Advertisement

ಮಾಸಾಂತ್ಯಕ್ಕೆ ಶೇ.100 ಲಸಿಕೀಕರಣದ ವಿಶ್ವಾಸ

10:24 PM Sep 09, 2021 | Team Udayavani |

ಉಡುಪಿ: ಕೊರೊನಾ ಸೋಂಕಿನ ಮೂರನೆಯ ಅಲೆಯನ್ನು ತಡೆಗಟ್ಟುವ ರಾಮಬಾಣವಾದ ಲಸಿಕೆಯನ್ನು 18 ವರ್ಷಕ್ಕೆ ಮೇಲ್ಪಟ್ಟ ಪ್ರತಿಯೊಬ್ಬರೂ ಪಡೆದುಕೊಳ್ಳುವ ಅಭಿಯಾನ ನಡೆಸುತ್ತಿರುವ ಜಿಲ್ಲಾಡಳಿತವು ಈ ಮಾಸಾಂತ್ಯದೊಳಗೆ ಶೇ.100 ಲಸಿಕೀಕರಣ ಸಾಧಿಸುವ ವಿಶ್ವಾಸ ಹೊಂದಿದೆ. ಲಸಿಕೀಕರಣದ ಕೊನೆಯ ಮೈಲುಗಲ್ಲು ತಲುಪಲು ಸಮುದಾಯದ ಸಹಭಾಗಿತ್ವ ಅತ್ಯಗತ್ಯ ಎಂದು ವೈದ್ಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Advertisement

ಗುರುವಾರ ಮಣಿಪಾಲದ “ಉದಯವಾಣಿ’ ಪ್ರಧಾನ ಕಚೇರಿಯಲ್ಲಿ ಆಯೋಜಿಸಿದ “ಫೋನ್‌ ಇನ್‌ ಕಾರ್ಯಕ್ರಮ’ದಲ್ಲಿ ಜಿಲ್ಲಾ ಲಸಿಕಾಧಿಕಾರಿ ಡಾ|ಎಂ.ಜಿ.ರಾಮ, ಜಿಲ್ಲಾ ನೋಡಲ್‌ ಅಧಿಕಾರಿ ಡಾ|ಪ್ರಶಾಂತ ಭಟ್‌ ಮತ್ತು ಮಣಿಪಾಲ ಕೆಎಂಸಿ ಸಮುದಾಯ ಆರೋಗ್ಯ ವಿಭಾಗದ ಡಾ|ಅಶ್ವಿ‌ನಿ ಕುಮಾರ್‌ ಪಾಲ್ಗೊಂಡು ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಿಸಿದರು.

ಜಿಲ್ಲೆಯ 18 ವರ್ಷ ಮೇಲ್ಪಟ್ಟ 10,02,762 ಜನರಲ್ಲಿ 8.31 ಲಕ್ಷ ಜನರು ಮೊದಲ ಡೋಸ್‌, 3.22 ಲಕ್ಷ ಜನರು ಎರಡನೆಯ ಡೋಸ್‌ ಲಸಿಕೆ ಪಡೆದುಕೊಂಡಿದ್ದಾರೆ. ವಿಶೇಷ ಚೇತನರೂ ಸೇರಿದಂತೆ ಶೇ.83ರಷ್ಟು ಜನರಿಗೆ ಲಸಿಕೆ ನೀಡಲಾಗಿದೆ. ಲಸಿಕೆಯನ್ನು ಈ ಪ್ರಮಾಣದಲ್ಲಿ ಪಡೆದುಕೊಂಡ ಪರಿಣಾಮವೇ ಈಗ ಕೊರೊನಾ ಎರಡನೆಯ ಅಲೆಯ ವೇಗ ಕುಗ್ಗಿದೆ. ಈಗಾಗಲೇ ಶೇ.80ಕ್ಕಿಂತ ಹೆಚ್ಚು ಜನರಿಗೆ ಪ್ರಥಮ ಡೋಸ್‌ ಕೊಡಲಾಗಿದೆ. ಉಳಿದವರಿಗೆ ಲಸಿಕೆ ಕೊಡುವ ಪ್ರಯತ್ನವನ್ನು ವ್ಯಾಪಕವಾಗಿ ಮಾಡಲಾಗುತ್ತಿದೆ ಎಂದರು.

