಸಿದ ಕೊರೊನಾ ಮಹಾಮಾರಿಯನ್ನು ಹಿಮ್ಮೆಟ್ಟಿಸಲು ಸರ್ಕಾರ ನೀಡುತ್ತಿರುವ ಕೊರೊನಾ ಲಸಿಕೆ ಹಾಕಿಸಿಕೊಳ್ಳಲು ವರ್ಷದ ಹಿಂದೆ ಹಿಂದೇಟು ಹಾಕಿದವರು ಕೋಟಿ ಕೋಟಿ ಜನ. ಆದರೆ ಇದೀಗ ಕೊರೊನಾ ಲಸಿಕೆ ಬರಿ ಕೊರೊನಾ ತಡೆಗೆ ಮಾತ್ರವಲ್ಲ ಇತರೆ ದೀರ್ಘಕಾಲಿನ ಆರೋಗ್ಯ ಸಮಸ್ಯೆಗಳಿಗೆ ತಾತ್ಕಾಲಿಕವಾಗಿ ಗುಣೌಷಧವಾಗಿ ಮಾರ್ಪಾಟಾಗಿದ್ದು, ಲಸಿಕೆ ಪಡೆದವರ ಪೈಕಿ ಅನೇಕರು ಇದರಿಂದ ಸಣ್ಣಪುಟ್ಟ ಆರೋಗ್ಯ ಸಂಬಂಧಿ ಕಾಯಿಲೆಗಳು ಗುಣವಾಗುತ್ತಿವೆ ಎನ್ನುತ್ತಿದ್ದಾರೆ.
ಕೊರೊನಾ ಮಹಾಮಾರಿ ಹೆಡೆಮುರಿ ಕಟ್ಟಲು ಲಸಿಕೆ ಕಂಡು ಹಿಡಿದಿದ್ದು, 3ನೇ ಅಲೆಗೂ ಮುನ್ನವೇ ದೇಶದ ಎಲ್ಲಾ ಜನರಿಗೆ ಲಸಿಕೆ ನೀಡುವ ಧಾವಂತದಲ್ಲಿದೆ ಕೇಂದ್ರ ಸರ್ಕಾರ. ಹೀಗಾಗಿ ಗ್ರಾಮಗಳಲ್ಲಿ ಈ ಕುರಿತು ಆರಂಭದಲ್ಲಿ ತೀವ್ರ ನಿಷ್ಕಾಳಜಿ ವ್ಯಕ್ತವಾಯಿತು. ನಂತರ ಒಬ್ಬೊಬ್ಬರೇ ಲಸಿಕೆ ಪಡೆಯುತ್ತ ಸಾಗಿದರು. 1ನೇ ಲಸಿಕೆ ಪಡೆದ ನಂತರ ಅಂದರೆ 2021ರ ಏಪ್ರಿಲ್, ಮೇ ತಿಂಗಳಿನಲ್ಲಿ ಕಾಣಿಸಿಕೊಂಡ 2ನೇ ಕೊರೊನಾ ಅಲೆ ಸಂದರ್ಭದಲ್ಲಿ 1 ಲಸಿಕೆ ಹಾಕಿಸಿಕೊಂಡವರು ಪ್ರಾಣಾಪಾಯದಿಂದ ದೂರವಾಗಿದ್ದು ನಿಖರವಾಯಿತು. ಅದೂ ಅಲ್ಲದೇ 2ನೇ ಅಲೆ ಹಳ್ಳಿಗಳನ್ನು ತೀವ್ರವಾಗಿ ಬಾಧಿಸಿದ್ದರಿಂದ ನಂತರದ ದಿನಗಳಲ್ಲಿ ಗ್ರಾಮಗಳಲ್ಲಿ ಕೂಡ ಕೊರೊನಾ ಲಸಿಕೆ ಪಡೆಯುವವರ ಸಂಖ್ಯೆ ಹೆಚ್ಚಿತು. ಹೀಗೆ ಹೆದರುತ್ತಲೇ ಲಸಿಕೆ ಪಡೆದ ಕೆಲವರಲ್ಲಿ ತಮ್ಮಲ್ಲಿದ್ದ ಈ ಮುಂಚಿನ ಇತರೆ ಆರೋಗ್ಯ ಸಂಬಂಧಿ ಕಾಯಿಲೆಗಳು ಗುಣಮುಖವಾಗಿದ್ದು ಕಂಡು ಬಂತು. ನಂತರ ಹಳ್ಳಿಗರು ನಿರ್ಭಯವಾಗಿ ಲಸಿಕೆ ಪಡೆಯುತ್ತಿದ್ದಾರೆ.
