Advertisement

ದಿವ್ಯಾಂಗರಿಗೆ ಮನೆಯಲ್ಲೇ ಲಸಿಕೆ; ಕೇಂದ್ರ ಸರ್ಕಾರ ಘೋಷಣೆ

04:12 PM Sep 24, 2021 | Team Udayavani |

ನವದೆಹಲಿ: ಇನ್ನು ಮುಂದೆ ದಿವ್ಯಾಂಗರು ಹಾಗೂ ನಡೆದಾಡಲು ಸಾಧ್ಯವಾಗದಂಥ ವ್ಯಕ್ತಿಗಳಿಗೆ ಮನೆಯಲ್ಲೇ ಕೋವಿಡ್ ಲಸಿಕೆ ಲಭ್ಯವಾಗಲಿದೆ.

Advertisement

ಕೇಂದ್ರ ಸರ್ಕಾರವೇ ಇಂಥದ್ದೊಂದು ಘೋಷಣೆ ಮಾಡಿದೆ. ಲಸಿಕಾ ಕೇಂದ್ರಗಳಿಗೆ ತೆರಳಿ ಲಸಿಕೆ ಪಡೆಯಲು ಅಸಮರ್ಥರಾದವರಿಗೆ ಮನೆಗೇ ಲಸಿಕೆ ನೀಡುವಂಥ ವ್ಯವಸ್ಥೆ ಜಾರಿಯಾಗಬೇಕೆಂದು ಆಗ್ರಹಗಳು ಕೇಳಿಬಂದಿದ್ದವು. ಅದಕ್ಕೆ ಸ್ಪಂದಿಸಿರುವ ಸರ್ಕಾರ, ದಿವ್ಯಾಂಗರು ಹಾಗೂ ನಡೆದಾಡಲು ಸಾಧ್ಯವಾಗದಂಥ ನಾಗರಿಕರಿಗೆ ಅವರ ಮನೆಗೇ ತೆರಳಿ ಲಸಿಕೆ ನೀಡಲಾಗುವುದು ಎಂದು ಗುರುವಾರ ತಿಳಿಸಿದೆ.

ಜತೆಗೆ, ದೇಶಾದ್ಯಂತ ಶೇ.66ರಷ್ಟು ವಯಸ್ಕರು ಕನಿಷ್ಠ ಒಂದು ಡೋಸ್‌, ಶೇ.23ರಷ್ಟು ಮಂದಿ ಎರಡೂ ಡೋಸ್‌ ಲಸಿಕೆ ಪಡೆದಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕಳೆದ ವಾರದ ಒಟ್ಟು ಕೋವಿಡ್ ಸೋಂಕು ಪ್ರಕರಣಗಳ ಪೈಕಿ ಶೇ.62.73ರಷ್ಟು ಪ್ರಕರಣ ಕೇರಳವೊಂದರಲ್ಲೇ ದಾಖಲಾಗಿದೆ. ಅಲ್ಲದೇ 1 ಲಕ್ಷಕ್ಕಿಂತ ಹೆಚ್ಚು ಸಕ್ರಿಯ ಪ್ರಕರಣಗಳಿರುವ ಏಕೈಕ ರಾಜ್ಯ ಕೇರಳ ಎಂದೂ ಅವರು ತಿಳಿಸಿದ್ದಾರೆ.

ಇದನ್ನೂ ಓದಿ:ಇನ್ಮುಂದೆ ಆ್ಯಪಲ್ ಸೇರಿ ಎಲ್ಲಾ ಮೊಬೈಲ್‍ಗಳಿಗೆ ‘ಟೈಪ್ ಸಿ’ ಚಾರ್ಜರ್  

Advertisement

187 ದಿನಗಳಲ್ಲಿ ಕನಿಷ್ಠ:
ದೇಶದಲ್ಲಿ ಬುಧವಾರದಿಂದ ಗುರುವಾರದ ಅವಧಿಯಲ್ಲಿ 31,923 ಹೊಸ ಸೋಂಕು ಪ್ರಕರಣಗಳು ದೃಢಪಟ್ಟಿವೆ. 187 ದಿನಗಳಿಗೆ ಹೋಲಿಕೆ ಮಾಡಿದರೆ ಇದು ಅತ್ಯಂತ ಕನಿಷ್ಠವಾಗಿದೆ. ಇದೇ ಅವಧಿಯಲ್ಲಿ 282 ಮಂದಿ ಅಸುನೀಗಿದ್ದಾರೆ.

