Advertisement

100 ಶೇ.ಲಸಿಕೆ ವಿತರಣೆ: ಮಾದರಿಯಾದ ಕಾವ್ರಾಡಿ, ನಡೂರು ಗ್ರಾಮ

08:28 PM Sep 02, 2021 | Team Udayavani |

ಉಡುಪಿ: ಶೇ.100ರಷ್ಟು ಲಸಿಕೆ ವಿತರಿಸುವ ಮೂಲಕ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕಂಡ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಕಾವ್ರಾಡಿ ಗ್ರಾ.ಪಂ. ಮತ್ತು ಬ್ರಹ್ಮಾವರ ತಾಲೂಕಿನ ಮಂದಾರ್ತಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ನಡೂರು  ಸಾಧನೆ ಮಾಡಿವೆ. ಇಲ್ಲಿನ ಜನತೆ ಶೇ.100ರಷ್ಟು ಕೋವಿಡ್‌ ಲಸಿಕೆ ಪಡೆದು ಕೋವಿಡ್‌ ನಿಯಂತ್ರಣದಲ್ಲಿ  ಮಾದರಿ ಗ್ರಾಮಗಳಾಗಿ ಗುರುತಿಸಿಕೊಂಡಿವೆ.

Advertisement

ಈ ಎರಡೂ ಗ್ರಾಮಗಳಲ್ಲಿನ 18 ವರ್ಷ ಮೇಲ್ಪಟ್ಟ ಎಲ್ಲ  ಸಾರ್ವಜನಿಕರೂ ಕೋವಿಡ್‌ ಪ್ರಥಮ ಡೋಸ್‌ ಲಸಿಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದು, ಹಲವು ಮಂದಿ 2ನೇ ಹಂತದ ಲಸಿಕೆಯನ್ನೂ ಪಡೆದಿದ್ದಾರೆ.

ಗ್ರಾಮಸ್ಥರಿಗೆ ಅರಿವು :

ಕಾಡೂರು ಗ್ರಾ.ಪಂ. ವ್ಯಾಪ್ತಿಯ ನಡೂರು ಗ್ರಾಮದಲ್ಲಿ 1,888 ಮಂದಿ 18 ವರ್ಷ ಮೇಲ್ಪಟ್ಟ ಗ್ರಾಮಸ್ಥರಿದ್ದಾರೆ. ಇವರೆಲ್ಲರೂ ಮೊದಲ ಹಂತದ ಕೋವಿಡ್‌ ಲಸಿಕೆ ಪಡೆದಿದ್ದಾರೆ. ಈ ಗ್ರಾಮದಲ್ಲಿ ಪಂಚಾಯತ್‌ನ ಎಲ್ಲ  ಸದಸ್ಯರು, ಪಂಚಾಯತ್‌ ಪಿಡಿಒ ಮತ್ತು ಸಿಬಂದಿ ಹಾಗೂ ಮಂದಾರ್ತಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಮತ್ತು ಸಿಬಂದಿ ವರ್ಗ ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿ, ಗ್ರಾಮಸ್ಥರಿಗೆ ಕೋವಿಡ್‌ ಕುರಿತು ಅರಿವು ಮೂಡಿಸುವುದರ ಜತೆಗೆ ಲಸಿಕೆಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸಿದರ ಪರಿಣಾಮ ಎಲ್ಲ ಗ್ರಾಮಸ್ಥರೂ ಯಾವುದೇ ಭಯವಿಲ್ಲದೆ ಕೋವಿಡ್‌ ಲಸಿಕೆಯನ್ನು ಪಡೆದಿದ್ದಾರೆ.

ಯಶಸ್ಸು ನೀಡಿದ ಮನೆ-ಮನೆ ಭೇಟಿ:

Advertisement

ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡಿ, ಲಸಿಕೆ ಪಡೆದಿರುವ ಮತ್ತು ಪಡೆಯದಿರುವ ಅರ್ಹ ನಾಗರಿಕರ ಮಾಹಿತಿ ಸಂಗ್ರಹಿಸಿ ಲಸಿಕೆ ಕಾರ್ಯ ಸಂಪೂರ್ಣವಾಗಲು ಸಹಕರಿಸಿದ್ದಾರೆ.

