Advertisement

ಜಿಲ್ಲೆಯಲ್ಲಿ ನಾಲ್ಕೂವರೆ ಲಕ್ಷ ಮಂದಿಯಷ್ಟೇ ಲಸಿಕೆ ಪಡೆಯಲು ಬಾಕಿ!

08:02 PM Sep 12, 2021 | Team Udayavani |

ಮಹಾನಗರ: ಕೋವಿಡ್‌ ಲಸಿಕೆ ಅಭಿಯಾನಕ್ಕೆ ದ.ಕ. ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ದೊರಕುತ್ತಿದ್ದು, ಜಿಲ್ಲೆಯ ಶೇ. 75ರಷ್ಟು ಮಂದಿ ಈಗಾಗಲೇ ಮೊದಲ ಡೋಸ್‌ ಲಸಿಕೆ ಪಡೆದಿದ್ದು, 4.5 ಲಕ್ಷ ಮಂದಿ ಲಸಿಕೆ ಪಡೆಯಲು ಬಾಕಿ ಇದ್ದಾರೆ.

Advertisement

ಈವರೆಗೆ ಜಿಲ್ಲೆಯ 18,06,554 ಮೊದಲ ಡೋಸ್‌ ಟಾರ್ಗೆಟ್‌ನಲ್ಲಿ 13,50,937 ಮಂದಿಗೆ ಲಸಿಕೆ ನೀಡಲಾಗಿದೆ. ಒಟ್ಟು 4,55,617 ಮಂದಿ ಮೊದಲ ಡೋಸ್‌ ಲಸಿಕೆ ಪಡೆಯಲು ಬಾಕಿ ಇದ್ದಾರೆ. ಅದೇ ರೀತಿ, 4,62,077 ಮಂದಿ ಎರಡೂ ಡೋಸ್‌ ಲಸಿಕೆ ಪಡೆದುಕೊಂಡಿದ್ದು, 8,88,860 ಮಂದಿ ಬಾಕಿ ಇದ್ದಾರೆ.

ಜಿಲ್ಲೆಯಲ್ಲಿ ಲಸಿಕೆ ಅಭಿಯಾನ ಆರಂಭವಾದಾಗಿನಿಂದ ಒಟ್ಟು 18 ಲಕ್ಷ ಮಂದಿಗೆ ಮೊದಲ ಮತ್ತು ಎರಡನೇ ಡೋಸ್‌ ಲಸಿಕೆ ನೀಡಲಾಗಿದೆ. ಕಳೆದ ಒಂದೂವರೆ ತಿಂಗಳಿನಲ್ಲೇ 6.5 ಲಕ್ಷ ಮಂದಿಗೆ ಲಸಿಕೆ ನೀಡಲಾಗಿದೆ. 2021ರ ಆಗಸ್ಟ್‌ 1 ರಿಂದ 31ರ ವರೆಗೆ ಜಿಲ್ಲೆಯಲ್ಲಿ 4,18,851 ಮಂದಿಗೆ ಲಸಿಕೆ ನೀಡಲಾಗಿದೆ. ಅದೇ ರೀತಿ, ಸೆ. 1 ರಿಂದ 8ರ ವರೆಗೆ ಒಂದೇ ವಾರದಲ್ಲಿ 2,33,007 ಮಂದಿಗೆ ಲಸಿಕೆ ನೀಡಲಾಗಿದೆ. ಇದರೊಂದಿಗೆ ಈವರೆಗೆ ಒಟ್ಟು ನೀಡಿದ ಲಸಿಕೆಯ ಶೇ. 36.11ರಷ್ಟು ಮಂದಿ ಕೇವಲ ಒಂದೂವರೆ ತಿಂಗಳಲ್ಲಿ ಲಸಿಕೆ ನೀಡಿದಂತಾಗಿದೆ.