ಶೇ.100 ಲಸಿಕೀಕರಣವಾದರೆ ಮೂರನೆಯ ಅಲೆ ಬಾರದೆ ಇರಬಹುದು. ಹೊಸ ರೂಪಾಂತರಿ ವೈರಸ್‌ ಬಂದರೂ ಲಸಿಕೆ ಪಡೆದುಕೊಂಡವರಿಗೆ ಮತ್ತೆ ಸೋಂಕು ಬಂದರೂ ಅಪಾಯಕಾರಿ ಮಟ್ಟದಲ್ಲಿರುವುದಿಲ್ಲ. ಆದರೆ ನಮ್ಮ ಜಾಗರೂಕತೆಯನ್ನು ಬಿಡಬಾರದು ಎಂದು ತಜ್ಞರು ಸ್ಪಷ್ಟಪಡಿಸಿದರು.

ಸಮುದಾಯದ ಸಹಭಾಗಿತ್ವದಿಂದ “ನಮ್ಮ ಗ್ರಾಮ- ಪೂರ್ಣ ಲಸಿಕೆ’ ಕಲ್ಪನೆಯಡಿ ಎಲ್ಲ ನಗರ, ಗ್ರಾಮ ವಾಸಿಗಳು ಲಸಿಕೆ ಪಡೆಯುವ ಮೂಲಕ ಮಕ್ಕಳು ಮತ್ತು ಹಿರಿಯರನ್ನು ರಕ್ಷಿಸಬಹುದಾಗಿದೆ. ಕೊರೊನಾ ಸೋಂಕು ಹೋಗಿದೆ ಎಂದು ಸುಮ್ಮನೆ ಕುಳಿತುಕೊಳ್ಳುವುದು ಸರಿಯಲ್ಲ. ಯಾರ ಮೂಲಕವೂ ಅದು ಮತ್ತೆ ಎರಗಬಹುದು ಎಂದು ಎಚ್ಚರಿಸಿದರು.

Advertisement

ಪ್ರಮಾಣಪತ್ರ, ಸಂದೇಶಕ್ಕೆ ಪರಿಹಾರ :

ವ್ಯಾಪಕ ಲಸಿಕೀಕರಣ ನಡೆಯುತ್ತಿರುವುದರಿಂದ ಪ್ರಮಾಣಪತ್ರಕ್ಕೆ ತೊಂದರೆ ಆಗಿರಬಹುದು. ಎರಡನೆಯ ಡೋಸ್‌ ಕುರಿತ ಮೊಬೈಲ್‌ ಸಂದೇಶ ಬಾರದೆ ಇರಬಹುದು. ಅವಧಿಯನ್ನು ಲೆಕ್ಕ ಹಾಕಿ ನೇರವಾಗಿ ಲಸಿಕೆ ಪಡೆಯಬಹುದು. ಸಮಸ್ಯೆಗಳಿದ್ದರೆ ಸಮೀಪದ ಸರಕಾರಿ ಆಸ್ಪತ್ರೆಯಲ್ಲಿ ವಿಚಾರಿಸಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಶೀಘ್ರದಲ್ಲಿ ಈ ಸಮಸ್ಯೆಯೂ ನಿವಾರಣೆಯಾಗಲಿದೆ. ಅಗತ್ಯವಿದ್ದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿಯ ಕೋಲ್ಡ್‌ ಚೈನ್‌ ಮೆನೇಜರ್‌ ಅವರಿಗೂ ತಿಳಿಸಬಹುದು.

ಸಹಾಯವಾಣಿ :

ಸೋಂಕಿತರು ಲಸಿಕೆ ಪಡೆಯಬಾರದೆಂಬ ಕಾರಣಕ್ಕೆ ಶಿಬಿರಗಳಲ್ಲಿ ಗಂಟಲುದ್ರವ ಪರೀಕ್ಷೆ ನಡೆಸಲಾಗುತ್ತಿದೆ. ಇದು ಜನರ ಒಳಿತಿಗಾಗಿ. ಕೇರಳದಲ್ಲಿ ಶೇ.18 ಪಾಸಿಟಿವಿಟಿ ಪ್ರಮಾಣವಿದೆ. ಹೀಗಾಗಿ ಸರಕಾರ ಕೇರಳದವರು ಬೇರೆ ಊರುಗಳಿಗೆ ಹೋಗಬಾರದು ಎಂದು ಮನವಿ ಮಾಡಿದೆ. ಕೊರೊನಾದಿಂದ ಈಗಾಗಲೇ ಆದ ನಷ್ಟ ಅಷ್ಟಿಷ್ಟಲ್ಲ. ಕೇರಳದವರು ಬಂದರೆ ಅವರಿಗೆ ಪರೀಕ್ಷೆ ನಡೆಸಲಾಗುತ್ತದೆ. ಯಾರಾದರೂ ಅಂಥವರು ಬಂದರೆ ಸಹಾಯವಾಣಿ 9663957222/ 9663950222 (ಉಡುಪಿ ಜಿಲ್ಲೆ), 0824-2442590, ವಾಟ್ಸ್‌ಆ್ಯಪ್‌- 9483908000 (ದ.ಕ.ಜಿಲ್ಲೆ)  ಸಂಖ್ಯೆಗೆ ಕರೆ ನೀಡಬಹುದು.