ಮಾನದಂಡ ಅನುಸರಿಸುವಂತಿರಲಿ:
ಈ ನಡುವೆ, ಯುನೈಟೆಡ್‌ ಕಿಂಗ್‌ಡಮ್‌ಗೆ ಆಗಮಿಸಬೇಕಾಗಿದ್ದರೆ ಲಸಿಕೆ ಪ್ರಮಾಣಪತ್ರ ಅಗತ್ಯ. ಜತೆಗೆ ಆ  ಪ್ರಮಾಣಪತ್ರವು ಕನಿಷ್ಠ ನಿಯಮಗಳ ವ್ಯಾಪ್ತಿಯಲ್ಲಿರಬೇಕು ಎಂದು ಅಲ್ಲಿನ ಸರ್ಕಾರ ಗುರುವಾರ ಸ್ಪಷ್ಟಪಡಿಸಿದೆ. ಭಾರತದ ಪ್ರಯಾಣಿಕರಿಗೆ 10 ದಿನಗಳ ಕ್ವಾರಂಟೈನ್‌ ನಿಯಮ ವಿವಾದವಾಗುತ್ತಿರುವಂತೆಯೇ ಈ ಹೇಳಿಕೆ ಹೊರಬಿದ್ದಿದೆ. ಭಾರತ ಸರ್ಕಾರದ ಜತೆಗೆ ಈ ವಿಚಾರವಾಗಿ ಹಂತ ಹಂತವಾಗಿ ಪರಿಹಾರ ಕಂಡುಕೊಳ್ಳಲಾಗುತ್ತದೆ ಎಂದೂ ಯುಕೆ ಹೇಳಿದೆ.

ಹಬ್ಬಗಳಿಗೆ ಮಾರ್ಗಸೂಚಿ
ಹಬ್ಬಗಳ ಸರಣಿಯ ಹಿನ್ನೆಲೆಯಲ್ಲಿ ಮಾರ್ಗಸೂಚಿ ಹೊರಡಿಸಿರುವ ಕೇಂದ್ರ ಸರ್ಕಾರ, ಶೇ.5ಕ್ಕಿಂತ ಹೆಚ್ಚು ಪಾಸಿಟಿವಿಟಿ ದರ ಇರುವ ಜಿಲ್ಲೆಗಳಲ್ಲಿ ಹೆಚ್ಚು ಜನಸಂದಣಿ ಸೇರದಂತೆ ಕ್ರಮ ಕೈಗೊಳ್ಳಿ ಎಂದು ರಾಜ್ಯಗಳಿಗೆ ಸೂಚಿಸಿದೆ. ಆಯಾ ವಾರದ ಪಾಸಿಟಿವಿಟಿ ದರ ಆಧರಿಸಿ ನಿರ್ಬಂಧ ಅಥವಾ ಸಡಿಲಿಕೆ ನಿರ್ಧಾರ ಕೈಗೊಳ್ಳುವಂತೆಯೂ ಸೂಚಿಸಲಾಗಿದೆ.

ಕೊರೊನೋತ್ತರ ಚಿಕಿತ್ಸಾ ಸೂತ್ರ ಬಿಡುಗಡೆ
ಕೊರೊನೋತ್ತರ ಸಮಸ್ಯೆ ನಿಭಾಯಿಸುವ ನಿಟ್ಟಿನಲ್ಲಿ ಹೊಸ ಚಿಕಿತ್ಸಾ ಸೂತ್ರಗಳನ್ನು ಕೇಂದ್ರ ಆರೋಗ್ಯ ಸಚಿವ ಮನಸುಖ ಮಾಂಡವಿಯ ಬಿಡುಗಡೆ ಮಾಡಿದ್ದಾರೆ. ಆರೋಗ್ಯ ಕಾರ್ಯಕರ್ತರು, ನರ್ಸ್‌ಗಳು,  ಪ್ಯಾರಾ ಮೆಡಿಕಲ್‌ ಸಿಬ್ಬಂದಿಗೆ ಸೋಂಕಿನಿಂದ ಗುಣಮುಖರಾದ ಬಳಿಕ ಉಂಟಾಗುವ ಆರೋಗ್ಯ ಸಮಸ್ಯೆಗಳನ್ನು ಹೇಗೆ ನಿರ್ವಹಿಸಬಹುದು ಎಂಬುದರ ಬಗ್ಗೆ ಅದರಲ್ಲಿ ಪ್ರಸ್ತಾಪಿಸಲಾಗಿದೆ. ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದು, ಸೂಕ್ತ ರೀತಿಯ ಔಷಧ ಸೇವನೆ ಕುರಿತೂ ಮಾಹಿತಿಯಿದೆ.

Advertisement

Udayavani is now on Telegram. Click here to join our channel and stay updated with the latest news.

Next