18 ರಿಂದ 44 ವರ್ಷ; 6.80 ಲಕ್ಷ ಮಂದಿಗೆ ಲಸಿಕೆ:

18ರಿಂದ 44 ವರ್ಷದೊಳಗಿನ 6.80 ಲಕ್ಷಕ್ಕೂ ಹೆಚ್ಚಿನ ಮಂದಿ ಅಂದರೆ ಒಟ್ಟು ಟಾರ್ಗೆಟ್‌ನ ಶೇ. 62.27 ರಷ್ಟು ಮಂದಿ ಮೊದಲ ಡೋಸ್‌ ಲಸಿಕೆ ಪಡೆದಿದ್ದಾರೆ. ಮಂಗಳೂರಿನಲ್ಲಿ ಅತೀ ಹೆಚ್ಚು ಅಂದರೆ ಶೇ. 70.71ರಷ್ಟು ಮಂದಿ ಮೊದಲ ಡೋಸ್‌ ಪಡೆದಿದ್ದಾರೆ. ಬೆಳ್ತಂಗಡಿ ತಾಲೂಕಿನಲ್ಲಿ ಶೇ. 52.93, ಬಂಟ್ವಾಳ- ಶೇ.55.14, ಪುತ್ತೂರು- ಶೇ. 55.52, ಸುಳ್ಯ ತಾಲೂಕಿನ ಶೇ. 54.41ರಷ್ಟು ಮಂದಿ ಮೊದಲ ಡೋಸ್‌ ಲಸಿಕೆ ಪಡೆದಿದ್ದಾರೆ.

Advertisement

ಲಸಿಕೆ ಲಭ್ಯತೆ ಹೆಚ್ಚಳ:

ಜಿಲ್ಲೆಯಲ್ಲಿ ಕೆಲವು ದಿನಗಳಿಂದ ಲಸಿಕೆ ಅಭಿಯಾನ ಉತ್ತಮವಾಗಿ ನಡೆಯುತ್ತಿದೆ. ಜುಲೈ ತಿಂಗಳಲ್ಲಿ ಮತ್ತು ಆಗಸ್ಟ್‌ ಮೊದಲ ವಾರ ಲಸಿಕೆ ಕೊರತೆ ಉಂಟಾಗಿತ್ತು. ಇದೀಗ ಕೆಲವು ವಾರಗಳಿಂದ ಜಿಲ್ಲೆಗೆ ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆ ರವಾನೆಯಾಗುತ್ತಿದೆ. ಆರೋಗ್ಯ ಇಲಾಖೆಯ ಮಾಹಿತಿಯ ಪ್ರಕಾರ ಜುಲೈ ತಿಂಗಳಿನಲ್ಲಿ ಜಿಲ್ಲೆಗೆ 2,21,400 ಡೋಸ್‌ ಕೊವಿಶೀಲ್ಡ್‌ ಮತ್ತು 15,600 ಕೊವ್ಯಾಕ್ಸಿನ್‌ ಲಸಿಕೆ ಬಂದಿದ್ದರೆ ಆಗಸ್ಟ್‌ ತಿಂಗಳಲ್ಲಿ ಜಿಲ್ಲೆಗೆ 3,33,650 ಡೋಸ್‌ ಕೊವಿಶೀಲ್ಡ್‌ ಮತ್ತು 47,150 ಕೊವ್ಯಾಕ್ಸಿನ್‌ ಲಸಿಕೆ ಬಂದಿತ್ತು.

ಜಿಲ್ಲೆಯಲ್ಲಿ ಲಸಿಕೆ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ದೊರಕಲು ಆರೋಗ್ಯ ಇಲಾಖೆ ಮತ್ತು ಜಿಲ್ಲಾಡಳಿತದ ಶ್ರಮವೂ ಮುಖ್ಯ. ಆದ್ಯತೆಯ ಮೇರೆಗೆ ಕಾಲೇಜು ವಿದ್ಯಾರ್ಥಿಗಳಿಗೆ ಲಸಿಕೆ ನೀಡಲಾಗಿದೆ. ಜಿಲ್ಲೆಗೆ ಬರುವ ಲಸಿಕೆ ಪ್ರಮಾಣವೂ ಕೆಲವು ವಾರಗಳಿಂದ ಏರಿಕೆಯಾಗಿರುವುದು ಕಾರಣವಾಗಿದೆ. ಇದಲ್ಲದೇ ಆರೋಗ್ಯ ಇಲಾಖೆಯು ಗ್ರಾಮ, ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಲಸಿಕೆ ಕುರಿತಂತೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ ಈ ಎಲ್ಲ ಕಾರಣಗಳಿಂದಾಗಿ ಹೆಚ್ಚಿನ ಮಂದಿ ಲಸಿಕೆ ಪಡೆಯಲು ಮುಂದೆ ಬರುತ್ತಿದ್ದಾರೆ.