ಲಸಿಕೆ ಪಡೆದವರಲ್ಲಿ ಜ್ವರ ಬರಲು ಕಾರಣ ಹಾಗೂ ಜ್ವರ ಬಂದರೆ ಉತ್ತಮವೇ?

( -ಹಮೀದ್‌ ವಿಟ್ಲ, ನವೀನ್‌ ಹೆಮ್ಮಾಡಿ )

 ಕೋವಿಡ್‌ ಲಸಿಕೆ ಪಡೆದುಕೊಂಡಾಗ ಕೆಲವರಿಗೆ ಸಣ್ಣ ಮಟ್ಟದ ಜ್ವರ ಬರುತ್ತದೆ. ಅದರ ಹೊರತಾಗಿ ಯಾವುದೇ ಗಂಭೀರ ಆರೋಗ್ಯ ಸಮಸ್ಯೆಗಳು ಎದುರಾಗುವುದಿಲ್ಲ. ಒಂದು ವೇಳೆ ಅಂತಹ ಆರೋಗ್ಯ ಸಮಸ್ಯೆಗಳು ಕಂಡ ಬಂದರೆ ಸಮೀದ ಆರೋಗ್ಯ ಕೇಂದ್ರಕ್ಕೆ ಮಾಹಿತಿ ನೀಡಬೇಕು. ಲಸಿಕೆ ಪಡೆದಕೊಂಡಾಗ ಜ್ವರ ಬರಲೇ ಬೇಕು ಎನ್ನುವಂತಿಲ್ಲ. ಏಕೆಂದರೆ ಆಯಾ ವ್ಯಕ್ತಿಯ ದೇಹದ ಸ್ಥಿತಿಯನ್ನು ಹೊಂದಿಕೊಂಡಿರುತ್ತದೆ.

ಲಸಿಕೆ ಕೇಂದ್ರಗಳಲ್ಲಿನ ಗೊಂದಲಕ್ಕೆ ಪರಿಹಾರವೇನು? (- ಮಹೇಶ್‌ ಉಡುಪಿ)

ಜಿಲ್ಲೆಯಲ್ಲಿ ಸುಮಾರು 8.50 ಲ. ಮಂದಿ ಮೊದಲ ಡೋಸ್‌ ಪಡೆದುಕೊಂಡಿದ್ದಾರೆ. ಪ್ರತಿನಿತ್ಯ 18,000-20,000 ಡೋಸ್‌ ಲಸಿಕೆ ನೀಡಲಾಗುತ್ತಿದೆ. ಇದೊಂದು ಅತೀ ದೊಡ್ಡ ಅಭಿಯಾನವಾಗಿರುವುದರಿಂದ ತುಸು ಗೊಂದಲ ಆಗಬಹುದು. ಈಗ ಅಂಥ ಗೊಂದಲಗಳಿಲ್ಲ. ಎಲ್ಲ ಕಡೆ ಶಿಬಿರದಲ್ಲಿ ಲಸಿಕೆ ನೀಡಲಾಗುತ್ತಿದೆ. ಇದರಿಂದ ಲಸಿಕೆಗಾಗಿ ಪರದಾಡಬೇಕಾಗಿಲ್ಲ. ಲಸಿಕೆ ಬಾಕಿರುವ ಸಾರ್ವಜನಿಕರು ಮುಂದೆ ಬಂದು ಲಸಿಕೆ ತೆಗೆದುಕೊಳ್ಳಬೇಕು.

