ಕೆಲವೊಂದು ಯೋಜನೆಗಳಲ್ಲಿ ಉಡುಪಿ ಜಿಲ್ಲೆಗೆ ವಿಶೇಷ ಛಾಪು ಇದೆ. ಅಂತೆಯೇ ಶೇ.100 ಕೊರೊನಾ ನಿರೋಧಕ ಲಸಿಕೆ ಪಡೆದ ಮೊದಲ ಜಿಲ್ಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗುವ ಕಾಲ ಸನ್ನಿಹಿತವಾಗುತ್ತಿದೆ. ಇದು ಕೊರೊನಾ ಸೋಂಕು ಮುಕ್ತ ಜಿಲ್ಲೆಯಾಗಲು ಅತ್ಯಗತ್ಯ ಕೂಡ. ಕೊರೊನಾದಿಂದಾಗಿ ಸ್ಥಾಗಿತ್ಯವನ್ನು ಅನುಭವಿಸುತ್ತಿರುವ ಆರ್ಥಿಕ, ಸಾಮಾಜಿಕ ಚಟುವಟಿಕೆಗಳ ಪುನಶ್ಚೇತನದ ದೃಷ್ಟಿಯಿಂದಲೂ ಇದು ಸಹಕಾರಿ.
ಜನವರಿಯಿಂದ ಆರಂಭಗೊಂಡ ಲಸಿಕೀಕರಣದ ಪ್ರಕ್ರಿಯೆ ಈಗ ನಿರ್ಣಾಯಕ ಕಾಲಘಟ್ಟಕ್ಕೆ ತಲುಪುತ್ತಿದೆ. ಈಗ ಉಡುಪಿ ಜಿಲ್ಲೆಯಲ್ಲಿ ಸುಮಾರು ಶೇ.84ರಷ್ಟು ಜನರಿಗೆ ಮೊದಲ ಡೋಸ್ ಲಸಿಕೆಯನ್ನು ನೀಡಲಾಗಿದೆ. 18 ವರ್ಷ ಮೇಲ್ಪಟ್ಟ 10 ಲಕ್ಷ ಜನರಲ್ಲಿ ಸುಮಾರು 8.4 ಲಕ್ಷ ಜನರು ಮೊದಲ ಡೋಸ್ ಲಸಿಕೆ ಪಡೆದಿದ್ದಾರೆ. ಸುಮಾರು ಶೇ.33ರಷ್ಟು ಜನರು 2ನೇ ಡೋಸ್ ಲಸಿಕೆಯನ್ನು ಪಡೆದುಕೊಂಡಿದ್ದಾರೆ. ಅಂದರೆ ಮೂರನೆಯ ಒಂದು ಭಾಗದಷ್ಟು ಜನರು ಕೊರೊನಾ ರೋಗನಿರೋಧಕ ಶಕ್ತಿಯನ್ನು ಹೊಂದಿದ್ದಾರೆ. ಇನ್ನು ಶೇ.14ರಷ್ಟು ಜನರಿಗೆ ಮೊದಲ ಡೋಸ್, 3ನೇ ಎರಡು ಪಾಲು ಜನರಿಗೆ ಎರಡನೆಯ ಡೋಸ್ ಲಸಿಕೆ ಸಿಗಬೇಕಾಗಿದೆ. ಜನಸಂಖ್ಯಾವಾರು ಲಸಿಕೀಕರಣದ ದೃಷ್ಟಿಯಲ್ಲಿ ರಾಜ್ಯ ಮಟ್ಟದಲ್ಲಿ ಉಡುಪಿ ಜಿಲ್ಲೆ 2ನೇ ಜಿಲ್ಲೆಯಾಗಿದೆ.