ದ.ಕ. ಮೊದಲ ಡೋಸ್‌ ಪಡೆದವರು

(ಮೊದಲ ಡೋಸ್‌)

ಫಲಾನುಭವಿಗಳು           ಟಾರ್ಗೆಟ್‌            ಲಸಿಕೆ ಪಡೆದವರು           ಶೇ.

ಆರೋಗ್ಯ ಕಾರ್ಯಕರ್ತರು         52,523   50,824   96.77

ಮುಂಚೂಣಿ ಕಾರ್ಯಕರ್ತರು   15,869   15,869   100

18 ರಿಂದ 44 ವರ್ಷದೊಳಗಿನವರು           10,92,144             6,79,468               62.21

45 ರಿಂದ 60 ವರ್ಷದೊಳಗಿನವರು           4,16,123               3,74,881               90.09

60 ವರ್ಷ ಮೇಲ್ಪಟ್ಟವರು             2,29,895               2,29,895               100

ಒಟ್ಟು   18,06,554             13,50,937             74.77

ದ.ಕ.: ಲಸಿಕೆಯಲ್ಲಿ ಚತುರ್ಥ :

ರಾಜ್ಯದಲ್ಲಿ ಅತೀ ಹೆಚ್ಚು ಕೋವಿಡ್‌ ರೋಗ ನಿರೋಧಕ ಲಸಿಕೆ ನೀಡಿದ ಜಿಲ್ಲೆಗಳ ಪೈಕಿ ದ.ಕ. ಜಿಲ್ಲೆ ನಾಲ್ಕನೇ ಸ್ಥಾನ ಪಡೆದಿದೆ. ಬಿಬಿಎಂಪಿ ಮೊದಲ ಸ್ಥಾನದಲ್ಲಿದ್ದರೆ, ಬೆಳಗಾವಿ ಎರಡನೇ ಸ್ಥಾನ, ಮೈಸೂರು ಮೂರನೇ ಸ್ಥಾನ ಮತ್ತು ದಕ್ಷಿಣ ಕನ್ನಡ ಜಿಲ್ಲೆ ನಾಲ್ಕನೇ ಸ್ಥಾನ ಪಡೆದಿದೆ. ಅದರಲ್ಲೂ ಕೆಲ ದಿನಗಳಿಂದ ದ.ಕ. ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ನೀಡಲಾಗುತ್ತಿದೆ. ಸೆ. 8ರಂದು ಕೂಡ ಬಿಬಿಎಂಪಿ ವ್ಯಾಪ್ತಿ ಹೊರತುಪಡಿಸಿ ದ.ಕ. ಜಿಲ್ಲೆ ಎರಡನೇ ಸ್ಥಾನದಲ್ಲಿತ್ತು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲಸಿಕೆ ಅಭಿಯಾನಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಜುಲೈ ತಿಂಗಳಿಗೆ ಹೋಲಿಸಿದರೆ ಆಗಸ್ಟ್‌ ತಿಂಗಳಿನಲ್ಲಿ ಜಿಲ್ಲೆಗೆ ಲಸಿಕೆ ಸರಬರಾಜು ಹೆಚ್ಚಾಗಿದೆ. ಅದೇ ರೀತಿ, ಲಸಿಕೆ ಫಲಾನುಭವಿಗಳು ಕೂಡ ಹೆಚ್ಚಾಗುತ್ತಿದ್ದು, ಜಿಲ್ಲೆಯ ಶೇ.75ರಷ್ಟು ಮಂದಿ ಈಗಾಗಲೇ ಮೊದಲ ಡೋಸ್‌ ಲಸಿಕೆ ಪಡೆದಿದ್ದಾರೆ. 4.5 ಲಕ್ಷ ಮಂದಿ ಲಸಿಕೆ ಪಡೆಯಲು ಬಾಕಿ ಇದ್ದಾರೆ. ಈಗಾಗಲೇ ಪ್ರತೀ ಬುಧವಾರ ಲಸಿಕಾ ಮಹಾ ಅಭಿಯಾನ ನಡೆಯಲಿದೆ.ಡಾ| ಕಿಶೋರ್‌ ಕುಮಾರ್‌, ದ.ಕ. ಜಿಲ್ಲಾ ಆರೋಗ್ಯಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next