ಹಿರಿಯರಲ್ಲಿ ಹೆಚ್ಚು ಚೇತರಿಕೆ : ಕೊರೊನಾ ಲಸಿಕೆ ಮುದಿತನ ಮತ್ತು ವಯೋಸಹಜ ಕಾಯಿಲೆಗಳಂತೂ ರಾಮಬಾಣದಂತೆ ಪರಿಣಮಿಸುತ್ತಿದೆ ಎನ್ನಲಾಗಿದೆ. ಕಾರಣ, ಕೈಕಾಲು ನೋವು, ಮಂಡೆನೋವು, ಬೆನ್ನು ಹುರಿನೋವು, ಅಸಹಜ ತಲೆನೋವು, ಮೂಲವ್ಯಾಧಿ, ಉದರವ್ಯಾಧಿ, ಕರುಳು ಸಂಬಂಧ ಕಾಯಿಲೆಗಳು, ನರರೋಗಗಳು, ಕೂದಲು ಉದುರುವಿಕೆ, ದೃಷ್ಟಿಹೀನತೆ, ಉಸಿರಾಟ ಸಂಬಂಧಿ ಕಾಯಿಲೆಗಳಿಗೆ ರಾಮಬಾಣವಾಗಿ ಪರಿಣಮಿಸಿದ್ದನ್ನು ಸ್ವತಃ ವ್ಯಾಕ್ಸಿನ್ ಪಡೆದುಕೊಂಡವರೇ ಬಹಿರಂಗವಾಗಿ ಹೇಳಿಕೊಳ್ಳುತ್ತಿದ್ದಾರೆ. ಈ ಪೈಕಿ ವಯೋವೃದ್ಧರಿಗೆ ಲಸಿಕೆ ಪಡೆದುಕೊಂಡ ಒಂದು ತಿಂಗಳಿನಲ್ಲಿ ಸಣ್ಣಪುಟ್ಟ ನೋವು, ಕಾಯಿಲೆಗಳು ದೂರವಾಗಿವೆ. ಹೀಗಾಗಿ ಲಸಿಕೆ ಪಡೆದ ಹಿರಿಯ ನಾಗರಿಕರೇ ಅತ್ಯಂತ ಉತ್ಸಾಹಿಗಳಾಗಿದ್ದಾರೆಂದು ಹಿರಿಯ ವೈದ್ಯರು ಹೇಳುತ್ತಾರೆ.
ಲಸಿಕೆಯಲ್ಲೇನಿದೆ?: ಕೊರೊನಾ ಲಸಿಕೆಯಲ್ಲಿ ನಮ್ಮ ದೇಹವನ್ನು ಕೆಟ್ಟ ವೈರಸ್‌ಗಳಿಂದ ರಕ್ಷಿಸಲು ಅಗತ್ಯವಾಗಿ ಬೇಕಿರುವ ರೋಗ ನಿರೋಧಕ ಶಕ್ತಿ ಇದೆ. ಅಷ್ಟೇಯಲ್ಲ, ಕೊರೊನಾ ವೈರಸ್‌ನಿಂದ ತೀವ್ರ ಹಾನಿಗೊಳಗಾಗುವ ಕುಪ್ಪಸದ ಸ್ವಾಸ್ಥ್ಯ ಕಾಪಾಡುವ ಶಕ್ತಿಯೂ ಇದೆ. ಈ ಹಿನ್ನೆಲೆಯಲ್ಲಿಯೇ ಲಸಿಕೆಯನ್ನು ಅಭಿವೃದ್ಧಿ ಪಡಿಸಿದ ಕಂಪನಿಗಳು ಲಸಿಕೆಗಳ ಪ್ರಯೋಗ ಸಂದರ್ಭದಲ್ಲಿ ಇದು ಕೊರೊನಾ ರೋಗವನ್ನು ಶೇಕಡಾ ಇಷ್ಟು ಪ್ರಮಾಣದಲ್ಲಿ ತಡೆಯಬಲ್ಲದು ಎನ್ನುವ ಅಂಕಿ ಅಂಶಗಳನ್ನು ಬೇರೆ ಬೇರೆಯಾಗಿ ನೀಡಿದ್ದವು.
ದೇಶದಲ್ಲಿ ಮೊದಲು ಕೋವಿಶೀಲ್ಡ್ ಲಸಿಕೆ 84 ದಿನಗಳ ಅಂತರದಲ್ಲಿ 2 ಲಸಿಕೆ, ಕೋವ್ಯಾಕ್ಸಿನ್ 28 ದಿನಗಳ ಅಂತರದಲ್ಲಿ ಎರಡು ಬಾರಿ ಪಡೆಯುವಂತೆ ಸಲಹೆ ನೀಡಿದ್ದವು. ಅಕ್ಟೋಬರ್ 15ರವರೆಗೂ ಧಾರವಾಡ ಜಿಲ್ಲೆಯಲ್ಲಿ ಒಟ್ಟು 15,84,570 ಜನರಿಗೆ ಲಸಿಕೆ ನೀಡಲಾಗಿದೆ. ಅಂದರೆ ಜಿಲ್ಲೆಯ ಶೇ.60 ಜನರು ಇದೀಗ ಕೊರೊನಾ ಲಸಿಕೆ ಪಡೆದುಕೊಂಡಂತಾಗಿದೆ. ಈ ಪೈಕಿ ಸಾವಿರಾರು ಜನರಿಗೆ ಈ ರೀತಿ ಅನಾರೋಗ್ಯ ಪೀಡನೆಗೆ ಕಾರಣವಾಗಿದ್ದ ಅನೇಕ ಆರೋಗ್ಯ ತೊಂದರೆಗಳು ದೂರವಾಗಿವೆ. ಇದನ್ನು ಸ್ವತಃ ಲಸಿಕೆ ಪಡೆದುಕೊಂಡವರೇ ಆರೋಗ್ಯ ಇಲಾಖೆ ಅಧಿಕಾರಿಗಳಿಗೂ ತಿಳಿಸಿದ್ದಾರೆ.