ಇದೇ ಸೆ. 17ರಂದು ಎಲ್ಲೆಡೆ ಮೆಗಾಮೇಳವನ್ನು ಆಯೋಜಿಸಲಾಗುತ್ತಿದ್ದು ದೊಡ್ಡ ಪ್ರಮಾಣದಲ್ಲಿ ಲಸಿಕೆಗಳು ಜಿಲ್ಲೆಗೆ ಬರಲಿವೆ. ಸೆ. 17ರಂದು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ ಹಿಡಿದು ಜಿಲ್ಲಾಸ್ಪತ್ರೆವರೆಗಿನ ಎಲ್ಲ ಸ್ತರಗಳಲ್ಲಿ ಮತ್ತು ವಿವಿಧ ಸಂಘ ಸಂಸ್ಥೆಗಳಲ್ಲಿ ಹೀಗೆ ಜಿಲ್ಲೆಯ ಸುಮಾರು 150 ಕಡೆಗಳಲ್ಲಿ ಲಸಿಕೆ ಶಿಬಿರಗಳು ನಡೆಯಲಿವೆ. ಅಂದು ಆರೋಗ್ಯ ಇಲಾಖೆ ಜತೆ ವಿವಿಧ ನರ್ಸಿಂಗ್ ಸಂಸ್ಥೆಗಳು, ಆಸ್ಪತ್ರೆಗಳ ವೈದ್ಯರು, ಶಿಕ್ಷಣ ಇಲಾಖೆ, ಸ್ವಯಂಸೇವಾ ಸಂಘಟನೆಗಳು ಸಹಕರಿಸಲಿದ್ದು ಲಸಿಕೆ ಅಭಿಯಾನದ ಯಶಸ್ಸಿಗೆ ಜಿಲ್ಲಾಡಳಿತದೊಂದಿಗೆ ಕೈಜೋಡಿಸಲಿವೆ. ಈ ವರೆಗೆ ಲಸಿಕೆ ಪಡೆಯದೆ ಇರುವ ಜನರು ಪ್ರಥಮ ಡೋಸನ್ನು ಮತ್ತು 2ನೇ ಡೋಸ್ ಪಡೆದುಕೊಳ್ಳಲು ಬಾಕಿ ಇರುವ ಸುಮಾರು 12,000 ಜನರು ಅಂದು ಸಮೀಪದ ಲಸಿಕೆ ಶಿಬಿರಗಳಿಗೆ ತೆರಳಿ ಲಸಿಕೆ ಪಡೆಯಬೇಕಾಗಿದೆ. ಅಲ್ಲಿಯವರೆಗೆ ಜಿಲ್ಲೆಗೆ ಪೂರೈಕೆಯಾಗಿರುವ ಲಸಿಕೆಗಳನ್ನು ನೀಡುವ ಪ್ರಕ್ರಿಯೆ ಮುಂದುವರಿಯಲಿದ್ದು ಜನರು ಇದರ ಪ್ರಯೋಜನವನ್ನೂ ಪಡೆದುಕೊಳ್ಳಬಹುದು.
ಪ್ರಾರಂಭಿಕ ಹಂತದಲ್ಲಿ ಲಸಿಕೆ ಪಡೆಯಲು ಮುಂದಾಗದ ಜನರು, ಅನಂತರ ಸೋಂಕು ವ್ಯಾಪಿಸಿದಾಗ ಒಮ್ಮೆಲೆ ಲಸಿಕೆಗಾಗಿ ಪರದಾಡಿದ್ದು, ಸರಕಾರ, ವ್ಯವಸ್ಥೆಯನ್ನು ದೂಷಿಸಿದ್ದು, ಲಸಿಕೆ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿರುವಾಗ ಮತ್ತೆ ಉದಾಸೀನ ಪಡುತ್ತಿರುವುದು ಹೀಗೆ ಕಳೆದ ಆರೆಂಟು ತಿಂಗಳ ಅವಧಿಯಲ್ಲಿ ಈ ಎಲ್ಲ ಅನುಭವ
ಗಳು ನಮ್ಮ ಕಣ್ಣ ಮುಂದೆ ಇದೆ. ಆರೋಗ್ಯದ ವಿಷಯದಲ್ಲಿ ಇನ್ನೂ ಟ್ರಯಲ್ ಆ್ಯಂಡ್ ಎರರ್ ಥಿಯರಿಯನ್ನು ಅನ್ವಯಿಸಿಕೊಳ್ಳುವುದು ತರವಲ್ಲ. ಸದ್ಯ ಜಿಲ್ಲಾಡಳಿತ ಜಿಲ್ಲೆಯ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೊರೊನಾ ನಿರೋಧಕ ಲಸಿಕೆ ನೀಡಲು ಕಟಿ ಬದ್ಧವಾಗಿ ಈ ನಿಟ್ಟಿನಲ್ಲಿ ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಂಡಿದೆ. ಇನ್ನೇನಿದ್ದರೂ ಸಾರ್ವಜನಿಕರದೇ ಪ್ರಮುಖ ಪಾತ್ರ. ಲಸಿಕೆ ಇರುವಾಗ ಪಡೆದುಕೊಳ್ಳುವ ಜಾಣತನವನ್ನು ಜನರು ಈಗಿಂದೀಗಲೇ ಮೆರೆಯಬೇಕು. ಇದು ವೈಯಕ್ತಿಕವೂ ಹೌದು, ನೆರೆಕರೆ-ಸಾಮುದಾಯಿಕ ಹಿತಚಿಂತನೆಯೂ ಹೌದು.
-ಸಂ