ನೋವು ನಿವಾರಕ ಮಾತ್ರ ತೆಗೆದುಕೊಳ್ಳುವವರು ಹಾಗೂ ಟಿಬಿ ಚಿಕಿತ್ಸೆ ಪಡೆಯುವವರು ಕೊರೊನಾ ಲಸಿಕೆ ಪಡೆದುಕೊಳ್ಳಬಹುದೇ? (-ಅಬೂಬ್ಕರ್‌ ಅನಿಲಕಟ್ಟೆ ವಿಟ್ಲ , ಪ್ರಕಾಶ ಮರವಂತೆ )

ನೋವು ನಿವಾರಕ ಮಾತ್ರ ಹಾಗೂ ಟಿಬಿ ಚಿಕಿತ್ಸೆ ಪಡೆದುಕೊಳ್ಳುವವರು ಲಸಿಕೆ ಹಾಕಿಸಿಕೊಳ್ಳ ಬಹುದು.

ಕೊರೊನಾ ನಿಯಂತ್ರಣ ಕ್ರಮದಲ್ಲಿ ಸಡಿಲವೇಕೆ? ( -ಕಾರ್ತಿಕ್‌ ಪಡುಬಿದ್ರಿ)

ಕೊರೊನಾ ಸೋಂಕಿಗೆ ಒಳಗಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೂ ಅವರ ಮಾಹಿತಿ ಆರೋಗ್ಯ ಇಲಾಖೆಗೆ ಲಭ್ಯವಿರುತ್ತದೆ. ಆರೋಗ್ಯ ಇಲಾಖೆ ನಿರಂತರವಾಗಿ ಕೊರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದೆ. ಜಿಲ್ಲೆಯಲ್ಲಿ ಸೋಂಕಿತರು ಮನೆಯಿಂದ ಹೊರಗಡೆ ಸುತ್ತಾಡುತ್ತಿದ್ದರೆ ಸಾರ್ವಜನಿಕರು ಅವರ ಮಾಹಿತಿಯನ್ನು ಇಲಾಖೆ ನೀಡಬೇಕು. ಮಾಹಿತಿದಾರರ ಗೌಪ್ಯತೆಯನ್ನು ಕಾಯ್ದುಕೊಳ್ಳಲಾಗುತ್ತದೆ.

ಎರಡನೇ ಡೋಸ್‌ ಲಸಿಕೆ ಪಡೆದುಕೊಂಡ ಬಳಿಕ ಜ್ವರ ಬಂದರೆ ಪರೀಕ್ಷಿಸಬೇಕೆ? ( -ದುರ್ಗಾ ಪ್ರಸಾದ್‌, ಮಂಗಳೂರು. )

ಎರಡನೇ ಡೋಸ್‌ ಲಸಿಕೆ ಪಡೆದು ಸಾಮಾನ್ಯ ಜ್ವರ ಬಂದರೆ ಪರೀಕ್ಷೆ ಮಾಡುವ ಅಗತ್ಯವಿಲ್ಲ. ಆದರೆ ಜ್ವರ ತೀವ್ರ ಸ್ವರೂಪದಲ್ಲಿ ಇದ್ದರೆ ಕಡ್ಡಾಯವಾಗಿ ಕೋವಿಡ್‌ ಟೆಸ್ಟ್‌ಗೆ ಒಳಗಾಗಬೇಕು. ಜತೆಗೆ ಆರೋಗ್ಯ ಇಲಾಖೆ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಬೇಕು.

ಲಸಿಕೆ ಪಡೆದುಕೊಂಡವರ ಸಂಖ್ಯೆ ಹೆಚ್ಚಿದರೂ ಸೋಂಕಿನ ಪ್ರಮಾಣ ಹೆಚ್ಚಾಗಲು ಕಾರಣವೇನು? (-ಅರ್ಚನಾ ಪುತ್ತೂರು)

 ಲಸಿಕೆ ಪಡೆದ ಬಳಿಕ ಸೋಂಕು ಬಂದರೂ ತೀವ್ರತೆ ಕಡಿಮೆ ಇರುತ್ತದೆ. ಜತೆಗೆ ಹೊಸ ರೂಪಾಂತರ ವೈರಸ್‌ಗೆ ಲಸಿಕೆ ಯಾವ ರೀತಿಯಲ್ಲಿ ಪರಿಣಾಮಕಾರಿ ಎನ್ನುವ ಬಗ್ಗೆ ಸಂಶೋಧನೆಗಳು ಮುಂದುವರಿಯುತ್ತಿವೆ.