ಅಶಕ್ತರು ಮತ್ತು ಲಸಿಕೆ ಕೇಂದ್ರಗಳಿಗೆ ಬರಲು ಸಾಧ್ಯ ವಾಗದ ವೃದ್ಧರ ಮನೆಗೆ ತೆರಳಿ ಲಸಿಕೆ ನೀಡಲಾಗಿದೆ. ನಿರಂತರವಾಗಿ ವ್ಯಾಕ್ಸಿನೇಶನ್‌ ಶಿಬಿರಗಳನ್ನು ಆಯೋ ಜಿಸುವ ಮೂಲಕ 18 ವರ್ಷ ಮೇಲ್ಪಟ್ಟ ಯಾವುದೇ ಗ್ರಾಮಸ್ಥರು ಲಸಿಕೆಯಿಂದ ವಂಚಿತರಾಗದಂತೆ ಕಾರ್ಯನಿರ್ವಹಿಸಲಾಗಿದೆ.

ಪಾಸಿಟಿವ್‌ ಪ್ರಕರಣವೂ ಇಳಿಕೆ:

ಗ್ರಾಮ ಮಟ್ಟದ ಕೋವಿಡ್‌ ಟಾಸ್ಕ್  ಫೋರ್ಸ್‌ ತಂಡ ಕೂಡ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸಿದ ಕಾರಣ ಜಿಲ್ಲೆಯಲ್ಲಿ ಈ ಹಿಂದೆ ಪಾಸಿಟಿವ್‌ ಪ್ರಮಾಣ ಹೆಚ್ಚಿರುವ ಗ್ರಾಮಗಳನ್ನು ಸೀಲ್‌ ಡೌನ್‌ ಮಾಡುವ ಸಂದರ್ಭದಲ್ಲಿ ಸಹ ಈ ಗ್ರಾಮ ಸೀಲ್‌ಡೌನ್‌ಗೆ ಒಳಪಟ್ಟಿರಲಿಲ್ಲ. ಹೆಚ್ಚಿನ ಪಾಸಿಟಿವ್‌ ಪ್ರಕರಣಗಳು ವರದಿಯಾಗಿರಲಿಲ್ಲ.

ಕಂಡ್ಲೂರು ಗ್ರಾ.ಪಂ. :

ಕಾವ್ರಾಡಿ ಗ್ರಾ.ಪಂ. ವ್ಯಾಪ್ತಿಯ ಕಾವ್ರಾಡಿ ಮತ್ತು ಹಳ್ನಾಡು ಗ್ರಾಮದಲ್ಲಿ 4,032 ಮಂದಿ 18 ವರ್ಷ ಮೇಲ್ಪಟ್ಟ ಗ್ರಾಮಸ್ಥರಿದ್ದು ಇವರೆಲ್ಲರೂ ಮೊದಲ ಹಂತದ ಕೋವಿಡ್‌ ಲಸಿಕೆ ಪಡೆದಿದ್ದಾರೆ. 45 ವರ್ಷ ಮೇಲ್ಪಟ್ಟವರಲ್ಲಿ ಈ ಮೊದಲೇ ಶೇ. 100 ಸಾಧನೆ ಮಾಡಿದ್ದ ಇಲ್ಲಿ 18 ವರ್ಷ ಮೇಲ್ಪಟ್ಟವವರು ತಾವೇ ಉತ್ಸಾಹದಿಂದ ಬಂದು ಲಸಿಕೆ ಪಡಿದಿದ್ದಾರೆ. ಲಸಿಕೆ ಪಡೆಯದೆ ದೂರ ಉಳಿದಿದ್ದವರನ್ನು ಗುರುತಿಸಿ ವೈದ್ಯರ ತಂಡದೊಂದಿಗೆ ಅವರ ಮನೆಗಳಿಗೆ ತೆರಳಿ, ಕೋವಿಡ್‌ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸಿ ಲಸಿಕೆ ನೀಡಲಾಗಿದೆ.

ಸ್ಥಳೀಯರು, ವೈದ್ಯರ ಸಹಕಾರ:

ಕಂಡ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರಾದ ಡಾ| ಲತಾ ನಾಯಕ್‌ ಮತ್ತು ಅವರ ತಂಡ ಹಾಗೂ ಗ್ರಾಮದ ಅಧ್ಯಕ್ಷರು ಮತ್ತು ಎಲ್ಲ ಸದಸ್ಯರು ಹಾಗೂ ಪಿಡಿಒ, ಮಂದಾರ್ತಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ವೈದ್ಯರಾದ ಡಾ| ಅನಿಲ್‌ ಮತ್ತು ಅವರ ತಂಡ ಹಾಗೂ ಗ್ರಾಮದ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ಪಿಡಿಒ ಈ ಮಾದರಿ ಕಾರ್ಯದಲ್ಲಿ ಪರಸ್ಪರ ಸಮನ್ವಯದಿಂದ ಯೋಜನೆ ರೂಪಿಸಿ ಕರ್ತವ್ಯ ನಿರ್ವಹಿಸಿದ್ದಾರೆ.

