ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಲಸಿಕಾ ಅಭಿಯಾನಕ್ಕೆ ವೇಗ ದೊರಕಿದ್ದು, ಕಳೆದ ಮೂರು ದಿನಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚಿನ ಮಂದಿ ಲಸಿಕೆ ಪಡೆದುಕೊಂಡಿದ್ದಾರೆ.
ಜಿಲ್ಲೆಯಲ್ಲಿ ಜುಲೈ ತಿಂಗಳಲ್ಲಿ ಮತ್ತು ಆಗಸ್ಟ್ ಮೊದಲ ವಾರ ಲಸಿಕೆ ಕೊರತೆ ಉಂಟಾಗಿತ್ತು. ಈ ವೇಳೆ ಬಹುತೇಕ ಮಂದಿ ಅವಧಿ ಮುಗಿದರೂ ಎರಡನೇ ಡೋಸ್ ಲಸಿಕೆ ಪಡೆಯಲು ಬಾಕಿ ಇದ್ದರು. ಇದೀಗ ಕಳೆದ ಕೆಲವು ದಿನಗಳಿಂದ ಜಿಲ್ಲೆಗೆ ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆ ರವಾನೆಯಾಗುತ್ತಿದ್ದು ಕಳೆದ ಮೂರು ದಿನಗಳಲ್ಲಿ 1,21,904 ಮಂದಿ ಲಸಿಕೆ ಪಡೆದುಕೊಂಡಿದ್ದಾರೆ.
ಆರೋಗ್ಯ ಇಲಾಖೆ ಮಾಹಿತಿಯಂತೆ ಜಿಲ್ಲೆಯಲ್ಲಿ ಬುಧವಾರ ಒಂದೇ ದಿನ 53,049 ಮಂದಿಗೆ ಲಸಿಕೆ ನೀಡಲಾಗಿದೆ. 60 ವರ್ಷ ಮೇಲ್ಪಟ್ಟ 4,050 ಮಂದಿ ಮೊದಲ ಮತ್ತು 3,026 ಮಂದಿ ಎರಡನೇ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ. 45ರಿಂದ 60 ವರ್ಷದೊಳಗಿನ 8,395 ಮಂದಿ ಮೊದಲ ಮತ್ತು 6,102 ಮಂದಿ ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ. 18ರಿಂದ 44 ವರ್ಷದೊಳಗಿನ 25,717 ಮಂದಿ ಮೊದಲ ಮತ್ತು 5,741 ಮಂದಿ ಎರಡನೇ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ.
ಸೆ. 8ರಂದು ಮಂಗಳೂರಿನ 24,465, ಬಂಟ್ವಾಳ -6,507, ಬೆಳ್ತಂಗಡಿ- 9,252, ಪುತ್ತೂರು-8,754 ಮತ್ತು ಸುಳ್ಯ ತಾಲೂಕಿನ 4,071 ಮಂದಿ ಲಸಿಕೆ ಪಡೆದುಕೊಂಡಿದ್ದಾರೆ. ಒಟ್ಟು 38,164 ಮಂದಿ ಮೊದಲ ಮತ್ತು 14,885 ಮಂದಿ ಎರಡನೇ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಉಡುಪಿ: 16,206 ಮಂದಿಗೆ ಲಸಿಕೆ ಉಡುಪಿ: ಜಿಲ್ಲೆಯಲ್ಲಿ 9,137 ಮಂದಿ ಪ್ರಥಮ ಹಾಗೂ 7,069 ಮಂದಿ ದ್ವಿತೀಯ ಡೋಸ್ ಲಸಿಕೆ ಪಡೆದುಕೊಂಡರು.