ಕೊರೊನಾಕ್ಕೆ ಅಂತ್ಯವಿಲ್ಲವೇ? (-ಹರೀಶ್‌, ಹಳೆಯಂಗಡಿ)

ಇದು ಒಂದು ಸಾಂಕ್ರಾಮಿಕ ರೋಗ. ಪ್ಲೇಗ್‌ ಬಂದ ಸಮಯದಲ್ಲಿ ಲಸಿಕೆ ಕಂಡು ಹಿಡಿಯಲು 10 ವರ್ಷಗಳು ಬೇಕಾಗಿತ್ತು. ರೋಮ್‌ನಲ್ಲಿ ಅರ್ಧದಷ್ಟು ಜನಸಂಖ್ಯೆ ಮರಣ ಹೊಂದಿದ್ದರು. ಪ್ರಸ್ತುತ ದೇಶದ 134 ಕೋಟಿ ಜನಸಂಖ್ಯೆಗೆ ಅಗತ್ಯವಿರುವ ಲಸಿಕೆಯನ್ನು ವಿಜ್ಞಾನಿಗಳು ಕಂಡು ಹಿಡಿದಿದ್ದಾರೆ. ಕೊರೊನಾ ಯಾವಾಗ ಮುಕ್ತಾಯ ವಾಗುತ್ತದೆ ಎನ್ನುವುದು ಹೇಳುವುದು ಕಷ್ಟ ಸಾಧ್ಯ.

ಈಗ ಸಾವಿರಾರು ಡೋಸ್‌ ಲಸಿಕೆ ಪೂರೈಕೆಯಾಗುತ್ತಿದೆ. ಎಲ್ಲ ಪ್ರಾಥಮಿಕ ಕೇಂದ್ರಗಳಲ್ಲಿ ಮತ್ತು ಅಂಗನವಾಡಿ, ಶಾಲೆಗಳಲ್ಲಿ ಲಸಿಕಾ ಶಿಬಿರಗಳನ್ನು ಬೆಳಗ್ಗೆ 10ರಿಂದ ಸಂಜೆ 4 ಗಂಟೆವರೆಗೆ ಏರ್ಪಡಿಸಲಾಗುತ್ತಿದೆ. ಎಲ್ಲಿಯೂ ಕಾಯಬೇಕಾಗಿಲ್ಲ. ಬೇರೆ ಬೇರೆ ಕ್ಷೇತ್ರಗಳ ಸರಕಾರಿ ಸಿಬಂದಿ, ಖಾಸಗಿ ಸಂಸ್ಥೆಯವರು ಸಹಕಾರ ನೀಡುತ್ತಿದ್ದಾರೆ. ಕಡಿಮೆ ಸಂಖ್ಯೆಯಲ್ಲಿರುವ ಲಸಿಕೆ ಪಡೆಯದ ಸಾರ್ವಜನಿಕರು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು. ಗ್ರಾಮಾಂತರದಲ್ಲಿ ಪ್ರತೀ ಒಂದೆರಡು ಸಾವಿರ ಜನರಿಗೆ ಒಬ್ಬರಂತೆ ಆಶಾ ಕಾರ್ಯಕರ್ತೆಯರಿದ್ದಾರೆ. ಅವರಲ್ಲಿ ಎಲ್ಲರ ಮಾಹಿತಿಗಳಿವೆ. ಅವರನ್ನು ವಿಚಾರಿಸಿ ಮನೆ ಸಮೀಪದ ಶಿಬಿರಗಳಿಗೆ ತೆರಳಿ ಲಸಿಕೆ ಪಡೆಯಬಹುದು. ಇಷ್ಟಾಗಿಯೂ ಏನಾದರೂ ತೊಂದರೆ ಆದಲ್ಲಿ ನನ್ನ ಸಂಖ್ಯೆಗೆ (ದೂ: 9902963542) ಕರೆ ಮಾಡಬಹುದು. -ಡಾ|ಎಂ.ಜಿ.ರಾಮ, ಜಿಲ್ಲಾ ಲಸಿಕಾಧಿಕಾರಿ, ಉಡುಪಿ. 

Advertisement

Udayavani is now on Telegram. Click here to join our channel and stay updated with the latest news.

Next