Advertisement

18ರ ಕೆಳಗಿನವರಿಗೆ 3 ಡೋಸ್‌ ಲಸಿಕೆ ನಿರೀಕ್ಷೆ 

12:45 AM Sep 17, 2021 | Team Udayavani |

ಉಡುಪಿ: ಸದ್ಯ 18 ಪ್ಲಸ್‌ ವಯಸ್ಸಿನವರಿಗೆ ಲಸಿಕೆ ನೀಡಲಾಗುತ್ತಿದ್ದು ಮುಂದೆ 18ಕ್ಕಿಂತ ಕಡಿಮೆ ವಯಸ್ಸಿನವರಿಗೂ ಲಸಿಕೆ ಬರಬಹುದು. ಇದರ ಬಗ್ಗೆ ಪ್ರಯೋಗ ನಡೆಯುತ್ತಿದೆ. ಅವರಿಗೆ ಮೂರು ಡೋಸ್‌ ಇರುತ್ತದೆ. ಮೊದಲ ಡೋಸ್‌ ಆದ ಬಳಿಕ 28 ದಿನ, ಎರಡನೆಯ ಡೋಸ್‌ ಆದ ಬಳಿಕ 58 ದಿನಗಳ ಅಂತರ ಕುರಿತು ಅಧ್ಯಯನ ನಡೆಯುತ್ತಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಸಲಹೆಗಾರ ಮತ್ತು ಮಣಿಪಾಲ ಕೆಎಂಸಿ ಸಮುದಾಯ ಆರೋಗ್ಯ ವಿಭಾಗದ ಪ್ರಾಧ್ಯಾಪಕ ಡಾ| ಅಶ್ವಿ‌ನಿಕುಮಾರ್‌ ಅವರು ತಿಳಿಸಿದ್ದಾರೆ.

Advertisement

ಶುಕ್ರವಾರದ ಮೆಗಾ ಲಸಿಕೆ ಮೇಳಕ್ಕೆ ಪೂರ್ವಭಾವಿಯಾಗಿ ಗುರುವಾರ ಜಿಲ್ಲಾಡಳಿತದಿಂದ ನಡೆದ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಬೂಸ್ಟರ್‌ ಡೋಸ್‌ ಕುರಿತೂ ಅಧ್ಯಯನ ನಡೆಯುತ್ತಿದ್ದು ಸರಕಾರ ಸೂಕ್ತ ನಿರ್ಧಾರ ತಳೆಯಲಿದೆ. ಹಿಂದೆ ಗರ್ಭಿಣಿಯರಿಗೆ ಅನುಮತಿ ಕೊಟ್ಟಿರಲಿಲ್ಲ. ಅನಂತರ ಕೊಟ್ಟರು. ವೈದ್ಯಕೀಯ ಸಾಕ್ಷ್ಯಾಧಾರದಿಂದ ನೀತಿಗಳನ್ನು ನಿರೂಪಿಸಲಾಗುತ್ತದೆ ಎಂದರು.

ಸದ್ಯ ಜಿಲ್ಲೆಯಲ್ಲಿ ಪಾಸಿಟಿವಿಟಿ ದರ ಶೇ.1.5ರಷ್ಟಿದೆ. ಇದನ್ನು ಕಡಿಮೆ ಮಾಡುವುದು ಮೆಗಾ ಮೇಳದ ಉದ್ದೇಶವಾಗಿದೆ. 300 ಸ್ಥಳಗಳಲ್ಲಿ ಲಸಿಕಾ ಶಿಬಿರಗಳನ್ನು ಏರ್ಪಡಿಸುತ್ತಿದ್ದು ಇದುವರೆಗೆ ಲಸಿಕೆ ಪಡೆಯದ ಸಾರ್ವಜನಿಕರು ಲಸಿಕೆ ಪಡೆಯಬೇಕು ಎಂದು ಜಿಲ್ಲಾಧಿಕಾರಿ ಕೂರ್ಮಾ ರಾವ್‌ ಮತ್ತು ಜಿ.ಪಂ. ಸಿಇಒ ಡಾ| ನವೀನ್‌ ಭಟ್‌ ತಿಳಿಸಿದರು.