ರಾಜ್ಯದಲ್ಲೇ ಅತ್ಯಧಿಕ ಸಾಧನೆ :

ಜಿಲ್ಲೆಯ ಜನಸಂಖ್ಯೆಯಲ್ಲಿ ಕೋವಿಡ್‌ ಲಸಿಕೆ ಪಡೆಯಲು ಒಟ್ಟು 10,02,762 ಮಂದಿಯನ್ನು ಗುರುತಿಸಿದ್ದು, ಆ. 31ರ ವರೆಗೆ 7,51,150 ಮಂದಿ ಲಸಿಕೆ ಪಡೆಯುವ ಮೂಲಕ ಶೇ.75 ಸಾಧನೆ ಆಗಿದೆ. ಇದೇ ಅವಧಿಯಲ್ಲಿ 2ನೇ ಡೋಸ್‌ಗೆ ಗುರುತಿಸಲಾಗಿರುವ 3,08,326 ಮಂದಿಯಲ್ಲಿ 2,81,820 ಮಂದಿ ಲಸಿಕೆ ಪಡೆದಿದ್ದು ಇದರಲ್ಲಿ ಶೇ. 91 ಸಾಧನೆ ಮಾಡಲಾಗಿದೆ. ಇದು ರಾಜ್ಯದಲ್ಲೇ ಅತ್ಯಧಿಕವಾಗಿದೆ.

3ನೇ ಅಲೆಯಿಂದ ತಪ್ಪಿಸಿ:

ಕೋವಿಡ್‌ 3 ನೇ ಅಲೆಯು ಮಕ್ಕಳಿಗೆ ಮಾತ್ರ ಭಾದಿಸಲಿದೆ ಎನ್ನುವುದು ತಪ್ಪು. ಇದು ಎಲ್ಲರಿಗೂ ಭಾಧಿಸಲಿದೆ ಎನ್ನುವ ತಜ್ಞರ ಅಭಿಪ್ರಾಯಗಳು ಕೇಳಿಬರುತ್ತಿದೆ. 3 ನೇ ಅಲೆಯ ಅಪಾಯದಿಂದ ತಪ್ಪಿಸಿಕೊಳ್ಳಲು ಪ್ರತಿಯೊಬ್ಬರೂ ಕನಿಷ್ಠ 1 ಡೋಸ್‌ ಕೋವಿಡ್‌ ಲಸಿಕೆ ಪಡೆಯಬೇಕು.ಡಾ| ಎಂ.ಜಿ.ರಾಮ, ಜಿಲ್ಲಾ ಕೋವಿಡ್‌ ಲಸಿಕಾ ನೋಡಲ್‌ ಅಧಿಕಾರಿ

ಗ್ರಾಮಾಂತರ ವ್ಯಾಪ್ತಿಯಲ್ಲಿ 78ಶೇ.ಲಸಿಕೆ:

ಜಿಲ್ಲೆಯ ಗ್ರಾ.ಪಂ.ವ್ಯಾಪ್ತಿಯಲ್ಲಿ ಈಗಾಗಲೇ 78ಶೇ. ಲಸಿಕೆ ನೀಡಲಾಗಿದೆ. ಎಲ್ಲ ಗ್ರಾ.ಪಂ.ಗಳು ತಮ್ಮ ವ್ಯಾಪ್ತಿಯ ಗ್ರಾಮಸ್ಥರು ಶೇ.100 ಲಸಿಕೆ ಪಡೆದು ಕೋವಿಡ್‌ 3ನೇ ಅಲೆಗೆ ಸಿಲುಕದಂತೆ ಎಚ್ಚರವಹಿಸಬೇಕು. ಗ್ರಾಮಸ್ಥರು ಲಸಿಕೆಯಿಂದ ದೂರ ಉಳಿಯಬಾರದು. ಎಲ್ಲ ಗ್ರಾಮೀಣ ಕೋವಿಡ್‌ ಟಾಸ್ಕ್ ಫೋರ್ಸ್‌ಗಳು ಯೋಜನೆ ರೂಪಿಸಿ ಕಾರ್ಯನಿರ್ವಹಿಸಬೇಕು.ಡಾ| ನವೀನ್‌ ಭಟ್‌,ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next