ಆರೋಗ್ಯ ಇಲಾಖೆಯವರು ಈಗಾಗಲೇ ಸಮೀಕ್ಷೆ ನಡೆಸಿದ್ದಾರೆ. ಎಲ್ಲ ಜನರು, ಸಂಘ ಸಂಸ್ಥೆಗಳ ಕಾರ್ಯಕರ್ತರು ಸಹಕಾರ ಕೊಡಬೇಕು. ಸೆ. 16ರ ಮಾಹಿತಿ ಪ್ರಕಾರ 1,58,733 ಜನರು ಮೊದಲ ಡೋಸ್‌ಗೆ, 33,866 ಜನರು ಎರಡನೆಯ ಡೋಸ್‌ಗೆ ಬಾಕಿ ಇದ್ದಾರೆ ಎಂದವರು ಹೇಳಿದರು.

ಕುಂದಾಪುರ ತಾಲೂಕು ಆಲೂರು ನಾರ್ಕಳಿಯಲ್ಲಿ ಉಂಟಾದ ಸಾವಿಗೂ ಲಸಿಕೆಗೂ ಸಂಬಂಧವಿಲ್ಲ. ಇವರಿಗೆ ಹೃದಯ ರೋಗವಿತ್ತು ಎಂದು ಜಿಲ್ಲಾ ನೋಡಲ್‌ ಅಧಿಕಾರಿ ಡಾ| ಪ್ರಶಾಂತ ಭಟ್‌ ತಿಳಿಸಿದರು. ಜಿಲ್ಲಾ ಆರೋಗ್ಯಾಧಿಕಾರಿ ಡಾ| ನಾಗಭೂಷಣ ಉಡುಪ, ಜಿಲ್ಲಾ ಸರ್ಜನ್‌ ಡಾ|ಮಧುಸೂದನ ನಾಯಕ್‌, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ| ನಾಗರತ್ನ, ತಾಲೂಕು ಆರೋಗ್ಯಾಧಿಕಾರಿ ಡಾ| ವಾಸುದೇವ ಉಪಾಧ್ಯಾಯ, ವಿಶೇಷಾಧಿಕಾರಿ ಡಾ| ಪ್ರೇಮಾನಂದ್‌, ಎನ್‌ಐಸಿ ನಿರ್ದೇಶಕ ಮಂಜುನಾಥ್‌ ಉಪಸ್ಥಿತರಿದ್ದರು.

Advertisement

ಸಹಾಯವಾಣಿ :

ಸೆ. 17ರಂದು ನಡೆಯುವ ಲಸಿಕಾ ಮೇಳದಲ್ಲಿ ಲಸಿಕೆ ಲಭ್ಯತೆ ಇತ್ಯಾದಿ ವಿವರಗಳಿಗೆ ಸಾರ್ವಜನಿಕರು 96639 57222 ಸಂಖ್ಯೆಗೆ ಕರೆ ಮಾಡಬಹುದು. ಬೆಳಗ್ಗೆ 9ರಿಂದ ಸಂಜೆ 4ರ ವರೆಗೆ ಜಿಲ್ಲೆಯ 300ಕ್ಕೂ ಹೆಚ್ಚು ಕೇಂದ್ರಗಳಲ್ಲಿ ಲಸಿಕೆ ಪಡೆಯಬಹುದು.

ಪ್ರಮುಖ ಅಂಶಗಳು:

  • ಪೆನ್ಸಿಲಿನ್‌ ಟ್ಯಾಬ್ಲೆಟ್‌, ಇಂಜೆಕ್ಷನ್‌ ತೆಗೆದುಕೊಂಡರೆ ಸಮಸ್ಯೆ ಇರುತ್ತದೆ. ಆದ್ದರಿಂದ ಲಸಿಕೆ ಪಡೆಯಬಹುದೆ ಎಂಬ ಪ್ರಶ್ನೆಗೆ, ಸಾಮಾನ್ಯವಾಗಿ ಇಂತಹ ಸಮಸ್ಯೆ ಇದ್ದಾಗ ಲಸಿಕೆ ಪಡೆಯಬಾರದು. ಆದ್ದರಿಂದ ಎಲ್ಲಿ ಚಿಕಿತ್ಸೆ ಪಡೆಯುತ್ತಿದ್ದೀರೋ ಅಲ್ಲಿನ ವೈದ್ಯರ ಸಲಹೆ ಪಡೆದು ಲಸಿಕೆ ಪಡೆಯಬಹುದು.
  • ಹೃದಯದಲ್ಲಿ ಬ್ಲಾಕ್‌, ಮಧುಮೇಹ ಸಮಸ್ಯೆ ಇದೆ. ಟಿಬಿ ಬಂದು ಗುಣವಾಗಿದೆ. ಲಸಿಕೆ ಪಡೆಯಬಹುದೆ ಎಂಬ ಪ್ರಶ್ನೆಗೆ, ಹೃದಯದ ಬ್ಲಾಕ್‌ ಇದ್ದಾಗ ರಕ್ತ ಹೆಪ್ಪುಗಟ್ಟುವಿಕೆಗೆ ಔಷಧ ಕೊಡುತ್ತಾರೆ. ಇಂತಹ ಸಂದರ್ಭ ಚಿಕಿತ್ಸೆ ನೀಡುವ ವೈದ್ಯರಲ್ಲಿ ಸಲಹೆ ಪಡೆಯಬೇಕು. ಮಧುಮೇಹ, ರಕ್ತದೊತ್ತಡ ಇದ್ದವರು, ಟಿಬಿ ಬಂದು ಗುಣವಾದವರು ಲಸಿಕೆ ಪಡೆಯಬಹುದು.
  • ಮೊದಲ ಲಸಿಕೆ ಪಡೆದು ನಿಖರವಾಗಿ 84 ದಿನಗಳ ಬಳಿಕವೇ ಪಡೆಯಬೇಕೆ ಎಂಬ ಸಂಶಯಕ್ಕೆ, ಹೌದು. ಒಂದೆರಡು ದಿನ ಮುಂಚಿತವಾಗಿ ಹೋದರೂ ಕೋವಿನ್‌ ಆ್ಯಪ್‌ನಲ್ಲಿ ಸ್ವೀಕಾರ ಆಗುವುದಿಲ್ಲ. ಆದ್ದರಿಂದ 84 ದಿನಗಳ ಬಳಿಕವೇ ಲಸಿಕೆ ಪಡೆಯಬೇಕು.
  • ಲಸಿಕಾ ಕೇಂದ್ರದಲ್ಲಿ ಕೊರೊನಾ ಪರೀಕ್ಷೆ ಕಡ್ಡಾಯವೆ ಎಂಬ ಪ್ರಶ್ನೆಗೆ, ಜ್ವರ, ಶೀತ, ನೆಗಡಿ ಇರುವವರಿಗೆ ಕೋವಿಡ್‌ ಪಾಸಿಟಿವ್‌ ಇರುವ ಸಾಧ್ಯತೆಗಳಿರುವುದರಿಂದ ಅವರಿಗೆ ಲಸಿಕೆ ನೀಡಲು ಸಾಧ್ಯವಿಲ್ಲ. ಆದ್ದರಿಂದ ಪರೀಕ್ಷೆ ನಡೆಸಲಾಗುತ್ತದೆ.
  • ಎರಡನೆಯ ಡೋಸ್‌ಗೆ ಮೆಸೇಜ್‌ ಬರುತ್ತಿಲ್ಲ ಎಂಬ ಸಂದೇಹಕ್ಕೆ, ಸಂದೇಶ ಬಾರದಿದ್ದರೂ ಮೊದಲ ಡೋಸ್‌ ತೆಗೆದುಕೊಂಡ 84 ದಿನಗಳ ಬಳಿಕ ಪಡೆಯಬಹುದು. ಮೊದಲ ಬಾರಿ ತೆಗೆದುಕೊಂಡ ದಾಖಲಾತಿ ಇರುತ್ತದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next